AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ದಿ ಬೆಂಗಾಲ್ ಫೈಲ್ಸ್’ ಸಿನಿಮಾ ಬಿಡುಗಡೆ: ಸಿನಿಮಾದ ಕತೆ ಏನು?

The Bengal Files: ವಿವೇಕ್ ಅಗ್ನಿಹೋತ್ರಿ ನಿರ್ದೇಶನ ಮಾಡಿರುವ ‘ದಿ ಬೆಂಗಾಲ್ ಫೈಲ್ಸ್’ ಸಿನಿಮಾ ಇಂದು (ಸೆಪ್ಟೆಂಬರ್ 05) ಬಿಡುಗಡೆ ಆಗಿದೆ. ಹೆಸರೇ ಸೂಚಿಸುವಂತೆ ಈ ಸಿನಿಮಾ ಪಶ್ಚಿಮ ಬಂಗಾಳದ ಕುರಿತಾದದ್ದಾಗಿದೆ. ಬಂಗಾಳದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ನಡೆದ ಹಿಂದೂ-ಮುಸ್ಲಿಂ ಗಲಭೆಯ ಕತೆಯನ್ನು ಸಿನಿಮಾ ಒಳಗೊಂಡಿದೆ. ವಿಶೇಷವಾಗಿ ಗಲಭೆಯಲ್ಲಿ ಹಿಂದೂಗಳ ಮೇಲೆ ಆದ ದೌರ್ಜನ್ಯದ ಕತೆಯನ್ನು ಸಿನಿಮಾ ಹೇಳುತ್ತಿದೆ.

‘ದಿ ಬೆಂಗಾಲ್ ಫೈಲ್ಸ್’ ಸಿನಿಮಾ ಬಿಡುಗಡೆ: ಸಿನಿಮಾದ ಕತೆ ಏನು?
The Bengal Files
ಮಂಜುನಾಥ ಸಿ.
|

Updated on:Sep 05, 2025 | 6:15 PM

Share

‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ನಿರ್ದೇಶಿಸಿದ್ದ ವಿವೇಕ್ ಅಗ್ನಿಹೋತ್ರಿ ನಿರ್ದೇಶಿಸಿರುವ ‘ದಿ ಬೆಂಗಾಲ್ ಫೈಲ್ಸ್’ ಸಿನಿಮಾ ಇಂದು (ಸೆಪ್ಟೆಂಬರ್ 05) ಬಿಡುಗಡೆ ಆಗಿದೆ. ಸಿನಿಮಾ ಬಿಡುಗಡೆಗೆ ಮುಂಚೆ ಸಂದರ್ಶನಗಳಲ್ಲಿ ಮಾತನಾಡಿದ್ದ ವಿವೇಕ್ ಅಗ್ನಿಹೋತ್ರಿ, ‘ದಿ ಕಾಶ್ಮೀರ್ ಫೈಲ್ಸ್’ ನಿಮ್ಮನ್ನು ಅಲುಗಾಡಿಸಿದ್ದರೆ, ‘ದಿ ಬೆಂಗಾಲ್ ಫೈಲ್ಸ್’ ಸಿನಿಮಾ ನಿಮ್ಮನ್ನು ಬೆಂಬಿಡದೆ ಕಾಡುತ್ತದೆ’ ಎಂದಿದ್ದರು. ಅಲ್ಲದೆ, ‘ಭಾರತದಿಂದ ದೂರಾಗುತ್ತಿರುವ ಪಶ್ಚಿಮ ಬಂಗಾಳವನ್ನು ಉಳಿಸಿಕೊಳ್ಳಿರೆಂದು ಹೇಳಲು ಈ ಸಿನಿಮಾ ಮಾಡಿದ್ದೇನೆ’ ಎಂದು ಸಹ ವಿವೇಕ್ ಅಗ್ನಿಹೋತ್ರಿ ಹೇಳಿದ್ದರು. ಹಾಗಿದ್ದರೆ, ‘ದಿ ಬೆಂಗಾಲ್ ಫೈಲ್ಸ್’ ಸಿನಿಮಾದ ಕತೆ ಏನು? ಬೆಂಬಿಡದೆ ಕಾಡುವಂಥಹದ್ದು ಸಿನಿಮಾನಲ್ಲಿ ಏನಿದೆ?

1946ರಲ್ಲಿ ಬಂಗಾಳದಲ್ಲಿ ನಡೆದ ಹಿಂದೂ-ಮುಸ್ಲೀಮರ ಭೀಕರ ಗಲಭೆ ‘ದಿ ಬೆಂಗಾಲ್ ಫೈಲ್ಸ್’ ಸಿನಿಮಾ ಕತೆ. 1946, ಆಗಸ್ಟ್ 16 ರಂದು ಜಿನ್ನಾ ಕರೆ ನೀಡಿದ್ದ ‘ಡೈರೆಕ್ಟ್ ಆಕ್ಷನ್’ ಅದರ ಬಳಿಕ ನಡೆದ ಭೀಕರ ಗಲಭೆಯ ಸುತ್ತ ‘ದಿ ಬೆಂಗಾಲ್ ಫೈಲ್ಸ್’ ಸಿನಿಮಾದ ಕತೆ ಹೆಣೆಯಲಾಗಿದೆ. ಭಾರತದ ಇತಿಹಾಸದಲ್ಲಿಯೇ ಅತ್ಯಂತ ಭೀಕರ ಕೋಮುಗಲಭೆ ಇದೆನ್ನಲಾಗುತ್ತದೆ. ‘ಡೈರೆಕ್ಟ್ ಆಕ್ಷನ್’ ಹಾಗೂ ಅದರ ಬಳಿಕ ನಡೆದ ಗಲಭೆಯಲ್ಲಿ ಕೊಲ್ಕತ್ತ ಸೇರಿದಂತೆ ಬಂಗಾಳದ ವಿವಿಧ ಭಾಗಗಳಲ್ಲಿ ಸಾವಿರಾರು ಮಂದಿ ಪ್ರಾಣ ಕಳೆದುಕೊಂಡರು. ಅದರಲ್ಲಿ ಹಿಂದೂಗಳ ಸಂಖ್ಯೆಯೇ ಹೆಚ್ಚಾಗಿತ್ತು. ಇದೇ ವಿಷಯವನ್ನು ಇರಿಸಿಕೊಂಡು ಇದೀಗ ವಿವೇಕ್ ಅಗ್ನಿಹೋತ್ರಿ ‘ದಿ ಬೆಂಗಾಲ್ ಫೈಲ್ಸ್’ ಸಿನಿಮಾ ಮಾಡಿದ್ದಾರೆ.

ಸಿನಿಮಾ ಅನ್ನು ಎರಡು ಭಾಗವಾಗಿ ನಿರ್ದೇಶಕರು ವಿಂಗಡಿಸಿದ್ದು ಕಳೆದುಹೋಗಿರುವ ವ್ಯಕ್ತಿಯನ್ನು ಹುಡುಕುವ ತನಿಖಾಧಿಕಾರಿ ಹಾಗೂ ಬೆಂಗಾಲದಲ್ಲಿ ನಡೆದ ಕೋಮು ಗಲಭೆಯ ಸಂತ್ರಸ್ತೆಯೊಬ್ಬಳ ಕತೆಯನ್ನು ಹೇಳಿದ್ದಾರೆ. ಈ ಇಬ್ಬರನ್ನು ಪ್ರಧಾನವಾಗಿ ಇರಿಸಿಕೊಂಡು ಅಧಿಕಾರ ವರ್ಗದಲ್ಲಿರುವವರು ಗಲಭೆಗೆ ಸ್ಪಂದಿಸಿದ ರೀತಿ ಹಾಗೂ ಕೋಮುಗಲಭೆಯಿಂದ ಕೊಲ್ಕತ್ತದ ಬೀದಿಗಳಲ್ಲಿ ರಕ್ತದ ನದಿ ಹೇಗೆ ಹರಿಯಿತೆಂದು ತೋರಿಸಿದ್ದಾರೆ ಎಂದಿದ್ದಾರೆ ಸಿನಿಮಾ ನೋಡಿದವರು. ಶಾಂತಿ, ವಿವೇಕ, ಚಿಂತನಾಶೀಲತೆ, ಸಂಸ್ಕೃತಿಯ ರಾಜ್ಯವಾಗಿದ್ದ ಬಂಗಾಳವನ್ನು ಕಮ್ಯುನಿಸ್ಟರು ಹಾಳುಗೆಡವಿದರು ಎಂದು ಸಹ ನಿರ್ದೇಶಕರು ಸಿನಿಮಾ ಮೂಲಕ ಹೇಳಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:‘ದಿ ಬೆಂಗಾಲ್ ಫೈಲ್ಸ್’ ಸಿನಿಮಾ ಹೇಗಿದೆ? ಸಿನಿಮಾ ನೋಡಿದವರು ಹೇಳಿದ್ದೇನು?

‘ದಿ ಬೆಂಗಾಲ್ ಫೈಲ್ಸ್’ ಸಿನಿಮಾನಲ್ಲಿ ಸಿಮ್ರತ್ ಕೌರ್ ಪಾತ್ರವನ್ನು ಕೋಮುಗಲಭೆ, ಹಿಂಸಾಚಾರವನ್ನು ತೋರಿಸಲು ಬಳಸಿದರೆ ತನಿಖಾಧಿಕಾರಿಯ ಪಾತ್ರದ ಮೂಲಕ ಅಧಿಕಾರದಲ್ಲಿರುವವರು ಗಲಭೆಗೆ ಸ್ಪಂದಿಸಿದ ರೀತಿಯನ್ನು ತೋರಿಸಲಾಗಿದೆ. ಅದರಲ್ಲೂ ವಿಶೇಷವಾಗಿ ಹಿಂದೂಗಳ ಮೇಲೆ ನಡೆದ ಹಿಂಸಾಚಾರದ ಮೇಲೆ ವಿಶೇಷವಾಗಿ ಸಿನಿಮಾ ಬೆಳಕು ಚೆಲ್ಲಿದೆ. ಕೊಲ್ಕತ್ತ ಗಲಭೆ ಸಂದರ್ಭದಲ್ಲಿಯೇ ನೋಕಾಹಲಿಯಲ್ಲಿ ನಡೆದ ಹಿಂದೂಗಳ ಮಾರಣಹೋಮದ ಚಿತ್ರಣಗಳು ಸಹ ಸಿನಿಮಾನಲ್ಲಿ ಇವೆ ಎನ್ನಲಾಗುತ್ತಿದೆ.

‘ದಿ ಬೆಂಗಾಲ್ ಫೈಲ್ಸ್’ ಸಿನಿಮಾನಲ್ಲಿ ಮಿಥುನ್ ಚಕ್ರವರ್ತಿ, ಸಿಮ್ರತ್ ಕೌರ್, ಅನುಪಮ್ ಖೇರ್, ಪಲ್ಲವಿ ಜೋಶಿ, ದರ್ಶನ್ ಕುಮಾರ್, ಸಾಶ್ವತ ಚಟರ್ಜಿ ಇನ್ನೂ ಹಲವರು ನಟಿಸಿದ್ದಾರೆ. ಸಿನಿಮಾ ಅನ್ನು ವಿವೇಕ್ ಅಗ್ನಿಹೋತ್ರಿ ನಿರ್ದೇಶನ ಮಾಡಿದ್ದು ಅವರೇ ನಿರ್ಮಾಣವನ್ನೂ ಮಾಡಿದ್ದಾರೆ. ಸಿನಿಮಾಕ್ಕೆ ರೋಹಿತ್ ಶರ್ಮಾ ಸಂಗೀತ ನೀಡಿದ್ದಾರೆ. ‘ದಿ ಕಾಶ್ಮೀರ್ ಫೈಲ್ಸ್’ಗೆ ಕೆಲಸ ಮಾಡಿದ್ದ ಬಹುತೇಕ ತಂಡ ಈ ಸಿನಿಮಾಕ್ಕೂ ಕೆಲಸ ಮಾಡಿದ್ದು, ಸಿನಿಮಾ ಇಂದು (ಸೆಪ್ಟೆಂಬರ್ 05) ಬಿಡುಗಡೆ ಆಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:13 pm, Fri, 5 September 25