
ವರುಣ್ ತೇಜ್ (Varun Tej) ಹಾಗೂ ಲಾವಣ್ಯ 2023ರ ನವೆಂಬರ್ ತಿಂಗಳಲ್ಲಿ ಹಸೆಮಣೆ ಏರಿದರು. ಮೆಗಾಸ್ಟಾರ್ ಕುಟುಂಬದ ಮದುವೆ ಆಗಿದ್ದರಿಂದ ಅದ್ದೂರಿಯಾಗಿ ವಿವಾಹ ನೆರವೇರಿತು. 2025ರಲ್ಲಿ ದಂಪತಿ ಕಡೆಯಿಂದ ಗುಡ್ ನ್ಯೂಸ್ ಸಿಕ್ಕಿದೆ. ವರುಣ್ ತೇಜ್ ಹಾಗೂ ಲಾವಣ್ಯಾ ಹೊಸ ಜವಾಬ್ದಾರಿ ಪಡೆದುಕೊಳ್ಳಲು ರೆಡಿ ಆಗಿದ್ದಾರೆ. ಅಂದರೆ, ಈ ದಂಪತಿ ತಂದೆ-ತಾಯಿ ಆಗುತ್ತಿದ್ದಾರೆ. ಈ ವಿಚಾರ ಕೇಳಿ ಮೆಗಾ ಕುಟುಂಬದ ಫ್ಯಾನ್ಸ್ ಖುಷಿಪಟ್ಟಿದ್ದಾರೆ.
ವರುಣ್ ತೇಜ್ ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ‘ಜೀವನದ ಅತ್ಯಂತ ಸುಂದರವಾದ ಪಾತ್ರ, ಶೀಘ್ರದಲ್ಲೇ ಬರಲಿದೆ’ ಎಂದು ವರುಣ್ ತೇಜ್ ಪೋಸ್ಟ್ ಹಾಕಿದ್ದಾರೆ. ಸಣ್ಣ ಮಗುವಿನ ಶೂನ ವರುಣ್ ಹಾಗೂ ಲಾವಣ್ಯ ಕೈನಲ್ಲಿ ಹಿಡಿದಿರೋ ಫೋಟೋನ ಹಾಕಿದ್ದಾರೆ. ಎಲ್ಲಿಯೂ ಲಾವಣ್ಯಾಗೆ ಎಷ್ಟು ವರ್ಷ ತುಂಬಿದೆ ಎಂಬ ವಿಚಾರವನ್ನು ರಿವೀಲ್ ಮಾಡಿಲ್ಲ.
ಈ ಮೊದಲೇ ಲಾವಣ್ಯಾ ಅವರ ಪ್ರೆಗ್ನೆನ್ಸಿ ವಿಚಾರ ಹರಿದಾಡುತ್ತಲೇ ಇತ್ತು. ಇದಕ್ಕೆ ಕಾರಣವೂ ಇದೆ. ಅವರು ಯಾವುದೇ ಹೊಸ ಸಿನಿಮಾ ಘೋಷಣೆ ಮಾಡಿರಲಿಲ್ಲ. ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಂಡಿರಲಿಲ್ಲ. ಇದರಿಂದ ಸಾಕಷ್ಟು ಅನುಮಾನಗಳು ಹುಟ್ಟಿಕೊಂಡಿದ್ದವು.
ವರುಣ್ ತೇಜ್ ಹಾಗೂ ಲಾವಣ್ಯ ಅವರು 2023ರ ನವೆಂಬರ್ 1ರಂದು ವಿವಾಹ ಆದರು. ಇಟಲಿಯಲ್ಲಿ ಇವರ ಮದುವೆ ನೆರವೇರಿತು. ಇಬ್ಬರೂ ಬರೋಬ್ಬರಿ 6 ವರ್ಷಗಳ ಕಾಲ ಪ್ರೀತಿಸಿದ್ದರು. ಲಾವಣ್ಯಾ ಅವರು ವಿವಾಹದ ಬಳಿಕವೂ ನಟನೆ ಮುಂದುವರಿಸಿದರು. ಸದ್ಯ ಅವರ ಕೈಯಲ್ಲಿ ಈ ಮೊದಲು ಒಪ್ಪಿಕೊಂಡ ಕೆಲವು ಸಿನಿಮಾಗಳಿವೆ. ಮಗು ಜನಿಸಿದ ಬಳಿಕ ಅವರ ಸಂಪೂರ್ಣ ಗಮನ ಕುಟುಂಬದ ಮೇಲೆ ಇರಲಿದೆ.
ವರುಣ್ ತೇಜ್ ಅವರು ವಿರಿಂಚಿ ವರ್ಮಾ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ವರುಣ್ ಅವರು ಹಾಸ್ಯ ಮಾಡಲಿದ್ದಾರೆ. ಸದ್ಯ ವರುಣ್ ತೇಜ್ ಅವರಿಗೆ ಯಾವುದೇ ದೊಡ್ಡ ಯಶಸ್ಸು ಸಿಕ್ಕಿಲ್ಲ. ಅವರು ಈ ಚಿತ್ರದಿಂದ ಗೆಲ್ಲುವ ಭರವಸೆಯಲ್ಲಿ ಇದ್ದಾರೆ. ಈ ಮೂಲಕ ಬೌನ್ಸ್ ಬ್ಯಾಕ್ ಆಗಬೇಕು ಎಂದುಕೊಂಡಿದ್ದಾರೆ.
ಇದನ್ನೂ ಓದಿ: ಪ್ರೀತಿ ವಿಚಾರ ಹೇಳದ ವರುಣ್ ತೇಜ್ ಮೇಲೆ ಚಿರಂಜೀವಿಗೆ ಇನ್ನೂ ಇದೆ ಕೋಪ
ವರುಣ್ ಹಾಗೂ ಲಾವಣ್ಯಾಗೆ ಪವನ್ ಕಲ್ಯಾಣ್, ಚಿರಂಜೀವಿ, ರಾಮ್ ಚರಣ್ ಮೊದಲಾದವರು ಶುಭಾಶಯ ತಿಳಿಸುತ್ತಿದ್ದಾರೆ. ಇನ್ಸ್ಟಾಗ್ರಾಮ್ ಕಮೆಂಟ್ ಬಾಕ್ಸ್ನಲ್ಲಿ ಕಾಜಲ್ ಅಗರ್ವಾಲ್ ಸೇರಿದಂತೆ ಅನೇಕರು ನಟಿಗೆ ಶುಭಾಶಯ ಕೋರಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 3:02 pm, Tue, 6 May 25