ತೆಲಂಗಾಣ ಸಿಎಂ ಜೊತೆ ತೆಲುಗು ಚಿತ್ರರಂಗ ಪ್ರಮುಖರ ಸಭೆ: ಭಾಗವಹಿಸಿದವರ ಪಟ್ಟಿ ಇಲ್ಲಿದೆ

|

Updated on: Dec 26, 2024 | 12:09 PM

Tollywood: ತೆಲಂಗಾಣ ಸಿಎಂ ರೇವಂತ್ ರೆಡ್ಡಿ ತೆಲುಗು ಚಿತ್ರರಂಗದ ಮೇಲೆ ದ್ವೇಷ ಸಾಧಿಸುತ್ತಿರುವಂತೆ ಕಾಣುತ್ತಿದೆ. ವಿಧಾನಸಭೆಯಲ್ಲಿ ಅವರು ತೆಲುಗು ಚಿತ್ರರಂಗದ ಬಗ್ಗೆ ಋಣಾತ್ಮಕವಾಗಿ ಮಾತನಾಡಿದ್ದಲ್ಲದೆ, ತೆಲುಗು ಸಿನಿಮಾಗಳಿಗೆ ನೀಡಲಾಗುತ್ತಿದ್ದ ಸೌಕರ್ಯವನ್ನು ಹಿಂಪಡೆದುಕೊಳ್ಳುತ್ತಿರುವುದಾಗಿ ಹೇಳಿದ್ದಾರೆ. ಅದರ ಬೆನ್ನಲ್ಲೆ ಇದೀಗ ತೆಲುಗು ಚಿತ್ರರಂಗದ ಪ್ರಮುಖರು ಸಿಎಂ ರೇವಂತ್ ರೆಡ್ಡಿಯವರನ್ನು ಭೇಟಿ ಮಾಡಿದ್ದಾರೆ.

ತೆಲಂಗಾಣ ಸಿಎಂ ಜೊತೆ ತೆಲುಗು ಚಿತ್ರರಂಗ ಪ್ರಮುಖರ ಸಭೆ: ಭಾಗವಹಿಸಿದವರ ಪಟ್ಟಿ ಇಲ್ಲಿದೆ
Cm Revanth Reddy
Follow us on

ತೆಲುಗು ಸ್ಟಾರ್ ನಟ ಅಲ್ಲು ಅರ್ಜುನ್ ಪ್ರಕರಣವನ್ನು ನೆಪವಾಗಿರಿಸಿಕೊಂಡು ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಇತ್ತೀಚೆಗೆ ತೆಲುಗು ಚಿತ್ರರಂಗದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ತೆಲುಗು ಚಿತ್ರರಂಗಕ್ಕೆ ತೆಲಂಗಾಣದಲ್ಲಿ ನೀಡಲಾಗುತ್ತಿದ್ದ ಸೌಕರ್ಯಗಳನ್ನು ಬಂದ್ ಮಾಡಿದ್ದಾರೆ. ಇನ್ನು ಮುಂದೆ ಹೆಚ್ಚುವರಿ ಶೋಗಳು, ಟಿಕೆಟ್​ ದರಗಳಲ್ಲಿ ಚ್ಚಳ ಇರುವುದಿಲ್ಲ ಎಂದು ರೇವಂತ್ ರೆಡ್ಡಿ ಸ್ಪಷ್ಟಪಡಿಸಿದ್ದಾರೆ. ಅದರ ಬೆನ್ನಲ್ಲೆ ಇದೀಗ ತೆಲುಗು ಚಿತ್ರರಂಗದ ಗಣ್ಯರು ರೇವಂತ್ ರೆಡ್ಡಿ ಜೊತೆಗೆ ಸಭೆ ನಡೆಸಿದ್ದಾರೆ. ಚಿತ್ರರಂಗದ ಹಲವಾರು ಗಣ್ಯರು ಸಭೆಯಲ್ಲಿ ಭಾಗಿ ಆಗಿದ್ದಾರೆ.

ಸಿಎಂ ರೇವಂತ್ ರೆಡ್ಡಿ ಮತ್ತು ಅವರ ಪಕ್ಷದ ಕೆಲ ಸಚಿವರು, ಶಾಸಕರುಗಳು ತೆಲುಗು ಚಿತ್ರರಂಗದ ಬಗ್ಗೆ ಅತಿಯಾಗಿ ಋಣಾತ್ಮಕವಾಗಿ ಮಾತನಾಡಿದ್ದಾರೆ. ಅಲ್ಲದೆ ತೆಲುಗು ಚಿತ್ರರಂಗಕ್ಕೆ ನೀಡುತ್ತಿರುವ ಎಲ್ಲ ಸೌಲಭ್ಯಗಳನ್ನು ಕಡಿತಗೊಳಿಸುತ್ತಿರುವುದಾಗಿ ಸ್ವತಃ ಸಿಎಂ ಮತ್ತು ರಾಜ್ಯದ ಸಿನಿಮಾಟೊಗ್ರಫಿ ಸಚಿವರೇ ವಿಧಾನಸಭೆಯಲ್ಲಿ ಹೇಳಿದ್ದಾರೆ. ಇದೇ ಕಾರಣಕ್ಕೆ ಈಗ ತೆಲುಗು ಸಿನಿಮಾ ರಂಗದ ಪ್ರಮುಖರು ತೆಲಂಗಾಣ ಸಿಎಂ ರೇವಂತ್ ರೆಡ್ಡಿಯನ್ನು ಭೇಟಿ ಆಗಿದ್ದಾರೆ.

ತೆಲುಗು ಚಿತ್ರರಂಗದ ಪ್ರಮುಖ ನಿರ್ಮಾಪಕರು, ನಿರ್ದೇಶಕರು ಮತ್ತು ನಟರು ಸಿಎಂ ಅನ್ನು ಭೇಟಿ ಆಗಿದ್ದಾರೆ. ಒಟ್ಟು 45 ಮಂದಿ ಸಿನಿಮಾ ರಂಗದ ಪ್ರಮುಖರು ಸಿಎಂ ರೇವಂತ್ ರೆಡ್ಡಿಯೊಂದಿಗೆ ಸಭೆಯಲ್ಲಿ ಭಾಗವಹಿಸಿದ್ದಾರೆ. ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ಸಹ ರೇವಂತ್ ರೆಡ್ಡಿಯೊಟ್ಟಿಗಿನ ಸಭೆಯಲ್ಲಿ ಭಾಗಿಯಾಗಿದ್ದಾರೆ. ಅವರ ಜೊತೆಗೆ ಸುರೇಶ್ ಬಾಬು, ‘ಆರ್​ಆರ್​ಆರ್’ನ ಡಿವಿವಿ ದಯಾನಂದ್, ನಾರಾಯಣ ರಾವ್, ಯುವಿ ವಂಶಿ ಹೀಗೆ ಒಟ್ಟು 21 ಮಂದಿ ನಿರ್ಮಾಪಕರು ಭಾಗಿ ಆಗಿದ್ದರು. ಪ್ರಮುಖ ನಿರ್ದೇಶಕರಾದ ಕೊರಟಾಲ ಶಿವ, ಅನಿಲ್ ರವಿಪುಡಿ, ಕೆ ರಾಘವೇಂದ್ರ ರಾವ್, ಪ್ರಶಾಂತ್ ವರ್ಮಾ, ಪೈಡಪಲ್ಲಿ, ತ್ರಿವಿಕ್ರಮ್ ಇನ್ನೂ ಕೆಲವು ಪ್ರಮುಖ ನಿರ್ದೇಶಕರು ಭಾಗಿ ಆಗಿದ್ದಾರೆ.

ಇದನ್ನೂ ಓದಿ:ಅಲ್ಲು ಅರ್ಜುನ್​ಗೆ ಬೆದರಿಕೆ ಹಾಕಿದ ಕಾಂಗ್ರೆಸ್ ಶಾಸಕ

ಇನ್ನು ನಟರಲ್ಲಿ ಪ್ರಮುಖರಾದ ನಟ ನಾಗಾರ್ಜುನ, ವೆಂಕಟೇಶ್, ವರುಣ್ ತೇಜ್, ಸಾಯಿ ಧರಮ್ ತೇಜ್, ಕಲ್ಯಾಣ್ ರಾಮ್, ಅಡವಿಶೇಷ್, ನಿತಿನ್, ರಾಮ್ ಪೋತಿನೇನಿ, ಜೊನ್ನಲಗಡ್ಡ ಸಿದ್ದು ಇನ್ನೂ ಕೆಲವರು ಭಾಗಿ ಆಗಿದ್ದಾರೆ. ಚಿತ್ರರಂಗದ ಪರವಾಗಿ ಇದು ಸಂಧಾನ ಸಭೆ ಎನ್ನಲಾಗುತ್ತಿದೆ. ತೆಲಂಗಾಣ ರಾಜ್ಯದಲ್ಲಿ ತೆಲುಗು ಸಿನಿಮಾಗಳಿಗೆ ನೀಡಲಾಗುತ್ತಿದ್ದ ಟಿಕೆಟ್ ಬೆಲೆ ಹೆಚ್ಚಳ, ವಿಶೇಷ ಶೋಗಳಿಗೆ ಅವಕಾಶಗಳನ್ನು ಮರಳಿ ಕೊಡಿಸಿಕೊಳ್ಳಲು ಚಿತ್ರರಂಗ ಈ ಸಭೆಗೆ ಮುಂದಾಗಿದೆ ಎನ್ನಲಾಗುತ್ತಿದೆ.

ಅಲ್ಲು ಅರ್ಜುನ್ ಬಿಡುಗಡೆ ಬಳಿಕ ತೆಲುಗು ಚಿತ್ರರಂಗದ ಪ್ರಮುಖರು ಅಲ್ಲು ಅರ್ಜುನ್ ಮನೆಗೆ ಭೇಟಿ ನೀಡಿದ್ದನ್ನು ಸಿಎಂ ರೇವಂತ್ ರೆಡ್ಡಿ ವಿಧಾನಸಭೆಯಲ್ಲಿ ಟೀಕೆ ಮಾಡಿದ್ದರು. ಚಿತ್ರರಂಗದವರು ಅಲ್ಲು ಅರ್ಜುನ್ ಅನ್ನು ನೋಡಲು ಹೋದರು ಆದರೆ ಒಬ್ಬರೂ ಸಹ ಆಸ್ಪತ್ರೆಯಲ್ಲಿರುವ ಬಾಲಕನನ್ನು ನೋಡಲು ಬರಲಿಲ್ಲ. ಅಲ್ಲದೆ ನನ್ನನ್ನು ಕೆಟ್ಟದಾಗಿ ಬೈದುಕೊಂಡರು ಎಂದಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:29 am, Thu, 26 December 24