
ಸ್ಟಾರ್ ಹೀರೋಗಳನ್ನು ಆರಾಧಿಸುವ ಅಭಿಮಾನಿಗಳು ಕೋಟ್ಯಂತರ ಮಂದಿ ಇದ್ದಾರೆ. ಸಿನಿಮಾದಲ್ಲಿ ಹೀರೋ ಸಿಗರೇಟ್ (Cigarette) ಸೇದಿದ್ದನ್ನು ನೋಡಿ ನಿಜಜೀವನದಲ್ಲಿ ಸಿಗರೇಟ್ ಚಟ ಹತ್ತಿಸಿಕೊಂಡವರು ಅನೇಕರಿದ್ದಾರೆ. ಅಂಥವರಿಗೆ ಮಾಲಿವುಡ್ ನಟ ಉನ್ನಿ ಮುಕುಂದನ್ ಅವರು ಬುದ್ಧಿಮಾತು ಹೇಳಿದ್ದಾರೆ. ಈ ಬಗ್ಗೆ ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಸಿನಿಮಾದಲ್ಲಿ ತಮ್ಮನ್ನು ನೋಡಿ ಸಿಗರೇಟ್ ಸೇದುವ ಬದಲು ಸಿಕ್ಸ್ ಪ್ಯಾಕ್ (6 Pack Abs) ಮಾಡಿ ತೋರಿಸಿ ಎಂದು ಅಭಿಮಾನಿಗಳಿಗೆ ಉನ್ನಿ ಮುಕುಂದನ್ (Unni Mukundan) ಅವರು ಸವಾಲು ಹಾಕಿದ್ದಾರೆ.
ಇತ್ತೀಚೆಗೆ ಕಾಲಿವುಡ್ ನಟ ಸೂರ್ಯ ಕೂಡ ಇದೇ ಮಾತನ್ನು ಹೇಳಿದರು. ‘ರೆಟ್ರೋ’ ಸಿನಿಮಾದಲ್ಲಿ ಸೂರ್ಯ ಅವರು ರಫ್ ಆ್ಯಂಡ್ ಟಫ್ ಪಾತ್ರ ಮಾಡಿದ್ದಾರೆ. ಮೇ 1ರಂದು ಬಿಡುಗಡೆ ಆಗಲಿರುವ ಈ ಸಿನಿಮಾದ ಟ್ರೇಲರ್ನಲ್ಲಿ ಅವರು ಸಿಗರೇಟ್ ಸೇದುವ ದೃಶ್ಯ ಇದೆ. ಅದನ್ನು ಯಾರೂ ಅನುಕರಣೆ ಮಾಡಬಾರದು ಎಂದು ಸೂರ್ಯ ಹೇಳಿದರು. ಈಗ ಉನ್ನಿ ಮುಕುಂದನ್ ಕೂಡ ಈ ಬಗ್ಗೆ ಅಭಿಮಾನಿಗಳಿಗೆ ಕಿವಿಮಾತು ಹೇಳಿದ್ದಾರೆ.
ಸೂಪರ್ ಹಿಟ್ ‘ಮಾರ್ಕೋ’ ಸಿನಿಮಾದಲ್ಲಿ ಉನ್ನಿ ಮುಕುಂದನ್ ಅವರು ಸಿಗರೇಟ್ ಸೇದಿದ್ದರು. ಅಲ್ಲದೇ ಸಿಕ್ಸ್ ಪ್ಯಾಕ್ ಆ್ಯಬ್ಸ್ ಮೂಲಕವೇ ಗಮನ ಸೆಳೆದಿದ್ದರು. ಆದರೆ ಕೆಲವು ಅಭಿಮಾನಿಗಳು ಸಿಕ್ಸ್ ಪ್ಯಾಕ್ ಬಿಟ್ಟು ಸಿಗರೇಟ್ ಪ್ಯಾಕ್ ಹಿಡಿದರು! ಅಂಥವರನ್ನು ಉದ್ದೇಶಿಸಿ ಉನ್ನಿ ಮುಕುಂದನ್ ಅವರು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ಪ್ರತಿ ಸಿಗರೇಟ್ನ ತೂಕ ಅಂದಾಜು 1 ಗ್ರಾಂ ಇರುತ್ತದೆ. ಗಂಡಸರು ಹೈ ಆಗಲು 50 ಕೆಜಿ ಕಬ್ಬಿಣ ಎತ್ತುತ್ತಾರೆ. ಆಯ್ಕೆ ನಿಮ್ಮ ಕೈಯಲ್ಲಿ ಇದೆ. ಕೈಯಲ್ಲಿ ಸಿಗರೇಟ್ ಹಿಡಿದುಕೊಂಡು ಮಾರ್ಕೋ ಪಾತ್ರವನ್ನು ಅನುಕರಿಸುವುದು ಸುಲಭ. ಸಿಕ್ಸ್ ಪ್ಯಾಕ್ ಮಾಡಿಕೊಂಡು ಮಾರ್ಕೋ ಆಗಲು ಪ್ರಯತ್ನಿಸಿ. ಅದಕ್ಕೆ ತಾಕತ್ತು ಬೇಕು’ ಉನ್ನಿ ಮುಕುಂದನ್ ಅವರು ಹೇಳಿದ್ದಾರೆ.
ಇದನ್ನೂ ಓದಿ: ಸೂರ್ಯ ದಿನಕ್ಕೆ ಎಷ್ಟು ಸಿಗರೇಟ್ ಸೇದುತ್ತಾರೆ? ಅಭಿಮಾನಿಗಳ ಬಳಿ ಓಪನ್ ಆಗಿ ಹೇಳಿಕೊಂಡ ನಟ
ಉನ್ನಿ ಮುಕುಂದನ್ ಹೇಳಿದ ಈ ಮಾತಿಗೆ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ. ಅಭಿಮಾನಿಗಳ ಆರೋಗ್ಯದ ಬಗ್ಗೆ ಕಾಳಜಿ ತೋರಿಸಿದ್ದಕ್ಕಾಗಿ ಅವರಿಗೆ ಭೇಷ್ ಎನ್ನಲಾಗಿದೆ. ಉನ್ನಿ ಮುಕುಂದನ್ ಅವರ ಈ ಪೋಸ್ಟ್ ವೈರಲ್ ಆಗಿದೆ. ಫ್ಯಾನ್ಸ್ ಹಲವು ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.