
ಪವಿತ್ರಾ ಲೋಕೇಶ್ ಮತ್ತು ನರೇಶ್ ಸಂಬಂಧ ಕೆಲ ವರ್ಷದ ಹಿಂದೆ ಬಹುವಾಗಿ ಚರ್ಚೆಯಾಗಿತ್ತು. ನರೇಶ್, ತಮಗೆ ಅನ್ಯಾಯ ಮಾಡಿ ನಟಿ ಪವಿತ್ರಾ ಲೋಕೇಶ್ ಜೊತೆ ಸಂಬಂಧ ಬೆಳೆಸಿದ್ದಾರೆ ಎಂದು ನರೇಶ್ ಪತ್ನಿ ಸುದ್ದಿಗೋಷ್ಠಿ ನಡೆಸಿದ್ದರು. ಆ ನಂತರ ನರೇಶ್ ಹಾಗೂ ಪವಿತ್ರಾ ಲೋಕೇಶ್ ಸಹ ಈ ವಿಷಯವಾಗಿ ಜಂಟಿ ಸುದ್ದಿಗೋಷ್ಠಿ ನಡೆಸಿದ್ದರು. ಬಳಿಕ ನರೇಶ್ ಹಾಗೂ ಪವಿತ್ರಾ ಒಟ್ಟಿಗೆ ಇದ್ದ ಹೋಟೆಲ್ ರೂಂಗೆ ಮಾಧ್ಯಮಗಳನ್ನು ಕರೆದುಕೊಂಡು ಹೋಗಿ ಗಲಾಟೆ ಮಾಡಿಸಿದ್ದರು. ಹೀಗೆ ಹಲವು ನೆಗೆಟಿವ್ ವಿಷಯಗಳಿಗೆ ನಟ, ನಿರ್ಮಾಪಕ ನರೇಶ್ ಸುದ್ದಿಯಾಗಿದ್ದರು.
ಖಾಸಗಿ ಬದುಕಿನಲ್ಲಿ ನರೇಶ್ ವ್ಯಕ್ತಿತ್ವದ ಬಗ್ಗೆ ಭಿನ್ನ ಅಭಿಪ್ರಾಯಗಳು ಇವೆ. ನರೇಶ್ ಅವರನ್ನು ಬೆಂಬಲಿಸುವವರು ಟೀಕೆ ಮಾಡುವವರು ಸಮ ಪ್ರಮಾಣದಲ್ಲಿದ್ದಾರೆ. ಆದರೆ ನರೇಶ್ ಅವರ ಮಾತೃಪ್ರೇಮದ ಬಗ್ಗೆ ಅನುಮಾನ ವ್ಯಕ್ತಪಡಿಸುವ ಒಬ್ಬ ವ್ಯಕ್ತಿಯೂ ಟಾಲಿವುಡ್ನಲ್ಲಿ ಇಲ್ಲ.
ನರೇಶ್ ಅವರ ತಾಯಿ ದಕ್ಷಿಣ ಭಾರತ ಚಿತ್ರರಂಗದ ಲೆಜೆಂಡ್ ನಟಿ ವಿಜಯ ನಿರ್ಮಲಾ. ತೆಲುಗು, ತಮಿಳು, ಮಲಯಾಳಂ ಕೆಲ ಕನ್ನಡ ಸಿನಿಮಾಗಳಲ್ಲಿಯೂ ವಿಜಯ್ ನಿರ್ಮಲಾ ನಟಿಸಿದ್ದರು. ವಿಜಯ ನಿರ್ಮಲಾ ಹಾಗೂ ನಟ ಕೃಷ್ಣ ಮೂರ್ತಿ ಅವರ ಪುತ್ರ ನರೇಶ್. ಆ ನಂತರ ವಿಜಯ ನಿರ್ಮಲಾ ಅವರು ತೆಲುಗು ಚಿತ್ರರಂಗದ ಆಗಿನ ಸೂಪರ್ ಸ್ಟಾರ್ ಕೃಷ್ಣ ಅವರನ್ನು ವಿವಾಹವಾದರು.
ನರೇಶ್ ತಮ್ಮ ಹಲವು ಸಂದರ್ಶನಗಳಲ್ಲಿ ತಮ್ಮ ತಾಯಿ ವಿಜಯ ನಿರ್ಮಲಾ ಅವರ ಬಗ್ಗೆ ಬಹಳ ಗೌರವದಿಂದ ಹೆಮ್ಮೆಯಿಂದ ಮಾತನಾಡಿದ್ದಾರೆ. ತಮ್ಮ ತಾಯಿ ದೈವಾಂಶ ಸಂಭೂತೆ ಎಂದೆಲ್ಲ ಅತಿ ಭಾವುಕತೆಯಿಂದ ಹೇಳಿಕೊಂಡಿದ್ದಾರೆ. ಅಮ್ಮನ ಬಗ್ಗೆ ನರೇಶ್ ಅದೆಷ್ಟು ಪ್ರೀತಿ ಇರಿಸಿಕೊಂಡಿದ್ದಾರೆಂದರೆ, ತನ್ನ ತಾಯಿಯ ಪಾದದ ಅಚ್ಚು ಹಾಕಿಸಿ ಅದಕ್ಕೆ ಬಂಗಾರದ ಎರಕ ಹೊಯ್ದು, ಅವರ ಪಾದವನ್ನು ಬಂಗಾರ ಪ್ರತಿಮೆಯ ರೀತಿ ಮಾಡಿದ್ದಾರೆ.
ಇದನ್ನೂ ಓದಿ:ಪವಿತ್ರಾ ಲೋಕೇಶ್ ಜೊತೆ ಮದುವೆ: ನರೇಶ್ ಪುತ್ರ ಹೇಳಿದ್ದು ಹೀಗೆ
ತೆಲುಗು ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ನರೇಶ್, ‘ಅಮ್ಮ ನಿಧನ ಹೊಂದಿದ ದಿನ ನಾನು ದುಖಃದಲ್ಲಿದೆ, ಅಂದು ನನ್ನ ಗೆಳೆಯ ವಿಕಾಸ್ ಎಂಬುವರು ಅಮ್ಮನ ನೆನಪಿಗಾಗಿ ಏನಾದರೂ ಇಟ್ಟುಕೊ ಎಂದರು. ಆಗಲೇ ಕೆಲವರನ್ನು ಕರೆಸಿ ಅಮ್ಮನ ಪಾದವನ್ನು ಮೌಲ್ಡ್ ಮಾಡಿಸಿ ಅದಕ್ಕೆ ಚಿನ್ನದ ಎರಕ ಹೊಯ್ದು ಈ ಪಾದಗಳನ್ನು ಮಾಡಿಸಿದೆ. ಇದು ಅಮ್ಮನದ್ದೇ ಪಾದ. ಅಮ್ಮನ ಹುಟ್ಟುಹಬ್ಬದಂದು ಇದನ್ನು ಹೊರಗೆ ತೆಗೆಯುತ್ತೇವೆ ಬಂದ ಅಭಿಮಾನಿಗಳು ಕುಟುಂಬದವರು ಅಮ್ಮನ ಪಾದಗಳಿಗೆ ನಮಸ್ಕರಿಸಿ ಆಶೀರ್ವಾದ ಪಡೆಯುತ್ತಾರೆ. ನಾನು ಪ್ರತಿದಿನವೂ ಅಮ್ಮನ ಪಾದ ಮುಟ್ಟಿ ಆಶೀರ್ವಾದ ಪಡೆಯುತ್ತೇನೆ’ ಎಂದಿದ್ದಾರೆ ನರೇಶ್.
ಪಾದವನ್ನು ಚಿನ್ನದಲ್ಲಿ ಮಾಡಿಸಿರುವುದು ಮಾತ್ರವೇ ಅಲ್ಲದೆ, ಮನೆಯಲ್ಲಿ ಅಮ್ಮನ ದೊಡ್ಡ ಪ್ರತಿಮೆಯನ್ನೂ ಸಹ ನಿರ್ಮಾಣ ಮಾಡಿದ್ದಾರೆ ನರೇಶ್. ವಿಜಯ ನಿರ್ಮಲಾ ಅವರು ಕುರ್ಚಿಯ ಮೇಲೆ ಕೂತಿರುವ ರೀತಿ ದೊಡ್ಡ ಪ್ರತಿಮೆ ನಿರ್ಮಾಣ ಮಾಡಿಸಿರುವ ನರೇಶ್, ಪ್ರತಿದಿನವೂ ಅದಕ್ಕೆ ಪೂಜೆ ಮಾಡುತ್ತಾರಂತೆ. ಪ್ರತಿಮೆಯ ಸುತ್ತ ಅಮ್ಮನಿಗೆ ಇಷ್ಟವಾದ ಗುಲಾಬಿ ಗಿಡಗಳನ್ನು ಬೆಳೆಸಿದ್ದಾರೆ. ಸಂದರ್ಶನದಲ್ಲಿ ಮಾತನಾಡಿರುವ ನರೇಶ್, ಪವಿತ್ರಾ ಲೋಕೇಶ್ ಮತ್ತು ನನ್ನ ತಾಯಿ ವಿಜಯ ನಿರ್ಮಲಾ ನಡುವೆ ಬಹಳ ಹೋಲಿಕೆ ಇದೆ. ಇಬ್ಬರ ವ್ಯಕ್ತಿತ್ವೂ ಒಂದೇ ರೀತಿ ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ