ಶಿವರಾಜ್ ಕುಮಾರ್​​ ಬಗ್ಗೆ ವಿಷ್ಣುವರ್ಧನ್​​ಗಿತ್ತು ಅಪಾರ ಪ್ರೀತಿ, ಕೊಟ್ಟಿದ್ದರು ಅಮೂಲ್ಯ ಉಡುಗೊರೆ

Vishnuvardhan and Shiva Rajkumar: ರಾಜ್​​ಕುಮಾರ್ ಅಭಿಮಾನಿಗಳು ವಿಷ್ಣುವರ್ಧನ್ ಮೇಲೆ ದಾಳಿ ಮಾಡಿದ್ದರು, ವಿಷ್ಣುವರ್ಧನ್ ಅಭಿಮಾನಿಗಳು ಸಹ ರಾಜ್​​ಕುಮಾರ್ ಅವರ ಸಿನಿಮಾಗಳ ಸೋಲಿಸಲು ಯತ್ನಿಸಿದ್ದರು ಎಂದೆಲ್ಲ ಹೇಳಲಾಗುತ್ತದೆ. ಆದರೆ ವೈಯಕ್ತಿಕವಾಗಿ ರಾಜ್​​ಕುಮಾರ್ ಮತ್ತು ವಿಷ್ಣುವರ್ಧನ್ ಅವರುಗಳು ಬಲು ಆಪ್ತರಾಗಿದ್ದರು. ರಾಜ್​​ಕುಮಾರ್ ಅವರ ಬಗ್ಗೆ ಅಪಾರ ಗೌರವ ವಿಷ್ಣುವರ್ಧನ್ ಅವರಿಗೆ ಇತ್ತು. ಅಲ್ಲದೆ ಅವರ ಪುತ್ರ ಶಿವರಾಜ್ ಕುಮಾರ್ ಮೇಲೆ ಸಹ ವಿಪರೀತ ಪ್ರೀತಿ ಇತ್ತು. ಇಬ್ಬರ ನಡುವಿನ ಬಾಂಧವ್ಯ ಹೇಗಿತ್ತು ಎಂಬುದನ್ನು ಚಿ ಗುರುದತ್ ಅವರು ವಿವರಿಸಿದ್ದಾರೆ.

ಶಿವರಾಜ್ ಕುಮಾರ್​​ ಬಗ್ಗೆ ವಿಷ್ಣುವರ್ಧನ್​​ಗಿತ್ತು ಅಪಾರ ಪ್ರೀತಿ, ಕೊಟ್ಟಿದ್ದರು ಅಮೂಲ್ಯ ಉಡುಗೊರೆ
Shiva Rajkumar Vishnuvardhan

Updated on: Mar 08, 2026 | 7:34 PM

ವಿಷ್ಣುವರ್ಧನ್ (Vishnuvardhan), ಕನ್ನಡ ಚಿತ್ರರಂಗದ ಮೇರು ನಟ. ಹಲವಾರು ಸೂಪರ್ ಹಿಟ್, ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ಅವರು ಕನ್ನಡಕ್ಕೆ ನೀಡಿದ್ದಾರೆ. ಅಣ್ಣಾವ್ರ ಬಳಿಕ ಅತಿ ಹೆಚ್ಚು ಗೌರವಿಸಲ್ಪಡುವ ನಟ ವಿಷ್ಣುವರ್ಧನ್. ಆದರೆ ಒಂದು ಸಮಯದಲ್ಲಿ ವಿಷ್ಣುವರ್ಧನ್ ಮತ್ತು ರಾಜ್​​ಕುಮಾರ್ ಅವರ ನಡುವೆ ವೈಮನಸ್ಯ ಇದೆ ಎಂದೆಲ್ಲ ಸುದ್ದಿಗಳು ಹರಿದಾಡಿದ್ದವು. ರಾಜ್​​ಕುಮಾರ್ ಅಭಿಮಾನಿಗಳು ವಿಷ್ಣುವರ್ಧನ್ ಮೇಲೆ ದಾಳಿ ಮಾಡಿದ್ದರು, ವಿಷ್ಣುವರ್ಧನ್ ಅಭಿಮಾನಿಗಳು ಸಹ ರಾಜ್​​ಕುಮಾರ್ ಅವರ ಸಿನಿಮಾಗಳ ಸೋಲಿಸಲು ಯತ್ನಿಸಿದ್ದರು ಎಂದೆಲ್ಲ ಹೇಳಲಾಗುತ್ತದೆ. ಆದರೆ ವೈಯಕ್ತಿಕವಾಗಿ ರಾಜ್​​ಕುಮಾರ್ ಮತ್ತು ವಿಷ್ಣುವರ್ಧನ್ ಅವರುಗಳು ಬಲು ಆಪ್ತರಾಗಿದ್ದರು. ರಾಜ್​​ಕುಮಾರ್ ಅವರ ಬಗ್ಗೆ ಅಪಾರ ಗೌರವ ವಿಷ್ಣುವರ್ಧನ್ ಅವರಿಗೆ ಇತ್ತು. ಅಲ್ಲದೆ ಅವರ ಪುತ್ರ ಶಿವರಾಜ್ ಕುಮಾರ್ ಮೇಲೆ ಸಹ ವಿಪರೀತ ಪ್ರೀತಿ ಇತ್ತು. ಇಬ್ಬರ ನಡುವಿನ ಬಾಂಧವ್ಯ ಹೇಗಿತ್ತು ಎಂಬುದನ್ನು ಚಿ ಗುರುದತ್ ಅವರು ವಿವರಿಸಿದ್ದಾರೆ.

ವಿಷ್ಣುವರ್ಧನ್ ನಟನೆಯ ‘ಕೋಟಿಗೊಬ್ಬ’ ಸಿನಿಮಾದ 25ನೇ ವರ್ಷದ ಸಂಭ್ರಮಾಚರಣೆಯಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಚಿ ಗುರುದತ್ ಅವರು ಶಿವಣ್ಣ ಮತ್ತು ವಿಷ್ಣುವರ್ಧನ್ ನಡುವೆ ಇದ್ದ ಬಂಧದ ಬಗ್ಗೆ ಮಾತನಾಡಿದರು. ತಾವು ಖುದ್ದಾಗಿ ನೋಡಿದ ಘಟನೆಗಳನ್ನೇ ಅವರು ವಿವರಿಸಿದರು. ಎಲ್ಲರಿಗೂ ಗೊತ್ತಿರುವಂತೆ ಗುರುದತ್ ಅವರ ತಂದೆ ಖ್ಯಾತ ಚಿತ್ರಸಾಹಿಸಿ ಚಿ ಉದಯಶಂಕರ್. ಇವರು ಒಮ್ಮೆ ವಿಷ್ಣುವರ್ಧನ್ ಅವರೊಟ್ಟಿಗೆ ಸಿನಿಮಾ ಮಾಡುವ ಯೋಜನೆ ಹಾಕಿದ್ದರಂತೆ. ಅದರಲ್ಲೂ ಶಿವರಾಜ್ ಕುಮಾರ್ ಆ ಸಿನಿಮಾದ ನಾಯಕ, ವಿಷ್ಣುವರ್ಧನ್ ಉಪನಾಯಕ ಎಂದೆನಿಸುವ ರೀತಿಯ ಕತೆ ಅದಾಗಿತ್ತು. ಸಿನಿಮಾದ ಹೆಸರು ‘ಕೃಷ್ಣ-ಅರ್ಜುನ’.

ಇದನ್ನೂ ಓದಿ:ವಿಷ್ಣುವರ್ಧನ್ ಅವರ ‘ಸೂರ್ಯವಂಶ’ ಪಾತ್ರ ನೆನಪಿಸಿಕೊಂಡ ಎಸ್ ನಾರಾಯಣ್

ಉದಯಶಂಕರ್ ಅವರು ಶಿವರಾಜ್ ಕುಮಾರ್ ಅವರ ಬಳಿ ಈ ಸಿನಿಮಾದ ಬಗ್ಗೆ ಕೇಳಿದಾಗ, ವಿಷ್ಣುವರ್ಧನ್ ಅವರು, ‘ಉದಯ ಶಂಕರ್ ಅವರೇ ನಿಮಗೆ ಒಳ್ಳೆಯದಾಗುತ್ತೆ ಎಂದಾದರೆ ಖಂಡಿತ ನಾನು ಸಿನಿಮಾ ಮಾಡುತ್ತೀನಿ’ ಎಂದಿದ್ದರಂತೆ. ಅದಾಗಲೇ ವಿಷ್ಣುವರ್ಧನ್ ಸ್ಟಾರ್ ನಟ, ಆದರೂ ಸಹ ಹೊಸ ನಟನೊಟ್ಟಿಗೆ ನಟಿಸಲು ಒಪ್ಪಿದ್ದರಂತೆ ವಿಷ್ಣುವರ್ಧನ್.

ಒಮ್ಮೆ ಅಶೋಕ ಹೋಟೆಲ್​​ನಲ್ಲಿ ‘ಸತ್ಯಜ್ಯೋತಿ’ ಸಿನಿಮಾದ ಯಶಸ್ಸಿನ ಪಾರ್ಟಿ ಮಾಡುತ್ತಿದ್ದರಂತೆ. ಅಲ್ಲಿಗೆ ಬಂದಿದ್ದ ವಿಷ್ಣುವರ್ಧನ್ ನಾನು ಶಿವರಾಜ್ ಕುಮಾರ್ ಅವರನ್ನು ಭೇಟಿ ಆಗಬೇಕು ಎಂದರಂತೆ. ಆಗಿನ್ನೂ ಶಿವರಾಜ್ ಕುಮಾರ್ ಅವರ ಮೊದಲ ಸಿನಿಮಾ ಮಾತ್ರವೇ ಬಿಡುಗಡೆ ಆಗಿತ್ತಂತೆ. ಕೂಡಲೇ ಶಿವರಾಜ್ ಕುಮಾರ್ ಅವರನ್ನು ಕರೆದುಕೊಂಡು ಬಂದರಂತೆ ಗುರುದತ್. ಆಗ ವಿಷ್ಣುವರ್ಧನ್ ಅವರು, ‘ನೀನು ಬಹಳ ದೊಡ್ಡ ಸ್ಟಾರ್ ಆಗುತ್ತೀಯ. ನೀನು ಸ್ಟಾರ್ ಆಗಿ ಬೆಳೆಯುವುದನ್ನು ನಾನು ನೋಡುತ್ತೀನಿ. ನೀನು ಸ್ಟಾರ್ ಆದ ದಿನ ನನ್ನ ಪಾಲಿಗೆ ಅತ್ಯಂತ ಸಂತೋಷದ ದಿನ ಆಗಿರುತ್ತದೆ’ ಎಂದರಂತೆ.

ಅಷ್ಟು ಮಾತ್ರವೇ ಅಲ್ಲದೆ, ತಮ್ಮ ಬಳಿ ಇದ್ದ ವಾಚ್ ಒಂದನ್ನು ಶಿವರಾಜ್ ಕುಮಾರ್ ಅವರಿಗೆ ಉಡುಗೊರೆಯಾಗಿ ನೀಡಿದರಂತೆ ವಿಷ್ಣುವರ್ಧನ್. ಅಸಲಿಗೆ ಆ ವಾಚನ್ನು ವಿಷ್ಣುವರ್ಧನ್ ಅವರಿಗೆ ದಿವಂಗತ ತಮಿಳಿನ ಲಿಜೆಂಡರಿ ನಟ ಎಂಜಿಆರ್ ನೀಡಿದ್ದರಂತೆ. ಆ ಅಪರೂಪದ ವಾಚನ್ನು ಯುವಕ ಶಿವಣ್ಣನ ಕೈಗೆ ಕೊಟ್ಟಿದ್ದರಂತೆ ವಿಷ್ಣುವರ್ಧನ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:33 pm, Sun, 8 March 26

Follow Us