AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತೆಲುಗು ಚಿತ್ರರಂಗದ ಜನಪ್ರಿಯ ನಟ ಚಂದ್ರ ಮೋಹನ್ ವಿಧಿವಶ

Chandra Mohan: ತೆಲುಗು ಚಿತ್ರರಂಗದ ಜನಪ್ರಿಯ ಹಾಗೂ ಹಿರಿಯ ನಟ ಚಂದ್ರ ಮೋಹನ್ ಇಂದು (ನವೆಂಬರ್ 11) ನಿಧನ ಹೊಂದಿದ್ದಾರೆ. ಹಿರಿಯ ನಟ ಅಗಲಿಕೆಗೆ ಮೆಗಾಸ್ಟಾರ್ ಚಿರಂಜೀವಿ, ಜೂ ಎನ್​ಟಿಆರ್ ಸೇರಿದಂತೆ ಹಲವು ದಿಗ್ಗಜ ನಟ-ನಟಿಯರು ಸಂತಾಪ ವ್ಯಕ್ತಪಡಿಸಿದ್ದಾರೆ.

ತೆಲುಗು ಚಿತ್ರರಂಗದ ಜನಪ್ರಿಯ ನಟ ಚಂದ್ರ ಮೋಹನ್ ವಿಧಿವಶ
ಚಂದ್ರಮೋಹನ್
ಮಂಜುನಾಥ ಸಿ.
|

Updated on: Nov 11, 2023 | 3:26 PM

Share

ತೆಲುಗು ಚಿತ್ರರಂಗದ (Tollywood) ಜನಪ್ರಿಯ ನಟ ಚಂದ್ರಮೋಹನ್ ಇಂದು (ನವೆಂಬರ್ 11) ನಿಧನ ಹೊಂದಿದ್ದಾರೆ. ಅವರಿಗೆ 82 ವರ್ಷ ವಯಸ್ಸಾಗಿತ್ತು. ಕಳೆದ ಕೆಲವು ತಿಂಗಳುಗಳಿಂದಲೂ ಅವರು ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದರು. ಚಂದ್ರಮೋಹನ್ ಅವರಿಗೆ ಇಬ್ಬರು ಪುತ್ರಿಯರಿದ್ದಾರೆ. ಹಲವು ದಶಕಗಳಿಂದಲೂ ತೆಲುಗು ಚಿತ್ರರಂಗದಲ್ಲಿ ನಟಿಸುತ್ತಿದ್ದ ಚಂದ್ರ ಮೋಹನ್ ನಿಧನಕ್ಕೆ ತೆಲುಗು ಚಿತ್ರರಂಗದ ದಿಗ್ಗಜ ನಟ, ನಟಿಯರು ಸಂತಾಪ ವ್ಯಕ್ತಪಡಿಸಿದ್ದಾರೆ.

ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಚಂದ್ರಮೊಹನ್ ಅವರನ್ನು ಹೈದರಾಬಾದ್​ನ ಅಪೋಲೊ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಇಂದು ಬೆಳಿಗ್ಗೆ 9:57ಕ್ಕೆ ನಿಧನ ಹೊಂದಿದ್ದಾರೆ ಎಂದು ಆಸ್ಪತ್ರೆಯ ಆಡಳಿತ ಮಂಡಳಿ ತಿಳಿಸಿದೆ. ನವೆಂಬರ್ 13ಕ್ಕೆ ಚಂದ್ರಮೋಹನ್ ಅವರ ಅಂತಿಮ ಸಂಸ್ಕಾರ ಮಾಡಲಾಗುವುದು ಎಂದು ಅವರ ಕುಟುಂಬ ಸದಸ್ಯರು ಮಾಹಿತಿ ನೀಡಿದ್ದಾರೆ. ಶನಿವಾರ ಮತ್ತು ಭಾನುವಾರ ಚಂದ್ರಮೊಹನ್ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಚಂದ್ರಮೋಹನ್ 1966ರಿಂದಲೂ ತೆಲುಗು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಆರಂಭದ ಕೆಲ ವರ್ಷ ಹಲವು ಸಿನಿಮಾಗಳಲ್ಲಿ ನಾಯಕರಾಗಿಯೂ ಚಂದ್ರಮೋಹನ್ ನಟಿಸಿದ್ದರು. ತೆಲುಗು ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ಚಿತ್ರಗಳಲ್ಲಿ ಕೆಲವಾದ ‘ಶಂಕರಭಾರಣಂ’, ‘ಸಿರಿಸಿರಿ ಮುವ್ವ’, ‘ರಾಧಾ ಕಲ್ಯಾಣಂ’, ‘ನಾಕೂ ಪೆಳ್ಳಾಂ ಕಾವಾಲಿ’ ಇನ್ನೂ ಅನೇಕ ಸಿನಿಮಾಗಳಲ್ಲಿ ಚಂದ್ರಮೋಹನ್ ನಟಿಸಿದ್ದಾರೆ. 900 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಚಂದ್ರಮೋಹನ್ ನಟಿಸಿದ್ದಾರೆ. 2017ರಲ್ಲಿ ಬಿಡುಗಡೆ ಆದ ‘ಆಕ್ಸಿಜನ್’ ಅವರು ನಟಿಸಿದ ಕೊನೆಯ ಸಿನಿಮಾ.

ಇದನ್ನೂ ಓದಿ:ತಮನ್ನಾ ಭಾಟಿಯಾಗೆ ಮುಚ್ಚಿತೇ ತೆಲುಗು ಚಿತ್ರರಂಗದ ಬಾಗಿಲು?

ಚಂದ್ರಮೋಹನ್ ನಿಧನಕ್ಕೆ ತೆಲುಗು ಚಿತ್ರರಂಗದ ಹಲವು ದಿಗ್ಗಜ ನಟರು ಕಂಬನಿ ಮಿಡಿದಿದ್ದಾರೆ. ನಟ ಚಿರಂಜೀವಿ ಟ್ವೀಟ್ ಮಾಡಿ, ‘ನನ್ನ ಮೊದಲ ಸಿನಿಮಾ ‘ಪ್ರಾಣಂ ಖರೀದು’ ಸಿನಿಮಾದಲ್ಲಿ ಮೂಕನ ಪಾತ್ರದಲ್ಲಿ ಚಂದ್ರಮೋಹನ್ ಅದ್ಭುತವಾಗಿ ನಟಿಸಿದ್ದರು. ಅಂದಿನಿಂದಲೂ ಚಂದ್ರಮೋಹನ್ ನನ್ನ ಆತ್ಮೀಯ ಗೆಳೆಯ, ಆತನ ಅಗಲಿಕೆ ತೀವ್ರ ದುಃಖ ತಂದಿದೆ. ತೆಲುಗು ಸಿನಿಮಾ ಪ್ರೇಕ್ಷಕರು ಚಂದ್ರಮೋಹನ್ ನೀಡಿದ ಕಾಣ್ಕೆಯನ್ನು ಎಂದಿಗೂ ಮರೆಯಲಾರರು ಎಂದಿದ್ದಾರೆ.

ನಟ ಜೂ ಎನ್​ಟಿಆರ್ ಸಹ ಟ್ವೀಟ್ ಮಾಡಿದ್ದು, ‘ದಶಕಗಳಿಂದ ನೂರಾರು ಸಿನಿಮಾಗಳಲ್ಲಿ ಹಲವಾರು ವಿಭಿನ್ನ ಪಾತ್ರಗಳಲ್ಲಿ ನಟಿಸುತ್ತಾ ತಮ್ಮದೇ ಆದ ಪ್ರತ್ಯೇಕತೆಯನ್ನು ಚಂದ್ರಮೋಹನ್ ಸಂಪಾದಿಸಿಕೊಂಡಿದ್ದರು. ಅವರ ಅಕಾಲ ಮೃತ್ಯು ನನ್ನನ್ನು ತೀವ್ರವಾಗಿ ಬಾಧಿಸಿದೆ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ, ಚಂದ್ರಮೋಹನ್ ಆತ್ಮಕ್ಕೆ ಶಾಂತಿಯನ್ನು ಕೋರುತ್ತೇನೆ” ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ