ಉಗ್ರಂ ಮಂಜು ಮದುವೆ ಬಗ್ಗೆ ಗಿಲ್ಲಿ ಹಾಸ್ಯ: ಸಿಟ್ಟಾದ ಭಾವಿ ಪತ್ನಿ
Ugram Manju wife to be: ಬಿಗ್ಬಾಸ್ ಮಾಜಿ ಸ್ಪರ್ಧಿ ಮತ್ತು ನಟ ಉಗ್ರಂ ಮಂಜು ಅವರಿಗೆ ವಿವಾಹ ನಿಶ್ಚಯವಾಗಿದೆ. ಸಂಧ್ಯಾ ಎಂಬುವರೊಟ್ಟಿಗೆ ಅವರ ನಿಶ್ಚಿತಾರ್ಥ ಆಗಿದೆ. ಆದರೆ ಅತಿಥಿಯಾಗಿ ಬಿಗ್ಬಾಸ್ ಮನೆಗೆ ಬಂದಿರುವ ಉಗ್ರಂ ಮಂಜು ಅವರೊಟ್ಟಿಗೆ ಅವರ ಮದುವೆ ಬಗ್ಗೆ ಗಿಲ್ಲಿ ವ್ಯಂಗ್ಯ ಮಾಡಿದ್ದು, ಉಗ್ರಂ ಮಂಜು ಅವರ ಭಾವಿ ಪತ್ನಿ ಸಂಧ್ಯಾ ಅವರಿಗೆ ಬೇಸರ ತಂದಿದೆ. ಈ ಬಗ್ಗೆ ಅವರು ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಂಚಿಕೊಂಡಿದ್ದಾರೆ.

ಬಿಗ್ಬಾಸ್ (Bigg Boss) ಮನೆಯಲ್ಲಿರುವ ಗಿಲ್ಲಿ ನಟ ತಮ್ಮ ಕಾಮಿಡಿಯಿಂದಾಗಿ ವೀಕ್ಷಕರ ಪ್ರೀತಿ ಗಳಿಸಿದ್ದಾರೆ. ಆದರೆ ಅವರ ಹಾಸ್ಯ ಮನೆಯ ಕೆಲವರಿಗೆ ಇರುಸು-ಮುರುಸು ತರುತ್ತಿದೆ. ಗಿಲ್ಲಿ, ಇನ್ನೊಬ್ಬರನ್ನು ವ್ಯಂಗ್ಯ ಮಾಡಿ, ಕೀಳಾಗಿ ತೋರಿಸಿ ಹಾಸ್ಯ ಮಾಡುತ್ತಾನೆ ಎಂದು ಈಗಾಗಲೇ ಹಲವರು ಸುದೀಪ್ ಎದುರೇ ದೂರು ಹೇಳಿದ್ದಾರೆ. ಅಶ್ವಿನಿ, ಜಾನ್ವಿ ಇನ್ನೂ ಕೆಲವರು ಗಿಲ್ಲಿಯ ಮೂದಲಿಕೆ (ಹಾಸ್ಯ?)ಗೆ ನೊಂದು ಕಣ್ಣೀರು ಸಹ ಹಾಕಿದ್ದಾರೆ. ಇತ್ತೀಚೆಗಷ್ಟೆ ಬಿಗ್ಬಾಸ್ ಮನೆಗೆ ಮಾಜಿ ಸ್ಪರ್ಧಿಗಳು ಅತಿಥಿಗಳಾಗಿ ಬಂದಿದ್ದು, ಅವರನ್ನೂ ಸಹ ಹಾಸ್ಯದ ಹೆಸರಲ್ಲಿ ಗಿಲ್ಲಿ ಅವಮಾನಿಸಿದ್ದಾರೆ. ಇದು ಹೊರಗಿರುವವರ ಅಸಮಾಧಾನಕ್ಕೆ ಕಾರಣವಾಗಿದೆ.
ಮಾಜಿ ಬಿಗ್ಬಾಸ್ ಸ್ಪರ್ಧಿ, ನಟ ಉಗ್ರಂ ಮಂಜು ಅವರ ಮದುವೆ ನಿಶ್ಚಯವಾಗಿದ್ದು, ಅವರು ಇತರೆ ಕೆಲವು ಹಳೆಯ ಸ್ಪರ್ಧಿಗಳ ಜೊತೆಗೆ ಬಿಗ್ಬಾಸ್ ಮನೆಗೆ ಅತಿಥಿಯಾಗಿ ಬಂದಿದ್ದರು. ಮಂಜು ಅವರು ಮೊದಲ ದಿನ ಬಂದಾಗ ಬಿಗ್ಬಾಸ್, ಮಂಜು ಅವರ ಮದುವೆಗೆ ಶುಭಾಶಯ ಕೋರಿದರು. ಆಗ ಅಲ್ಲಿಯೇ ಇದ್ದ ಗಿಲ್ಲಿ, ‘ಎಷ್ಟನೇ ಮದುವೆ, ಎರಡನೇಯದ್ದಾ? ಮೂರನೇಯದ್ದಾ?’ ಎಂದು ಕೇಳಿದರು. ಇದು ಉಗ್ರಂ ಮಂಜು ಅವರಿಗೆ ಸಿಟ್ಟು ತರಿಸಿತು. ಬಳಿಕ ಗಿಲ್ಲಿಯನ್ನು ಪ್ರತ್ಯೇಕವಾಗಿ ಎದುರಿಸಿದ ಮಂಜು, ಸಿಟ್ಟಿನಿಂದಲೇ ಎಚ್ಚರಿಕೆ ನೀಡಿದರು.
ಇದೀಗ ಉಗ್ರಂ ಮಂಜು ಅವರ ಭಾವಿ ಪತ್ನಿ ಸಂಧ್ಯಾ ಅವರು ಸಹ ಗಿಲ್ಲಿ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಗಿಲ್ಲಿಯ ವರ್ತನೆ ಬಗ್ಗೆ ಇತರರು ಹಂಚಿಕೊಂಡಿದ್ದ ಟೀಕಾತ್ಮಕ ಪೋಸ್ಟ್ಗಳನ್ನು ಶೇರ್ ಮಾಡಿದ್ದಾರೆ ಆ ಮೂಲಕ ಗಿಲ್ಲಿ ಬಗೆಗಿನ ತಮ್ಮ ಅಸಮಾಧಾನವನ್ನು ಸಂಧ್ಯಾ ಅವರು ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಅತಿಥಿಗಳಿಗೆ ಅವಮಾನ, ಗಿಲ್ಲಿಗೆ ಎಚ್ಚರಿಕೆ ನೀಡಿದ ಉಗ್ರಂ ಮಂಜು, ರಜತ್
ಸಂಧ್ಯಾ ಹಂಚಿಕೊಂಡಿರುವ ಪೋಸ್ಟ್ನಲ್ಲಿ, ‘ಎಲ್ಲರ ಹತ್ತಿರ ಅವರ ಪರ್ಸನಲ್ ವಿಷಯಗಳನ್ನು ಇಟ್ಟುಕೊಂಡು ಜೋಕ್ ಮಾಡೋದು ಕಾಮಿಡಿನಾ? ಎಲ್ಲ ಶೋನಲ್ಲೂ ಒಬ್ಬೊಬ್ಬ ಹುಡುಗಿಯನ್ನು ಬಲಿಕೊಟ್ಟು ಗೆಲ್ಲೋ ಗಿಲ್ಲಿ, ಈಗ ಬೇರೆಯವರಿಗೆ ಎಷ್ಟನೇದು ಎಂದು ಕೇಳ್ತಿದ್ದಾನಾ? ಬಿಟ್ಟಿ ಊಟ ಕೊಡೊ ಯೋಗ್ಯತೆ ಇದೆಯಾ ಗಿಲ್ಲಿ ನಿನಗೆ? ನಿನಗೆ ಬಿಟ್ಟಿ ಊಟ ಹಾಕ್ತಿರೋದು ಬಿಗ್ಬಾಸ್ ಮತ್ತು ಕಲರ್ಸ್ ಅನ್ನೋದು ನೆನಪಿರಲಿ’ ಎಂಬ ಸಂದೇಶವಿದೆ. ಇದನ್ನು ಸಂಧ್ಯಾ ಅವರು ಹಂಚಿಕೊಂಡಿದ್ದಾರೆ. ಮೂಲ ಪೋಸ್ಟ್ ಅನ್ನು ಅಖಿಲ್ ಎನ್ನುವವರು ಮಾಡಿದ್ದಾರೆ.
ಗಿಲ್ಲಿ, ಅತಿಥಿಗಳ ವಿಷಯದಲ್ಲಿ ತುಸು ಹದ್ದು ಮೀರಿ ಮಾತನಾಡಿದ್ದಾರೆ. ಬಿಟ್ಟಿ ಊಟ ತಿನ್ನಲು ಬಂದಿದ್ದಾರೆ. ಯಾರೋ ವಾವ್ ಎನ್ನುವಂಥಹವರು ಬರುತ್ತಾರೆ ಎಂದುಕೊಂಡಿದ್ದೆ ಆದರೆ ಥೂ ವ್ಯಾಕ್ ಎನ್ನುವಂಥಹವರು ಬಂದಿದ್ದಾರೆ ಎಂದೆಲ್ಲ ತೀರ ಅವಮಾನಕರ ರೀತಿಯಲ್ಲಿ ಮಾತನಾಡಿದ್ದಾರೆ. ಗಿಲ್ಲಿಯ ಮಾತಿಗೆ ರಜತ್ ಮತ್ತು ಉಗ್ರಂ ಮಂಜು ತಿರುಗೇಟನ್ನೂ ಕೊಟ್ಟಿದ್ದಾರೆ. ಎಚ್ಚರಿಕೆಯನ್ನೂ ಕೊಟ್ಟಿದ್ದಾರೆ. ಆದರೂ ಗಿಲ್ಲಿ ತನ್ನ ಆಟವನ್ನು ನಿಲ್ಲಿಸಿಲ್ಲ. ವೀಕೆಂಡ್ ಎಪಿಸೋಡ್ನಲ್ಲಿ ಸುದೀಪ್ ಅವರು ಗಿಲ್ಲಿಗೆ ಯಾವ ರೀತಿ ಉತ್ತರ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




