
ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾದ (Toxic Movie) ದೊಡ್ಡ ಅಪ್ಡೇಟ್ಗಾಗಿ ಇಡೀ ಭಾರತೀಯ ಚಿತ್ರರಂಗವೇ ಕಾಯುತ್ತಿತ್ತು. ಈಗ ಆ ಸುದೀರ್ಘ ಕಾಯುವಿಕೆಗೆ ಕೊನೆಗೂ ತೆರೆ ಬಿದ್ದಿದೆ. ಚಿತ್ರತಂಡವು ಯಶ್ ಅವರ ಖಡಕ್ ಲುಕ್ ಇರುವ ಹೊಸ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿದೆ. ಇದರ ಜೊತೆಗೆ ಬಹುನಿರೀಕ್ಷಿತ ಟ್ರೇಲರ್ ಬಿಡುಗಡೆಯ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿದೆ. ರಾಕಿ ಭಾಯ್ ಅಭಿಮಾನಿಗಳಲ್ಲಿ ಈ ಸುದ್ದಿ ಭಾರಿ ಸಂಚಲನ ಸೃಷ್ಟಿಸಿದೆ.
‘ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್’ ಚಿತ್ರದ ಹೊಸ ಪೋಸ್ಟರ್ ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿದೆ. ಇದರಲ್ಲಿ ಯಶ್ ನಿರ್ವಹಿಸುತ್ತಿರುವ ‘ರಾಯಾ’ ಪಾತ್ರದ ನೆರಳು ಮಾತ್ರ ಕಾಣಿಸುತ್ತಿದೆ. ಅವರ ಕೈಯಲ್ಲಿ ಟಾಮಿ ಗನ್ ಇರುವುದು ಚಿತ್ರದ ಮೇಲಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. ಈ ಚಿತ್ರದ ಭರ್ಜರಿ ಪ್ರಚಾರ ಕಾರ್ಯಗಳು ಬೆಂಗಳೂರಿನಿಂದಲೇ ಆರಂಭವಾಗಲಿವೆ. ಆಗಸ್ಟ್ 8 ರಂದು ಬೆಂಗಳೂರಿನಲ್ಲಿ ಈ ಸಿನಿಮಾದ ಟ್ರೇಲರ್ ಅನ್ನು ಅದ್ಧೂರಿಯಾಗಿ ಲಾಂಚ್ ಮಾಡಲಾಗುತ್ತಿದೆ. ವಿಶೇಷವೆಂದರೆ ಆಗಸ್ಟ್ 8 ರಂದೇ ಈ ಚಿತ್ರದ ಶೂಟಿಂಗ್ ಆರಂಭವಾಗಿ ಭರ್ತಿ ಎರಡು ವರ್ಷಗಳು ಪೂರೈಸಲಿವೆ.
ಇದನ್ನೂ ಓದಿ: ‘ಟಾಕ್ಸಿಕ್’ ಸಿನಿಮಾ ಒಪ್ಪಿಕೊಳ್ಳಲು ಕಾರಣವೇನು? ವಿವರಿಸಿದ ಕಿಯಾರಾ
ಇದುವರೆಗೆ ಬಿಡುಗಡೆಯಾಗಿರುವ ಸಿನಿಮಾದ ಪ್ರತಿಯೊಂದು ಝಲಕ್ ಕೂಡ ರಹಸ್ಯಗಳಿಂದಲೇ ಕೂಡಿತ್ತು. ಚಿತ್ರದ ಕಥೆ ಏನು ಎಂಬುದು ಯಾರಿಗೂ ತಿಳಿದಿಲ್ಲ. ಈಗ ಬಿಡುಗಡೆಯಾಗಲಿರುವ ಟ್ರೇಲರ್ ಚಿತ್ರದ ಇಡೀ ಪ್ರಪಂಚವನ್ನು ಪ್ರೇಕ್ಷಕರಿಗೆ ಪರಿಚಯಿಸಲಿದೆ. ಚಿತ್ರದ ಭವ್ಯತೆ, ಪಾತ್ರಗಳ ಹಿನ್ನೆಲೆ ಹಾಗೂ ಕಥೆಯ ಒಂದು ಸಣ್ಣ ಎಳೆಯನ್ನು ಇದು ಬಿಚ್ಚಿಡಲಿದೆ. ಗೀತು ಮೋಹನ್ ದಾಸ್ ನಿರ್ದೇಶನದ ಈ ಚಿತ್ರವು ಈ ವರ್ಷದ ಅತ್ಯಂತ ಬಿಗ್ ಬಜೆಟ್ ಸಿನಿಮಾಗಳಲ್ಲೊಂದಾಗಿದೆ. ಚಿತ್ರದ ಅದ್ಭುತ ಮೇಕಿಂಗ್ ನೋಡಲು ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ.
‘ಟಾಕ್ಸಿಕ್ ಚಿತ್ರದಲ್ಲಿ ದೊಡ್ಡ ತಾರಾಗಣವೇ ಜತೆಯಾಗಿದೆ. ನಯನತಾರಾ, ಕಿಯಾರಾ ಅಡ್ವಾಣಿ, ತಾರಾ ಸುತಾರಿಯಾ, ರುಕ್ಮಿಣಿ ವಸಂತ್ ಮತ್ತು ಹುಮಾ ಖುರೇಷಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಏಕಕಾಲದಲ್ಲಿ ಚಿತ್ರೀಕರಿಸಲಾಗಿದೆ. ಇದರ ಜೊತೆಗೆ ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಿಗೂ ಡಬ್ ಮಾಡಿ ರಿಲೀಸ್ ಮಾಡಲಾಗುತ್ತಿದೆ. ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಜಂಟಿಯಾಗಿ ಚಿತ್ರವನ್ನು ನಿರ್ಮಿಸಿವೆ. ಆಗಸ್ಟ್ 26ರ ಬುಧವಾರದಂದು ಸಿನಿಮಾ ಪ್ರಪಂಚದಾದ್ಯಂತ ಬಿಡುಗಡೆಯಾಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.