ಸಿನಿಮಾ: ಯುವರತ್ನ
ನಿರ್ದೇಶನ: ಸಂತೋಷ್ ಆನಂದ್ರಾಮ್
ನಿರ್ಮಾಣ: ವಿಜಯ್ ಕಿರಗಂದೂರು
ಪಾತ್ರವರ್ಗ: ಪುನೀತ್ ರಾಜ್ಕುಮಾರ್, ಸಾಯೇಶಾ ಸೈಗಲ್, ಪ್ರಕಾಶ್ ರೈ, ಡಾಲಿ ಧನಂಜಯ, ಸಾಯಿಕುಮಾರ್ ಮುಂತಾದವರು.
ಸ್ಟಾರ್: 3/5
‘ಪವರ್ ಸ್ಟಾರ್’ ಪುನೀತ್ ರಾಜ್ಕುಮಾರ್ ಮತ್ತು ನಿರ್ದೇಶಕ ಸಂತೋಷ್ ಆನಂದ್ರಾಮ್ ಕಾಂಬಿನೇಷನ್ನಲ್ಲಿ ಮೂಡಿಬಂದಿದ್ದ ‘ರಾಜಕುಮಾರ’ ಸಿನಿಮಾ ಸೂಪರ್ ಹಿಟ್ ಆಗಿತ್ತು. ಹಾಗಾಗಿ, ಅವರಿಬ್ಬರು ಜೊತೆಯಾಗಿ ಮಾಡಿರುವ ‘ಯುವರತ್ನ’ ಸಿನಿಮಾ ಮೇಲೆ ಹೆಚ್ಚಿನ ನಿರೀಕ್ಷೆ ಮೂಡಿರುವುದು ಸಹಜ. ರಾಜಕುಮಾರ ಚಿತ್ರದ ರೀತಿಯೇ ಯುವರತ್ನದಲ್ಲಿಯೂ ಒಂದು ಮೆಸೇಜ್ ನೀಡುವ ಪ್ರಯತ್ನವನ್ನು ಮಾಡಲಾಗಿದೆ. ಈ ಬಾರಿ ಪೋಷಕರು ಮತ್ತು ವಿದ್ಯಾರ್ಥಿಗಳನ್ನು ಸಂತೋಷ್ ಆನಂದ್ ರಾಮ್ ಟಾರ್ಗೆಟ್ ಮಾಡಿದ್ದಾರೆ.
ಯುವರತ್ನ ಕಥೆ ಏನು?
ಪುನೀತ್ ರಾಜ್ಕುಮಾರ್ಗೆ ಎಲ್ಲ ವರ್ಗದ ಅಭಿಮಾನಿಗಳಿದ್ದಾರೆ. ಆದರೆ ಈ ಸಿನಿಮಾದಲ್ಲಿ ಯುವಜನತೆಯನ್ನು ಗಮನದಲ್ಲಿ ಇಟ್ಟುಕೊಂಡು ಒಂದು ಕಥೆ ಹೇಳಲಾಗಿದೆ. ಅದಕ್ಕಾಗಿ ನಿರ್ದೇಶಕರು ಆಯ್ಕೆ ಮಾಡಿಕೊಂಡಿರುವುದು ಕಾಲೇಜು ಹಿನ್ನೆಲೆಯನ್ನು. ಒಂದು ಸರ್ಕಾರಿ ಕಾಲೇಜಿನಲ್ಲಿ ಅನೇಕ ಅಕ್ರಮಗಳು ನಡೆಯುತ್ತಿರುತ್ತವೆ. ಅದಕ್ಕೆ ಕಾರಣ ಆಗಿರುವುದು ಗೋಮುಖ ವ್ಯಾಘ್ರಗಳಂತಿರುವ ವಿಲನ್ಗಳು. ಹೇಗಾದರೂ ಮಾಡಿ ಆ ಕಾಲೇಜ್ ಮುಚ್ಚಿಸಬೇಕು ಎಂಬುದು ಖಳನಾಯಕರ ಗುರಿ. ಆದರೆ ಅದಕ್ಕೆ ಅಡ್ಡಿಯಾಗಿ ನಿಲ್ಲುವವನು ಕಥಾನಾಯಕ ಯುವರಾಜ್. ಈ ಘರ್ಷಣೆಯಲ್ಲಿ ಡ್ರಗ್ಸ್ ಮಾಫಿಯಾ, ಖಾಸಗಿ ಕಾಲೇಜುಗಳ ಎಜುಕೇಷನ್ ಮಾಫಿಯಾ, ರ‍್ಯಾಗಿಂಗ್ ಮುಂತಾದ ವಿಷಯಗಳನ್ನು ಇಟ್ಟುಕೊಂಡು ಕಥೆ ಹೆಣೆಯಲಾಗಿದೆ. ಇವುಗಳನ್ನೆಲ್ಲ ಹೀರೋ ಹೇಗೆ ಮಟ್ಟಹಾಕುತ್ತಾನೆ ಎಂಬುದು ತಿಳಿದುಕೊಳ್ಳಲು ಪೂರ್ತಿ ಸಿನಿಮಾ ನೋಡಬೇಕು.
ಅಪ್ಪು ಅಭಿಮಾನಿಗಳಿಗೆ ಹಬ್ಬ
ಪುನೀತ್ ರಾಜ್ಕುಮಾರ್ ಸಿನಿಮಾ ಎಂದರೆ ಅಲ್ಲಿ ಡ್ಯಾನ್ಸ್, ಫೈಟ್, ಫ್ಯಾಮಿಲಿ ಮೆಚ್ಚುವಂತಹ ಕಥೆ, ಜೊತೆಗೊಂದು ಮೆಸೇಜ್ ಇರಬೇಕು. ಅವುಗಳ ಸಂಪೂರ್ಣ ಪ್ಯಾಕೇಜ್ ಈ ಚಿತ್ರದಲ್ಲಿದೆ. ಎಲ್ಲಕ್ಕಿಂತಲೂ ಮುಖ್ಯವಾಗಿ ಪಕ್ಕಾ ಪವರ್ಸ್ಟಾರ್ ಅಭಿಮಾನಿಗಳನ್ನು ಸೆಳೆದುಕೊಳ್ಳುವ ಪ್ರಯತ್ನವನ್ನು ನಿರ್ದೇಶಕ ಸಂತೋಷ್ ಆನಂದ್ರಾಮ್ ಮಾಡಿದ್ದಾರೆ. ಪುನೀತ್ ರಾಜ್ಕುಮಾರ್ ಅವರ ರಿಯಲ್ ಲೈಫ್ ವ್ಯಕ್ತಿತ್ವಕ್ಕೆ ಕನೆಕ್ಟ್ ಆಗುವಂತಹ ಅನೇಕ ಡೈಲಾಗ್ಗಳು ಈ ಸಿನಿಮಾದಲ್ಲಿರುವುದೇ ಅದಕ್ಕೆ ಸಾಕ್ಷಿ. ಕಾಲೇಜು ವಿದ್ಯಾರ್ಥಿಯಾಗಿ ಹಾಗೂ ವಿದ್ಯಾರ್ಥಿಗಳು ಮೆಚ್ಚುವ ಪ್ರೊಫೆಸರ್ ಆಗಿ ಎರಡೂ ಗೆಟಪ್ನಲ್ಲಿ ಪುನೀತ್ ಮಿಂಚಿದ್ದಾರೆ. ಮಕ್ಕಳಿಗೆ ಪಾಠ ಮಾಡಿ ವಿದ್ಯೆ ಕಲಿಸಲೂ ಸೈ, ವಿಲನ್ಗಳ ಮೂಳೆ ಮುರಿದು ಬುದ್ಧಿ ಕಲಿಸಲೂ ಸೈ ಎಂಬಂತಹ ಪಾತ್ರದಲ್ಲಿ ಅವರು ರಾರಾಜಿಸಿದ್ದಾರೆ.
ಮುದ್ದಾಗಿ ಕಾಣಿಸಿಕೊಂಡು ಕಳೆದುಹೋದ ಸಾಯೇಶಾ!
ನಟಿ ಸಾಯೇಶಾ ಸೈಗಲ್ ಅವರಿಗೆ ಕನ್ನಡದಲ್ಲಿ ಇದು ಮೊದಲ ಸಿನಿಮಾ. ಆದರೆ ಅವರ ಪಾತ್ರಕ್ಕೆ ಈ ಚಿತ್ರದಲ್ಲಿ ಹೇಳಿಕೊಳ್ಳುವಂತಹ ಸ್ಕೋಪ್ ಸಿಕ್ಕಿಲ್ಲ. ಕೆಲವೇ ದೃಶ್ಯಗಳಲ್ಲಿ ಅವರಿಗೆ ಅವಕಾಶ ಸಿಕ್ಕಿದೆ. ಎಲ್ಲಾ ಫ್ರೇಮ್ನಲ್ಲಿಯೂ ಮುದ್ದಾಗಿ ಕಾಣಿಸಿಕೊಳ್ಳುವ ಅವರು ಕಥೆ ಗಂಭೀರ ಸ್ವರೂಪ ಪಡೆದುಕೊಂಡ ಬಳಿಕ ಕಾಣೆಯಾಗಿಬಿಡುತ್ತಾರೆ.
ಖ್ಯಾತ ಕಲಾವಿದರ ದಂಡು
ಈ ಸಿನಿಮಾದ ತುಂಬೆಲ್ಲ ಜನಪ್ರಿಯರ ಕಲಾವಿದರೇ ಆವರಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ, ಸರ್ಕಾರಿ ಕಾಲೇಜಿನ ಉಳಿವಿಗಾಗಿ ಹಗಲಿರುಳು ಹೋರಾಡುವ ಪ್ರಾಂಶುಪಾಲರ ಪಾತ್ರದಲ್ಲಿ ನಟಿಸಿರುವ ಪ್ರಕಾಶ್ ರೈ ಅವರು ಹೆಚ್ಚು ಹೈಲೈಟ್ ಆಗಿದ್ದಾರೆ. ನಟ ಧನಂಜಯ್ ಅವರು ‘ಟಗರು’ ಸಿನಿಮಾದ ಡಾಲಿ ಪಾತ್ರದ ರೀತಿಯೇ ಇಲ್ಲೂ ಅಬ್ಬರಿಸಿದ್ದಾರೆ. ಸಾಯಿ ಕುಮಾರ್, ಅವಿನಾಶ್, ಸುಧಾರಾಣಿ, ಪ್ರಕಾಶ್ ಬೆಳವಾಡಿ, ರಾಜೇಶ್ ನಟರಂಗ ಮುಂತಾದ ಸ್ಟಾರ್ ಕಲಾವಿದರಿಂದಾಗಿ ಯುವರತ್ನನ ಮೆರುಗು ಹೆಚ್ಚಿದೆ. ದಿಗಂತ್, ಸೋನು ಗೌಡ, ತಾರಕ್ ಪೊನ್ನಪ್ಪ ತಮಗೆ ಸಿಕ್ಕಿರುವ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.
ಹೊಸತನಕ್ಕಾಗಿ ಪ್ರೇಕ್ಷಕರ ಹುಡುಕಾಟ
ತಾಂತ್ರಿಕವಾಗಿ ‘ಯುವರತ್ನ’ ತುಂಬ ಶ್ರೀಮಂತವಾಗಿ ಮೂಡಿಬಂದಿದೆ. ಆ್ಯಕ್ಷನ್ ದೃಶ್ಯಗಳನ್ನು ರೋಚಕವಾಗಿ ಕಟ್ಟಿಕೊಡಲಾಗಿದೆ. ಆದರೆ ಕಥೆ ಮತ್ತು ಅದರ ನಿರೂಪಣೆಯಲ್ಲಿ ಇನ್ನಷ್ಟು ಹೊಸತನವನ್ನು ನೀಡಲು ನಿರ್ದೇಶಕರು ಪ್ರಯತ್ನಿಸಬೇಕಿತ್ತು. ವಿದ್ಯಾರ್ಥಿಗಳಿಗೆ ಅಂಟಿಕೊಂಡ ಡ್ರಗ್ಸ್ ನಂಟು, ಶಿಕ್ಷಣದ ಖಾಸಗೀಕರಣದಿಂದಾಗಿ ಸಮಸ್ಯೆ, ರ‍್ಯಾಗಿಂಗ್ ಪಿಡುಗು, ಮೆರಿಟ್ಗಾಗಿ ವಿದ್ಯಾರ್ಥಿಗಳ ಮೇಲೆ ಪೋಷಕರು ಒತ್ತಡ ಹೇರುವುದು ಮುಂತಾದ ವಿಚಾರಗಳನ್ನು ಈಗಾಗಲೇ ಅನೇಕ ಸಿನಿಮಾಗಳಲ್ಲಿ ಪ್ರೇಕ್ಷಕರು ನೋಡಿದ್ದಾರೆ. ಅದೇ ವಿಚಾರವನ್ನು ಮತ್ತೆ ನೋಡುವಾಗ ಪ್ರೇಕ್ಷಕರು ಹೊಸತನವನ್ನು ನಿರೀಕ್ಷಿಸುವುದು ಸಹಜ. ಅದರ ಕಡೆಗೆ ನಿರ್ದೇಶಕರು ಹೆಚ್ಚಿನ ಗಮನ ಹರಿಸುವ ಅವಶ್ಯಕತೆ ಇತ್ತು.
‘ಪವರ್ ಆಫ್ ಯೂತ್..’ ಹಾಗೂ ‘ನೀನಾದೆನಾ..’ ಹಾಡಿನ ಮೂಲಕ ಸಂಗೀತ ನಿರ್ದೇಶಕ ಎಸ್. ಥಮನ್ ಹೆಚ್ಚು ಸ್ಕೋರ್ ಮಾಡಿದ್ದಾರೆ. ಹಿನ್ನೆಲೆ ಸಂಗೀತವೂ ಗಮನ ಸಳೆಯುವಂತಿದೆ. ಛಾಯಾಗ್ರಹಕ ವೆಂಕಟೇಶ್ ಕೆಲಸ ಅಚ್ಚುಕಟ್ಟಾಗಿದೆ. ಸಂತೋಷ್ ಆನಂದ್ರಾಮ್ ಬರೆದ ಸಂಭಾಷಣೆಗಳು ಅಪ್ಪು ಅಭಿಮಾನಿಗಳಿಂದ ಶಿಳ್ಳೆ, ಚೆಪ್ಪಾಳೆ ಪಡೆದುಕೊಳ್ಳುವ ಗುಣ ಹೊಂದಿವೆ.
ಇದನ್ನೂ ಓದಿ: Yuvarathnaa: ಧೂಳೆಬ್ಬಿಸಲು ಬಂದ ಯುವರತ್ನ! ಎಷ್ಟು ಚಿತ್ರಮಂದಿರಗಳಲ್ಲಿ ಪುನೀತ್ ರಾಜ್ಕುಮಾರ್ ಹವಾ?
Yuvarathnaa: ಆರ್ಭಟ ಶುರು ಮಾಡಿದ ಯುವರತ್ನ.. ರಾಜ್ಯಾದ್ಯಂತ ಥಿಯೇಟರ್ ಮುಂದೆ ಅಭಿಮಾನಿಗಳ ಸಂಭ್ರಮಾಚರಣೆ!
(Yuvarathnaa Movie Review A Powerful message with pack of actions from Power star to kannada audience)
Published On - 12:49 pm, Thu, 1 April 21