ನವೆಂಬರ್ 28ಕ್ಕೆ ರಿಲೀಸ್ ಆಗಲಿದೆ ಕವೀಶ್ ಶೆಟ್ಟಿ, ಮೇಘಾ ಶೆಟ್ಟಿ ಜೋಡಿಯ ಓಎಲ್ಸಿ ಸಿನಿಮಾ
ಕಿರುತೆರೆ ಮೂಲಕ ಜನಪ್ರಿಯತೆ ಪಡೆದ ನಟಿ ಮೇಘಾ ಶೆಟ್ಟಿ ಅವರು ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಕವೀಶ್ ಶೆಟ್ಟಿ ಜೊತೆ ಮೇಘಾ ಶೆಟ್ಟಿ ಅಭಿನಯಿಸಿದ ‘ಓಎಲ್ಸಿ’ ಸಿನಿಮಾ ಈಗ ಬಿಡುಗಡೆ ಆಗುತ್ತಿದೆ. ‘ಆಪರೇಷನ್ ಲಂಡನ್ ಕೆಫೆ’ ಎಂಬುದು ಈ ಶೀರ್ಷಿಕೆಯ ವಿಸ್ತೃತ ರೂಪ. ಸಿನಿಮಾ ಬಗ್ಗೆ ಇಲ್ಲಿದೆ ಮಾಹಿತಿ..

ಕನ್ನಡ ಮಾತ್ರವಲ್ಲದೇ ಮರಾಠಿ, ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಓ.ಎಲ್.ಸಿ (ಆಪರೇಷನ್ ಲಂಡನ್ ಕೆಫೆ) ಸಿನಿಮಾ ನಿರ್ಮಾಣ ಆಗಿದೆ. ಕವೀಶ್ ಶೆಟ್ಟಿ ಹಾಗೂ ಮೇಘಾ ಶೆಟ್ಟಿ (Megha Shetty) ಅವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ಓ.ಎಲ್.ಸಿ (Operation London Cafe) ಸಿನಿಮಾ ನವೆಂಬರ್ 28ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ರಿಲೀಸ್ ಆಗಲಿದೆ. ಆ ಪ್ರಯುಕ್ತ ಆಯೋಜಿಸಲಾಗಿದ್ದ ಪ್ರೀ ರಿಲೀಸ್ ಇವೆಂಟ್ನಲ್ಲಿ ಶಶಾಂಕ್ ಅವರು ಸಾಂಗ್ ರಿಲೀಸ್ ಮಾಡಿದರು. ವಿ. ನಾಗೇಂದ್ರಪ್ರಸಾದ್ ಅವರು ಈ ಹಾಡನ್ನು ಬರೆದಿದ್ದಾರೆ. ಹಾಡು ಬಿಡುಗಡೆ ಮಾಡಿದ ಶಶಾಂಕ್ ಅವರು ಚಿತ್ರತಂಡಕ್ಕೆ ಶುಭ ಕೋರಿದರು.
ನಿರ್ದೇಶಕ ಸಡಗರ ರಾಘವೇಂದ್ರ ಅವರು ಈ ವೇಳೆ ಮಾತನಾಡಿದರು. ‘ಶಶಾಂಕ್ ಅವರ ಜೊತೆಗೆ ನಾನು ಸಹ-ನಿರ್ದೇಶಕನಾಗಿ ಕೆಲಸ ಮಾಡಿದ್ದೇನೆ. ಓ.ಎಲ್.ಸಿ ನನ್ನ ಮೊದಲ ನಿರ್ದೇಶನದ ಸಿನಿಮಾ. ಕವೀಶ್ ಶೆಟ್ಟಿ, ಮೇಘಾ ಶೆಟ್ಟಿ ಜೊತೆ ಮರಾಠಿ ಭಾಷೆಯ ಶಿವಾನಿ ಕೂಡ ಪ್ರಮುಖ ಪಾತ್ರ ಮಾಡಿದ್ದಾರೆ. ನಿರ್ಮಾಪಕರು ಯಾವುದೇ ಕೊರತೆ ಬಾರದ ಹಾಗೆ ಸಿನಿಮಾ ಮಾಡಿದ್ದಾರೆ’ ಎಂದು ಅವರು ಹೇಳಿದರು.
‘ಇದು ನಕ್ಸಲಿಸಂ ಕುರಿತಾದ ಕಥೆ. ಹಾಗಂತ ನಕ್ಸಲಿಸಂ ವೈಭವಿಕರಿಸಿಲ್ಲ. ಯಾವುದೇ ಒಬ್ಬ ವ್ಯಕ್ತಿಯ ಕುರಿತಾದ ಸಿನಿಮಾ ಕೂಡ ಅಲ್ಲ. ಇದು ‘ಆಫ್ಟರ್ ಆಪರೇಷನ್ ಲಂಡನ್ ಕೆಫೆ’. ಕನ್ನಡ ಹಾಗೂ ಮರಾಠಿ ಭಾಷೆಯಲ್ಲಿ ನೇರವಾಗಿ ಚಿತ್ರೀಕರಣ ಮಾಡಲಾಗಿದೆ. ಉಳಿದಂತೆ ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂನಲ್ಲೂ ಚಿತ್ರ ಬಿಡುಗಡೆಯಾಗಲಿದೆ. ಕನ್ನಡ ಕಲಾವಿದರು ಮರಾಠಿ ಕಲಿತು, ಮರಾಠಿ ಕಲಾವಿದರು ಕನ್ನಡ ಕಲಿತು ನಟಿಸಿರುವುದು ಈ ಸಿನಿಮಾದ ವಿಶೇಷ. ಮೊದಲು ಕನ್ನಡದಲ್ಲಿ ನವೆಂಬರ್ 28ರಂದು ಕನ್ನಡದಲ್ಲಿ ಮಾತ್ರ ಸಿನಿಮಾ ಬಿಡುಗಡೆ ಆಗಲಿದೆ’ ಎಂದಿದ್ದಾರೆ ನಿರ್ದೇಶಕರು.
ಕವೀಶ್ ಶೆಟ್ಟಿ ಮಾತನಾಡಿ, ‘ಶಶಾಂಕ್ ಅವರ ಜೊತೆಗೆ ನಾನು ಸಹಾಯಕ ನಿರ್ದೇಶಕನಾಗಿ, ಸಡಗರ ರಾಘವೇಂದ್ರ ಅವರು ಸಹ-ನಿರ್ದೇಶಕನಾಗಿ ಮುಂಗಾರು ಮಳೆ 2 ಸಿನಿಮಾದಲ್ಲಿ ಕೆಲಸ ಮಾಡಿದ್ದೆವು. ಈಗ ಈ ಸಿನಿಮಾಗೆ ನಾನೇ ಕಥೆ ಬರೆದು, ನಾಯಕನಾಗಿ ನಟಿಸಿದ್ದೇನೆ’ ಎಂದರು. ಮೇಘಾ ಶೆಟ್ಟಿ ಮಾತನಾಡಿ, ‘ನಾನು ಈ ಸಿನಿಮಾದಲ್ಲಿ ಬಜಾರಿ ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ. ಸಡಗರ ರಾಘವೇಂದ್ರ ಅವರು ತಮ್ಮ ಮೊದಲ ನಿರ್ದೇಶನದಲ್ಲೇ ಉತ್ತಮವಾಗಿ ಕೆಲಸ ಮಾಡಿದ್ದಾರೆ’ ಎಂದರು.
ಇದನ್ನೂ ಓದಿ: ದಂತದ ಗೊಂಬೆ ರೀತಿ ಕಾಣಿಸುತ್ತಿದ್ದಾರೆ ಮೇಘಾ ಶೆಟ್ಟಿ
ಸುದ್ದಿಗೋಷ್ಠಿಯಲ್ಲಿ ಮರಾಠಿ ನಟಿ ಶಿವಾನಿ ಕೂಡ ಭಾಗಿಯಾಗಿದ್ದರು. ಛಾಯಾಗ್ರಾಹಕ ನಾಗಾರ್ಜುನ್, ಕಲಾ ನಿರ್ದೇಶಕ ವರದರಾಜ್ ಸಹ ಉಪಸ್ಥಿತರಿದ್ದರು. ಪ್ರಾಂಶು ಝಾ ಅವರು ಈ ಸಿನಿಮಾಗೆ ಸಂಗೀತ ನೀಡಿದ್ದಾರೆ. ವಿಜಯ್ ಕುಮಾರ್ ಶೆಟ್ಟಿ, ರಮೇಶ್ ಕೊಠಾರಿ, ವಿವೇಕ್ ಶೆಟ್ಟಿ ಬಾರ್ಕೂರ್ ಹಾಗೂ ವಿಜಯ್ ಪ್ರಕಾಶ್ ಅವರು ‘ಆಪರೇಷನ್ ಲಂಡನ್ ಕೆಫೆ’ ಸಿನಿಮಾ ನಿರ್ಮಾಣ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




