Actress Hema: ತೇಜೋವಧೆ ಆರೋಪ, ಯೂಟ್ಯೂಬ್​ ಚಾನೆಲ್​ಗಳ ಮೇಲೆ ನಟಿ ಹೇಮಾ ದೂರು

|

Updated on: Mar 23, 2023 | 5:46 PM

ತಮ್ಮ ಹಾಗೂ ತಮ್ಮ ಪತಿಯ ಬಗ್ಗೆ ಸುಳ್ಳು ಸುದ್ದಿಗಳನ್ನು ಬಿತ್ತರಿಸಿದ ಯೂಟ್ಯೂಬ್ ಚಾನೆಲ್​ ಹಾಗೂ ವೆಬ್ ಸೈಟ್​ಗಳ ಮೇಲೆ ನಟಿ ಹೇಮಾ ದೂರು ನೀಡಿದ್ದಾರೆ.

Actress Hema: ತೇಜೋವಧೆ ಆರೋಪ, ಯೂಟ್ಯೂಬ್​ ಚಾನೆಲ್​ಗಳ ಮೇಲೆ ನಟಿ ಹೇಮಾ ದೂರು
ಹೇಮಾ
Follow us on

ಸಿನಿಮಾ ನಟ-ನಟಿಯರ ಬಗ್ಗೆ, ಅವರ ಜೀವನದ ಬಗ್ಗೆ ಜನರಿಗಿರುವ ಕುತೂಹಲವನ್ನೇ ಬಳಸಿಕೊಂಡು ಸಾಮಾಜಿಕ ಜಾಲತಾಣ (Social Media), ಕೆಲವು ವಾಹಿನಿಗಳು ಪುಂಖಾನುಪುಂಖವಾಗಿ ಸುದ್ದಿಗಳನ್ನು ಬಿತ್ತರಿಸುತ್ತವೆ. ಅದರಲ್ಲಿಯೂ ಈ ಯೂಟ್ಯೂಬ್ (YouTube) ಚಾನೆಲ್​ಗಳ ಹಾವಳಿ ಹೆಚ್ಚಾದ ಮೇಲಂತೂ ಸಿನಿಮಾ ನಟ-ನಟಿಯರ ಬಗ್ಗೆ ಇಲ್ಲ-ಸಲ್ಲದ ಸುದ್ದಿಗಳು ಹೆಚ್ಚಾಗಿವೆ. ಇದರಿಂದ ಹಲವು ಸೆಲೆಬ್ರಿಟಿಗಳು ಮುಜುಗರಕ್ಕೆ ಈಡಾಗಿದ್ದಿದೆ. ಕೆಲವು ನಟಿಯರು ತಮ್ಮ ಬಗ್ಗೆ ಸುಳ್ಳು-ಮಾನಹಾನಿಕರ ಸುದ್ದಿ ಬಿತ್ತರಿಸಿದವರ ವಿರುದ್ಧ ದೂರು ನೀಡುವ ಧೈರ್ಯ ಪ್ರದರ್ಶಿಸಿದ್ದಾರೆ. ಇದೀಗ ನಟಿ ಹೇಮಾ ಸಹ ಇಂಥಹುದೇ ಒಂದು ಕಾರ್ಯ ಮಾಡಿದ್ದಾರೆ.

ತೆಲುಗು ಚಿತ್ರರಂಗದ ಜನಪ್ರಿಯ ಪೋಷಕ ನಟಿ ಹಾಗೂ ತೆಲುಗು ಚಿತ್ರರಂಗದ ಸಂಘ ರಾಜಕೀಯದಲ್ಲಿ ಸಕ್ರಿಯರಾಗಿರುವ ಹೇಮಾ ಕುರಿತು ಅವರ ಖಾಸಗಿ ಜೀವನದ ಕುರಿತು ಕೆಲವು ಯೂಟ್ಯೂಬ್ ಚಾನೆಲ್​ಗಳಲ್ಲಿ ಸುಳ್ಳು ಸುದ್ದಿ, ಅತಿರಂಜಿತ ಸುದ್ದಿಗಳು ಬಿತ್ತರಗೊಂಡಿದ್ದವು. ಇದರಿಂದ ಕುಪಿತರಾಗಿರುವ ನಟಿ ಹೇಮಾ, ಯೂಟ್ಯೂಬ್ ಚಾನೆಲ್​ಗಳ ವಿರುದ್ಧ ದೂರು ದಾಖಲಿಸಿದ್ದಾರೆ.

ಸೈಬರ್ ಪೊಲೀಸರಿಗೆ ದೂರು ದಾಖಲಿಸಿರುವ ನಟಿ ಹೇಮಾ, ನನ್ನ ಹಾಗೂ ನನ್ನ ಪತಿಯ ಬಗ್ಗೆ ಸುಳ್ಳು ಸುದ್ದಿಗಳನ್ನು ಕೆಲವು ಯೂಟ್ಯೂಬ್ ಚಾನೆಲ್​ಗಳು ಬಿತ್ತರಿಸುತ್ತಿವೆ. ನನ್ನ ಅನುಮತಿ ಇಲ್ಲದೆ ನನ್ನ ಹಾಗೂ ನನ್ನ ಪತಿಯ ಚಿತ್ರಗಳನ್ನು ಬಳಸಿಕೊಳ್ಳಲಾಗುತ್ತಿದೆ. ದಾರಿ ತಪ್ಪಿಸುವ ಹೆಡ್​ಲೈನ್, ತಂಬ್​ನೇಲ್​ಗಳನ್ನು ಬಳಸಿ ಮಾನಹಾನಿಗೆ ಯತ್ನಿಸಲಾಗತ್ತಿದೆ ಎಂದಿದ್ದಾರೆ. ಜೊತೆಗೆ ಕೆಲವು ಯೂಟ್ಯೂಬ್ ಚಾನೆಲ್​ಗಳು ಹಾಗೂ ವೆಬ್​ಸೈಟ್​ಗಳ ಪಟ್ಟಿಯನ್ನು ನೀಡಿ ಅವುಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ದೂರು ನೀಡಿರುವ ಬಗ್ಗೆ ಮಾಧ್ಯಮಗಳೊಟ್ಟಿಗೆ ಮಾತನಾಡಿರುವ ನಟಿ ಹೇಮಾ, ಕೆಲವು ಯೂಟ್ಯೂಬ್​ ಚಾನೆಲ್​ಗಳಿಗೆ ಸಿನಿಮಾ ಸೆಲೆಬ್ರಿಟಿಗಳ ಖಾಸಗಿ ಜೀವನದ ಮೇಲೆ ಕಣ್ಣು. ಸದಾ ಸುಳ್ಳು ಸುದ್ದಿಗಳನ್ನು ಬಿತ್ತರಿಸುತ್ತಾರೆ. ಕೋಟಾ ಶ್ರೀನಿವಾಸ್ ರಾವ್ ಅಂಥಹಾ ಹಿರಿಯ ನಟರನ್ನು ನಿಧನ ಹೊಂದಿದ್ದಾರೆಂದು ಕೆಲವು ಯೂಟ್ಯೂಬ್ ಚಾನೆಲ್​ಗಳು ಸುದ್ದಿ ಬಿತ್ತರಿಸಿದ್ದವು ಎಂದಿದ್ದಾರೆ.

ಕೋಟಾ ಶ್ರೀನಿವಾಸ ರಾವ್ ನಿಧನ ಹೊಂದಿದ್ದಾರೆಂಬ ಸುಳ್ಳು ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಎರಡು ದಿನಗಳ ಹಿಂದಷ್ಟೆ ವೈರಲ್ ಆಗಿತ್ತು. ಕೂಡಲೇ ಪೊಲೀಸರು ಕೋಟಾ ಶ್ರೀನಿವಾಸ್ ರಾವ್ ಮನೆಗೆ ಭದ್ರತೆ ನೀಡಲೆಂದು ತೆರಳಿದ್ದರು. ಆಗ ಸುದ್ದಿ ಸುಳ್ಳೆಂದು ಗೊತ್ತಾಯಿತು. ಕೋಟಾ ಶ್ರೀನಿವಾಸ್ ರಾವ್ ಸಹ ವಿಡಿಯೋ ನಲ್ಲಿ ಮಾತನಾಡಿ, ತಾವು ಆರೋಗ್ಯದಿಂದ ಇರುವುದಾಗಿಯೂ ಸುಳ್ಳು ಸುದ್ದಿಗಳನ್ನು ನಂಬಬಾರದೆಂದು ಮನವಿ ಮಾಡಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ