
ಜೀ ಕನ್ನಡ ವಾಹಿನಿ ಹಲವು ಯಶಸ್ವಿ ಧಾರವಾಹಿ ಹಾಗೂ ರಿಯಾಲಿಟಿ ಶೋಗಳನ್ನು ನೀಡುತ್ತಾ ಬಂದಿದೆ. ಈಗ ಜೀ (Zee) ಸಂಸ್ಥೆ ಹೊಸ ಬರಹಗಾರರಿಗೆ ಮಣೆ ಹಾಕುವ ಪ್ರಯತ್ನದಲ್ಲಿ ಇದೆ. ಕನ್ನಡ ಸೇರಿದಂತೆ ವಿವಿಧ ಭಾಷೆಯಲ್ಲಿ ಇರುವ ದೇಶದ ಯುವ ಹಾಗೂ ಉದಯೋನ್ಮುಖ ಚಿತ್ರಕಥೆ ಬರಹಗಾರರ ಹುಡುಕಾಟ ಆರಂಭಿಸಿದೆ. ಈ ರೀತಿಯಲ್ಲಿ ಆಯ್ಕೆ ಆದವರಿಗೆ ಒಂದಷ್ಟು ತರಬೇತಿ ನೀಡಿ ಮುಂದಿನ ದಿನಗಳಲ್ಲಿ ಟಿವಿ, ಡಿಜಿಟಲ್ ಮತ್ತು ಚಲನಚಿತ್ರ ಪ್ಲಾಟ್‍ಫಾರ್ಮ್‌ಗಳಲ್ಲಿ ಕಥೆಗಳನ್ನು ರಚಿಸಲು ಅವಕಾಶ ನೀಡಲಾಗುತ್ತಿದೆ.
ಸಿನಿಮಾ ಹಾಗೂ ಧಾರಾವಾಹಿಗಳಿಗೆ ಕಥೆ ಬರೆಯಬೇಕು, ಡೈಲಾಗ್ ಬರೆಯಬೇಕು ಎಂಬ ಕನಸು ನಿಮ್ಮದಾಗಿದ್ದರೆ ನಿಮಗೆ ಅಂಥದ್ದೊಂದು ಅವಕಾಶವನ್ನು ಜೀ ಸಂಸ್ಥೆ ಕಲ್ಪಿಸುತ್ತಿದೆ. ಹಾಗಂದ ಮಾತ್ರಕ್ಕೆ ‘ನನಗೂ ಬರವಣಿಗೆ ಬರುತ್ತದೆ, ನನ್ನನ್ನು ತೆಗೆದುಕೊಳ್ಳಿ’ ಎಂದರೆ ನಿಮಗ ಅವಕಾಶ ಸಿಗೋದಿಲ್ಲ. ಅದಕ್ಕೆ ನೀವು ಪರೀಕ್ಷೆ ಬರೆಯಬೇಕು, ಸಂದರ್ಶನ ನೀಡಬೇಕು. ಅದರಲ್ಲಿ ಪಾಸ್ ಆದರೆ ಮಾತ್ರ ನಿಮಗೆ ಅವಕಾಶ.
www.zeewritersroom.com ಮೂಲಕ ನೀವು ನೋಂದಣಿ ಮಾಡಿಕೊಳ್ಳಬೇಕು. ಅಲ್ಲಿ ಆಯ್ಕೆ ಆದರೆ ಆ ಬಳಿಕ ಸೆಲೆಕ್ಷನ್ ಈವೆಂಟ್‌ಗೆ ಹಾಜರಾಗಿ, ಲಿಖಿತ ಪರೀಕ್ಷೆಯನ್ನು ನೀಡಬೇಕು. ಈ ವೇಳೆ ಪ್ರತ್ಯೇಕ ಸಮಿತಿ ರಚನೆ ಮಾಡಲಾಗುವುದು ಮತ್ತು ಅವರು ಬರವಣಿಗೆಯ ಅರ್ಹತೆಯ ಆಧಾರದ ಮೇಲೆ ಶೇ.10ರಷ್ಟು ಅಗ್ರರರನ್ನು ಆಯ್ಕೆ ಮಾಡಲಾಗುತ್ತದೆ. ಫೈನಲಿಸ್ಟ್‌ಗಳನ್ನು ಇಂಡಸ್ಟ್ರಿ ಪ್ಯಾನೆಲ್ ಮೂಲಕ ಮೌಲ್ಯಮಾಪನ ಮಾಡಲಾಗುತ್ತದೆ. ಕೊನೆಗೆ ಅಗ್ರ 100 ಜನರನ್ನು ಜೀ ರೈಟರ್ಸ್ ರೂಮ್‌ಗೆ ಸೇರಿಸಲಾಗುತ್ತದೆ. ಅಲ್ಲಿ ಅವರು ಪರಿಣತರ ಮಾರ್ಗದರ್ಶನದಲ್ಲಿ ಕಥೆಯ ಕಲ್ಪನೆಗಳನ್ನು ಅಭಿವೃದ್ಧಿ ಪಡಿಸುವ ಕೆಲಸ ಮಾಡುತ್ತಾರೆ.
ಇದನ್ನೂ ಓದಿ: ಜೀ ಕನ್ನಡದಲ್ಲಿ ಈ ವಾರ ಡಬಲ್ ಧಮಾಕಾ, ಮನರಂಜನೆ ಮಹಾಪೂರ
ದೇಶಾದ್ಯಂತ ಈ ಕಾರ್ಯಕ್ರಮ ನಡೆಯಲಿದ್ದು, 80 ನಗರ ಹಾಗೂ 32 ಈವೆಂಟ್ ಸೆಂಟರ್‌ಗಳ ಮೂಲಕ ಪ್ರತಿಭೆ ಅನ್ವೇಷಣೆ ಕಾರ್ಯ ನಡೆಯಲಿದೆ. ಕನ್ನಡ ಮಾತ್ರವಲ್ಲದೆ ಹಿಂದಿ, ಮರಾಠಿ, ಬಂಗಾಳಿ, ತಮಿಳು, ತೆಲುಗು, ಮತ್ತು ಮಲಯಾಳಂ ಭಾಷೆಗಳಲ್ಲಿನ ಭರವಸೆಯ ಕಥೆಗಾರರನ್ನು ಗುರುತಿಸಲಾಗುತ್ತಿದೆ. ಒಳ್ಳೆಯ ಕಲ್ಪನೆ ಹೊಂದಿರುವವನ್ನು ಬೆಳೆಸಲಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 2:56 pm, Tue, 15 July 25