
ಸಚಿವ ಜಮೀರ್ ಅಹ್ಮದ್ (Zameer Ahmed) ಪುತ್ರ ಝೈದ್ ಖಾನ್ (Zaid Khan) ನಟಿಸಿರುವ ‘ಕಲ್ಟ್’ ಸಿನಿಮಾದ ಟ್ರೈಲರ್ ಇದೀಗ ಬಿಡುಗಡೆ ಆಗಿದೆ. ಸಿನಿಮಾದ ಪೋಸ್ಟರ್ನಿಂದ ಸಖತ್ ಗಮನ ಸೆಳೆದಿದ್ದ ‘ಕಲ್ಟ್’ ಸಿನಿಮಾಕ್ಕೆ ಮಲೈಕಾ ವಸುಪಾಲ್ ನಾಯಕಿ. ಝೈದ್ ಖಾನ್ ಮತ್ತು ಮಲೈಕಾ ಅವರು ಸಿನಿಮಾಕ್ಕೆ ಭರ್ಜರಿ ಪ್ರಚಾವನ್ನು ಸಹ ಮಾಡಿದ್ದಾರೆ. ಸಿನಿಮಾದ ಟ್ರೈಲರ್ ಇದೀಗ ಬಿಡುಗಡೆ ಆಗಿದ್ದು, ಮೇಕಿಂಗ್, ಆಕ್ಷನ್ ದೃಶ್ಯಗಳು ಮತ್ತು ಭಾವುಕ ದೃಶ್ಯಗಳಿಂದ ಟ್ರೈಲರ್ ಗಮನ ಸೆಳೆಯುತ್ತಿದೆ.
‘ಕಲ್ಟ್’ ಟ್ರೈಲರ್ ನೋಡಿದರೆ ಇದು ಪಕ್ಕಾ ಭಗ್ನ ಪ್ರೇಮಿಯ ಕತೆ ಎಂಬುದು ತಿಳಿಯುತ್ತದೆ. ಝೈದ್ ಖಾನ್ ಮಾಧವ ಪಾತ್ರದಲ್ಲಿ ನಟಿಸಿದ್ದರೆ ಮಲೈಕಾ ಗೀತಾ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾನಲ್ಲಿ ರಚಿತಾ ರಾಮ್ ಸಹ ನಟಿಸಿದ್ದು, ಅವರುದ್ದ ಕೇವಲ ಅತಿಥಿ ಪಾತ್ರ ಮಾತ್ರವೇ ಅಲ್ಲ ಎಂಬುದು ಟ್ರೈಲರ್ನಲ್ಲಿಯೇ ತಿಳಿದು ಬರುತ್ತಿದೆ. ಪ್ರೀತಿಯನ್ನು ಕಳೆದುಕೊಂಡು ಮದ್ಯದ ದಾಸನಾದ ಯುವಕನ ಪಾತ್ರದಲ್ಲಿ ಝೈದ್ ಖಾನ್ ನಟಿಸಿದ್ದಾರೆ.
ಸಿನಿಮಾದಲ್ಲಿ ಪ್ರೇಮಿಯಾಗಿ, ಭಗ್ನ ಪ್ರೇಮಿಯಾಗಿ ಹೀಗೆ ಎರಡು ಶೇಡ್ನಲ್ಲಿ ಝೈದ್ ಖಾನ್ ಕಾಣಿಸಿಕೊಂಡಿರುವುದು ಟ್ರೈಲರ್ನಲ್ಲಿಯೇ ತಿಳಿದು ಬರುತ್ತಿದೆ. ಮಲೈಕಾ ವಸುಪಾಲ್ ಟ್ರೈಲರ್ನಲ್ಲಿ ಕಡಿಮೆ ಕಾಣಿಸಿಕೊಂಡರೂ ಸಹ ಬಲು ಅಂದವಾಗಿ ಕಾಣುತ್ತಾರೆ. ರಚಿತಾ ರಾಮ್ ಅವರ ಪಾತ್ರ ಬೋಲ್ಡ್ ಆಗಿರುವ ಜೊತೆಗೆ ಪ್ರಬುದ್ಧತೆಯನ್ನೂ ಒಳಗೊಂಡಿರುವುದು ಟ್ರೈಲರ್ನಿಂದ ತಿಳಿದು ಬರುತ್ತಿದೆ. ಕೆಲವು ಆಕ್ಷನ್ ಸೀನ್ಗಳನ್ನು ಟ್ರೈಲರ್ನಲ್ಲಿ ತೋರಿಸಲಾಗಿದ್ದು, ಆಕ್ಷನ್ ಒಳ್ಳೆಯ ಗುಣಮಟ್ಟದಿಂದ ಕೂಡಿರುವುದು ಕಾಣುತ್ತಿದೆ.
ಇದನ್ನೂ ಓದಿ:‘ಜನ ನಾಯಗನ್’ ಟ್ರೈಲರ್ ಬಿಡುಗಡೆ: ರೀಮೇಕಾ? ಸ್ವಮೇಕಾ?
ಒಟ್ಟಾರೆಯಾಗಿ ‘ಕಲ್ಟ್’ ಸಿನಿಮಾದ ಟ್ರೈಲರ್ ಕುತೂಹಲ ಮೂಡಿಸುವಂತಿದೆ. ಸಿನಿಮಾನಲ್ಲಿ ಪ್ರೀತಿ, ರೊಮ್ಯಾನ್ಸ್, ಆಕ್ಷನ್, ಭಗ್ನ ಪ್ರೇಮ, ಭಗ್ನ ಪ್ರೇಮದ ಬಳಿಕ ಮತ್ತೆ ಪ್ರೇಮದಲ್ಲಿ ಬೀಳುವುದು, ಮಗ ವ್ಯಸನಗಳಿಗೆ ದಾಸನಾದರೆ ಪೋಷಕರು ಅನುಭವಿಸುವ ನೋವು, ಝೈದ್ ಖಾನ್ (ಮಾಧವ) ಭಗ್ನ ಪ್ರೇಮಿ ಯಾಕಾದ, ರಚಿತಾ ರಾಮ್ ಪಾತ್ರ, ಮಾಧವನ ಹುಡುಕಿ ಬರುವುದೇಕೆ? ಇನ್ನೂ ಹಲವು ಅಂಶಗಳು, ಕುತೂಹಲಗಳು ಸಿನಿಮಾನಲ್ಲಿ ಇರುವಂತಿದೆ.
‘ಕಲ್ಟ್’ ಸಿನಿಮಾವನ್ನು ಅನಿಲ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ಸಿನಿಮಾಕ್ಕೆ ಸಂಗೀತ ನೀಡಿರುವುದು ಅರ್ಜುನ್ ಜನ್ಯ. ಎ ಹರ್ಷ ಕೊರಿಯೋಗ್ರಫಿ ಮಾಡಿದ್ದಾರೆ. ಝೈದ್ ಖಾನ್, ಮಲೈಕಾ ಹಾಗೂ ರಚಿತಾ ರಾಮ್ ಜೊತೆಗೆ ಅಚ್ಯುತ್ ಕುಮಾರ್, ರಂಗಾಯಣ ರಘು ಇನ್ನೂ ಕೆಲ ಒಳ್ಳೆಯ ನಟ-ನಟಿಯರಿದ್ದಾರೆ. ಸಿನಿಮಾ ನಿರ್ಮಾಣ ಮಾಡಿರುವುದು ಲೋಕಿ ಸಿನಿಮಾಸ್. ಜನವರಿ 23ರಂದು ಸಿನಿಮಾ ಬಿಡುಗಡೆ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:49 pm, Sat, 17 January 26