ಸೂರ್ಯ ದಿನಕ್ಕೆ ಎಷ್ಟು ಸಿಗರೇಟ್ ಸೇದುತ್ತಾರೆ? ಅಭಿಮಾನಿಗಳ ಬಳಿ ಓಪನ್ ಆಗಿ ಹೇಳಿಕೊಂಡ ನಟ
ಸೂರ್ಯ ನಟನಾಗಿರುವ ‘ರೆಟ್ರೋ’ ಸಿನಿಮಾದ ಚಿತ್ರೀಕರಣದ ವೇಳೆ, ಅವರು ತಮ್ಮ ಅಭಿಮಾನಿಗಳಿಗೆ ಪರದೆಯ ಮೇಲಿನ ಕೆಟ್ಟ ಅಭ್ಯಾಸಗಳನ್ನು ಅನುಕರಿಸದಂತೆ ಎಚ್ಚರಿಸಿದ್ದಾರೆ. ಚಿತ್ರದಲ್ಲಿ ಸಿಗರೇಟ್ ಸೇದುವ ದೃಶ್ಯಗಳನ್ನು ಅಭಿಮಾನಿಗಳು ಅನುಕರಿಸುತ್ತಿದ್ದಾರೆ. ಹೀಗಾಗಿ ಸಿನಿಮಾಗಳನ್ನು ಆದರ್ಶವಾಗಿ ಪರಿಗಣಿಸದಂತೆ ಕೋರಿದ್ದಾರೆ. ಅವರ ಕಾಳಜಿ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ.

ತೆರೆಮೇಲೆ ಹೀರೋಗಳು ಏನೇ ಮಾಡಿದರೂ ಅದನ್ನು ಫ್ಯಾನ್ಸ್ ಅನುಸರಿಸುತ್ತಾರೆ. ಆ್ಯಕ್ಷನ್ ದೃಶ್ಯಗಳನ್ನು ಮಾಡಿದರೆ ಅದೇ ರೀತಿಯಲ್ಲಿ ಫೈಟ್ ಮಾಡೋಕೆ ಫ್ಯಾನ್ಸ್ ಪ್ರಯತ್ನಿಸಿದ್ದು ಇದೆ. ಇನ್ನು, ಸಿಗರೇಟ್ ಸೇದೋದು, ಮದ್ಯ ಸೇವನೆ ಮಾಡುವ ವಿಚಾರದಲ್ಲಿಯೂ ಫ್ಯಾನ್ಸ್ ನೆಚ್ಚಿನ ಹೀರೋ ಸ್ಟೈಲ್ನ ಅನುಸರಿಸುತ್ತಾರೆ. ಈಗ ಈ ರೀತಿ ಮಾಡೋರಿಗೆ ನಟ ಸೂರ್ಯ (Suriya) ಅವರು ಎಚ್ಚರಿಕೆ ನೀಡಿದ್ದಾರೆ. ‘ಕೆಟ್ಟದನ್ನು ತೆರೆಮೇಲೆ ಮಾಡಿದರೆ ಅದನ್ನು ಪಾಲಿಸಬೇಡಿ’ ಎಂದು ಸೂರ್ಯ ಕೋರಿದ್ದಾರೆ.
ಸೂರ್ಯ ಅವರು ಕಾರ್ತಿಕ್ ಸುಬ್ಬರಾಜು ನಿರ್ದೇಶನದ ‘ರೆಟ್ರೋ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಶೂಟ್ ತಿರುವನಂತಪುರದಲ್ಲಿ ಭರದಿಂದ ಸಾಗುತ್ತಿದೆ. ಅವರು ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ್ದು, ಕೆಟ್ಟ ಹವ್ಯಾಸ ಫಾಲೋ ಮಾಡಬೇಡಿ ಎಂದಿದ್ದಾರೆ. ಸಿನಿಮಾಗಳನ್ನು ನೋಡಿ ಫ್ಯಾನ್ಸ್ ಕೆಟ್ಟದ್ದು ಕಲಿಯಬಾರದು ಎಂಬುದು ಸೂರ್ಯ ಅವರ ಆಸೆ.
‘ರೆಟ್ರೋ’ ಸಿನಿಮಾದಲ್ಲಿ ಸೂರ್ಯ ಅವರು ಸಿಗರೇಟ್ ಸೇದೋ ದೃಶ್ಯಗಳು ಇವೆ. ಇದನ್ನು ಅನೇಕರು ಕಾಪಿ ಮಾಡಿದ್ದಾರೆ. ಈ ಬಗ್ಗೆ ಸೂರ್ಯಗೆ ಆತಂಕ ಶುರುವಾಗಿದೆ. ‘ನಾನು ಸಿನಿಮಾದಲ್ಲಿ ಮಾತ್ರ ಸಿಗರೇಟ್ ಸೇದುತ್ತೇನೆ. ನಿಜ ಜೀವನದಲ್ಲಿ ಸಿಗರೇಟ್ ಸೇದಬೇಡಿ. ಒಮ್ಮೆ ಇದನ್ನು ಆರಂಭಿಸಿದರೆ ಅದನ್ನು ಬಿಡೋದು ಕಷ್ಟ. ಒಂದು ಬಾರಿ ಸೇದಿದರೆ ಏನಾಗುವುದಿಲ್ಲ ಎಂದು ನೀವು ಅಂದುಕೊಳ್ಳುತ್ತೀರಿ. ಆದರೆ, ಅಲ್ಲಿಗೆ ಅದನ್ನು ನಿಲ್ಲಿಸೋಕೆ ಆಗಲ್ಲ. ನಾನು ಸಿಗರೇಟ್ ಸೇದೋದನ್ನು ಪ್ರಚಾರ ಮಾಡಲ್ಲ’ ಎಂದಿದ್ದಾರೆ ಅವರು. ಈ ಮೂಲಕ ದಿನಕ್ಕೆ ಒಂದೇ ಒಂದು ಸಿಗರೇಟ್ ಸೇದುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
‘ಈ ಕಾರ್ಯಕ್ರಮವನ್ನು ಗಂಟೆಗಟ್ಟಲೆ ಒಟ್ಟಿಗೆ ನಿಂತು ವೀಕ್ಷಿಸಿದ್ದಕ್ಕಾಗಿ ನಾನು ನಿಮಗೆ ನಮಿಸುತ್ತೇನೆ. ನೀವು ನನ್ನ ಮೇಲೆ ತೋರಿಸಿದ ಹೇರಳವಾದ ಪ್ರೀತಿಗೆ ಧನ್ಯವಾದ ಹೇಳಲು ನನ್ನ ಬಳಿ ಶಬ್ದಗಳಿಲ್ಲ. ಕೇರಳ ಯಾವಾಗಲೂ ದೇವರ ನಾಡು. ಇಲ್ಲಿ ಎಲ್ಲರೂ ಎಲ್ಲಾ ರೀತಿಯ ಕಲೆಗಳನ್ನು ಗೌರವಿಸುತ್ತಾರೆ’ ಎಂದು ಸೂರ್ಯ ಹೆಮ್ಮೆ ಹೊರಹಾಕಿದ್ದಾರೆ.
ಇದನ್ನೂ ಓದಿ: ನಟ ಸೂರ್ಯ ಬಗ್ಗೆ ಕೀಳು ಕಮೆಂಟ್ ನೋಡಿ ಕಿಸಿಕಿಸಿ ನಕ್ಕ ಪತ್ನಿ ಜ್ಯೋತಿಕಾ; ಬುದ್ಧಿ ಹೇಳಿದ ಜನ
ಸೂರ್ಯ ಅವರು ‘ರೆಟ್ರೋ’ ಸಿನಿಮಾದಲ್ಲಿ ಪಾರಿವೇಲ್ ಕಣ್ಣನ್ನ್ ಹೆಸರಿನ ಪಾತ್ರ ಆಡುತ್ತಿದ್ದಾರೆ. ಪೂಜಾ ಹೆಗ್ಡೆ ಈ ಚಿತ್ರಕ್ಕೆ ನಾಯಕಿ. ಈ ಸಿನಿಮಾ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಈ ಚಿತ್ರವನ್ನು ಸೂರ್ಯ ಪತ್ನಿ ಜ್ಯೋತಿಕಾ ಅವರೇ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಜಯರಾಮ್, ನಾಸರ್, ಪ್ರಕಾಶ್ ರಾಜ್, ಸುಜಿತ್ ಶಂಕರ್ ಮೊದಲಾದವರು ನಟಿಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








