ಈ ವಯಸ್ಸಲ್ಲಿ ಇಂಥ ಬಟ್ಟೆ ಹಾಕ್ತೀರಾ? ಪ್ರಶ್ನೆ ಕೇಳಿದವರ ಮೇಲೆ ಲಕ್ಷ್ಮಿ ಮಂಚು ಗರಂ
47ರ ಪ್ರಾಯದ ನಟಿ ಲಕ್ಷ್ಮಿ ಮಂಚು ಅವರು ಗ್ಲಾಮರಸ್ ಆಗಿ ಬಟ್ಟೆ ಧರಿಸುತ್ತಾರೆ. ಅದನ್ನು ಕೆಲವರು ಪ್ರಶ್ನಿಸಿದ್ದಾರೆ. ಇತ್ತೀಚೆಗೆ ಮಾಧ್ಯಮವೊಂದು ನಡೆಸಿದ ಸಂದರ್ಶನದಲ್ಲಿ ಕೂಡ ಲಕ್ಷ್ಮಿ ಮಂಚು ಅವರಿಗೆ ಈ ಕುರಿತು ಪ್ರಶ್ನೆ ಕೇಳಿಬಂತು. ಆಗ ಅವರು ಖಡಕ್ ಉತ್ತರ ನೀಡಿದರು.

ಟಾಲಿವುಡ್ (Tollywood) ನಟಿ ಲಕ್ಷ್ಮಿ ಮಂಚು ಅವರಿಗೆ ಈಗ 47 ವರ್ಷ ವಯಸ್ಸು. ಚಿತ್ರರಂಗದಲ್ಲಿ ಅವರು ಬ್ಯುಸಿ ಆಗಿದ್ದಾರೆ. ಲಕ್ಷ್ಮಿ ಮಂಚು ನಟಿಸಿರುವ ‘ದಕ್ಷ’ ಸಿನಿಮಾ (Daksha) ಬಿಡುಗಡೆಗೆ ಸಜ್ಜಾಗಿದೆ. ಅದರ ಸಲುವಾಗಿ ಅವರು ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿದ್ದಾರೆ. ಸಂದರ್ಶನದ ವೇಳೆ ಲಕ್ಷ್ಮಿ ಮಂಚು ಅವರ ಬಟ್ಟೆ ಬಗ್ಗೆ ಪ್ರಶ್ನೆ ಎದುರಾಗಿದೆ. 47ನೇ ವಯಸ್ಸಿನಲ್ಲೂ ಇಂಥ ಬಟ್ಟೆ ಧರಿಸುತ್ತೀರಲ್ಲ ಎಂದು ಕೇಳಲಾಗಿದೆ. ಆ ಪ್ರಶ್ನೆಯಿಂದ ಲಕ್ಷ್ಮಿ ಮಂಚು (Lakshmi Manchu) ಅವರು ಗರಂ ಆಗಿದ್ದಾರೆ. ‘ಇದೇ ಪ್ರಶ್ನೆಯನ್ನು ನೀವು ಪುರುಷರಿಗೆ ಕೇಳುತ್ತೀರಾ’ ಎಂದು ಲಕ್ಷ್ಮಿ ಮಂಚು ಅವರು ಮರುಪ್ರಶ್ನೆ ಹಾಕಿದ್ದಾರೆ.
‘ಒಬ್ಬ ನಟನಿಗೆ ಈ ಪ್ರಶ್ನೆಯನ್ನು ನೀವು ಕೇಳ್ತೀರಾ? ನಿಮಗೆ ಎಷ್ಟು ಧೈರ್ಯ! ನನಗೆ ಇಂಥ ಪ್ರಶ್ನೆ ಕೇಳಿದ್ದೀರಿ. ನಿಮಗೆ 50 ವರ್ಷ ಆಗಿದೆ, ನೀವು ಯಾಕೆ ಶರ್ಟ್ಲೆಸ್ ಆಗಿ ಕಾಣಿಸಿಕೊಳ್ಳುತ್ತೀರಿ ಅಂತ ಮಹೇಶ್ ಬಾಬುಗೆ ಹೋಗಿ ಕೇಳುತ್ತೀರಾ? ಆದರೆ ಮಹಿಳೆಯರಿಗೆ ಯಾಕೆ ಹೀಗೆ ಪ್ರಶ್ನೆ ಮಾಡುತ್ತೀರಿ. ನೀವು ಇಂದು ನನಗೆ ಏನು ಕೇಳಿದ್ದೀರೋ ಅದರಿಂದ ಜನರು ಕಲಿಯುತ್ತಾರೆ. ಜವಾಬ್ದಾರಿಯಿಂದ ನಡೆದುಕೊಳ್ಳಿ’ ಎಂದು ಲಕ್ಷ್ಮಿ ಮಂಚು ಅವರು ಹೇಳಿದ್ದಾರೆ.
ಲಕ್ಷ್ಮಿ ಮಂಚು ಅವರು ಹೈದರಾಬಾದ್ನಿಂದ ಮುಂಬೈಗೆ ಹೋದ ಬಳಿಕ ಅವರ ಉಡುಗೆ ಶೈಲಿಯನ್ನು ಯಾರೋ ಬದಲಾಯಿಸಿದರು ಎಂಬುದು ಪತ್ರಕರ್ತನ ಪ್ರಶ್ನೆ ಆಗಿತ್ತು. ಅದಕ್ಕೆ ಕೂಡ ಲಕ್ಷ್ಮಿ ಮಂಚು ಖಡಕ್ ಉತ್ತರ ನೀಡಿದೆ. ‘ಹೈದರಾಬಾದ್ ಅಥವಾ ಮುಂಬೈಗೆ ಬರುವುದಕ್ಕೂ ಮುನ್ನ ನಾನು ಅಮೆರಿಕದಲ್ಲಿ ಇದ್ದೆ. ಈ ರೀತಿ ಕಾಣಿಸಿಕೊಳ್ಳಲು ಕಷ್ಟಪಟ್ಟಿದ್ದೇನೆ. ಇಷ್ಟಬಂದಂತೆ ಬಟ್ಟೆ ಧರಿಸುವ ಆತ್ಮವಿಶ್ವಾಸ ಹೊಂದಿದ್ದೇನೆ’ ಎಂದು ಅವರು ಉತ್ತರಿಸಿದ್ದಾರೆ.
ಲಕ್ಷ್ಮಿ ಮಂಚು ಅವರ ಬಟ್ಟೆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಕೆಟ್ಟದಾಗಿ ಕಮೆಂಟ್ ಮಾಡಿದ್ದಾರೆ. ಒಬ್ಬ ಹೆಣ್ಣು ಮಗಳ ತಾಯಿಯಾಗಿ 47ನೇ ವಯಸ್ಸಿನಲ್ಲಿ ಗ್ಲಾಮರಸ್ ಬಟ್ಟೆ ಧರಿಸುವ ಅಗತ್ಯ ಇದೆಯಾ ಎಂದು ನೆಟ್ಟಿಗರು ತಕರಾರು ಎತ್ತಿದ್ದಾರೆ. ಅದನ್ನೇ ಆಧಾರವಾಗಿ ಇಟ್ಟುಕೊಂಡು ಸಂದರ್ಶನದಲ್ಲಿ ಕೇಳಿದ ಪ್ರಶ್ನೆಗೆ ಲಕ್ಷ್ಮಿ ಮಂಚು ಅವರು ಖಡಕ್ ಉತ್ತರ ಕೊಟ್ಟಿದ್ದಾರೆ.
ಇದನ್ನೂ ಓದಿ: ಯಾರಿಗೂ ಹೇಳದೆ ರಾಮ್ ಚರಣ್ ಮನೆಯಲ್ಲಿ ವಾಸವಿದ್ದರು ನಟಿ ಲಕ್ಷ್ಮಿ
ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಲಕ್ಷ್ಮಿ ಮಂಚು ಅವರು ನೀಡಿದ ಉತ್ತರ ಸರಿಯಾಗಿದೆ. ಅವರ ಕೋಪಕ್ಕೆ ಕಾರಣ ಇದೆ ಎಂದು ಜನರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ‘ಲಕ್ಷ್ಮಿ ಮಂಚು ಅವರು ಒಳ್ಳೆಯ ಮನಸ್ಸಿನವರು. ಅವರನ್ನು ಟ್ರೋಲ್ ಮಾಡಬೇಡಿ’ ಎಂಬ ಕಮೆಂಟ್ ಕೂಡ ಬಂದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




