ಟಾಲಿವುಡ್ನ ಸ್ಟಾರ್ ನಟ ಪವನ್ ಕಲ್ಯಾಣ್ (Pawan Kalyan) ಈಗ ಫುಲ್ಟೈಮ್ ರಾಜಕೀಯದಲ್ಲಿ ಬ್ಯುಸಿ ಆಗಿದ್ದಾರೆ. ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಅವರನ್ನು ಭೇಟಿಯಾಗಲು ಅನೇಕ ಗಣ್ಯರು ಬರುತ್ತಿದ್ದಾರೆ. ಪವನ್ ಕಲ್ಯಾಣ್ ಬಳಿ 4 ಪ್ರಮುಖ ಖಾತೆಗಳು ಇವೆ. ಈ ಎಲ್ಲ ಜವಾಬ್ದಾರಿಯನ್ನು ಅವರು ನಿಭಾಯಿಸಬೇಕಿದೆ. ಹಾಗಾಗಿ ಅವರು ಸದ್ಯಕ್ಕೆ ಸಿನಿಮಾಗಳಿಂದ (Pawan Kalyan Movie) ದೂರ ಉಳಿಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಹಾಗಿದ್ದರೂ ಕೂಡ ಟಾಲಿವುಡ್ನ (Tollywood) ಘಟಾನುಘಟಿ ನಿರ್ಮಾಣ ಸಂಸ್ಥೆಗಳ ಮಾಲಿಕರು ಪವನ್ ಕಲ್ಯಾಣ್ ಅವರನ್ನು ಭೇಟಿ ಮಾಡಲು ಮುಂದಾಗಿದ್ದಾರೆ ಎಂಬ ಮಾಹಿತಿ ಕೇಳಿಬಂದಿದೆ.
‘ಪುಷ್ಪ 2’ ಸಿನಿಮಾ ನಿರ್ಮಾಣ ಮಾಡಿರುವ ‘ಮೈತ್ರಿ ಮೂವೀ ಮೇಕರ್ಸ್’ ಸಂಸ್ಥೆಯ ನವೀನ್, ರವಿಶಂಕರ್, ‘ಆರ್ಆರ್ಆರ್’ ಸಿನಿಮಾದ ನಿರ್ಮಾಪಕ ಡಿವಿವಿ ದಾನಯ್ಯ, ‘ಕಲ್ಕಿ 2898 ಎಡಿ’ ಸಿನಿಮಾದ ನಿರ್ಮಾಪಕ ಅಶ್ವಿನಿ ದತ್, ಖ್ಯಾತ ನಿರ್ಮಾಪಕ ದಿಲ್ ರಾಜು, ನಾಗ ವಂಶಿ ಸೇರಿದಂತೆ ಅನೇಕ ನಿರ್ಮಾಪಕರು ಒಟ್ಟಾಗಿ ಪವನ್ ಕಲ್ಯಾಣ್ ಅವರನ್ನು ಭೇಟಿ ಮಾಡಲಿದ್ದಾರೆ ಎನ್ನಲಾಗಿದೆ. ಜೂನ್ 24ರ ಮಧ್ಯಾಹ್ನ ಈ ಭೇಟಿ ನಡೆಯುವ ನಿರೀಕ್ಷೆ ಇದೆ.
ಅಂದಹಾಗೆ, ಈ ದೊಡ್ಡ ದೊಡ್ಡ ನಿರ್ಮಾಪಕರು ಪವನ್ ಕಲ್ಯಾಣ್ ಅವರನ್ನು ಭೇಟಿ ಮಾಡಲು ಬರುತ್ತಿರುವುದು ಕಾಲ್ಶೀಟ್ ಪಡೆಯೋಕೆ ಅಲ್ಲ. ಬದಲಿಗೆ, ಚಿತ್ರರಂಗದ ಕುರಿತು ಕೆಲವು ಪ್ರಮುಖ ವಿಚಾರಗಳನ್ನು ತಿಳಿಸಲು ಆಗಮಿಸುತ್ತಿದ್ದಾರೆ. ಈ ಹಿಂದಿನ ಸರ್ಕಾರಗಳಿಂದ ಚಿತ್ರರಂಗಕ್ಕೆ ಕೆಲವು ಸವಾಲುಗಳು ಎದುರಾಗಿದ್ದವು. ಅವುಗಳನ್ನು ನಿವಾರಿಸುವ ಸಲುವಾಗಿ ಪವನ್ ಕಲ್ಯಾಣ್ ಜೊತೆ ಈ ಎಲ್ಲ ಪ್ರಮುಖ ನಿರ್ಮಾಪಕರು ಮನವಿ ಮಾಡಿಕೊಳ್ಳಲಿದ್ದಾರೆ.
ಇದನ್ನೂ ಓದಿ: ನಾಯ್ಡು ಪ್ರಮಾಣ ವಚನ: ಚಿರಂಜೀವಿ, ಪವನ್ ಕಲ್ಯಾಣ್ ಜತೆ ನರೇಂದ್ರ ಮೋದಿ ಗೆಲುವಿನ ನಗು
ತೆಲುಗು ಚಿತ್ರರಂಗದ ಬಹುತೇಕ ಎಲ್ಲ ಘಟಾನುಘಟಿ ನಿರ್ಮಾಪಕರು ವಿಜಯವಾಡದಲ್ಲಿ ಪವನ್ ಕಲ್ಯಾಣ್ ಅವರನ್ನು ಭೇಟಿ ಮಾಡಲಿದ್ದಾರೆ. ಪವನ್ ಕಲ್ಯಾಣ್ ಈಗ ಉಪ ಮುಖ್ಯಮಂತ್ರಿ ಆಗಿರುವುದರಿಂದ ತುಂಬ ಬ್ಯುಸಿ ಆಗಿದ್ದಾರೆ. ನಿರ್ಮಾಪಕರ ಜೊತೆ ಅವರು ಎಷ್ಟು ಸಮಯ ಮಾತುಕಥೆ ನಡೆಸುತ್ತಾರೆ ಎಂಬುದು ಇನ್ನೂ ತಿಳಿದುಬಂದಿಲ್ಲ. ಮೀಟಿಂಗ್ ಮುಗಿದ ಬಳಿಕ ಅಲ್ಲಿನ ವಿವರಗಳನ್ನು ನಿರ್ಮಾಪಕರು ಮಾಧ್ಯಮಗಳ ಜೊತೆ ಹಂಚಿಕೊಳ್ಳುತ್ತಾರೆ ಎನ್ನಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.