Vivek Agnihotri: ‘ಹಿಂಸೆಯ ವೈಭವೀಕರಣವೂ ಟ್ಯಾಲೆಂಟ್​ ಆಗಿಬಿಟ್ಟಿದೆ’: ‘ಸಲಾರ್​’ ಟೀಸರ್​ ಬಿಡುಗಡೆ ಬೆನ್ನಲ್ಲೇ ವಿವೇಕ್​ ಅಗ್ನಿಹೋತ್ರಿ ಟ್ವೀಟ್​

Salaar Movie Teaser: ‘ಅರ್ಥಹೀನ ಸಿನಿಮಾವನ್ನು ಪ್ರಚಾರ ಮಾಡುವುದು ಮತ್ತು ನಟನಲ್ಲದ ವ್ಯಕ್ತಿಯನ್ನು ದೊಡ್ಡ ಸ್ಟಾರ್​ ರೀತಿ ಬಿಂಬಿಸುವುದು ದೊಡ್ಡ ಪ್ರತಿಭೆ ಎಂಬಂತಾಗಿದೆ’ ಎಂದು ವಿವೇಕ್​ ಅಗ್ನಿಹೋತ್ರಿ ಅವರು ಟೀಕಿಸಿದ್ದಾರೆ.

Vivek Agnihotri: ‘ಹಿಂಸೆಯ ವೈಭವೀಕರಣವೂ ಟ್ಯಾಲೆಂಟ್​ ಆಗಿಬಿಟ್ಟಿದೆ’: ‘ಸಲಾರ್​’ ಟೀಸರ್​ ಬಿಡುಗಡೆ ಬೆನ್ನಲ್ಲೇ ವಿವೇಕ್​ ಅಗ್ನಿಹೋತ್ರಿ ಟ್ವೀಟ್​
ಪ್ರಭಾಸ್​, ವಿವೇಕ್ ಅಗ್ನಿಹೋತ್ರಿ

Updated on: Jul 06, 2023 | 12:49 PM

‘ದಿ ಕಾಶ್ಮೀರ್​ ಫೈಲ್ಸ್​’ ಸಿನಿಮಾದ ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ (Vivek Agnihotri) ಅವರು ಅನೇಕ ವಿಚಾರಗಳ ಬಗ್ಗೆ ಟ್ವೀಟ್​ ಮಾಡುತ್ತಾರೆ. ಸಿನಿಮಾ, ರಾಜಕೀಯ ಸೇರಿದಂತೆ ಹಲವು ಸಂಗತಿಗಳ ಕುರಿತು ಅವರು ತಮ್ಮ ಅಭಿಪ್ರಾಯ ತಿಳಿಸುತ್ತಾರೆ. ಇಂದು (ಜುಲೈ 6) ಬೆಳಗ್ಗೆಯೇ ಅವರು ಒಂದು ಮುಖ್ಯವಾದ ವಿಷಯದ ಬಗ್ಗೆ ಅನಿಸಿಕೆ ಹಂಚಿಕೊಂಡಿದ್ದಾರೆ. ಸಿನಿಮಾಗಳಲ್ಲಿ ಹಿಂಸೆಯನ್ನು ಆಕರ್ಷಕವಾಗಿ ತೋರಿಸುವ ಬಗ್ಗೆ ತಮ್ಮ ಅಭಿಪ್ರಾಯ ಏನು ಎಂಬುದನ್ನು ವಿವೇಕ್​ ಅಗ್ನಿಹೋತ್ರಿ ತಿಳಿಸಿದ್ದಾರೆ. ಇಂದು ‘ಸಲಾರ್​’ (Salaar Movie) ಸಿನಿಮಾದ ಟೀಸರ್​ ಬಿಡುಗಡೆ ಆಗಿದೆ. ಅದರಲ್ಲೂ ಹಿಂಸೆಯ ದೃಶ್ಯಗಳು ಇವೆ. ‘ಸಲಾರ್​’ ಟೀಸರ್​ (Salaar Teaser) ರಿಲೀಸ್​ ಆದ ಸ್ವಲ್ಪ ಹೊತ್ತಿನ ಬಳಿಕ ವಿವೇಕ್​ ಅಗ್ನಿಹೋತ್ರಿ ಅವರು ‘ಸಿನಿಮಾದಲ್ಲಿ ಹಿಂಸೆಯ ವೈಭವೀಕರಣ’ ಎಂಬ ಟಾಪಿಕ್​ ಬಗ್ಗೆ ಟ್ವೀಟ್​ ಮಾಡಿರುವುದು ಅಚ್ಚರಿಗೆ ಕಾರಣ ಆಗಿದೆ.

ವಿವೇಕ್​ ಅಗ್ನಿಹೋತ್ರಿ ಅವರು ತಮ್ಮ ಟ್ವೀಟ್​ನಲ್ಲಿ ಒಮ್ಮೆ ಕೂಡ ‘ಸಲಾರ್​’ ಸಿನಿಮಾದ ಹೆಸರನ್ನು ಪ್ರಸ್ತಾಪಿಸಿಲ್ಲ. ಆದರೂ ಕೂಡ ಅವರು ‘ಸಲಾರ್​’ ಟೀಸರ್​ ಬಿಡುಗಡೆ ಆದ ಬೆನ್ನಲ್ಲೇ ಈ ರೀತಿ ಟ್ವೀಟ್​ ಮಾಡಿರುವುದರಿಂದ ಈ ಅನುಮಾನ ಮೂಡಿದೆ. ಈ ಟೀಸರ್​ನಲ್ಲಿ ಭರ್ಜರಿ ಆ್ಯಕ್ಷನ್​ ಸನ್ನಿವೇಶಗಳಿವೆ. ಪ್ರಭಾಸ್​ ಅವರು ಹೊಡಿಬಡಿ ದೃಶ್ಯಗಳಲ್ಲಿ ಅಬ್ಬರಿಸಿದ್ದಾರೆ. ಗನ್​, ಮಚ್ಚು, ಬಾಂಬ್​ ಮುಂತಾದ ಮಾರಕಾಸ್ತ್ರಗಳು ಇದರಲ್ಲಿ ರಾರಾಜಿಸಿವೆ. ರಕ್ತ ಮೆತ್ತಿಕೊಂಡ ಪ್ರಭಾಸ್​ ಅವರ ಕೈ ಕೂಡ ಹೈಲೈಟ್​ ಆಗಿದೆ.

ವಿವೇಕ್​ ಅಗ್ನಿಹೋತ್ರಿ ಟ್ವೀಟ್​ನಲ್ಲಿ ಏನಿದೆ?

‘ಜನರು ಕ್ರೌರ್ಯ ತುಂಬಿಕೊಂಡು ಹುಟ್ಟುವುದಿಲ್ಲ. ನಿಮ್ಮ ಮನಸ್ಸಿನಲ್ಲಿ ಶಾಂತಿ ತುಂಬಬೇಕಿದ್ದ ನಾಯಕರು ಜನಪ್ರಿಯ ಸಿನಿಮಾ, ಸಾಹಿತ್ಯ ಮತ್ತು ರಾಜಕೀಯದಲ್ಲಿ ಹಿಂಸೆಯನ್ನು ಆಕರ್ಷಕವಾಗಿಸುವ ಮೂಲಕ ನಿಮ್ಮ ಮಕ್ಕಳ ಮನಸ್ಸಿನ ಮೇಲೆ ಪ್ರಭಾವ ಬೀರುತ್ತಿದ್ದಾರೆ. ಇಂಥ ಕ್ರೂರ ಜಗತ್ತಿನಲ್ಲಿ ಸೃಜನಾತ್ಮಕ ಜಾಗೃತಿ ಮಾತ್ರವೇ ಪರಿಹಾರ’ ಎಂದು ವಿವೇಕ್​ ಅಗ್ನಿಹೋತ್ರಿ ಟ್ವೀಟ್​ ಮಾಡುವ ಮೂಲಕ ಚರ್ಚೆ ಹುಟ್ಟುಹಾಕಿದ್ದಾರೆ.

‘ಸಿನಿಮಾದಲ್ಲಿ ಅತಿಯಾದ ಹಿಂಸೆಯನ್ನು ವೈಭವೀಕರಿಸುವುದು ಕೂಡ ಈಗ ಟ್ಯಾಲೆಂಟ್​ ಎಂಬಂತೆ ಆಗಿದೆ. ಇಂಥ ಅರ್ಥಹೀನ ಸಿನಿಮಾವನ್ನು ಪ್ರಚಾರ ಮಾಡುವುದು ಮತ್ತು ನಟನಲ್ಲದ ವ್ಯಕ್ತಿಯನ್ನು ದೊಡ್ಡ ಸ್ಟಾರ್​ ರೀತಿ ಬಿಂಬಿಸುವುದು ದೊಡ್ಡ ಪ್ರತಿಭೆ ಎಂಬಂತಾಗಿದೆ. ಇನ್ನು, ಜನರನ್ನು ಅತೀ ದಡ್ಡರು ಎಂದು ಕರೆಯುವುದು ಕೂಡ ಎಲ್ಲಕ್ಕಿಂತ ದೊಡ್ಡ ಟ್ಯಾಲೆಂಟ್​ ಆಗಿದೆ’ ಎಂದು ವಿವೇಕ್​ ಅಗ್ನಿಹೋತ್ರಿ ಅವರು ಟೀಕಿಸಿದ್ದಾರೆ.

ಇದನ್ನೂ ಓದಿ: ಐಶ್ವರ್ಯಾ ರೈ ವರ್ತನೆ ಕಂಡು ಸ್ಟುಪಿಡ್​ ಎಂದ ವಿವೇಕ್​ ಅಗ್ನಿಹೋತ್ರಿ; ನಟಿಯಿಂದ ಆದ ತಪ್ಪೇನು?

2022ರಲ್ಲಿ ‘ದಿ ಕಾಶ್ಮೀರ್​ ಫೈಲ್ಸ್​’ ಸಿನಿಮಾ ತೆರೆಕಂಡಿತು. ಆ ಚಿತ್ರಕ್ಕೆ ನಿರ್ದೇಶನ ಮಾಡಿದ್ದ ವಿವೇಕ್​ ಅಗ್ನಿಹೋತ್ರಿ ಅವರಿಗೆ ಹೆಚ್ಚು ಜನಪ್ರಿಯತೆ ಸಿಕ್ಕಿತು. ಈಗ ಅವರು ‘ದಿ ವ್ಯಾಕ್ಸಿನ್​ ವಾರ್​’ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಕನ್ನಡತಿ ಸಪ್ತಮಿ ಗೌಡ ನಟಿಸುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.