300ಕ್ಕೂ ಅಧಿಕ ಜನರ ಸಾವಿಗೆ ಕಾರಣವಾದ ವಯನಾಡ್ ಭೂಕುಸಿತಕ್ಕೆ ಇಡೀ ದೇಶವೇ ಮರುಗಿದೆ. ಅನೇಕ ಸೆಲೆಬ್ರಿಟಿಗಳು ತಮ್ಮ ಕೈಲಾದ ಸಹಾಯವನ್ನು ಮಾಡುವ ಮೂಲಕ ಸಂತ್ರಸ್ತರ ನೆರವಿಗೆ ಧಾವಿಸಿದ್ದಾರೆ. ರಶ್ಮಿಕಾ ಮಂದಣ್ಣ, ಮೋಹನ್ ಲಾಲ್, ಸೂರ್ಯ, ಜ್ಯೋತಿಕಾ, ಕಾರ್ತಿ, ವಿಕ್ರಮ್ ಸೇರಿದಂತೆ ಅನೇಕ ಕಲಾವಿದರು ದೇಣಿಗೆ ನೀಡಿದ್ದಾರೆ. ಈ ಸಾಲಿಗೆ ಹೊಸ ಸೇರ್ಪಡೆ ಆಗಿರುವುದು ನಟ ಅಲ್ಲು ಅರ್ಜುನ್. ಟಾಲಿವುಡ್ ಮಾತ್ರವಲ್ಲದೇ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಖ್ಯಾತಿ ಹೊಂದಿರುವ ಅಲ್ಲು ಅರ್ಜುನ್ ಅವರು ವಯನಾಡು ಭೂಕುಸಿತದ ಸಂತ್ರಸ್ತರಿಗೆ ನೆರವಾಗುವ ಉದ್ದೇಶದಿಂದ 25 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ.
ಕೇರಳ ಮುಖ್ಯಮಂತ್ರಿ ಪರಿಹಾರ ನಿಧಿಗೆ ಅಲ್ಲು ಅರ್ಜುನ್ ಅವರು ಹಣವನ್ನು ನೀಡಿದ್ದಾರೆ. ಅವರು ನೀಡಿರುವ 25 ಲಕ್ಷ ರೂಪಾಯಿಯಿಂದ ಸಂತ್ರಸ್ತರಿಗೆ ವಿವಿಧ ರೀತಿಯ ಸೌಕರ್ಯಗಳನ್ನು ನೀಡಲು ಸಹಾಯ ಆಗುತ್ತದೆ. ಔಷಧಿ, ಆಹಾರ, ಬಟ್ಟೆ ಮುಂತಾದ ವಸ್ತುಗಳನ್ನು ನೀಡಲಾಗುವುದು. ಅಲ್ಲದೇ, ರಕ್ಷಣಾ ಕಾರ್ಯಾಚರಣೆಗೂ ಈ ದೇಣಿಗೆಯಿಂದ ಅನುಕೂಲ ಆಗಲಿದೆ.
ಈ ಬಾರಿ ಸುರಿಯುತ್ತಿರುವ ಭೀಕರ ಮಳೆಗೆ ಹಲವು ಕಡೆಗಳಲ್ಲಿ ದುರಂತ ಸಂಭವಿಸಿದೆ. ಪ್ರವಾಹ ಮತ್ತು ಭೂಕುಸಿತಕ್ಕೆ ಜನರ ಜೀವನ ಅಸ್ತವ್ಯಸ್ತಗೊಂಡಿದೆ. ಆ ಪೈಕಿ ಹೆಚ್ಚು ಆಘಾತ ಸೃಷ್ಟಿಸಿದ್ದು ವಯನಾಡು ಭೂಕುಸಿತ. ಕೇರಳದ ವಯನಾಡಿನಲ್ಲಿ ಜುಲೈ 30ರಂದು ಭೂಕುಸಿತ ಉಂಟಾಯಿತು. ಇದರಿಂದ ನೂರಾರು ಕುಟುಂಬಗಳು ನಾಶವಾಗಿವೆ. 200ಕ್ಕೂ ಅಧಿಕ ಜನರು ನಾಪತ್ತೆ ಆಗಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುತ್ತಲೇ ಇದೆ.
ಇದನ್ನೂ ಓದಿ: ಸತತ ಸೋಲು; ಬಾಲಿವುಡ್ನ ಖ್ಯಾತ ನಿರ್ದೇಶಕನಿಗೆ ಕಿವಿಮಾತು ಹೇಳಿದ ಅಲ್ಲು ಅರ್ಜುನ್
ಅಲ್ಲು ಅರ್ಜುನ್ ಮಾತ್ರವಲ್ಲದೇ, ‘ಪುಷ್ಪ 2’ ಸಿನಿಮಾದ ನಟಿ ರಶ್ಮಿಕಾ ಮಂದಣ್ಣ ಅವರು ಇತ್ತೀಚೆಗೆ 10 ಲಕ್ಷ ರೂಪಾಯಿ ರೂಪಾಯಿ ದೇಣಿಗೆ ನೀಡಿದ್ದರು. ಸಂತ್ರಸ್ತರಿಗೆ ಆಶ್ರಯ ಕಲ್ಪಿಸಲು ಮೋಹಲ್ಲಾಲ್ ಅವರು 3 ಕೋಟಿ ರೂಪಾಯಿ ನೀಡುವುದಾಗಿ ತಿಳಿಸಿದ್ದಾರೆ. ಅಲ್ಲದೇ ಮಿಲಿಟರಿ ಸಮವಸ್ತ್ರ ಧರಿಸಿ ಅವರು ಭೂಕುಸಿತದ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 2:48 pm, Sun, 4 August 24