ಹೊಳಪು ಕಳೆದುಕೊಂಡ ಸೂರ್ಯ? ಕೈಕೊಟ್ಟ ಮತ್ತೊಬ್ಬ ಸ್ಟಾರ್ ನಿರ್ದೇಶಕ

Suriya next movie: ಸೂರ್ಯ ಭಾರತದ ಅತ್ಯುತ್ತಮ ನಟರುಗಳಲ್ಲಿ ಒಬ್ಬರು. ಕೆಲವು ಅದ್ಭುತವಾದ ಸೂಪರ್ ಹಿಟ್ ಸಿನಿಮಾಗಳನ್ನು ಅವರು ನೀಡಿದ್ದಾರೆ. ಭಿನ್ನ-ಭಿನ್ನ ರೀತಿಯ ಪಾತ್ರಗಳಲ್ಲಿ ನಟಿಸಬಹುದಾದ ಪ್ರತಿಭೆಯುಳ್ಳ ಜೊತೆಗೆ ಸ್ಟಾರ್ ಗಿರಿ ಸಹ ಉಳ್ಳ ನಟ ಅವರು. ಆದರೆ ಇತ್ತೀಚೆಗೆ ಅವರಿಂದ ನಿರ್ದೇಶಕರುಗಳು ದೂರಾಗುತ್ತಿದ್ದಾರೆ ಕಾರಣ ಏನು?

ಹೊಳಪು ಕಳೆದುಕೊಂಡ ಸೂರ್ಯ? ಕೈಕೊಟ್ಟ ಮತ್ತೊಬ್ಬ ಸ್ಟಾರ್ ನಿರ್ದೇಶಕ
Suriya

Updated on: Mar 10, 2026 | 1:20 PM

ತಮಿಳಿನ ಸ್ಟಾರ್ ನಟರುಗಳಲ್ಲಿ ಸೂರ್ಯ (Suriya) ಸಹ ಒಬ್ಬರು. ದೊಡ್ಡ ಸಂಖ್ಯೆಯ ಅಭಿಮಾನಿಗಳು ಅವರಿಗಿದ್ದಾರೆ. ಆದರೆ ತಮಿಳಿನಿಂದ ಮೊದಲಿನಿಂದಲೂ ನಟನೆ, ಒಳ್ಳೆಯ ಕತೆಗಳ ಆಯ್ಕೆ ಮಾಡಿಕೊಳ್ಳುವ ನಟರಿಗಿಂತಲೂ ಮಾಸ್ ನಟರನ್ನು ಬೆಳೆಸುವುದೇ ಹೆಚ್ಚು. ಸ್ವತಃ ಕಮಲ್ ಹಾಸನ್ ಸಹ ಹಲವು ಸೋಲುಗಳನ್ನು ತಮಿಳಿನಲ್ಲಿ ಕಂಡಿದ್ದಾರೆ. ಇದೀಗ ಸೂರ್ಯ ಸಹ ಇದೇ ಹಾದಿಯಲ್ಲಿದ್ದಾರೆ. ಸೂರ್ಯ ಅವರಿಗೆ ಸತತ ಹಿನ್ನಡೆಗಳು ಎದುರಾಗುತ್ತಿವೆ. ಒಟ್ಟು ಮೂರು ಮಂದಿ ಸ್ಟಾರ್ ನಿರ್ದೇಶಕರು ಸೂರ್ಯ ಜೊತೆ ಕೆಲಸ ಮಾಡುವುದಾಗಿ ಒಪ್ಪಿಕೊಂಡು ಈಗ ಹಿಂದೆ ಸರಿದಿದ್ದಾರೆ.

ಚಾಲ್ತಿಯಲ್ಲಿರುವ ನಿರ್ದೇಶಕರುಗಳಲ್ಲಿ ಒಬ್ಬರಾದ ಲೋಕೇಶ್ ಕನಗರಾಜ್ ಅವರು ಸೂರ್ಯ ಕೈಬಿಟ್ಟಿದ್ದಾಗಿದೆ. ಸೂರ್ಯ ಜೊತೆಗೆ ‘ವಡಕೈ’ ಹೆಸರಿನ ಸೂಪರ್ ಹೀರೋ ಸಿನಿಮಾವನ್ನು ಮಾಡುವುದಾಗಿ ಲೋಕೇಶ್ ಹೇಳಿದ್ದರು. ಆದರೆ ಅದೇ ಕತೆಯನ್ನು ಈಗ ಬಾಲಿವುಡ್ ಹೀರೋ ಆಮಿರ್ ಖಾನ್ ಜೊತೆಗೆ ಮಾಡುತ್ತಿದ್ದಾರೆ ಲೋಕೇಶ್ ಕನಗರಾಜ್. ಸ್ವತಃ ಸೂರ್ಯ ಅವರು ಈ ಬೆಳವಣಿಗೆ ಬಗ್ಗೆ ಹಿಂದೆ ಬೇಸರ ವ್ಯಕ್ತಪಡಿಸಿದ್ದರು.

ಅದಾದ ಬಳಿಕ ಭಾರತದ ಪ್ರತಿಭಾವಂತ ನಿರ್ದೇಶಕರುಗಳಲ್ಲಿ ಒಬ್ಬರು ಎನಿಸಿಕೊಳ್ಳುವ ವೆಟ್ರಿಮಾರನ್ ಸಹ ಇದೀಗ ಸೂರ್ಯಗೆ ಕೈಕೊಟ್ಟಂತಿದ್ದಾರೆ. ಸೂರ್ಯ ಜೊತೆಗೆ ‘ವಡಿವಾಸಲ್’ ಹೆಸರಿನ ಸಿನಿಮಾವನ್ನು ವೆಟ್ರಿಮಾರನ್ ಘೋಷಿಸಿದ್ದರು. ಆ ಸಿನಿಮಾ ಇದೇ ವರ್ಷ ಸೆಟ್ಟೇರಲಿದೆ ಎನ್ನಲಾಗಿತ್ತು. ಆದರೆ ಈಗ ಆಗಿರುವ ಬೆಳವಣಿಗೆ ನೋಡಿದರೆ ಆ ಸಿನಿಮಾ ನಿಂತೇ ಹೋಯ್ತು ಎನಿಸುತ್ತಿದೆ. ಏಕೆಂದರೆ ವೆಟ್ರಿಮಾರನ್ ಬೇರೆ ಸ್ಟಾರ್ ನಟರುಗಳೊಟ್ಟಿಗೆ ಒಪ್ಪಂದ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ:ಸಲ್ಮಾನ್ ಖಾನ್ ಚಿತ್ರಕ್ಕೆ ಸಮಂತಾ ಎಂಟ್ರಿ? ರಾಜ್ ಮತ್ತು ಡಿಕೆ ಸಿನಿಮಾಗೆ ಹೆಚ್ಚಿದ ಹೈಪ್

ವೆಟ್ರಿಮಾರನ್ ಅವರು ಪ್ರಸ್ತುತ ‘ಅರಸನ್’ ಹೆಸರಿನ ಸಿನಿಮಾ ನಿರ್ದೇಶಿಸುತ್ತಿದ್ದು, ಸಿನಿಮಾನಲ್ಲಿ ಸಿಂಭು ನಾಯಕ. ಆ ಸಿನಿಮಾದ ಬಳಿಕ ‘ವಡಿವಾಸಲ್’ ಸೆಟ್ಟೇರಲಿದೆ ಎನ್ನಲಾಗಿತ್ತು. ಆದರೆ ಅದು ಸುಳ್ಳಾಗಿದ್ದು, ‘ಅರಸನ್’ ಸಿನಿಮಾದ ಬಳಿಕ ‘ವಡ ಚೆನ್ನೈ 2’ ಮತ್ತು ಕಮಲ್ ಹಾಸನ್ ಅವರೊಟ್ಟಿಗೆ ಹೊಸ ಸಿನಿಮಾನಲ್ಲಿ ವೆಟ್ರಿಮಾರನ್ ತಮ್ಮನ್ನು ತೊಡಗಿಸಿಕೊಳ್ಳಲಿದ್ದಾರೆ.

ಸೂರ್ಯ ಅವರೊಟ್ಟಿಗೆ ನಿರ್ದೇಶಕ ಬಾಲ ಸಹ ಹೊಸ ಸಿನಿಮಾ ಘೋಷಿಸಿದ್ದರು. ಆದರೆ ಆ ಸಿನಿಮಾವನ್ನು ಸಹ ನಿಲ್ಲಿಸಬೇಕಾಯ್ತು. ಇನ್ನು ‘ಕಂಗುವ’ ಸಿನಿಮಾದ ಎರಡನೇ ಭಾಗ ಬರಲಿದೆ ಎನ್ನಲಾಗಿತ್ತು. ‘ಕಂಗುವ’ ಫ್ಲಾಪ್ ಆದ ಕಾರಣ ಅದೂ ಸಹ ನಿಂತು ಹೋಗಿದೆ. ಪ್ರಸ್ತುತ ಸೂರ್ಯ ಅವರು ‘ಕರುಪ್ಪು’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಅದಾದ ಬಳಿಕ ‘ವಿಶ್ವನಾಥ್ ಆಂಡ್ ಸನ್ಸ್’ ಸಿನಿಮಾನಲ್ಲಿ ನಟಿಸಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us