
ರಾಜಕೀಯಕ್ಕೆ ಧುಮುಕಿದ ಮೇಲೆ ದಳಪತಿ ವಿಜಯ್ (Thalapathy Vijay) ಅವರಿಗೆ ಒಂದರ ಹಿಂದೊಂದು ಸಮಸ್ಯೆಗಳು ಎದುರಾಗುತ್ತಲೇ ಇವೆ. ರಾಜಕೀಯದಲ್ಲಿ ಅವೆಲ್ಲ ಸಹಜವೂ ಹೌದು. ಮೊದಲಿಗೆ ಕರೂರು ಕಾಲ್ತುಳಿತ, ಈಗ ಅವರ ಕೊನೆಯ ಸಿನಿಮಾ ‘ಜನ ನಾಯಗನ್’ಗೆ ಸಿಬಿಎಫ್ಸಿ ಪ್ರಮಾಣ ಪತ್ರ ನೀಡಲು ಹಿಂದೇಟು, ಇದರ ಜೊತೆಗೆ ಸಿಬಿಐ ವಿಚಾರಣೆಗಳು ಒಂದರ ಹಿಂದೊಂದು ವಿಜಯ್ ಅವರನ್ನು ಕಾಡುತ್ತಿವೆ. ಇತ್ತೀಚೆಗಷ್ಟೆ ವಿಜಯ್ ಅವರಿಗೆ ಕೇಂದ್ರ ಚುನಾವಣಾ ಆಯೋಗವು ‘ವಿಶಲ್’ ಅನ್ನು ಚುನಾವಣೆ ಚಿಹ್ನೆಯಾಗಿ ನೀಡಿದೆ. ಚುನಾವಣಾ ಚಿಹ್ನೆಯ ಪ್ರಚಾರಕ್ಕಾಗಿ ಆಯೋಜಿಸಿದ್ದ ಬೃಹತ್ ಸಭೆಯಲ್ಲಿ ಮಾತನಾಡಿದ ವಿಜಯ್, ತಮ್ಮನ್ನು ಕಾಡುತ್ತಿರುವ ಸಮಸ್ಯೆಗಳ ಬಗ್ಗೆ ಪರೋಕ್ಷವಾಗಿ ಮಾತನಾಡಿದ್ದಲ್ಲದೆ, ಅಭಿಮಾನಿಗಳಿಗೆ ಭರವಸೆಯನ್ನು ಸಹ ನೀಡಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ ವಿಜಯ್, ‘ಕಳೆದ 30 ವರ್ಷಗಳಲ್ಲಿ ಈ ರಾಜಕೀಯ ಪಕ್ಷಗಳು ಜನರನ್ನು ನಿರ್ಲಕ್ಷ್ಯ ಮಾಡಿವೆ. ನನ್ನ ವೃತ್ತಿ ಜೀವನದ ಪೀಕ್ನಲ್ಲಿದ್ದಾಗಲೇ ಜನಗೆ ಈ ಸ್ಥಾನ ನೀಡಿದ್ದಾರೆ. ಅದನ್ನು ನಾನು ಸದುಪಯೋಗ ಪಡಿಸಿಕೊಳ್ಳುತ್ತೇನೆ’ ಎಂದ ವಿಜಯ್, ತಮ್ಮ ಮೇಲೆ ಬೀಳುತ್ತಿರುವ ರಾಜಕೀಯ ಒತ್ತಡಗಳ ಬಗ್ಗೆ ಮಾತನಾಡಿ, ‘ನಾನು ಯಾರಿಗೂ ಬಗ್ಗುವುದಿಲ್ಲ, ಯಾವ ಒತ್ತಡಕ್ಕೂ ಮಣಿಯುವುದಿಲ್ಲ’ ಎಂದಿದ್ದಾರೆ. ಅಲ್ಲದೆ, ತಮ್ಮ ಅಭಿಮಾನಿಗಳನ್ನುದ್ದೇಶಿಸಿ, ‘ನನ್ನ ಮುಖ ನೋಡಿ, ಈ ಮುಖ ದಣಿದಂತೆ, ಒತ್ತಡದಲ್ಲಿ ಇರುವಂತೆ ನಿಮಗೆ ಕಾಣುತ್ತದೆಯೇ’ ಎಂದು ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ:ಕಾಲ್ತುಳಿತ ದುರಂತದ ಬಳಿಕವೂ ಮತ್ತೆ ದಾಖಲೆ ಪ್ರಮಾಣದಲ್ಲಿ ಜನ ಸೇರಿಸಲು ಸಜ್ಜಾದ ದಳಪತಿ ವಿಜಯ್
ಆ ಮೂಲಕ ತಾವು ಯಾವುದೇ ಒತ್ತಡಗಳಿಗೂ ಬಗ್ಗುವುದಿಲ್ಲ ಮತ್ತು ಈಗ ಬರುತ್ತಿರುವ ಸತತ ರಾಜಕೀಯ ಒತ್ತಡಗಳಿಂದ ತಾವು ಅಧೀರರಾಗಿಲ್ಲ ಎಂದು ಅಭಿಮಾನಿಗಳಿಗೆ ತಿಳಿಸಿದ್ದಾರೆ. ರಾಜಕೀಯ ಒತ್ತಡಗಳಿಂದಾಗಿ ವಿಜಯ್ ಅಧೀರರಾಗಿದ್ದಾರೆ, ಅವರು ರಾಜಕೀಯದಿಂದ ಹೆಜ್ಜೆ ಹಿಂದಿಡುವ ಅಥವಾ ಬೇರೊಂದು ಪಕ್ಷದೊಂದಿಗೆ ಸಂಧಾನ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂಬ ಸುದ್ದಿಗಳು ಇತ್ತೀಚೆಗೆ ಹರಿದಾಡಿದ್ದವು. ಅದೇ ಕಾರಣಕ್ಕೆ ವಿಜಯ್ ಅವರು ಮೇಲ್ಕಂಡಂತೆ ಮಾತುಗಳನ್ನಾಡಿದ್ದಾರೆ.
‘ಜನ ನಾಯಗನ್’ ಸಿನಿಮಾಕ್ಕೆ ಸಿಬಿಎಫ್ಸಿ ಪ್ರಮಾಣ ಪತ್ರ ನಿರಾಕರಿಸಿದೆ. ನಿರ್ಮಾಪಕರು ನ್ಯಾಯಾಲಯದಲ್ಲಿ ಹೋರಾಟದಲ್ಲಿ ಜಾರಿಯಲ್ಲಿಟ್ಟಿದ್ದಾರೆ. ಆದರೆ ನ್ಯಾಯಾಲಯದಲ್ಲಿಯೂ ಸಹ ಸರಿಯಾದ ಸ್ಪಂದನೆ ಸಿಗುತ್ತಿಲ್ಲ. ಜನವರಿ 27ರಂದು ಸಿನಿಮಾದ ಸಿಬಿಎಫ್ಸಿ ಪ್ರಮಾಣ ಪತ್ರದ ಬಗೆಗಿನ ತೀರ್ಪು ಪ್ರಕಟಿಸುವುದಾಗಿ ನ್ಯಾಯಾಲಯ ಹೇಳಿದೆ. ಅಂದು ‘ಜನ ನಾಯಗನ್’ ಭವಿಷ್ಯ ಏನಾಗಲಿದೆಯೋ ಕಾದು ನೋಡಬೇಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ