ಕರೂರು ಕಾಲ್ತುಳಿತ: ಮೃತರ ಕುಟುಂಬಕ್ಕೆ ತಲಾ 20 ಲಕ್ಷ ರೂ. ಪರಿಹಾರ ಘೋಷಿಸಿದ ವಿಜಯ್

ಕರೂರು ಕಾಲ್ತುಳಿತದ ಘಟನೆ ಬಳಿಕ ಟಿವಿಕೆ ಪಕ್ಷದ ಮುಖ್ಯಸ್ಥ ದಳಪತಿ ವಿಜಯ್ ಅವರು ತೀವ್ರ ಟೀಕೆಗೆ ಗುರಿ ಆಗಿದ್ದಾರೆ. ದುರಂತದ ಬಗ್ಗೆ ಅವರು ಪ್ರತಿಕ್ರಿಯೆ ನೀಡಿದ್ದು, ಗಾಯಾಳುಗಳು ಹಾಗೂ ಮೃತರ ಕುಟುಂಬಕ್ಕೆ ಪರಿಹಾರ ಘೋಷಿಸಿದ್ದಾರೆ. ಮೃತರ ಕುಟುಂಬಗ್ಗೆ ತಲಾ 20 ಲಕ್ಷ ರೂ. ಹಾಗೂ ಗಾಯಾಳುಗಳಿಗೆ ತಲಾ 2 ಲಕ್ಷ ರೂಪಾಯಿ ನೀಡುವುದಾಗಿ ತಿಳಿಸಿದ್ದಾರೆ.

ಕರೂರು ಕಾಲ್ತುಳಿತ: ಮೃತರ ಕುಟುಂಬಕ್ಕೆ ತಲಾ 20 ಲಕ್ಷ ರೂ. ಪರಿಹಾರ ಘೋಷಿಸಿದ ವಿಜಯ್
Thalapathy Vijay

Updated on: Sep 28, 2025 | 12:35 PM

ಕಾಲಿವುಡ್ ನಟ, ‘ತಮಿಳಿಗ ವೆಟ್ರಿ ಕಳಗಂ’ ಪಕ್ಷದ ಮುಖ್ಯಸ್ಥ ದಳಪತಿ ವಿಜಯ್ (Thalapathy Vijay) ಶನಿವಾರ (ಸೆ.27) ನಡೆಸಿದ ರ‍್ಯಾಲಿಯಲ್ಲಿ ಕಾಲ್ತುಳಿತ (Karur Stampede) ಉಂಟಾಗಿ 39 ಜನರು ಮೃತರಾಗಿದ್ದಾರೆ. ಈ ದುರಂತದ ಬಗ್ಗೆ ವಿಜಯ್ ಪ್ರತಿಕ್ರಿಯೆ ನೀಡಿದ್ದಾರೆ. ಮೃತರ ಕುಟುಂಬಕ್ಕೆ ಅವರು ಸಂತಾಪ ಸೂಚಿಸಿದ್ದಾರೆ. ಅಲ್ಲದೇ ತಲಾ 20 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಕಾಲ್ತುಳಿತಕ್ಕೆ ಒಳಗಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ ತಲಾ 2 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಅವರು ತಿಳಿಸಿದ್ದಾರೆ. ಈ ಬಗ್ಗೆ ಅವರು ಟಿವಿಕೆ (TVK) ಪಕ್ಷದ ಸೋಶಿಯಲ್ ಮೀಡಿಯಾ ಖಾತೆ ಮೂಲಕ ಪೋಸ್ಟ್ ಮಾಡಿದ್ದಾರೆ.

‘ನಿನ್ನೆ ನಡೆದ ಘಟನೆಯಿಂದ ತೀವ್ರ ನೋವಾಗಿದೆ. ಅದನ್ನು ಹೇಗೆ ವಿವರಿಸಬೇಕು ಎಂಬುದೇ ತಿಳಿಯುತ್ತಿಲ್ಲ. ಪ್ರೀತಿ ಪಾತ್ರರನ್ನು ಕಳೆದುಕೊಂಡ ಎಲ್ಲರಿಗೂ ನಾನು ಸಂತಾಪ ಸೂಚಿಸುತ್ತೇನೆ. ಏನೇ ಕೊಟ್ಟರೂ ಆಗಿರುವ ನಷ್ಟವನ್ನು ಭರಿಸಲು ಸಾಧ್ಯವಿಲ್ಲ. ಆದರೂ, ಕುಟುಂಬದ ಸದಸ್ಯರಲ್ಲಿ ನಾನೂ ಒಬ್ಬನಾಗಿ ಮೃತರ ಕುಟುಂಬದವರಿಗೆ ತಲಾ 20 ಲಕ್ಷ ರೂಪಾಯಿ ಹಾಗೂ ಗಾಯಾಳುಗಳಿಗೆ ತಲಾ 2 ಲಕ್ಷ ರೂಪಾಯಿ ನೀಡುತ್ತೇನೆ’ ಎಂದು ವಿಜಯ್ ಪರಿಹಾರ ಘೋಷಿಸಿದ್ದಾರೆ.

‘ಆಗಿರುವ ನಷ್ಟಕ್ಕೆ ಹೋಲಿಸಿದರೆ ಇದು ದೊಡ್ಡ ಪರಿಹಾರದ ಮೊತ್ತವಲ್ಲ. ಆದರೂ ಕೂಡ ಕುಟುಂಬದ ಸದಸ್ಯನಾಗಿ ಈ ಕಷ್ಟದ ಸಂದರ್ಭದಲ್ಲಿ ನಿಮ್ಮ ಜೊತೆ ನಿಲ್ಲುವುದು ನನ್ನ ಕರ್ತವ್ಯ. ಗಾಯಗೊಂಡಿರುವ ನನ್ನ ಎಲ್ಲ ಬಂಧುಗಳು ಆದಷ್ಟು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ. ಎಲ್ಲ ಗಾಯಾಳುಗಳ ಚಿಕಿತ್ಸೆಗೆ ನೆರವು ನೀಡುವೆ’ ಎಂದು ದಳಪತಿ ವಿಜಯ್ ಅವರು ಟ್ವೀಟ್ ಮಾಡಿದ್ದಾರೆ.

40ಕ್ಕೂ ಅಧಿಕ ಜನರು ಈ ಕಾಲ್ತುಳಿತದಲ್ಲಿ ಗಾಯಗೊಂಡಿದ್ದಾರೆ. ಎಲ್ಲರಿಗೂ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ರ‍್ಯಾಲಿಯಲ್ಲಿ ಸುಮಾರು 60 ಸಾವಿರ ಜನರು ಭಾಗವಹಿಸಿದ್ದರು ಎನ್ನಲಾಗಿದೆ. ಕಾಲ್ತುಳಿತಕ್ಕೆ ಹೊಣೆ ಯಾರು ಎಂಬುದನ್ನು ತಿಳಿಯಲು ತನಿಖೆ ಮಾಡಲಾಗುತ್ತಿದೆ. ಇತ್ತೀಷೆಗಷ್ಟೇ ರಾಜಕೀಯಕ್ಕೆ ಕಾಲಿಟ್ಟಿರುವ ದಳಪತಿ ವಿಜಯ್ ಅವರಿಗೆ ಈ ಘಟನೆಯಿಂದ ಆರಂಭದಲ್ಲೇ ಹಿನ್ನಡೆ ಆಗಿದೆ.

ಇದನ್ನೂ ಓದಿ: ವಿಜಯ್ ರ‍್ಯಾಲಿಯಲ್ಲಿ ಕಾಲ್ತುಳಿತ: 10 ವರ್ಷದ ಬಾಲಕಿ ಸಾವನ್ನ ಕಣ್ಣಾರೆ ಕಂಡೆ ಎಂದ ಬೆಂಗಳೂರಿನ ವ್ಯಕ್ತಿ

ದಳಪತಿ ವಿಜಯ್ ಹಾಗೂ ಇಡೀ ತಮಿಳುನಾಡಿನ ಪಾಲಿಗೆ ಇದೊಂದು ಕರಾಳ ಅಧ್ಯಾಯ ಆಗಿದೆ. ಈವರೆಗೂ ಯಾವುದೇ ರಾಜಕೀಯ ಪಕ್ಷದ ರ‍್ಯಾಲಿಯಲ್ಲಿ ಇಷ್ಟು ದೊಡ್ಡ ದುರಂತ ಆಗಿರಲಿಲ್ಲ. ನರೇಂದ್ರ ಮೋದಿ, ಅರವಿಂದ್ ಕೇಜ್ರಿವಾಲ್, ಎಂ.ಕೆ. ಸ್ಟಾಲಿನ್, ರಾಜನಾಥ್ ಸಿಂಗ್, ಅಮಿತ್ ಶಾ ಮುಂತಾದವರು ಮೃತರ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us