ಯಾರಿಗೂ ಹೇಳದೆ ರಾಮ್ ಚರಣ್ ಮನೆಯಲ್ಲಿ ವಾಸವಿದ್ದರು ನಟಿ ಲಕ್ಷ್ಮಿ
ತೆಲುಗು ನಟಿ ಲಕ್ಷ್ಮಿ ಮಂಚು, ಯಾರಿಗೂ ತಿಳಿಯದಂತೆ ಸ್ಟಾರ್ ನಟ ರಾಮ್ ಚರಣ್ ನಿವಾಸದಲ್ಲಿ ವಾಸವಿದ್ದರಂತೆ. ಈ ವಿಷಯ ಯಾರಿಗೂ ತಿಳಿಸದಂತೆ ರಾಮ್ ಚರಣ್ ಸಹ ಹೇಳಿದ್ದರಂತೆ. ರಾಮ್ ತಮಗೆ ಮಾಡಿದ ಸಹಾಯದ ಬಗ್ಗೆ ಲಕ್ಷ್ಮಿ ಮಾತನಾಡಿದ್ದಾರೆ.
ತೆಲುಗು ಚಿತ್ರರಂಗದ ಹಿರಿಯ ನಟ ಮೋಹನ್ ಬಾಬು ಪುತ್ರಿ ಲಕ್ಷ್ಮಿ ಮಂಚು ಇತ್ತೀಚೆಗೆ ಬಾಲಿವುಡ್ಗೆ ವಾಸ್ತವ್ಯ ಬದಲಾಯಿಸಿದ್ದಾರೆ. ಹೊಸ ಅವಕಾಶಗಳನ್ನು ಅರಸುವ ಕಾರಣದಿಂದ ತಾವು ಬಾಲಿವುಡ್ಗೆ ವಾಸ್ತವ್ಯ ಬದಲಾವಣೆ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ. ಅಂದಹಾಗೆ ಬಾಲಿವುಡ್ಗೆ ಬಂದಾಗಲೂ ಸಹ ಲಕ್ಷ್ಮಿಗೆ ತಮ್ಮ ತೆಲುಗು ಚಿತ್ರರಂಗದ ಕೆಲವು ನಟರು ಸಹಾಯ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ. ರಾಣಾ ದಗ್ಗುಬಾಟಿ ಹೇಳಿದ ಮಾತುಗಳಿಂದ ಸ್ಪೂರ್ತಿ ಪಡೆದು ತಾವು ಹಿಂದಿಗೆ ಬಂದಿದ್ದಾಗಿ ಕೆಲವು ದಿನಗಳ ಹಿಂದೆ ಹೇಳಿದ್ದ ನಟಿ, ಈಗ ತಾವು ಯಾರಿಗೂ ತಿಳಿಯದೆ ರಾಮ್ ಚರಣ್ ಮನೆಯಲ್ಲಿ ವಾಸವಿದ್ದುದಾಗಿ ಹೇಳಿಕೊಂಡಿದ್ದಾರೆ.
ಮುಂಬೈಗೆ ಬಂದಾಗ ಯಾರಿಗೇ ಆಗಲಿ ಅಲ್ಲಿ ವಾಸ್ತವ್ಯದ್ದೇ ದೊಡ್ಡ ಸಮಸ್ಯೆ ಆಗುವುದು. ಲಕ್ಷ್ಮಿ ಮಂಚುಗೂ ಸಹ ಎಲ್ಲಿ ಉಳಿಯುವುದೆಂಬುದು ಸಮಸ್ಯೆ ಆಗಿತ್ತಂತೆ. ಆಗ ರಾಮ್ ಚರಣ್, ಲಕ್ಷ್ಮಿ ಮಂಚುಗೆ ಸಹಾಯ ಮಾಡಿದರಂತೆ. ರಾಮ್ ಚರಣ್ ತಮ್ಮ ಮುಂಬೈ ಮನೆಯನ್ನು ಲಕ್ಷ್ಮಿಗೆ ಕೊಟ್ಟು ಅಲ್ಲಿಯೇ ಉಳಿದುಕೊಳ್ಳುವಂತೆ ಹೇಳಿದರಂತೆ. ಲಕ್ಷ್ಮಿ ಮಂಚು, ಅವಕಾಶಗಳನ್ನು ಕೇಳಿಕೊಂಡು ಹೋದಾಗ ತಾವು ರಾಮ್ ಚರಣ್ ಮನೆಯಲ್ಲಿ ವಾಸವಿರುವುದಾಗಿ ಎಲ್ಲಿಯೂ ಹೇಳಲಿಲ್ಲವಂತೆ. ದೊಡ್ಡ ನಟರ ಸಂಪರ್ಕ ಇದೆ ಎಂಬುದು ಬೇರೆಯವರಿಗೆ ತಿಳಿಯುವುದು ಆ ಮೂಲಕ ಪ್ರಭಾವ ಬೀರಿ ಅವಕಾಶ ಗಿಟ್ಟಿಸಿಕೊಳ್ಳುವ ಇಷ್ಟವಿಲ್ಲದ ಕಾರಣ ಲಕ್ಷ್ಮಿ ಮಂಚು ಹಾಗೆ ಹೇಳಿರಲಿಲ್ಲವಂತೆ.
ಇದನ್ನೂ ಓದಿ:ರಿಯಾಗೆ ಬೆಂಬಲಕ್ಕೆ ವಿದ್ಯಾಬಾಲನ್ ಮತ್ತು ಲಕ್ಷ್ಮಿಮಂಚು
ಸ್ವತಃ ರಾಮ್ ಚರಣ್ ತೇಜ ಸಹ, ತಮ್ಮ ಮನೆಯಲ್ಲಿ ಇರುವುದಾಗಿ ಯಾರಿಗೂ ಹೇಳುವುದು ಬೇಡ ಎಂದಿದ್ದರಂತೆ. ಇದಷ್ಟೆ ಅಲ್ಲದೆ ಲಕ್ಷ್ಮಿ ಮಂಚು ತಮಗೆ ಹಲವು ಟಾಲಿವುಡ್ ನಟ-ನಟಿಯರು ಸಹಾಯ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ. ಮುಂಬೈಗೆ ಬಂದ ಕೆಲ ಸಮಯ ತಾವು ರಕುಲ್ ಪ್ರೀತ್ ಸಿಂಗ್ ಜೊತೆ ಅವರ ಮನೆಯಲ್ಲೇ ಇದ್ದುದಾಗಿಯೂ ಲಕ್ಷ್ಮಿ ಮಂಚು ಈ ಹಿಂದೆ ಹೇಳಿಕೊಂಡಿದ್ದರು.
ಟಾಲಿವುಡ್ನ ನಟರುಗಳ ನಡುವೆ ಇರುವ ಬಾಂಧವ್ಯದ ಬಗ್ಗೆಯೂ ಮಾತನಾಡಿರುವ ಲಕ್ಷ್ಮಿ ಮಂಚು, ಸ್ಟಾರ್ ನಟರದ್ದೆಲ್ಲ ವಾಟ್ಸ್ಆಪ್ ಗ್ರೂಫ್ ಇದೆ. ಆ ಗ್ರೂಫ್ನಲ್ಲಿ ಅಲ್ಲು ಅರ್ಜುನ್, ರಾಮ್ ಚರಣ್, ಜೂ ಎನ್ಟಿಆರ್ ಸೇರಿದಂತೆ 143 ಜನರಿದ್ದಾರೆ. ಎಲ್ಲರೂ ಒಬ್ಬರಿಗೊಬ್ಬರು ಬಹಳ ಆತ್ಮೀಯರು. ತಮ್ಮ ಸಿನಿಮಾಗಳ ಟ್ರೈಲರ್, ಟೀಸರ್ ಇನ್ನಿತರೆಗಳನ್ನು ಹಂಚಿಕೊಳ್ಳುತ್ತಾರೆ. ಅವರು ಒಬ್ಬರಿಗೊಬ್ಬರು ಸಹಾಯ ಮಾಡುತ್ತಾರೆ. ಪರಸ್ಪರ ಯಾರಿಗೂ ದ್ವೇಷವಿಲ್ಲ ಅದೇನಿದ್ದರೂ ಅಭಿಮಾನಿಗಳ ಮಧ್ಯೆ, ಅದನ್ನು ಅವರು ಬಿಡಬೇಕು ಎಂದಿದ್ದಾರೆ ಲಕ್ಷ್ಮಿ ಮಂಚು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ