
ರಿಷಬ್ ಶೆಟ್ಟಿ (Rishab Shetty) ನಟಿಸಿ, ನಿರ್ದೇಶನ ಮಾಡಿರುವ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಭಾರತದ ಪ್ರಸ್ತುತ ಬಹು ನಿರೀಕ್ಷಿತ ಸಿನಿಮಾ ಆಗಿದೆ. ಹೊಂಬಾಳೆ ನಿರ್ಮಾಣ ಮಾಡಿರುವ ಈ ಸಿನಿಮಾದ ಬಿಡುಗಡೆಗೆ ಇನ್ನೊಂದು ವಾರವಷ್ಟೆ ಬಾಕಿ ಉಳಿದಿದೆ. ಸಿನಿಮಾಕ್ಕಾಗಿ ದೇಶದಾದ್ಯಂತ ಸಿನಿಮಾ ಪ್ರೇಮಿಗಳು ಎದುರು ನೊಡುತ್ತಿದ್ದಾರೆ. ಸಿನಿಮಾಕ್ಕೆ ಇರುವ ಈ ಭಾರಿ ಜನಪ್ರಿಯತೆಯನ್ನು ಲಾಭವನ್ನಾಗಿ ಬದಲಾಯಿಸಿಕೊಳ್ಳಲು ಇತರೆ ಕೆಲವು ಸಿನಿಮಾಗಳು ಮುಂದೆ ಬಂದಿವೆ.
‘ಕಾಂತಾರ ಚಾಪ್ಟರ್ 1’ ಸಿನಿಮಾಕ್ಕೆ ಭಾರಿ ನಿರೀಕ್ಷೆ ಇದ್ದು, ದೇಶದಾದ್ಯಂತ ಸಿನಿಮಾ ಪ್ರೇಮಿಗಳು ‘ಕಾಂತಾರ ಚಾಪ್ಟರ್ 1’ ಸಿನಿಮಾ ವೀಕ್ಷಿಸುವುದು ಖಾತ್ರಿ. ಇದೇ ಕಾರಣಕ್ಕೆ ಈಗ ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಜೊತೆಗೆ ಪ್ರಭಾಸ್ ನಟನೆಯ ಹೊಸ ಸಿನಿಮಾದ ಟ್ರೈಲರ್ ಅನ್ನು ಅಟ್ಯಾಚ್ ಮಾಡಿ ಪ್ರದರ್ಶಿಸಲಾಗುತ್ತದೆ. ಆ ಮೂಲಕ ಒಂದೇ ಬಾರಿಗೆ ಭಾರಿ ದೊಡ್ಡ ಸಂಖ್ಯೆಯ ಪ್ರೇಕ್ಷಕರನ್ನು ತಲುಪುವ ಯೋಜನೆಯನ್ನು ಚಿತ್ರತಂಡ ಹಾಕಿಕೊಂಡಿದೆ.
ಪ್ರಭಾಸ್ ನಟಿಸಿರುವ ಹಾರರ್, ಕಾಮಿಡಿ, ರೊಮ್ಯಾಂಟಿಕ್, ಥ್ರಿಲ್ಲರ್ ಸಿನಿಮಾ ‘ದಿ ರಾಜಾ ಸಾಬ್’ ಈಗಾಗಲೇ ಬಿಡುಗಡೆಯನ್ನು ಹಲವು ಬಾರಿ ಮುಂದಕ್ಕೆ ಹಾಕಲಾಗಿದೆ. ಪ್ರಭಾಸ್ ಅವರ ‘ಸಲಾರ್’, ‘ಕಲ್ಕಿ’ ಇನ್ನಿತರೆ ಸಿನಿಮಾಗಳಿಗೆ ಸಿಕ್ಕಿದ್ದ ಹೈಪ್ ಈ ಸಿನಿಮಾಕ್ಕೆ ದೊರೆತಿಲ್ಲ. ಹಾಗಾಗಿ ಸಿನಿಮಾದ ಟ್ರೈಲರ್ ಅನ್ನು ಭರ್ಜರಿಯಾಗಿ ಲಾಂಚ್ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದ್ದು, ‘ಕಾಂತಾರ ಚಾಪ್ಟರ್ 1’ ಸಿನಿಮಾಕ್ಕೆ ಅಟ್ಯಾಚ್ ಮಾಡಿ ಬಿಡುಗಡೆ ಮಾಡಲು ಒಪ್ಪಂದ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ:‘ಕಾಂತಾರ’ ಪ್ರೀಕ್ವೆಲ್ ಕತೆ ಹುಟ್ಟಿದ್ದು ಹೇಗೆ? ಚಿತ್ರಕತೆಗಾರ ವಿವರಿಸಿದ್ದು ಹೀಗೆ
‘ದಿ ರಾಜಾ ಸಾಬ್’ ಸಿನಿಮಾದ ಟ್ರೈಲರ್ ಅನ್ನು ‘ಕಾಂತಾರ ಚಾಪ್ಟರ್ 1’ ಸಿನಿಮಾದ ಜೊತೆಗೆ ಅಟ್ಯಾಚ್ ಮಾಡುವುದು ಖಾತ್ರಿ ಆಗಿದ್ದು, ‘ರಾಜಾ ಸಾಬ್’ ಟ್ರೈಲರ್ 3:30 ಸೆಕೆಂಡ್ ಅವಧಿಯದ್ದಾಗಿರಲಿದೆ. ಈ ಒಪ್ಪಂದ ಒಂದು ರೀತಿ ಎರಡೂ ಸಿನಿಮಾಗಳಿಗೆ ಸಹಕಾರಿ ಆಗಲಿದೆ. ತೆಲುಗು ಭಾಗಗಳಲ್ಲಿ ‘ರಾಜಾ ಸಾಬ್’ ಟ್ರೈಲರ್ ವೀಕ್ಷಿಸಲೆಂದೇ ‘ಕಾಂತಾರ: ಚಾಪ್ಟರ್ 1’ ಸಿನಿಮಾಕ್ಕೆ ಬರುವವರೂ ಇರುತ್ತಾರೆ ಹಾಗೆಯೇ ಬೇರೆಡೆ, ‘ಕಾಂತಾರ: ಚಾಪ್ಟರ್ 1’ ಸಿನಿಮಾ ನೋಡಲು ಬಂದವರು ‘ರಾಜಾ ಸಾಬ್’ ಟ್ರೈಲರ್ ಸಹ ನೋಡಲಿದ್ದಾರೆ.
‘ಕಾಂತಾರ: ಚಾಪ್ಟರ್ 1’ ಸಿನಿಮಾ ಅಕ್ಟೋಬರ್ 02 ರಂದು ದೇಶದಾದ್ಯಂತ ಏಕಕಾಲಕ್ಕೆ ಬಿಡುಗಡೆ ಆಗಲಿದೆ. ಸಿನಿಮಾ ಬಿಡುಗಡೆ ಹಿಂದಿನ ದಿನವೇ ದೇಶದ ಹಲವು ಪ್ರಮುಖ ನಗರಗಳಲ್ಲಿ ಪೇಯ್ಡ್ ಪ್ರೀಮಿಯರ್ ಶೋಗಳನ್ನು ಆಯೋಜನೆ ಮಾಡುವ ನಿರೀಕ್ಷೆ ಇದೆ. ಇನ್ನು ‘ದಿ ರಾಜಾ ಸಾಬ್’ ಸಿನಿಮಾ ಅನ್ನು ಮಾರುತಿ ನಿರ್ದೇಶನ ಮಾಡಿದ್ದು ಸಿನಿಮಾನಲ್ಲಿ ಮಾಳವಿಕಾ ಮೋಹನನ್, ನಿಧಿ ಅಗರ್ವಾಲ್ ಅವರುಗಳು ನಟಿಸಿದ್ದಾರೆ. ಸಿನಿಮಾನಲ್ಲಿ ಪ್ರಭಾಸ್ ದ್ವಿಪಾತ್ರದಲ್ಲಿ ನಟಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ