
ತಮಿಳು ಚಿತ್ರರಂಗದ ಸ್ಟಾರ್ ನಟ ದಳಪತಿ ವಿಜಯ್ (Thalapathy Vijay) ಹುಟ್ಟುಹಬ್ಬ ಇಂದು (ಜೂನ್ 22) ಇದೇ ದಿನ ಅವರ ನಟನೆಯ ಕೊನೆಯ ಸಿನಿಮಾ ‘ಜನ ನಾಯಗನ್’ ಸಿನಿಮಾದ ಟೀಸರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಆ ಮೂಲಕ ವಿಜಯ್ ಪ್ರೇಕ್ಷಕರಿಗೆ ಹುಟ್ಟುಹಬ್ಬದ ಉಡುಗೊರೆಯನ್ನು ಚಿತ್ರತಂಡ ನೀಡಿದೆ. ‘ಜನ ನಾಯಗನ್’ ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆಗಳು ಅಭಿಮಾನಿಗಳಿಗೆ ಇದೆ. ಇಂದು ಬಿಡುಗಡೆ ಆಗಿರುವ ಟೀಸರ್ನಲ್ಲಿ ವಿಜಯ್ ಮತ್ತೊಮ್ಮೆ ಪೊಲೀಸ್ ಸಮವಸ್ತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
‘ಜನ ನಾಯಗನ್’ ಸಿನಿಮಾದ ಟೀಸರ್ ಕೆಲವೇ ಸೆಕೆಂಡುಗಳು ಮಾತ್ರವೇ ಇದೆ. ವಿಜಯ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಕೈಯಲ್ಲೊಂದು ಸಮುರಾಯ್ ಕತ್ತಿ, ಮತ್ತೊಂದು ಕೈಯಲ್ಲಿ ರಕ್ತ ಮೆತ್ತಿದ ಚಾಕು ಹಿಡಿದುಕೊಂಡು ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಹಿನ್ನೆಲೆಯಲ್ಲಿ ‘ಒಬ್ಬ ನಿಜವಾದ ನಾಯಕ ಅಧಿಕಾರಕ್ಕಾಗಿ ಅಲ್ಲ, ಜನಗಳಿಗಾಗಿ ಎದ್ದು ನಿಂತು ಹೋರಾಡುತ್ತಾನೆ’ ಎಂಬ ಸಾಲುಗಳು ಇವೆ. ಜೊತೆಗೆ ಟೀಸರ್ನ ಕೊನೆಯಲ್ಲಿ ಬನ್ನಿ ಎಲ್ಲರೂ ಒಟ್ಟಾಗಿ ಅಭಿವೃದ್ಧಿ ಹೊಂದೋಣ’ ಎಂಬ ವಾಕ್ಯವೂ ಇದೆ.
ಇದನ್ನೂ ಓದಿ:ಸಿನಿಮಾಗೆ 250 ಕೋಟಿ ರೂಪಾಯಿ ಸಂಭಾವನೆ ಪಡೆಯೋ ದಳಪತಿ ವಿಜಯ್ ಆಸ್ತಿ ಎಷ್ಟು?
ವಿಜಯ್ ರಾಜಕೀಯ ಪಕ್ಷ ಸ್ಥಾಪನೆ ಮಾಡಿದ್ದು, ಮುಂದಿನ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ಹಾಗಾಗಿ ‘ಜನ ನಾಯಗನ್’ ಅವರ ಕೊನೆಯ ಸಿನಿಮಾ. ಈ ಸಿನಿಮಾವನ್ನು ತಮ್ಮ ರಾಜಕೀಯ ಪ್ರಚಾರಕ್ಕೆ ಬಳಸಿಕೊಳ್ಳುವ ಉಮೇದಿಮಲ್ಲಿದ್ದಾರೆ ವಿಜಯ್. ಇದೇ ಕಾರಣಕ್ಕೆ ಈ ಸಿನಿಮಾ ಚಿತ್ರಪ್ರೇಮಿಗಳಿಗೆ ಮಾತ್ರವಲ್ಲ ತಮಿಳುನಾಡು ರಾಜಕೀಯ ಆಸಕ್ತರಿಗೂ ಕುತೂಹಲ ಕೆರಳಿಸಿದೆ. ಈಗ ಬಿಡುಗಡೆ ಆಗಿರುವ ಟೀಸರ್ನಲ್ಲಿ ವಿಜಯ್ ಪೊಲೀಸ್ ಅಧಿಕಾರಿಯಾಗಿ ಮಾತ್ರವೇ ಕಾಣಿಸಿಕೊಂಡಿದ್ದಾರೆ. ಆದರೆ ಸಿನಿಮಾನಲ್ಲಿ ಅವರು ಜನಗಳಿಗಾಗಿ ಹೋರಾಡುವ ನಾಯಕನ ಪಾತ್ರದಲ್ಲಿ ನಟಿಸಿದ್ದಾರೆ ಎನ್ನಲಾಗುತ್ತಿದೆ. ವಿಜಯ್ ತಮ್ಮ ಪಕ್ಷದ ಸಿದ್ಧಾಂತ, ಪ್ರಣಾಳಿಕೆಗಳನ್ನು ಈ ಸಿನಿಮಾನಲ್ಲಿ ತೋರಿಸುತ್ತಿದ್ದಾರೆ ಎನ್ನಲಾಗುತ್ತಿದೆ.
ವಿಜಯ್ ಅವರ ಈ ಕೊನೆಯ ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣ ಮಾಡುತ್ತಿದೆ. ಕನ್ನಡದಲ್ಲಿ ಯಶಸ್ವಿಯಾಗಿ ಕೆಲ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಕೆವಿಎನ್ ‘ಜನ ನಾಯಗನ್’ ಸಿನಿಮಾ ಮೂಲಕ ತಮಿಳಿಗೆ ಕಾಲಿರಿಸಿದೆ. ಸಿನಿಮಾ ಅನ್ನು ಎಚ್ ವಿನೋದ್ ನಿರ್ದೇಶನ ಮಾಡಿದ್ದಾರೆ. ಸಿನಿಮಾನಲ್ಲಿ ಮಲಯಾಳಂ ಚೆಲುವೆ ಮಮಿತಾ ಬೈಜು ನಾಯಕಿಯಾಗಿ ನಟಿಸಿದ್ದಾರೆ. ಸಿನಿಮಾ ಮುಂದಿನ ವರ್ಷ ಜನವರಿ 9ನೇ ತಾರೀಖು ಬಿಡುಗಡೆ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ