‘ಆರ್ಆರ್ಆರ್’ ಸಿನಿಮಾದ ಅಭೂತಪೂರ್ವ ಗೆಲುವಿನಿಂದ ನಿರ್ದೇಶಕ ಎಸ್ಎಸ್ ರಾಜಮೌಳಿ (SS Rajamouli) ಅವರಿಗೆ ಜಾಗತಿಕ ಮಟ್ಟದಲ್ಲಿ ಖ್ಯಾತಿ ಹೆಚ್ಚಿದೆ. ಈಗ ಅವರು ನಿರ್ದೇಶನ ಮಾಡಲಿರುವ ಹೊಸ ಸಿನಿಮಾ ಮೇಲೆ ಎಲ್ಲಿಲ್ಲದಷ್ಟು ನಿರೀಕ್ಷೆ ಮೂಡಿದೆ. ಟಾಲಿವುಡ್ನ ಸ್ಟಾರ್ ನಟ ಮಹೇಶ್ ಬಾಬು (Mahesh Babu) ಜೊತೆ ರಾಜಮೌಳಿ ಸಿನಿಮಾ ಮಾಡಲಿದ್ದು, ಅದಕ್ಕೆ ಬೇಕಾದ ಸಕಲ ತಯಾರಿ ಮಾಡಿಕೊಳ್ಳಲಾಗಿದೆ. ಸದ್ಯಕ್ಕೆ ಈ ಸಿನಿಮಾವನ್ನು ‘SSMB 29’ ಎಂದು ಕರೆಯಲಾಗುತ್ತಿದೆ. ಅಸಲಿ ಶೀರ್ಷಿಕೆ ಇನ್ನೂ ನಿಗದಿ ಆಗಿಲ್ಲ. ಅಷ್ಟರಲ್ಲಾಗಲೇ ಕೆಲವು ಗಾಸಿಪ್ಗಳು ಹಬ್ಬಿವೆ.
ದೊಡ್ಡ ಸಿನಿಮಾ ಎಂದಾಗ ಸಹಜವಾಗಿಯೇ ಒಂದಷ್ಟು ಗಾಸಿಪ್ಗಳು ಹುಟ್ಟಿಕೊಳ್ಳುತ್ತವೆ. ‘SSMB 29’ ಸಿನಿಮಾದ ಬಗ್ಗೆಯೂ ಒಂದು ಗಾಳಿಸುದ್ದಿ ಕೇಳಿಬಂದಿದೆ. ಈ ಸಿನಿಮಾಗೆ ವೀರೇನ್ ಸ್ವಾಮಿ ಅವರು ಕಾಸ್ಟಿಂಗ್ ಡೈರೆಕ್ಟರ್ ಆಗಿದ್ದಾರೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ. ಅದು ನಿರ್ಮಾಪಕರ ಗಮನಕ್ಕೂ ಬಂದಿದ್ದು, ಆ ಬಗ್ಗೆ ನಿರ್ಮಾಣ ಸಂಸ್ಥೆಯಿಂದ ಸ್ಪಷ್ಟನೆ ನೀಡಲಾಗಿದೆ.
‘ಪ್ರತಿಷ್ಠಿತ ಪತ್ರಿಕೆಯೊಂದು ಎಸ್.ಎಸ್. ರಾಜಮೌಳಿ ಹಾಗೂ ಮಹೇಶ್ ಬಾಬು ಕಾಂಬಿನೇಷನ್ನ ಸಿನಿಮಾ ಬಗ್ಗೆ ಒಂದು ಲೇಖನ ಪ್ರಕಟಿಸಿರುವುದು ನಮ್ಮ ಗಮನಕ್ಕೆ ಬಂದಿದೆ. ಅದರ ಬಗ್ಗೆ ನಾವು ಸ್ಪಷ್ಟನೆ ನೀಡುತ್ತಿದ್ದೇವೆ. ವೀರೇನ್ ಸ್ವಾಮಿ ಅವರು ನಮ್ಮ ಸಿನಿಮಾದ ಯಾವುದೇ ವಿಭಾಗದಲ್ಲೂ ಕೆಲಸ ಮಾಡುತ್ತಿಲ್ಲ. ಅಗತ್ಯವಿದ್ದಾಗ ನಿರ್ಮಾಣ ಸಂಸ್ಥೆಯ ಕಡೆಯಿಂದಲೇ ಎಲ್ಲ ಅಧಿಕೃತ ಪ್ರಕಟಣೆಗಳು ಹೊರಬರಲಿವೆ’ ಎಂದು ನಿರ್ಮಾಪಕರು ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: ಒಂದೇ ಸಿನಿಮಾದಲ್ಲಿ ಶಾರುಖ್, ಆಮಿರ್, ಸಲ್ಮಾನ್; ‘ರಾಜಮೌಳಿ ನಿರ್ದೇಶನ ಮಾಡ್ಬೇಕು’ ಎಂದ ನೆಟ್ಟಿಗರು
‘SSMB 29’ ಸಿನಿಮಾಗಾಗಿ ಮಹೇಶ್ ಬಾಬು ಅವರು ವಿದೇಶದಲ್ಲಿ ತರಬೇತಿ ಪಡೆದುಕೊಂಡು ಬಂದಿದ್ದಾರೆ. ಅವರ ಗೆಟಪ್ ಕೂಡ ಬದಲಾಗಲಿದೆ. ಉದ್ದ ಕೂದಲಿನ ಲುಕ್ನಲ್ಲಿ ಮಹೇಶ್ ಬಾಬು ಕಾಣಿಸಿಕೊಳ್ಳಲಿದ್ದಾರೆ. ‘ಆರ್ಆರ್ಆರ್’ ಸಿನಿಮಾದ ಯಶಸ್ಸಿನ ಬಳಿಕ ರಾಜಮೌಳಿ ಕೈಗೆತ್ತಿಕೊಳ್ಳುತ್ತಿರುವ ಪ್ರಾಜೆಕ್ಟ್ ಆದ್ದರಿಂದ ‘SSMB 29’ ಚಿತ್ರದ ಮೇಲೆ ನಿರೀಕ್ಷೆ ದೊಡ್ಡದಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.