‘ಅಪರಿಚಿತೆ’ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಿದ ಡಿವಿ ಸದಾನಂದ ಗೌಡ
‘ತಾಯವ್ವ’ ಸಿನಿಮಾ ಖ್ಯಾತಿಯ ನಟಿ ಗೀತಪ್ರಿಯ ಅವರು ಈಗ ‘ಅಪರಿಚಿತೆ’ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಈ ಸಿನಿಮಾಗೆ ‘ಅಪರಿಚಿತೆ’ ಎಂದು ಹೆಸರು ಇಡಲಾಗಿದ್ದು, ಚಿತ್ರೀಕರಣ ಮಗಿದಿದೆ. ಸೆನ್ಸಾರ್ಗೆ ಕಳಿಸಲಾಗಿದೆ. ಕ್ರಿಸ್ಮಸ್ ವೇಳೆಗೆ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ. ಇಲ್ಲಿದೆ ಇನ್ನಷ್ಟು ಮಾಹಿತಿ..

ಗೀತಪ್ರಿಯ (Geethapriya) ಸುರೇಶ್ ಕುಮಾರ್ ಅವರು ಈ ಮೊದಲು ‘ತಾಯವ್ವ’ ಸಿನಿಮಾದಲ್ಲಿ ನಟಿಸಿದ್ದರು. ಈಗ ಅವರ ಹೊಸ ಸಿನಿಮಾ ಬಿಡುಗಡೆಗೆ ಸನಿಹವಾಗುತ್ತಿದೆ. ಹೊಸ ಸಿನಿಮಾಗೆ ‘ಅಪರಿಚಿತೆ’ (Aparichithe) ಎಂದು ಶೀರ್ಷಿಕೆ ಇಡಲಾಗಿದೆ. ಇತ್ತೀಚಿಗೆ ಈ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಲಾಯಿತು. ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ (DV Sadananda Gowda) ಅವರು ಟ್ರೇಲರ್ ಅನಾವರಣ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ನಟಿ ತಾರಾ ಅನುರಾಧ ಕೂಡ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ತಾರಾ ಅವರು ಈ ಸಿನಿಮಾದ ಹಾಡನ್ನು ರಿಲೀಸ್ ಮಾಡಿದರು.
ಈ ವೇಳೆ ಮಾತನಾಡಿದ ಸದಾನಂದ ಗೌಡ ಅವರು, ‘ಒಂದೊಳ್ಳೆ ಉದ್ದೇಶವಿಟ್ಟುಕೊಂಡು ಗೀತಪ್ರಿಯ ಈ ಸಿನಿಮಾ ಮಾಡಿದ್ದಾರೆ. ನಾವು ಸಮಾಜಕ್ಕೆ ಏನಾದರೂ ಉತ್ತಮ ಸಂದೇಶ ಕೊಡಬೇಕಾದರೆ ಅದನ್ನು ಸುಲಭವಾಗಿ ತಲುಪಿಸುವ ಮಾರ್ಗ ಸಿನಿಮಾ. ಅಂತಹ ಸಿನಿಮಾ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತಿರುವ ಗೀತಪ್ರಿಯ ಸುರೇಶ್ ಕುಮಾರ್ ಮತ್ತು ತಂಡಕ್ಕೆ ಶುಭವಾಗಲಿ’ ಎಂದರು.
ಗೀತಪ್ರಿಯ ಅವರು ಕೂಡ ವೇದಿಕೆಯಲ್ಲಿ ಮಾತನಾಡಿದರು. ‘1985ರಲ್ಲಿ ನಾನು ಮತ್ತು ನನ್ನ ಪತಿ ಸೇರಿ ಶಿಕ್ಷಣ ಸಂಸ್ಥೆ ಆರಂಭಿಸಿದ್ದೆವು. 10 ಜನರಿಂದ ಶುರುವಾದ ಈ ಸಂಸ್ಥೆಯಲ್ಲಿ ಈಗ 10 ಸಾವಿರ ಜನ ವ್ಯಾಸಂಗ ಮಾಡುತ್ತಿದ್ದಾರೆ. ನನ್ನ ಪತಿ ಸುರೇಶ್ ಕುಮಾರ್ ಅವರೇ ‘ಅಪರಿಚಿತೆ’ ಸಿನಿಮಾ ನಿರ್ಮಾಣ ಮಾಡಿದ್ದಾರೆ. ನಾನು ಈ ಸಿನಿಮಾದಲ್ಲಿ ಜವಾಬ್ದಾರಿಯುತ ಶಿಕ್ಷಕಿಯ ಪಾತ್ರ ಮಾಡಿದ್ದೇನೆ’ ಎಂದು ಗೀತಪ್ರಿಯ ಹೇಳಿದರು.
‘ನಿರ್ದೇಶಕ ವಿಶ್ವನಾಥ್ ಕಥೆ ಹೇಳಿದಾಗ ಸಮಾಜಕ್ಕೆ ಏನಾದರೂ ಉತ್ತಮ ಸಂದೇಶ ನೀಡುವ ಕಥೆ ಇದ್ದರೆ ಮಾತ್ರ ನಟನೆ ಮಾಡುವುದಾಗಿ ತಿಳಿಸಿದ್ದೆ. ಇದು ಅಂಥದ್ದೇ ಕಥೆ. ರಾಮನಗರದಲ್ಲಿ ಚಿತ್ರೀಕರಣ ಮಾಡಿದ್ದೇವೆ. ಕ್ರಿಸ್ ಮಸ್ ವೇಳೆಗೆ ಸಿನಿಮಾ ಬಿಡುಗಡೆ ಆಗಲಿದೆ’ ಎಂದು ಹೇಳಿದ ಗೀತಪ್ರಿಯ ಅವರು ಟ್ರೇಲರ್ ಬಿಡುಗಡೆ ಮಾಡಿದ ಗಣ್ಯರಿಗೆ ಧನ್ಯವಾದ ತಿಳಿಸಿದರು.
ಇದನ್ನೂ ಓದಿ: 25 ದಿನ ಪೂರೈಸಿದ ‘ತಾಯವ್ವ’ ಸಿನಿಮಾಗೆ ಚಂದನವನದ ಗಣ್ಯರ ಅಭಿನಂದನೆ
ನಿರ್ದೇಶಕ ವಿಶ್ವನಾಥ್ ಅವರು ಮಾತನಾಡಿ, ‘ಇದು ನೈಜ ಕಥೆ ಆಧಾರಿತ ಸಿನಿಮಾ. ಈಗಾಗಲೇ ಶೂಟಿಂಗ್ ಮುಗಿದಿದೆ. ಸೆನ್ಸಾರ್ಗೆ ಕಳಿಸಲಾಗಿದೆ. ಗೀತಪ್ರಿಯ, ಸಿಂಧೂ ಲೋಕನಾಥ್, ಆರ್ಜೆ ನಿಖಿತಾ, ಹಿರಿಯ ನಟ ಶ್ರೀನಾಥ್ ಮತ್ತು ಅವರ ಪುತ್ರ ರೋಹಿತ್ ಕೂಡ ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ’ ಎಂದು ಮಾಹಿತಿ ನೀಡಿದರು. ‘ಒಳ್ಳೆಯ ಸಿನಿಮಾದಲ್ಲಿ ನಟಿಸಿರುವ ಖುಷಿಯಿದೆ’ ಎಂದು ಶ್ರೀನಾಥ್ ಅವರು ಹೇಳಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




