ಮಕ್ಕಳೊಟ್ಟಿಗೆ ಕುಳಿತು ಭಾವುಕರಾದ ವಿಜಯ್, ಅಂಬೇಡ್ಕರ್, ಪೆರಿಯಾರ್ ಅವರ ಓದುವಂತೆ ಸಲಹೆ

|

Updated on: Jun 17, 2023 | 2:48 PM

Vijay: ತಮಿಳಿನ ಸ್ಟಾರ್ ನಟ ವಿಜಯ್, ತಮಿಳುನಾಡಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಿದ್ದು, ಕಾರ್ಯಕ್ರಮದಲ್ಲಿ ಚುಟುಕಾಗಿ ಮಾತನಾಡಿ, ಅಂಬೇಡ್ಕರ್, ಪೆರಿಯಾರ್, ಕಾಮರಾಜ ಅವರುಗಳನ್ನು ಓದುವಂತೆ ಮನವಿ ಮಾಡಿದ್ದಾರೆ.

ಮಕ್ಕಳೊಟ್ಟಿಗೆ ಕುಳಿತು ಭಾವುಕರಾದ ವಿಜಯ್, ಅಂಬೇಡ್ಕರ್, ಪೆರಿಯಾರ್ ಅವರ ಓದುವಂತೆ ಸಲಹೆ
ಅಂಬೇಡ್ಕರ್-ವಿಜಯ್
Follow us on

ತಮಿಳಿನ ಸೂಪರ್ ಸ್ಟಾರ್ ನಟ ವಿಜಯ್ (Vijay) ಸಿನಿಮಾಗಳ ಮೂಲಕ ಮಾತ್ರವಲ್ಲದೆ ತಮ್ಮ ಸಮಾಜ ಸೇವಾ ಕಾರ್ಯಗಳಿಂದಲೂ ಜನಪ್ರಿಯರು. ತಮ್ಮದೇ ಟ್ರಸ್ಟ್ ಮೂಲಕ ಅವಶ್ಯಕತೆ ಇರುವ ಹಲವಾರು ಮಂದಿಗೆ ಸಹಾಯ ಮಾಡಿರುವ ವಿಜಯ್, ಶಿಕ್ಷಣದ ಬಗ್ಗೆ ವಿಶೇಷ ಕಾಳಜಿವಹಿಸಿ ಹಲವು ಬಡ ಮಕ್ಕಳ ಶಿಕ್ಷಣಕ್ಕೆ ನೆರವಾಗುತ್ತಾ ಬಂದಿದ್ದಾರೆ. ಇಂದು (ಜೂನ್ 17) ತಮ್ಮದೇ ದಳಪತಿ ವಿಜಯ್ ಎಜುಕೇಶನ್ ಫೌಂಡೇಶನ್ (Vijay education Foundation)ತಿಯಿಂದ ಆಯೋಜಿಸಿದ್ದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ವಿಜಯ್ ಭಾಗವಹಿಸಿ ಆಡಿದ ಮಾತುಗಳು ಸಖತ್ ವೈರಲ್ ಆಗಿವೆ.

ಅಂಗವೈಕಲ್ಯದ ನಡುವೆಯೂ ಹತ್ತನೇ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದು ಸಾಧನೆಗೈದ ವಿದ್ಯಾರ್ಥಿಗಳೊಟ್ಟಿಗೆ ಸಮಯ ಕಳೆದ ವಿಜಯ್ ವಿದ್ಯಾರ್ಥಿಗಳೊಟ್ಟಿಗೆ ಮಾತನಾಡುತ್ತಾ ಭಾವುಕರಾದರು. ಆ ಬಳಿಕ ವೇದಿಕೆ ಏರಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಿ ಪ್ರಶಸ್ತಿ ಪತ್ರ ವಿತರಿಸಿದರು. ಅಂಗವಿಕಲ ಮಕ್ಕಳು ಅವರ ಪೋಷಕರೊಡನೆ ವೇದಿಕೆ ಏರಿ ವಿಜಯ್ ಅವರಿಂದ ಸನ್ಮಾನ ಸ್ವೀಕರಿಸಿ, ವಿಜಯ್ ಅವರೊಟ್ಟಿಗೆ ಕೆಲ ಕಾಲ ಮಾತನಾಡಿದರು.

”ನಾನು ನಿಮ್ಮಷ್ಟು ಜಾಣ ವಿದ್ಯಾರ್ಥಿಯಾಗಿರಲಿಲ್ಲ ಸಾಧಾರಣ ವಿದ್ಯಾರ್ಥಿಯಾಗಿದ್ದೆ ಅಷ್ಟೆ ಎಂದ ವಿಜಯ್, ”ನಮ್ಮ ಬಳಿ ಹೊಲ ಇದ್ದರೆ ಕಸಿದುಕೊಳ್ಳುವರು, ನಮ್ಮ ಬಳಿ ಹಣ ಇದ್ದರೆ ಕದಿಯುವರು ಆದರೆ ವಿದ್ಯೆ ಇದ್ದರೆ ಯಾರೂ ಏನೂ ಮಾಡಲಾರರು’ ಎಂದು ನಟ ಧನುಶ್​ರ ಅಸುರನ್ ಸಿನಿಮಾದ ಡೈಲಾಗ್ ಹೇಳಿ, ಈ ಸಂಭಾಷಣೆ ನನ್ನನ್ನು ಬಹುವಾಗಿ ಕಾಡಿತು. ಹಾಗಾಗಿ ಇಂಥಹಾ ಅದ್ಭುತ ಶಕ್ತಿ ಶಿಕ್ಷಣಕ್ಕಾಗಿ ನನ್ನ ಕಡೆಯಿಂದ ಏನಾದರೂ ಮಾಡಬೇಕೆಂದು ಈ ಕಾರ್ಯಕ್ರಮ ಮಾಡುತ್ತಿದ್ದೇವೆ” ಎಂದರು.

ಇದನ್ನೂ ಓದಿ:Anupam Kher: ‘ವಿಜಯ್ 69’ ಶೂಟಿಂಗ್​ ವೇಳೆ ಅವಘಡ; ಖ್ಯಾತ ನಟ ಅನುಪಮ್ ಖೇರ್​​ಗೆ ಗಾಯ

ಓದು ಎಂಬುದು ನಿಮ್ಮಲ್ಲಿ ಒಳ್ಳೆಯ ಗುಣಗಳನ್ನು ಬಿತ್ತುವಂತಿರಲಿ, ನಿಮ್ಮ ವ್ಯಕ್ತಿತ್ವವನ್ನು ಉನ್ನತೀಕರಿಸುವಂತಿರಲಿ. ಹಣ ಕಳೆದುಕೊಂಡರೆ ಏನೂ ಕಳೆದುಕೊಂಡಂತಲ್ಲ, ಆರೋಗ್ಯ ಕಳೆದುಕೊಂಡರೆ ಏನೋ ಸ್ವಲ್ಪ ಕಳೆದುಕೊಂಡಂತೆ ಆದರೆ ಗುಣ ಕಳೆದುಕೊಂಡರೆ ಎಲ್ಲವನ್ನೂ ಕಳೆದುಕೊಂಡಂತೆ ಇದನ್ನು ಸದಾ ನೆನಪಿಡಿ. ನಾನು ಮುಂಚೆ ಓದುತ್ತಿರಲಿಲ್ಲ. ಸಿನಿಮಾ ಸ್ಕ್ರಿಪ್ಟ್ ತೆಗೆದುಕೊಂಡು ಬಂದರೂ ಸಹ ಅದನ್ನು ಓದದೆ, ನೀವೇ ಓದಿ ಹೇಳಿ ಎನ್ನುತ್ತಿದ್ದೆ. ಆದರೆ ಇತ್ತೀಚೆಗೆ ನಾನೂ ಸಹ ಓದಲು ಆರಂಭಿಸಿದ್ದೇನೆ, ನೀವೂ ಓದಿ, ಪಠ್ಯ ಮಾತ್ರವಲ್ಲ ಬೇರೆಯದ್ದನ್ನೂ ಓದಿ. ಅಂಬೇಡ್ಕರ್, ಪೆರಿಯಾರ್, ಕಾಮರಾಜ ಅವರುಗಳನ್ನು ಓದಿ ಅವರ ಬಗ್ಗೆ ತಿಳಿದುಕೊಳ್ಳಿ” ಎಂದಿದ್ದಾರೆ ವಿಜಯ್.

ಸಾಮಾಜಿಕ ಜಾಲತಾಣದ ಬಗ್ಗೆ ಎಚ್ಚರಿಕೆ ನೀಡಿದ ವಿಜಯ್, ಸಾಮಾಜಿಕ ಜಾಲತಾಣವನ್ನು ಜಾಗೃತೆಯಾಗಿ ಬಳಸಿ. ಸಾಮಾಜಿಕ ಜಾಲತಾಣದಲ್ಲಿ ನಮ್ಮ ದಾರಿ ತಪ್ಪಿಸಲೆಂದೇ ಕೆಲವರು ಇದ್ದಾರೆ. ತಮ್ಮ ಪ್ರೊಪಾಗ್ಯಾಂಡಾವನ್ನು ನಮ್ಮ ಮೇಲೆ ಹೇರಲು ಯತ್ನಿಸುತ್ತಿದ್ದಾರೆ. ಹಾಗಾಗಿ ಯಾವುದು ಸರಿ ಯಾವುದು ತಪ್ಪು ಎಂಬುದನ್ನು ನೀವೇ ಹುಡುಕಿಕೊಳ್ಳಿ ಅರಿತುಕೊಳ್ಳಿ. ಮುಂಚೆ ಓದು ಕಾಲವಿತ್ತು, ನಿನ್ನ ಗೆಳೆಯರು ಯಾರೆಂದು ಹೇಳು ನೀನು ಒಳ್ಳೆಯವನೋ ಕೆಟ್ಟವನೋ ಹೇಳುತ್ತೇನೆ ಎಂದು ಆದರೆ ಈಗ ಕಾಲ ಹಾಗಿಲ್ಲ, ನೀನು ಫಾಲೋ ಮಾಡುವ ಪೇಜ್ ಯಾವುದೆಂಬುದರ ಮೇಲೆ ನಿಮ್ಮ ವ್ಯಕ್ತಿತ್ವ ಎಂಥಹದ್ದು ಎಂಬುದನ್ನು ಹೇಳಬಹುದು” ಎಂದರು ವಿಜಯ್.

ವಿದ್ಯಾರ್ಥಿಗಳಿಗೆ ಮನವಿ ಮಾಡಿದ ವಿಜಯ್, ಶಾಲೆಯ ಪ್ರತಿಭಾವಂತ ವಿದ್ಯಾರ್ಥಿಗಳು ನಿಮ್ಮ ತರಗತಿಯಲ್ಲಿರುವ ಅಂಗವಿಕಲ ವಿದ್ಯಾರ್ಥಿಗಳು, ಹಿಂದುಳಿದ ವಿದ್ಯಾರ್ಥಿಗಳೊಟ್ಟಿಗೆ ಸಮಯ ಕಳೆಯಿರಿ, ಅವರಿಗೆ ಮಾರ್ಗದರ್ಶನ ಮಾಡಿರಿ, ಪರೀಕ್ಷೆ ಮಾಡುವುದು ಎಷ್ಟು ಸುಲಭ ಎಂದು ಹೇಳಿಕೊಡಿ ಅದರಿಂದ ಅವರಿಗೆ ಧೈರ್ಯ ಬರುತ್ತದೆ ಎಂದಿದ್ದಾರೆ. ಕೊನೆಯದಾಗಿ ಚುನಾವಣೆ ಬಗ್ಗೆಯೂ ಮಾತನಾಡಿದ ವಿಜಯ್, ದಯವಿಟ್ಟು ಹಣ ಪಡೆದು ಮತ ಚಲಾಯಿಸಬೇಡಿ. ಹಣ ಪಡೆದು ಮತ ಚಲಾಯಿಸಿದರೆ ನಮ್ಮ ಬೆರಳಿನಿಂದ ನಾವೇ ಕಣ್ಣು ಕುಕ್ಕಿಕೊಂಡಂತೆ. ವಿದ್ಯಾರ್ಥಿಗಳು ನಿಮ್ಮ ಪೋಷಕರಿಗೆ ಹಣ ಪಡೆದು ಮತಚಲಾಯಿಸಬೇಡಿ ಎಂದು ಹೇಳಿಕೊಡಿ ಇದರಿಂದ ನಿಮ್ಮ ಭವಿಷ್ಯವೇ ಉಜ್ವಲವಾಗುವುದು ಎಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ