
ಪ್ರಖ್ಯಾತ ಯೂಟ್ಯೂಬರ್, ಮಾಜಿ ಬಿಗ್ ಬಾಸ್ ಸ್ಪರ್ಧಿ ಅನುರಾಗ್ ದೊಭಾಲ್ (UK07 Rider) ಮತ್ತೊಮ್ಮೆ ತಮ್ಮ ವೈಯಕ್ತಿಕ ಜೀವನದ ವಿವಾದಗಳಿಂದಾಗಿ ಭಾರಿ ಸುದ್ದಿಯಲ್ಲಿದ್ದಾರೆ. ತಮ್ಮ ಅಂತರ್ ಜಾತಿ ವಿವಾಹದ ಕಾರಣಕ್ಕಾಗಿ ಕುಟುಂಬಸ್ಥರು ತಮಗೆ ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ಅವರು ಈ ಹಿಂದೆ ಆರೋಪಿಸಿದ್ದರು. ಈಗ ಪೋಷಕರೇ ತಮ್ಮ ವಿರುದ್ಧ ಮತ್ತೆ ದೊಡ್ಡ ಸಂಚು ರೂಪಿಸುತ್ತಿದ್ದಾರೆ ಎಂದು ಅನುರಾಗ್ ದೊಭಾಲ್ (Anurag Dobhal) ಅವರು ಗಂಭೀರ ಆರೋಪ ಮಾಡಿದ್ದಾರೆ. ಜೊತೆಗೆ ಕಾರು ಅಪಘಾತದ ಬಳಿಕ ಆಸ್ಪತ್ರೆಯಲ್ಲಿ ತಾವು ಅನುಭವಿಸಿದ ನರಕಯಾತನೆಯನ್ನು ಬಿಚ್ಚಿಟ್ಟಿದ್ದಾರೆ.
ಕಳೆದ ಮಾರ್ಚ್ ತಿಂಗಳಲ್ಲಿ ಲೈವ್ ಸ್ಟ್ರೀಮ್ ನಡೆಯುತ್ತಿದ್ದಾಗಲೇ ಕಾರು ಅಪಘಾತಕ್ಕೀಡಾಗಿ, ಆತ್ಮಹತ್ಯೆಗೆ ಯತ್ನಿಸಿದ ಆರೋಪ ಎದುರಿಸಿದ್ದ ಅನುರಾಗ್ ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ. ಬುಧವಾರ (ಮೇ 20) ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ತಾವು ಹಳೆಯದ್ದನ್ನೆಲ್ಲಾ ಮರೆತು ಹೊಸ ಜೀವನ ಆರಂಭಿಸಲು ನಿರ್ಧರಿಸಿದ್ದರೂ, ಕುಟುಂಬದವರು ಮಾತ್ರ ತಮಗೆ ತೊಂದರೆ ಕೊಡುವುದನ್ನು ನಿಲ್ಲಿಸುತ್ತಿಲ್ಲ ಎಂದು ಹೇಳಿದ್ದಾರೆ.
ಮಾರ್ಚ್ 8ರಂದು ತಮಗೆ ಭೀಕರ ಕಾರು ಅಪಘಾತವಾದಾಗ ಹೆತ್ತವರು ತಮ್ಮ ಜೊತೆಗಿರುತ್ತಾರೆ ಎಂದು ಅನುರಾಗ್ ಭಾವಿಸಿದ್ದರು. ಆದರೆ ವಾಸ್ತವವೇ ಬೇರೆಯಾಗಿತ್ತು. ಇತ್ತೀಚೆಗೆ ಕೆಲಸದ ನಿಮಿತ್ತ ಡೆಹ್ರಾಡೂನ್‌ಗೆ ಹೋದಾಗ ಪೊಲೀಸರಿಂದ ಕರೆ ಬಂದಿದ್ದು, ಅಲ್ಲಿ ತಮಗೆ ಶಾಕಿಂಗ್ ಸತ್ಯವೊಂದು ತಿಳಿದುಬಂದಿದೆ ಎಂದು ಅನುರಾಗ್ ಹೇಳಿದ್ದಾರೆ.
‘ನನಗೆ ಅಪಘಾತವಾದ ಅದೇ ರಾತ್ರಿ, ನನ್ನ ತಂದೆ ಪೊಲೀಸ್ ಠಾಣೆಗೆ ಹೋಗಿ ನನ್ನ ವಿರುದ್ಧವೇ ದೂರು ದಾಖಲಿಸಿದ್ದರು. ಆ ಪತ್ರದಲ್ಲಿ ನನ್ನ ವಿರುದ್ಧ ಹಲವು ವಿಷಯಗಳನ್ನು ಬರೆಯಲಾಗಿತ್ತು. ಈಗ ತನಿಖೆ ಮುಂದುವರಿದಿದ್ದು, ನನ್ನ ಕುಟುಂಬದವರು ನನ್ನ ವಿರುದ್ಧ 50-60 ಪುಟಗಳ ಸುದೀರ್ಘ ದೂರನ್ನು ನೀಡಿದ್ದಾರೆ. ಅದರಲ್ಲಿ ಬರೆದಿರುವ ವಿಷಯಗಳನ್ನು ಓದಿ ನನ್ನ ತಲೆ ಕೆಟ್ಟುಹೋಗಿದೆ’ ಎಂದು ಅನುರಾಗ್ ಅಳಲು ತೋಡಿಕೊಂಡಿದ್ದಾರೆ.
ಇದನ್ನೂ ಓದಿ: ಬಿಗ್ ಬಾಸ್ ಖ್ಯಾತಿಯ ಅನುರಾಗ್ ದೊಭಾಲ್ ಸ್ಥಿತಿ ಗಂಭೀರ: ಹೆಚ್ಚಿದೆ ಶ್ವಾಸಕೋಶದ ಸೋಂಕು
ಅಪಘಾತದ ನಂತರ ಆಸ್ಪತ್ರೆಯಲ್ಲಿದ್ದ ಕಠಿಣ ದಿನಗಳನ್ನು ನೆನೆದು ಅನುರಾಗ್ ತೀವ್ರ ಭಾವುಕರಾಗಿದ್ದಾರೆ. ಅಪಘಾತದ ಗಾಯಗಳಿಂದಾಗಿ ಇಡೀ ಒಂದು ತಿಂಗಳು ಹಾಸಿಗೆಯಿಂದ ಏಳಲು ಸಾಧ್ಯವಾಗಿರಲಿಲ್ಲ. ‘ಒಂದು ತಿಂಗಳು ನಾನು ಹೇಗೆ ಕಾಲ ಕಳೆದಿದ್ದೇನೆ ಎಂದು ನನಗೆ ಮಾತ್ರ ಗೊತ್ತು. ಮಲಮೂತ್ರ ವಿಸರ್ಜನೆಗೂ ನಾನು ಡೈಪರ್ ಬಳಸಬೇಕಾಗಿತ್ತು. ಅದು ನನ್ನ ಪಾಲಿಗೆ ಅತ್ಯಂತ ನಾಚಿಕೆಗೇಡಿನ ಮತ್ತು ಅವಮಾನಕರ ವಿಷಯವಾಗಿತ್ತು. ನನ್ನ ಜೀವನದ ಅತ್ಯಂತ ಕೆಟ್ಟ ಹಂತ ಅದು’ ಎಂದು ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.