Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಯ್ಡು ಪ್ರಮಾಣ ವಚನ: ಚಿರಂಜೀವಿ, ಪವನ್​ ಕಲ್ಯಾಣ್​ ಜತೆ ನರೇಂದ್ರ ಮೋದಿ ಗೆಲುವಿನ ನಗು

ಪಿಎಂ ನರೇಂದ್ರ ಮೋದಿ ಇಂದು (ಜೂನ್​ 12) ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಈ ವೇದಿಕೆಯಲ್ಲಿ ಟಾಲಿವುಡ್​ ಸ್ಟಾರ್‌ ನಟರಾದ ಚಿರಂಜೀವಿ ಹಾಗೂ ಪವನ್ ಕಲ್ಯಾಣ್ ಜೊತೆ ಆತ್ಮೀಯವಾಗಿ ಗೆಲುವಿನ ನಗೆ ಬೀರಿದರು. ಮೈತ್ರಿಯ ಈ ಫೋಟೋ ವೈರಲ್​ ಆಗಿದೆ.

ನಾಯ್ಡು ಪ್ರಮಾಣ ವಚನ: ಚಿರಂಜೀವಿ, ಪವನ್​ ಕಲ್ಯಾಣ್​ ಜತೆ ನರೇಂದ್ರ ಮೋದಿ ಗೆಲುವಿನ ನಗು
ಚಿರಂಜೀವಿ, ನರೇಂದ್ರ ಮೋದಿ, ಪವನ್​ ಕಲ್ಯಾಣ್​
Follow us
ಮದನ್​ ಕುಮಾರ್​
|

Updated on: Jun 12, 2024 | 6:43 PM

ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗಿಯಾದರು. ಈ ವೇಳೆ ಅವರು ವೇದಿಕೆಯಲ್ಲಿ ತೆಲುಗು ಚಿತ್ರರಂಗದ ಸೂಪರ್‌ ಸ್ಟಾರ್‌ಗಳಾದ ‘ಮೆಗಾ ಸ್ಟಾರ್​’ ಚಿರಂಜೀವಿ (Chiranjeevi) ಹಾಗೂ ‘ಪವರ್​ ಸ್ಟಾರ್’ ಪವನ್ ಕಲ್ಯಾಣ್ (Pawan Kalyan) ಅವರೊಂದಿಗೆ ಆತ್ಮೀಯವಾಗಿ ನಗೆ ಬೀರಿದರು. ಬಿಜೆಪಿಯ ಆಂಧ್ರ ಮೈತ್ರಿಯ ಪ್ರಾಮುಖ್ಯತೆಯನ್ನು ಒತ್ತಿಹೇಳುವ ರೀತಿಯಲ್ಲಿತ್ತು ಈ ನಾಯಕರ ಸಂಜ್ಞೆ. ಸ್ಟಾರ್​ ಸಹೋದರರನ್ನು ಅಕ್ಕ ಪಕ್ಕ ನಿಲ್ಲಿಸಿಕೊಂಡು ಒಗ್ಗಟ್ಟು ಪ್ರದರ್ಶಿಸುವ ರೀತಿಯಲ್ಲಿ ಮಾಧ್ಯಮದ ಕ್ಯಾಮೆರಾಗಳಿಗೆ ಮೋದಿ ಪೋಸ್ ನೀಡಿದ್ದು, ಈ ಫೋಟೋ ವೈರಲ್​ ಆಗಿದೆ.

ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾಗಿ 4ನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದ ಚಂದ್ರಬಾಬು ನಾಯ್ಡು ಅವರಿಗೆ ಪ್ರಧಾನಿ ಮೋದಿ ಅವರು ಅಭಿನಂದನೆ ಸಲ್ಲಿಸಿದರು. ಪ್ರಮಾಣ ವಚನ ಸ್ವೀಕರಿಸಿದ ಬಳಿಕ ನಾಯ್ಡು ಅವರು ಮೋದಿ ಬಳಿಗೆ ಹೋದರು. ಈ ನಾಯಕರಿಬ್ಬರು ಪರಸ್ಪರ ಆಲಿಂಗಿಸಿದರು. ಆಂಧ್ರ ಪ್ರದೇಶದಲ್ಲಿ ಟಿಡಿಪಿ-ಬಿಜೆಪಿ ಸಮ್ಮಿಶ್ರ ಸರ್ಕಾರ ರಚನೆಯಾಗಿದೆ.

ಪ್ರಧಾನಿ ನರೇಂದ್ರ ಮೋದಿ ಸಂಪುಟದ ಸಹೋದ್ಯೋಗಿಗಳಾದ ನಿತಿನ್ ಗಡ್ಕರಿ, ಅಮಿತ್ ಶಾ ಹಾಗೂ ಜೆಪಿ ನಡ್ಡಾ ಕೂಡ ಚಂದ್ರಬಾಬು ನಾಯ್ಡು ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಸಾಕ್ಷಿಯಾದರು. ಶಿವಸೇನೆಯ ಏಕನಾಥ್ ಶಿಂಧೆ, ಲೋಕ ಜನಶಕ್ತಿ ಪಕ್ಷದ ಚಿರಾಗ್ ಪಾಸ್ವಾನ್ ಕೂಡ ಭಾಗಿ ಆಗಿದ್ದರು. ವಿಜಯವಾಡದಲ್ಲಿ ನಡೆದ ಪ್ರಮಾಣವಚನ ಕಾರ್ಯಕ್ರಮದಲ್ಲಿ ತಮಿಳು ಚಿತ್ರರಂಗದ ಸೂಪರ್​ ಸ್ಟಾರ್ ರಜನಿಕಾಂತ್ ಸೇರಿದಂತೆ ಹಲವು ಗಣ್ಯರು ಆಗಮಿಸಿದ್ದರು.

ಇದನ್ನೂ ಓದಿ: ಚಂದ್ರಬಾಬು ನಾಯ್ಡು ಪ್ರಮಾಣವಚನ ಕಾರ್ಯಕ್ರಮದಲ್ಲಿ ಆಪ್ತತೆಯಿಂದ ಮಾತನಾಡಿದ ರಜನಿ-ಚಿರಂಜೀವಿ

ಟಾಲಿವುಡ್​ನಲ್ಲಿ ನಟನಾಗಿ ಯಶಸ್ಸು ಕಂಡ ಪವನ್ ಕಲ್ಯಾಣ್ ಈಗ ರಾಜಕಾರಣಿಯಾಗಿಯೂ ಗೆಲುವು ಪಡೆದಿದ್ದಾರೆ. ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಜಯ ಸಾಧಿಸಿರುವ ಅವರು ತಮ್ಮ ಜನಸೇನಾ ಪಕ್ಷದ ಇತರೆ 20 ಅಭ್ಯರ್ಥಿಗಳ ಗೆಲುವನ್ನೂ ಸಂಭ್ರಮಿಸಿದ್ದಾರೆ. ಟಿಡಿಪಿಯ ವಿಜಯಕ್ಕೂ ಕೊಡುಗೆ ನೀಡಿದ್ದಾರೆ. ಮುಖ್ಯ ಮಂತ್ರಿಯಾಗಿ ಚಂದ್ರಬಾಬು ನಾಯ್ಡು ಪ್ರಮಾಣ ವಚನ ಸ್ವೀಕರಿಸಿದ ವೇದಿಕೆಯಲ್ಲೇ ಪವನ್ ಕಲ್ಯಾಣ್ ಕೂಡ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ನಂತರ ಅಮಿತ್ ಶಾ, ನರೇಂದ್ರ ಮೋದಿ, ಚಂದ್ರಬಾಬು ನಾಯ್ಡು, ರಜನಿಕಾಂತ್, ಬಾಲಕೃಷ್ಣ ಮುಂತಾದ ಹಿರಿಯರಿಗೆ ಪವನ್ ಕಲ್ಯಾಣ್ ನಮಸ್ಕಾರ ಮಾಡಿದರು. ನಂತರ ಅಣ್ಣ ಚಿರಂಜೀವಿ ಪಾದಕ್ಕೆ ಪವನ್​ ಕಲ್ಯಾಣ್ ನಮಸ್ಕರಿಸಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.