ಕಾಲ್ತುಳಿತ ದುರಂತದ ಬಳಿಕವೂ ಮತ್ತೆ ದಾಖಲೆ ಪ್ರಮಾಣದಲ್ಲಿ ಜನ ಸೇರಿಸಲು ಸಜ್ಜಾದ ದಳಪತಿ ವಿಜಯ್
ದಳಪತಿ ವಿಜಯ್ ಅಭಿಮಾನಿಗಳಿಗೆ ‘ಜನ ನಾಯಗನ್’ ಸಿನಿಮಾ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಈ ಸಿನಿಮಾದ ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ದಾಖಲೆ ಪ್ರಮಾಣದಲ್ಲಿ ಜನರು ಸೇರುವ ಸಾಧ್ಯತೆ ಇದೆ. ಡಿಸೆಂಬರ್ 27ರಂದು ಲಕ್ಷಾಂತರ ಅಭಿಮಾನಿಗಳ ಸಮ್ಮುಖದಲ್ಲಿ ಆಡಿಯೋ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ.

ನಟ ದಳಪತಿ ವಿಜಯ್ (Thalapathy Vijay) ಅವರು ಸಿನಿಮಾ ಮತ್ತು ರಾಜಕೀಯ ಎರಡರ ಕಡೆಗೂ ಗಮನ ಹರಿಸಿದ್ದಾರೆ. ಇತ್ತೀಚೆಗೆ ಅವರ ಪಕ್ಷದ ರ‍್ಯಾಲಿ ವೇಳೆ ಕಾಲ್ತುಳಿತ ಸಂಭವಿಸಿತ್ತು. ತಮಿಳುನಾಡಿನ ಕರೂರಿನಲ್ಲಿ ಉಂಟಾದ ಕಾಲ್ತುಳಿತದಿಂದ 41 ಜನರು ಪ್ರಾಣ ಕಳೆದುಕೊಂಡರು. ನೂರಾರು ಜನರಿಗೆ ಪೆಟ್ಟಾಯಿತು. ಇದರಿಂದಾಗಿ ವಿಜಯ್ ಅವರು ಭಾರಿ ಟೀಕೆ ಎದುರಿಸುವಂತಾಯಿತು. ಹಾಗಿದ್ದರೂ ಕೂಡ ಅವರು ಮತ್ತೆ ಅಪಾರ ಪ್ರಮಾಣದಲ್ಲಿ ಜನರನ್ನು ಸೇರಿಸಿ ಕಾರ್ಯಕ್ರಮ ಮಾಡಲು ಸಜ್ಜಾಗಿದ್ದಾರೆ. ಈ ಬಾರಿ ದಳಪತಿ ವಿಜಯ್ ಅವರು ಜನರನ್ನು ಸೇರಿಸುತ್ತಿರುವುದು ರಾಜಕೀಯದ ಉದ್ದೇಶಕ್ಕಾಗಿ ಅಲ್ಲ. ಬದಲಿಗೆ, ‘ಜನ ನಾಯಗನ್’ (Jana Nayagan) ಸಿನಿಮಾದ ಸಲುವಾಗಿ!
ದಳಪತಿ ವಿಜಯ್ ಅವರು ರಾಜಕೀಯದಲ್ಲಿ ತೊಡಗಿಕೊಂಡಿರುವುದರಿಂದ ಸಿನಿಮಾ ರಂಗಕ್ಕೆ ವಿದಾಯ ಹೇಳಲಿದ್ದಾರೆ. ಅವರು ನಟಿಸಿದ ಕೊನೆಯ ಸಿನಿಮಾ ‘ಜನ ನಾಯಗನ್’ ಆಗಲಿದೆ. 2026ರ ಜನವರಿ 9ರಂದು ಈ ಸಿನಿಮಾ ರಿಲೀಸ್ ಆಗಲಿದೆ. ಅದಕ್ಕೆ ಈಗಲೇ ಭರ್ಜರಿ ಪ್ರಚಾರ ಮಾಡಲಾಗುತ್ತಿದೆ. ಭಾರಿ ಸಂಖ್ಯೆಯ ಅಭಿಮಾನಿಗಳ ಸಮ್ಮುಖದಲ್ಲಿ ಈ ಸಿನಿಮಾದ ಆಡಿಯೋ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ.
ಇದು ದಳಪತಿ ವಿಜಯ್ ಅವರ ಕೊನೆಯ ಸಿನಿಮಾ ಆದ್ದರಿಂದ ಅವರಿಗೆ ಗೌರವ ಅರ್ಪಿಸುವ ಸಲುವಾಗಿ ಅದ್ದೂರಿ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಆದರೆ ಇದು ಭಾರತದಲ್ಲಿ ಅಲ್ಲ. ಬದಲಿಗೆ, ಮಲೇಷಿಯಾದಲ್ಲಿ ಗ್ರ್ಯಾಂಡ್ ಆಗಿ ಕಾರ್ಯಕ್ರಮ ನಡೆಯಲಿದೆ. ಲಕ್ಷಾಂತರ ಅಭಿಮಾನಿಗಳು ಹಾಗೂ ಸಂಗೀತಗಾರರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ಡಿಸೆಂಬರ್ 27ರಂದು ಈ ಕಾರ್ಯಕ್ರಮ ಜರುಗಲಿದೆ.
ಒಂದು ಲಕ್ಷ ಆಸನಗಳಿರುವ ಮಲೇಷಿಯಾದ ಸ್ಟೇಡಿಯಂನಲ್ಲಿ ‘ಜನ ನಾಯಗನ್’ ಸಿನಿಮಾದ ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ಪ್ಲ್ಯಾನ್ ಮಾಡಲಾಗಿದೆ. ದುಬಾರಿ ಬೆಲೆಗೆ ಟಿಕೆಟ್ಗಳು ಮಾರಾಟ ಆಗುತ್ತಿವೆ. ಈ ಕಾರ್ಯಕ್ರಮದ ಮೂಲಕ ಗಿನ್ನಿಸ್ ದಾಖಲೆ ಮಾಡಲು ಕೂಡ ಚಿತ್ರತಂಡ ಸಜ್ಜಾಗಿದೆ. ಟಿಪ್ಪು, ಎಸ್.ಪಿ.ಬಿ. ಚರಣ್, ಅನುರಾಧಾ ಶ್ರೀರಾಮ್, ವಿಜಯ್ ಏಸುದಾಸ್ ಮುಂತಾದ ಗಾಯಕರು ಸಂಗೀತ ಕಾರ್ಯಕ್ರಮದ ಮೂಲಕ ದಳಪತಿ ವಿಜಯ್ ಅವರಿಗೆ ಗೌರವ ಸಲ್ಲಿಸಲಿದ್ದಾರೆ.
ಇದನ್ನೂ ಓದಿ: 600 ಕೋಟಿ ರೂಪಾಯಿ ಒಡೆಯ ನಟ ದಳಪತಿ ವಿಜಯ್
ತಮಿಳು ಚಿತ್ರರಂಗದ ಇತಿಹಾಸದಲ್ಲಿಯೇ ಇದು ಅತಿ ದೊಡ್ಡ ಆಡಿಯೋ ರಿಲೀಸ್ ಕಾರ್ಯಕ್ರಮ ಆಗಲಿದೆ. ‘ಕೆವಿಎನ್ ಪ್ರೊಡಕ್ಷನ್ಸ್’ ಮೂಲಕ ‘ಜನ ನಾಯಗನ್’ ಸಿನಿಮಾ ನಿರ್ಮಾಣ ಆಗಿದೆ. ಹೆಚ್. ವಿನೋದ್ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ದಳಪತಿ ವಿಜಯ್ ಜೊತೆ ಪೂಜಾ ಹೆಗ್ಡೆ, ಬಾಬಿ ಡಿಯೋಲ್ ಮುಂತಾದವರು ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ಅಭಿಮಾನಿಗಳಿಗೆ ದೊಡ್ಡ ಮಟ್ಟದ ನಿರೀಕ್ಷೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




