ಉಪೇಂದ್ರ ನಿರ್ದೇಶನ ಮಾಡಿ ಮೊದಲ ಬಾರಿ ನಾಯಕನಾಗಿ ನಟಿಸಿದ ‘ಎ’ ಸಿನಿಮಾ ಕೆಲ ತಿಂಗಳ ಹಿಂದೆ ಮರು ಬಿಡುಗಡೆ ಆಗಿತ್ತು, ಜನ ಮುಗಿಬಿದ್ದು ಸಿನಿಮಾ ವೀಕ್ಷಿಸಿದ್ದರು. ಮರು ಬಿಡುಗಡೆಯಲ್ಲಿಯೂ ಉತ್ತಮ ಮೊತ್ತವನ್ನು ಸಿನಿಮಾ ಗಳಿಕೆ ಮಾಡಿತ್ತು. ‘ಎ’ ಸಿನಿಮಾ ಕನ್ನಡದ ಕಲ್ಟ್ ಸಿನಿಮಾಗಳಲ್ಲಿ ಒಂದು ಎನಿಸಿಕೊಂಡಿದೆ. ‘ಎ’ ಸಿನಿಮಾ ಮೂಲಕ ಹೊಸ ರೀತಿಯ ನಿರೂಪಣೆಯನ್ನು ಉಪೇಂದ್ರ ಪರಿಚಯಿಸಿದರು. 1998 ರಲ್ಲಿ ಬಿಡುಗಡೆ ಆದ ಈ ಸಿನಿಮಾ ಭಾರಿ ದೊಡ್ಡ ಹಿಟ್ ಆಗಿತ್ತು. ಆದರೆ ಆಗ ಸಿನಿಮಾ ನೋಡಿದವರೆಲ್ಲ ಉಪೇಂದ್ರ ಅವರನ್ನು ಬೈದಿದ್ದರಂತೆ.
ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿರುವ ಉಪೇಂದ್ರ, ‘ಎ’ ಸಿನಿಮಾ ಬಿಡುಗಡೆ ಆದಾಗ ಮತ್ತು ಅದಕ್ಕೆ ಮುಂಚೆ ಒಂದೇ ಒಂದು ಒಳ್ಳೆಯ ಮಾತುಗಳನ್ನು ಯಾರೂ ಸಹ ನನ್ನ ಬಳಿ ಹೇಳಿರಲಿಲ್ಲ. ನೋಡಿದವರೆಲ್ಲ ಎಂಥಹಾ ಕೆಟ್ಟ ಸಿನಿಮಾ ಇದು ಎಂದು ಬೈದಿದ್ದರು. ನರ್ತಕಿ ಸಿನಿಮಾದ ಗೇಟ್ ಕೀಪರ್ ಸಹ ಏನ್ರಿ ಇಂಥಾ ಸಿನಿಮಾಕ್ಕೆ ನಿಮಗೆ ನರ್ತಕಿ ಥಿಯೇಟರ್ ಬೇಕ, ಇಲ್ಲಿ ಎರಡು ದಿನ ಓಡಲ್ಲ ಈ ಸಿನಿಮಾ. ಬೇರೆ ಕಡೆ ಸಿನಿಮಾ ಹಾಕಿಕೊಳ್ಳಿ ಸ್ವಲ್ಪ ಹಣ ಆದ್ರೂ ಉಳಿಯುತ್ತೆ’ ಎಂದಿದ್ದರಂತೆ.
ಸಿನಿಮಾದ ಸೆನ್ಸಾರ್ ಶೋ ನಡೆಯುವಾಗ ಒಬ್ಬರಂತೂ ಮಧ್ಯದಲ್ಲೇ ಎದ್ದು ಹೋಗಿಬಿಟ್ಟಿದ್ದರಂತೆ. ಇದೆಂಥಾ ಸಿನಿಮಾ, ಈ ಸಿನಿಮಾ ಬಿಡುಗಡೆ ಆಗಲು ಯೋಗ್ಯವೇ ಅಲ್ಲ ಎಂದಿದ್ದರಂತೆ. ಸಿನಿಮಾಕ್ಕೆ ಸರ್ಟಿಫಿಕೇಟ್ ಕೊಡೋದಿಲ್ಲ ಎಂದಿದ್ದರಂತೆ. ಕಾಡಿ ಬೇಡಿ ಅವರಿಂದ ಸರ್ಟಿಫಿಕೇಟ್ ಪಡೆದುಕೊಂಡಿದ್ದರಂತೆ ಉಪೇಂದ್ರ.
ಇದನ್ನೂ ಓದಿ:‘ಶ್’ ಚಿತ್ರದಲ್ಲೇಕೆ ಬರ್ತಾರೆ ಉಪೇಂದ್ರ? ಆ ಟ್ವಿಸ್ಟ್ ಕೊಡಲು ಇತ್ತು ಕಾರಣ
ಸಿನಿಮಾ ನಿರ್ಮಾಣ ಮಾಡಲು ಫೈನ್ಯಾನ್ಸ್ ನೀಡಿದ್ದ ಫೈನ್ಯಾನ್ಸರ್ಗಳು, ಸಿನಿಮಾ ನೋಡಿ, ನಮಗೆ ಮೊದಲು ನಮ್ಮ ಹಣ ವಾಪಸ್ ಕೊಡಿ, ನೀವು ಸಿನಿಮಾ ಅನ್ನು ಹೇಗೆ ಬೇಕಾದರೂ ಬಿಡುಗಡೆ ಮಾಡಿಕೊಳ್ಳಿ ಆದರೆ ಹಣ ವಾಪಸ್ ಕೊಡಿ ಎಂದಿದ್ದರಂತೆ. ಸಿನಿಮಾದ ನಿರ್ಮಾಪಕರಾದ ಜಗನ್ನಾಥ ಎಂಬುವರು ಮಾತ್ರ ‘ಸಿನಿಮಾ ಚೆನ್ನಾಗಿದೆ. ನಾನು 100 ಬಾರಿ ನೋಡಿದರೂ ನನಗೆ ಬೇಜಾರಾಗಿಲ್ಲ’ ಎಂದಿದ್ದರಂತೆ.
ಸಿನಿಮಾ ನೋಡಿದ ಒಬ್ಬರೂ ಸಹ ಸಿನಿಮಾದ ಬಗ್ಗೆ ಒಳ್ಳೆಯ ಮಾತುಗಳನ್ನೇ ಆಡಿರಲಿಲ್ಲವಂತೆ. ಆದರೆ ಜನ ಮುಗಿಬಿದ್ದು ಸಿನಿಮಾ ನೋಡಿದರಂತೆ. ಒಬ್ಬೇ ಒಬ್ಬ ಗಾಂಧಿನಗರದವನು ಇಷ್ಟಪಡದ ಸಿನಿಮಾವನ್ನು ಜನ ದೊಡ್ಡ ಹಿಟ್ ಮಾಡಿಸಿದರು. 1 ಕೋಟಿ ಹಣದಲ್ಲಿ ನಿರ್ಮಾಣ ಮಾಡಿದ ಸಿನಿಮಾ ಆಗಿನ ಕಾಲಕ್ಕೆ 20 ರಿಂದ 25 ಕೋಟಿ ರೂಪಾಯಿ ಹಣ ಗಳಿಸಿತು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ