25 ದಿನ ಪೂರೈಸಿದ ‘ತಾಯವ್ವ’ ಸಿನಿಮಾಗೆ ಚಂದನವನದ ಗಣ್ಯರ ಅಭಿನಂದನೆ
‘ತಾಯವ್ವ’ ಸಿನಿಮಾ ತಂಡದವರ ಮುಖದಲ್ಲಿ ಗೆಲುವಿನ ನಗು ಮೂಡಿದೆ. 25 ದಿನಗಳನ್ನು ಪೂರೈಸಿದ್ದಕ್ಕೆ ಚಿತ್ರತಂಡ ಸಂಭ್ರಮಿಸಿದೆ. ಚಿತ್ರರಂಗದ ಗಣ್ಯರ ಜೊತೆ ಯಶಸ್ಸಿನ ಖುಷಿಯನ್ನು ಹಂಚಿಕೊಳ್ಳಲಾಗಿದೆ. ಸುರೇಶ್ ಹೆಬ್ಳೀಕರ್, ಯೋಗರಾಜ್ ಭಟ್, ಲಹರಿ ವೇಲು, ಕೆ. ಕಲ್ಯಾಣ್ ಮುಂತಾದವರು ಈ ಸಂಭ್ರಮದ ಕ್ಷಣಕ್ಕೆ ಸಾಕ್ಷಿಯಾದರು.

ಮೇ ತಿಂಗಳ 30ರಂದು ‘ತಾಯವ್ವ’ ಸಿನಿಮಾ (Thayavva Movie) ತೆರೆಕಂಡಿತ್ತು. ಯಶಸ್ವಿಯಾಗಿ 25 ದಿನಗಳ ಪ್ರದರ್ಶನವನ್ನು ಕಂಡಿದೆ. ಸಿನಿಮಾವನ್ನು ‘ಅಮರ ಫಿಲ್ಮ್ಸ್’ ಬ್ಯಾನರ್ ಮೂಲಕ ಗೀತಪ್ರಿಯಾ (Geethapriya) ಅವರು ನಿರ್ಮಿಸಿದ್ದಾರೆ. ಅಲ್ಲದೇ, ಅವರೇ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ‘ತಾಯವ್ವ’ ಸಿನಿಮಾದಲ್ಲಿ ಮಹಿಳಾ ಪ್ರಧಾನ ಕಥಾಹಂದರ ಇದೆ. ಗ್ರಾಮೀಣ ಭಾಗದ ಸೂಲಗಿತ್ತಿ ಮಹಿಳೆಯ ಬದುಕಿನ ಅನಾವರಣ ಈ ಸಿನಿಮಾದಲ್ಲಿ ಆಗಿದೆ. 25 ದಿನ ಪೂರೈಸಿದ್ದಕ್ಕೆ ಚಿತ್ರತಂಡ ಸುದ್ದಿಗೋಷ್ಠಿ ನಡೆಸಿತು.
‘ತಾಯವ್ವ’ ಚಿತ್ರದ 25 ದಿನಗಳ ಸೆಲೆಬ್ರೇಷನ್ನಲ್ಲಿ ಖ್ಯಾತ ನಿರ್ದೇಶಕ, ನಟ ಸುರೇಶ್ ಹೆಬ್ಳೀಕರ್, ಸಂಗೀತ ನಿರ್ದೇಶಕ ಕೆ. ಕಲ್ಯಾಣ್, ನಿರ್ದೇಶಕ ಯೋಗರಾಜ್ ಭಟ್, ಲಹರಿ ವೇಲು, ಹರಿಪ್ರಸಾದ್ ಜಯಣ್ಣ, ನಿರ್ಮಾಪಕ ಸಿಲ್ಕ್ ಮಂಜು, ಸುರೇಶ್ ನಾಗಪಾಲ್, ನಿರಂಜನ್ ಶೆಟ್ಟಿ, ಸಿಂಧೂ ಲೋಕನಾಥ್ ಮುಂತಾದವರು ಭಾಗಿಯಾದರು. ನಟಿ, ನಿರ್ಮಾಪಕಿ ಗೀತಪ್ರಿಯಾ ಅವರಿಗೆ ಗಣ್ಯರು ಅಭಿನಂದನೆ ತಿಳಿಸಿದರು.
ಈ ವೇಳೆ ಗೀತಪ್ರಿಯಾ ಮಾತನಾಡಿದರು. ‘ಸೂಲಗಿತ್ತಿ ನರಸಮ್ಮ ಅವರಂತಹ ಗ್ರಾಮೀಣ ಭಾಗದ ಹಲವು ಸೂಲಗಿತ್ತಿ ಮಹಿಳೆಯರನ್ನು ಪ್ರೇರಣೆಯಾಗಿ ಇಟ್ಟುಕೊಂಡು ಈ ಸಿನಿಮಾ ಮಾಡಿದ್ದೇವೆ. ನಮ್ಮ ಸಿನಿಮಾ ರಿಲೀಸ್ ಆದ ಬಳಿಕ ಪ್ರೇಕ್ಷಕರು ಮತ್ತು ಮಾಧ್ಯಮಗಳಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಸಿನಿಮಾವನ್ನು ನೋಡಿದ ಪ್ರತಿಯೊಬ್ಬರೂ ಮೆಚ್ಚುಗೆಯ ಮಾತುಗಳನ್ನು ಹೇಳುತ್ತಿದ್ದಾರೆ. ಹೆಣ್ಣು ಮಕ್ಕಳನ್ನು ಉಳಿಸಿ, ಹೆಣ್ಣು ಮಕ್ಕಳನ್ನು ಬೆಳಿಸಿ ಎಂಬ ಸಂದೇಶವು ಎಲ್ಲ ಪ್ರೇಕ್ಷಕರಿಗೆ ಇಷ್ಟ ಆಗಿದೆ’ ಎಂದು ಅವರು ಹೇಳಿದರು.
ಇದನ್ನೂ ಓದಿ: ‘ಕಣ್ಣಪ್ಪ’ ಸಿನಿಮಾ ನೋಡಿ ಕೇಸ್ ಹಾಕಲು ನಿರ್ಧರಿಸಿದ ಪ್ರಭಾಸ್ ಅಭಿಮಾನಿ
ಇದು ಗೀತಪ್ರಿಯಾ ಅವರ ಮೊದಲ ಸಿನಿಮಾ. ‘ನಮ್ಮ ಮೊದಲ ಸಿನಿಮಾಕ್ಕೇ ಇಷ್ಟು ದೊಡ್ಡ ಮಟ್ಟದಲ್ಲಿ ಪ್ರತಿಕ್ರಿಯೆ ಸಿಗುತ್ತದೆ ಅಂತ ನಾವು ನಿರೀಕ್ಷಿಸಿರಲಿಲ್ಲ. ಪ್ರೇಕ್ಷಕರು ಸಿನಿಮಾವನ್ನು ಮೆಚ್ಚಿಕೊಂಡು ಮಾತನಾಡುತ್ತಿರುವುದಕ್ಕೆ ಖುಷಿ ಆಗುತ್ತಿದೆ. ಮುಂದೆಯೂ ಇದೇ ರೀತಿಯ ಸಾಮಾಜಿಕ ಕಥಾಹಂದರದ ಸಿನಿಮಾಗಳನ್ನು ಮಾಡಿ ತೆರೆಮೇಲೆ ತರಲು ನಮಗೆ ಪ್ರೋತ್ಸಾಹ ಸಿಕ್ಕಂತೆ ಆಗಿದೆ’ ಎಂದು ಗೀತಪ್ರಿಯಾ ಹೇಳಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




