ಫ್ಲೈಯಿಂಗ್ ಸಿಖ್ ಎಂದೇ ಖ್ಯಾತರಾಗಿದ್ದ ಅಥ್ಲೀಟ್ ಮಿಲ್ಖಾ ಸಿಂಗ್ ಅವರು ಕೊರೊನಾ ವೈರಸ್ ಸೋಂಕಿನಿಂದ ನಿಧನರಾಗಿದ್ದು ಬೇಸರದ ಸಂಗತಿ. ಬಹುತೇಕ ಜನರಿಗೆ ಮಿಲ್ಖಾ ಸಿಂಗ್ ಬಗ್ಗೆ ಪರಿಚಯ ಆಗಿದ್ದೇ ‘ಭಾಗ್ ಮಿಲ್ಖಾ ಭಾಗ್’ ಸಿನಿಮಾದಿಂದ. ಆ ಚಿತ್ರದಲ್ಲಿ ಮಿಲ್ಖಾ ಸಿಂಗ್ ಅವರು ಜೀವನದ ಕಥೆಯನ್ನು ವಿವರಿಸಲಾಗಿತ್ತು. ಅವರ ಪಾತ್ರದಲ್ಲಿ ಫರ್ಹಾನ್ ಅಖ್ತರ್ ನಟಿಸಿದ್ದರು. ಅಚ್ಚರಿ ಎಂದರೆ, ತಮ್ಮ ಜೀವನದ ವಿವರಗಳನ್ನು ಸಿನಿಮಾ ಮಾಡಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ಪ್ರತಿಯಾಗಿ ಮಿಲ್ಖಾ ಸಿಂಗ್ಗೆ ಸಿಕ್ಕಿದ್ದು ಕೇವಲ 1 ರೂಪಾಯಿ ಮಾತ್ರ!
‘ಭಾಗ್ ಮಿಲ್ಖಾ ಭಾಗ್’ ಸಿನಿಮಾ 2013ರಲ್ಲಿ ರಿಲೀಸ್ ಆಯಿತು. ಆ ಚಿತ್ರಕ್ಕೆ ರಾಕೇಶ್ ಓಂಪ್ರಕಾಶ್ ಮೆಹ್ರಾ ನಿರ್ದೇಶನ ಮಾಡಿದ್ದರು. ಬಾಕ್ಸ್ ಆಫೀಸ್ನಲ್ಲಿ ಸಿನಿಮಾ ಗೆದ್ದಿತ್ತು. ಆ ಚಿತ್ರದ ಮೂಲಕ ಮಿಲ್ಖಾ ಸಿಂಗ್ ಬದುಕಿನ ಸ್ಫೂರ್ತಿದಾಯಕ ಕಥೆ ಅನೇಕರಿಗೆ ತಿಳಿಯುವಂತಾಗಿತ್ತು. ಅಂಥ ಮಹಾನ್ ಸಾಧಕನ ಕಥೆಗಾಗಿ ನಿರ್ದೇಶಕರು ನೀಡಿದ್ದು ಒಂದು ರೂಪಾಯಿ ಮಾತ್ರ. ಆದರೆ ಅದಕ್ಕೆ ವಿಶೇಷ ಕಾರಣ ಕೂಡ ಇತ್ತು.
ತಮ್ಮ ಕಥೆಗಾಗಿ ಹಣ ಪಡೆಯುವುದು ಮಿಲ್ಖಾ ಸಿಂಗ್ ಉದ್ದೇಶ ಆಗಿರಲಿಲ್ಲ. ಆ ಸಿನಿಮಾ ನೋಡಿದ ಯುವಜನತೆಗೆ ಸ್ಫೂರ್ತಿ ಬರಬೇಕು ಎಂಬುದಷ್ಟೇ ಅವರ ಆಶಯ ಆಗಿತ್ತು. ಹಾಗಾಗಿ ಅವರು ಹಣ ಪಡೆಯಲಿಲ್ಲ. ಆದರೂ ಅವರಿಗೆ ಏನಾದರೂ ಅಮೂಲ್ಯವಾದದ್ದನ್ನು ಕೊಡಬೇಕು ಎಂದುಕೊಂಡ ನಿರ್ದೇಶಕರು ಈ ಒಂದು ರೂಪಾಯಿ ಕೊಟ್ಟರು. ಅದು 1958ರಲ್ಲಿ ಮುದ್ರಿಸಲಾದ ನೋಟು ಎಂಬುದು ವಿಶೇಷ.
ಸ್ವತಂತ್ರ ಭಾರತದಿಂದ ಕಾಮಲ್ವೆಲ್ತ್ ಗೇಮ್ನಲ್ಲಿ ಸ್ಪರ್ಧಿಸಿ, ಮಿಲ್ಖಾ ಸಿಂಗ್ ಮೊದಲ ಬಾರಿಗೆ ಚಿನ್ನದ ಪದಕ ಗೆದ್ದಿದ್ದು 1958ರಲ್ಲಿ. ಹಾಗಾಗಿ ಅದು ವಿಶೇಷ ವರ್ಷ. ಅದೇ ವರ್ಷ ಪ್ರಿಂಟ್ ಆದ ಒಂದು ರೂಪಾಯಿಯ ನೋಟನ್ನು ಹುಡುಕಿ ತಂದು ಮಿಲ್ಖಾ ಸಿಂಗ್ಗೆ ಚಿತ್ರತಂಡ ನೀಡಿತ್ತು. ಸಿನಿಮಾ ಸೂಪರ್ ಹಿಟ್ ಆಯಿತು. ಲಾಭದ ಒಂದು ಭಾಗವನ್ನು ಮಿಲ್ಖಾ ಸಿಂಗ್ ಅವರ ಚಾರಿಟೆಬಲ್ ಟ್ರಸ್ಟ್ಗೆ ನೀಡುವುದಾಗಿ ಚಿತ್ರತಂಡ ಹೇಳಿಕೊಂಡಿತ್ತು.
ಫರ್ಹಾನ್ ಅಖ್ತರ್ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳ ಮೂಲಕ ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ‘ಪ್ರೀತಿಯ ಮಿಲ್ಖಾ ಅವರೇ, ನೀವು ಇಲ್ಲ ಎಂಬುದನ್ನು ನನ್ನೊಳಗಿನ ಒಂದು ಮನಸ್ಸು ಒಪ್ಪಿಕೊಳ್ಳುತ್ತಲೇ ಇಲ್ಲ. ಪ್ರಾಯಶಃ ನಿಮ್ಮಿಂದ ಪಡೆದುಕೊಂಡ ಹಠಮಾರಿ ಮನಸ್ಸು ಅದು. ಏನನ್ನಾದರೂ ಶುರು ಮಾಡಿದರೆ ಬಿಡಲೇಬಾರದ ಎಂಬ ಮನಸ್ಸು. ನಿಜ ಏನೆಂದರೆ, ನೀವು ಯಾವಾಗಲೂ ಜೀವಂತವಾಗಿರುತ್ತೀರಿ. ಯಾಕೆಂದರೆ ನೀವು ಹೃದಯವಂತ, ಪ್ರೀತಿಪೂರ್ವಕ, ವಿನಯವಂತ ವ್ಯಕ್ತಿ ಆಗಿದ್ರಿ’ ಎಂದು ಫರ್ಹಾನ್ ಅಖ್ತರ್ ಬರೆದುಕೊಂಡಿದ್ದಾರೆ.
‘ನೀವು ಒಂದು ಆಲೋಚನೆಯ ಪ್ರತಿನಿಧಿ. ನೀವು ಒಂದು ಕನಸಿನ ಪ್ರತಿನಿಧಿ. ಪರಿಶ್ರಮ, ಪ್ರಾಮಾಣಿಕತೆ ಮತ್ತು ಬದ್ಧತೆಯು ಒಬ್ಬ ಮನುಷ್ಯನನ್ನು ಉತ್ತುಂಗಕ್ಕೆ ಕರೆದುಕೊಂಡು ಹೋಗುತ್ತದೆ ಎಂಬುದನ್ನು ನೀವು ಪ್ರತಿನಿಧಿಸಿದ್ದೀರಿ. ನಮ್ಮ ಜೀವನಕ್ಕೆ ನೀವು ಹೃದಯಸ್ಪರ್ಶಿ ಆಗಿದ್ರಿ. ತಂದೆಯಾಗಿ, ಸ್ನೇಹಿತನಾಗಿ ನಿಮ್ಮನ್ನು ಪಡೆದ ಆತ್ಮೀಯರೇ ಧನ್ಯರು. ಇನ್ನುಳಿದವರಿಗೆ ನಿಮ್ಮ ಜೀವನದ ಕಥೆಯೇ ದೊಡ್ಡ ಸ್ಫೂರ್ತಿ. ತುಂಬು ಹೃದಯದಿಂದ ನಿಮ್ಮನ್ನು ಪ್ರೀತಿಸುತ್ತೇನೆ’ ಎಂದು ಫರ್ಹಾನ್ ಅಖ್ತರ್ ಅವರು ಮಿಲ್ಖಾ ಸಿಂಗ್ಗೆ ನುಡಿ ನಮನ ಸಲ್ಲಿಸಿದ್ದಾರೆ.
ಇದನ್ನೂ ಓದಿ:
WTC Final: ಮಿಲ್ಖಾ ಸಿಂಗ್ ನಿಧನಕ್ಕೆ ಕಪ್ಪು ಪಟ್ಟಿ ಧರಿಸಿ ಗೌರವ ಸೂಚಿಸಿದ ಟೀಂ ಇಂಡಿಯಾ ಆಟಗಾರರು