‘ಚೋಮನ ದುಡಿ’ ಸಿನಿಮಾದ ಮುಂದುವರಿದ ಭಾಗ ‘ಬಿಚ್ಚುಗತ್ತಿಯ ಬಂಟನ ಬಲ್ಲಿರೇನ’
‘ಚೋಮನ ದುಡಿ’ ಕಥೆಯ ಮುಂದುವರಿದ ಭಾಗವಾಗಿ ‘ಬಿಚ್ಚುಗತ್ತಿಯ ಬಂಟನ ಬಲ್ಲಿರೇನ’ ಸಿನಿಮಾ ಮೂಡಿಬಂದಿದೆ. ಟ್ರೇಲರ್ ಮೂಲಕ ಕಥೆಯ ಬಗ್ಗೆ ಸುಳಿವು ಕೊಡಲಾಗಿದೆ. ಇತ್ತೀಚೆಗೆ ಈ ಸಿನಿಮಾದ ಸುದ್ದಿಗೋಷ್ಠಿ ನಡೆಯಿತು. ಹೊಸ ತಲೆಮಾರಿನ ಪ್ರತಿಭೆಗಳು ಇಂತಹ ಕಥಾವಸ್ತು ಆಯ್ಕೆ ಮಾಡಿಕೊಂಡಿದ್ದಕ್ಕೆ ಸುಂದರ್ ರಾಜ್ ಮೆಚ್ಚುಗೆ ಸೂಚಿಸಿದ್ದಾರೆ.

1975ರಲ್ಲಿ ‘ಚೋಮನ ದುಡಿ’ (Chomana Dudi) ಸಿನಿಮಾ ಬಿಡುಗಡೆ ಆಗಿತ್ತು. ಶಿವರಾಮ ಕಾರಂತರು ಬರೆದ ಕಾದಂಬರಿ ಆಧರಿಸಿ ಆ ಸಿನಿಮಾ ನಿರ್ಮಾಣ ಆಗಿತ್ತು. ಈಗ 50 ವರ್ಷಗಳ ಬಳಿಕ ಆ ಸಿನಿಮಾಗೆ ಮುಂದುವರಿದ ಭಾಗ ಎಂಬಂತೆ ‘ಬಿಚ್ಚುಗತ್ತಿಯ ಬಂಟನ ಬಲ್ಲಿರೇನ’ (Bicchugatthiya Bantana Ballirena) ಸಿನಿಮಾ ಸಿದ್ಧವಾಗಿದೆ. ‘ದೋರಸಮುದ್ರ ಪಿಕ್ಚರ‍್ಸ್’ ಬ್ಯಾನರ್ ಮೂಲಕ ಅನಿಲ್ ದೋರಸಮುದ್ರ ಅವರು ನಿರ್ಮಿಸಿ, ನಿರ್ದೇಶನ ಮಾಡಿದ್ದಾರೆ. ನವೀನ್ ಸಿಂಬಾವಿ ಅವರು ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ. ‘ಚೋಮನ ದುಡಿ’ ಸಿನಿಮಾ ನೋಡಿ ಇಷ್ಟಪಟ್ಟಿದ್ದ ಎಲ್ಲರೂ ಈಗ ‘ಬಿಚ್ಚುಗತ್ತಿಯ ಬಂಟನ ಬಲ್ಲಿರೇನ’ ಚಿತ್ರದ ಮೇಲೆ ನಿರೀಕ್ಷೆ ಇಟ್ಟುಕೊಳ್ಳುವಂತಾಗಿದೆ.
ಇತ್ತೀಚೆಗೆ ‘ಬಿಚ್ಚುಗತ್ತಿಯ ಬಂಟನ ಬಲ್ಲಿರೇನ’ ಸಿನಿಮಾದ ಟ್ರೇಲರ್ ಮತ್ತು ಹಾಡುಗಳನ್ನು ಬಿಡುಗಡೆ ಮಾಡಲಾಯಿತು. ‘ಚೋಮನ ದುಡಿ’ ಸಿನಿಮಾದಲ್ಲಿ ಅಭಿನಯಿಸಿದ್ದ ಸುಂದರ್ ರಾಜ್ ಅವರು ‘ಬಿಚ್ಚುಗತ್ತಿಯ ಬಂಟನ ಬಲ್ಲಿರೇನ’ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಚಿತ್ರತಂಡಕ್ಕೆ ಅವರು ಬೆಂಬಲ ನೀಡಿದರು. ಅಲ್ಲದೇ, ‘ಚೋಮನ ದುಡಿ’ ದಿನಗಳನ್ನು ನೆನಪು ಮಾಡಿಕೊಂಡರು.
‘ಬಿಚ್ಚುಗತ್ತಿಯ ಬಂಟನ ಬಲ್ಲಿರೇನ’ ಸಿನಿಮಾದಲ್ಲಿ ಚೆಲುವರಾಜ್ ಗೌಡ, ಬಾಸುಮ ಕೊಡಗು, ಸ್ವೀಡಲ್ ಡಿಸೋಜಾ, ಶೈಲೇಶ್ ಕೆಂಗೇರಿ, ತಾರಾನಾಥ ಬೋಳಾರ್, ಪುಣ್ಯ ಕೊಟ್ಯಾನ್, ಗೋಪಾಲ್ ಮೂಲ್ಯ ಮುಂತಾದ ಕಲಾವಿದರು ನಟಿಸಿದ್ದಾರೆ.
ಶ್ರೀಶಾಸ್ತ ಅವರು ಈ ಸಿನಿಮಾಗೆ ಸಂಗೀತ ನೀಡಿದ್ದಾರೆ. ಲ್ಯಾಮರಿಂಜ್ ನಿರ್ಮಲ್ ಅವರ ಛಾಯಾಗ್ರಹಣ ಈ ಸಿನಿಮಾಗಿದೆ. ಅನಿಲ್ ಡಿ, ಮಾವಿನ್ ಜೋಯಿಲ್ ಪಿಂಟೋ ಅವರು ಸಂಕಲನದ ಜವಾಬ್ದಾರಿ ನಿಭಾಯಿಸಿದ್ದಾರೆ.

Bicchugatthiya Bantana Ballirena Team
ಕಾರ್ಕಳದ ಸುತ್ತಮುತ್ತ ಸುಂದರ ತಾಣಗಳಲ್ಲಿ ‘ಬಿಚ್ಚುಗತ್ತಿಯ ಬಂಟನ ಬಲ್ಲಿರೇನ’ ಸಿನಿಮಾಗೆ ಚಿತ್ರೀಕರಣ ಮಾಡಲಾಗಿದೆ. ನವೆಂಬರ್ 28ರಂದು ಈ ಸಿನಿಮಾ ರಿಲೀಸ್ ಆಗಲಿದೆ ಎಂದು ಚಿತ್ರತಂಡ ಹೇಳಿದೆ. ‘ಒಂದಾನೊಂದು ಕಾಲದಲ್ಲಿ’ ಬರುವ ಹಾಡಿನ ಸಾಲಿನಿಂದ ಈ ಸಿನಿಮಾಗೆ ಶೀರ್ಷಿಕೆ ಇಡಲಾಗಿದೆ ಎಂದು ನಿರ್ದೇಶಕ ಅನಿಲ್ ದೋರಸಮುದ್ರ ಅವರು ಹೇಳಿದ್ದಾರೆ.
ಇದನ್ನೂ ಓದಿ: ರಾಮನಗರದ ಜನರಿಗೆ ಆಗಿನ ಕಾಲದಲ್ಲೇ 100 ರೂಪಾಯಿ, ಊಟ ಕೊಟ್ಟಿದ್ದ ಧರ್ಮೇಂದ್ರ
‘ನಮ್ಮ ಚಿತ್ರವನ್ನು ಚೋಮನ ದುಡಿಯ ಮುಂದುವರಿದ ಭಾಗ ಎನ್ನಬಹುದು. ಮಂದಗಾಮಿ ಚೋಮ ಹೋರಾಟ ಮಾಡಿದರೂ ಭೂಮಿ ಸಿಗುವುದಿಲ್ಲ. ಆತನ ಮಗ ಕಾಳ ನ್ಯಾಯಕ್ಕಾಗಿ ತೀವ್ರಗಾಮಿಯಾಗಿ ಬಿಚ್ಚುಗತ್ತಿಯನ್ನು ಉಪಯೋಗಿಸಿದಾಗ ಏನಾಗುತ್ತದೆ ಎಂಬ ಕಥೆ ಈಗ ನಮ್ಮ ಸಿನಿಮಾದಲ್ಲಿದೆ. ಸಿನಿಮಾವನ್ನು ಕಾರಂತ ಟ್ರಸ್ಟ್‌ನವರು ನೋಡಿ ಆಶೀರ್ವದಿಸಿದ್ದಾರೆ. ಈ ಸಿನಿಮಾದಲ್ಲಿ ಚೋಮನ ಪಾತ್ರ ಶೇಕಡ 20ರಷ್ಟು ಬರುತ್ತದೆ’ ಎಂದು ನಿರ್ದೇಶಕರು ಮಾಹಿತಿ ನೀಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




