
ದಕ್ಷಿಣ ಭಾರತದ ಖ್ಯಾತ ನಟಿ ಶ್ರುತಿ ಹಾಸನ್ (Shruti Haasan) ಅವರ ಆರೋಗ್ಯದ ಬಗ್ಗೆ ಇಲ್ಲಸಲ್ಲದ ಗಾಸಿಪ್ ಹಬ್ಬಿಸಲಾಗಿದೆ. ಅವರ ಮಾನಸಿಕ ಆರೋಗ್ಯ (Mental Health) ಸರಿ ಇಲ್ಲ ಎಂಬ ಗಾಳಿ ಸುದ್ದಿ ಹರಡಿದೆ. ಇದು ಶ್ರುತಿ ಹಾಸನ್ ಅವರ ಗಮನಕ್ಕೂ ಬಂದಿದೆ. ಅದಕ್ಕೆ ಅವರು ಗರಂ ಆಗಿದ್ದಾರೆ. ಈ ರೀತಿ ಸುದ್ದಿ ಹಬ್ಬಿಸಿದವರಿಗೆ ತಿರುಗೇಟು ನೀಡಿದ್ದಾರೆ. ಅಷ್ಟಕ್ಕೂ ತಮಗೆ ಇರುವ ಆರೋಗ್ಯದ ಸಮಸ್ಯೆ ಏನು ಎಂಬುದನ್ನು ಅವರು ತಿಳಿಸಿದ್ದಾರೆ. ಈ ಕುರಿತು ಅವರು ಮಾಡಿರುವ ಟ್ವೀಟ್ ವೈರಲ್ ಆಗಿದೆ. ‘ವಾಲ್ತೇರು ವೀರಯ್ಯ’ (Waltair Veerayya), ‘ವೀರ ಸಿಂಹ ರೆಡ್ಡಿ’ ಸೇರಿದಂತೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಶ್ರುತಿ ಹಾಸನ್ ನಟಿಸಿದ್ದಾರೆ.
ಈ ವಾರ ಶ್ರುತಿ ಹಾಸನ್ ಪಾಲಿಗೆ ನಿಜಕ್ಕೂ ಸ್ಪೆಷಲ್. ಯಾಕೆಂದರೆ ತೆಲುಗಿನಲ್ಲಿ ಅವರ ಎರಡು ಸಿನಿಮಾ ರಿಲೀಸ್ ಆಗಿವೆ. ಗುರುವಾರ (ಜ.12) ‘ವೀರ ಸಿಂಹ ರೆಡ್ಡಿ’ ತೆರೆಕಂಡರೆ, ಇಂದು (ಜ.13) ‘ವಾಲ್ತೇರು ವೀರಯ್ಯ’ ಚಿತ್ರ ಬಿಡುಗಡೆ ಆಗಿದೆ. ಕೆಲವೇ ದಿನಗಳ ಹಿಂದೆ ‘ವಾಲ್ತೇರು ವೀರಯ್ಯ’ ಸಿನಿಮಾದ ಪ್ರೀ-ರಿಲೀಸ್ ಇವೆಂಟ್ ಅದ್ದೂರಿಯಾಗಿ ನಡೆಯಿತು. ಆ ಕಾರ್ಯಕ್ರಮಕ್ಕೆ ಹಾಜರಾಗಲು ಶ್ರುತಿ ಹಾಸನ್ ಅವರಿಗೆ ಸಾಧ್ಯವಾಗಿಲ್ಲ. ಅದನ್ನೇ ನೆಪವಾಗಿ ಇಟ್ಟುಕೊಂಡು ಗಾಸಿಪ್ ಹಬ್ಬಿಸಲಾಗಿದೆ.
‘ಶ್ರುತಿ ಹಾಸನ್ ಅವರಿಗೆ ಮಾನಸಿಕ ಆರೋಗ್ಯ ಸರಿ ಇಲ್ಲ. ಅದರ ಪರಿಣಾಮವಾಗಿ ಅವರು ವಾಲ್ತೇರು ವೀರಯ್ಯ ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗಿಲ್ಲ’ ಎಂದು ಕೆಲವೆಡೆ ಸುದ್ದಿ ಪ್ರಕಟ ಆಗಿದೆ. ಅದನ್ನು ನೋಡಿ ಶ್ರುತಿ ಹಾಸನ್ ಅವರಿಗೆ ಬೇಸರ ಆಗಿದೆ. ತಾವು ‘ವಾಲ್ತೇರು ವೀರಯ್ಯ’ ಸಿನಿಮಾದ ಪ್ರೀ-ರಿಲೀಸ್ ಕಾರ್ಯಕ್ರಮಕ್ಕೆ ಹಾಜರಾಗದೇ ಇರಲು ಜ್ವರ ಕಾರಣ ಎಂದು ಶ್ರುತಿ ಹಾಸನ್ ಹೇಳಿದ್ದಾರೆ.
ಇದನ್ನೂ ಓದಿ: ‘ನಿಮ್ಮ ತುಟಿಗಳ ಸೈಜ್ ಏನು’? ಶ್ರುತಿ ಹಾಸನ್ಗೆ ಪ್ರಶ್ನೆ ಕೇಳಿದ ಭೂಪ; ನಟಿಯಿಂದ ಬಂತು ಪ್ರತಿಕ್ರಿಯೆ
ತಮ್ಮ ಬಗ್ಗೆ ಹರಡಿರುವ ಸುಳ್ಳು ಸುದ್ದಿಯ ಸ್ಕ್ರೀನ್ ಶಾಟ್ಗಳನ್ನು ಟ್ವೀಟರ್ನಲ್ಲಿ ಶ್ರುತಿ ಹಾಸನ್ ಶೇರ್ ಮಾಡಿಕೊಂಡಿದ್ದಾರೆ. ‘ಒಳ್ಳೆಯ ಪ್ರಯತ್ನ. ಮೊದಲು ನೀವು ಸರಿಯಾಗಿ. ಮೊದಲು ಡಾಕ್ಟರ್ ಅನ್ನು ಭೇಟಿ ಮಾಡಿ’ ಎಂದು ಶ್ರುತಿ ಹಾಸನ್ ಅವರು ವ್ಯಂಗ್ಯವಾಡಿದ್ದಾರೆ.
‘ವೀರ ಸಿಂಹ ರೆಡ್ಡಿ’ ಸಿನಿಮಾದಲ್ಲಿ ನಂದಮೂರಿ ಬಾಲಕೃಷ್ಣ ಅವರಿಗೆ ಜೋಡಿಯಾಗಿ ಶ್ರುತಿ ಹಾಸನ್ ನಟಿಸಿದ್ದಾರೆ. ಗುರುವಾರ ಅದ್ದೂರಿಯಾಗಿ (ಜ.12) ಬಿಡುಗಡೆಯಾದ ಈ ಸಿನಿಮಾ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ. ಶ್ರುತಿ ಹಾಸನ್ ಅವರಿಗೆ ಹೆಚ್ಚು ಸ್ಕ್ರೀನ್ ಸ್ಪೇಸ್ ಸಿಕ್ಕಿಲ್ಲ. ಅದು ಅವರ ಅಭಿಮಾನಿಗಳಿಗೆ ಸಹಜವಾಗಿಯೇ ಬೇಸರ ಮೂಡಿಸಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.