ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಮೂರು ದಿನದ ಕಂದಮ್ಮನಿಗೆ ಮರುಜೀವ ನೀಡಿದ ಆ್ಯಂಬುಲೆನ್ಸ್ ಸಿಬ್ಬಂದಿ

ಆಂಬುಲೆನ್ಸ್ ಸಿಬ್ಬಂದಿಯ ಸಮಯಪ್ರಜ್ಞೆ ಮತ್ತು ಮಾನವೀಯತೆ ನವಜಾತ ಶಿಶುವಿನ ಜೀವ ಉಳಿಸಿದೆ. ಉಸಿರಾಟದ ತೊಂದರೆಯಿಂದ ಜೀವನ್ಮರಣದ ನಡುವೆ ನಡೆಸುತ್ತಿದ್ದ ಕೇವಲ ಮೂರು ದಿನಗಳ ಮಗುವಿಗೆ ತುರ್ತು ಚಿಕಿತ್ಸೆ ನೀಡಿ 108ರ ಸಿಬ್ಬಂದಿ ಮರುಜೀವ ನೀಡಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಿಬ್ಬಂದಿಯ ಸಮಯಪ್ರಜ್ಞೆ, ಸೇವಾ ಮನೋಭಾವ ಮತ್ತು ವೃತ್ತಿಪರತೆಗೆ ನೆಟ್ಟಿಗರು ಭಾರೀ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಮೂರು ದಿನದ ಕಂದಮ್ಮನಿಗೆ ಮರುಜೀವ ನೀಡಿದ ಆ್ಯಂಬುಲೆನ್ಸ್ ಸಿಬ್ಬಂದಿ
Ambulance Staff Save Newborns Life

Updated on: Jun 01, 2026 | 8:41 PM

ಹೈದರಾಬಾದ್, ಜೂನ್ 01: ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಮೂರು ದಿನದ ಮಗುವಿಗೆ ತುರ್ತು ಚಿಕಿತ್ಸೆ ನೀಡಿ ಆ್ಯಂಬುಲೆನ್ಸ್ ಸಿಬ್ಬಂದಿ ಜೀವ ಉಳಿಸಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ಮಗುವಿಗೆ ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದ ಹಿನ್ನಲೆ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಹೈದರಾಬಾದ್‌ನ ಆಸ್ಪತ್ರೆಗೆ ರೆಫರ್ ಮಾಡಿದ್ದರು ಅದಕ್ಕಾಗಿ ಮಗುವನ್ನು ಕರೆದೊಯ್ಯುವಾಗ ಶಿಶು ಚಿಂತಾಜನಕ ಸ್ಥಿತಿಗೆ ತಲುಪಿತ್ತು ಕೂಡಲೇ ಎಚ್ಚೆತ್ತ ಆ್ಯಂಬುಲೆನ್ಸ್ ಸಿಬ್ಬಂದಿ ಸಿಪಿಆರ್ (CPR) ನೀಡಿ ಜೀವ ಉಳಿಸಿದ್ದಾರೆ.

ಘಟನೆ ಏನು?

ವಿಕಾರಾಬಾದ್ ಜಿಲ್ಲೆಯ ಕೊಡಂಗಲ್ ಕ್ಷೇತ್ರದ ತುಂಕಿಮೆಟ್ಲ ಗ್ರಾಮದ ಭುವನೇಶ್ವರಿ ಅವರು ಮೂರು ದಿನಗಳ ಹಿಂದೆ ತಾಂಡೂರಿನ ಮಾತಾ- ಶಿಶು ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ನವಜಾತ ಶಿಶು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಕಾರಣ ಹೈದರಾಬಾದ್‌ ನಲ್ಲಿರುವ ನೀಲೋಫರ್ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಈ ವೇಳೆ ಮಾರ್ಗಮಧ್ಯೆ ಮಗುವಿನ ಆರೋಗ್ಯ ಏಕಾಏಕಿ ಹದಗೆಟ್ಟಿತು, ಉಸಿರಾಟದಲ್ಲಿ ತೀವ್ರ ತೊಂದರೆ ಕಾಣಿಸಿಕೊಂಡು, ಮಗು ಪ್ರಾಣಾಪಾಯದ ಸ್ಥಿತಿಗೆ ತಲುಪಿತ್ತು. ಆಗ ಆ್ಯಂಬುಲೆನ್ಸ್‌ನಲ್ಲಿದ್ದ ಶಾಂತ್ ಕುಮಾರ್ ಹಾಗೂ ಆಯೂಬ್ ಪಾಷಾ ಪರಿಸ್ಥಿತಿಯನ್ನು ತಕ್ಷಣ ಅರಿತು ಕಾರ್ಯಪ್ರವೃತ್ತರಾದರು. ಕ್ಷಣವೂ ವಿಳಂಬ ಮಾಡದೆ ಮಗುವಿಗೆ ಸಿಪಿಆರ್ (Cardio Pulmonary Resuscitation) ನೀಡಿದರು. ಮಗುವಿನ ಹೃದಯ ಬಡಿತ ಮತ್ತು ಉಸಿರಾಟವನ್ನು ಪುನಃ ಚೇತರಿಸಲು ಅವರು ನಿರಂತರವಾಗಿ ಪ್ರಯತ್ನಿಸಿದರು.

ಆ್ಯಂಬುಲೆನ್ಸ್ ಸಿಬ್ಬಂದಿ ಕಾರ್ಯಕ್ಕೆ ನೆಟ್ಟಿಗರ ಮೆಚ್ಚುಗೆ

ಅವರ ತ್ವರಿತ ಕ್ರಮ ಫಲಕಾರಿಯಾಗಿದ್ದು, ಕೆಲವೇ ಕ್ಷಣಗಳಲ್ಲಿ ಮಗುವಿನ ಸ್ಥಿತಿ ಸುಧಾರಿಸಿದ್ದು ನಂತರ ಮಗುವನ್ನು ಸುರಕ್ಷಿತವಾಗಿ ಹೈದರಾಬಾದ್‌ನ ನೀಲೋಫರ್ ಆಸ್ಪತ್ರೆಗೆ ಸಾಗಿಸಿ ಹೆಚ್ಚಿನ ಚಿಕಿತ್ಸೆ ನೀಡಲಾಗಿದೆ. ತಮ್ಮ ಕಣ್ಣೆದುರೇ ಜೀವ ಕಳೆದುಕೊಳ್ಳುತ್ತಿದ್ದ ಮಗುವನ್ನು ಉಳಿಸಿದ ಆ್ಯಂಬುಲೆನ್ಸ್ ಸಿಬ್ಬಂದಿಗೆ ಮಗುವಿನ ಪೋಷಕರು ಧನ್ಯವಾದ ಸಲ್ಲಿಸಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಿಬ್ಬಂದಿಯ ಸಮಯಪ್ರಜ್ಞೆ, ಸೇವಾ ಮನೋಭಾವ ಮತ್ತು ವೃತ್ತಿಪರತೆಗೆ ನೆಟ್ಟಿಗರು ಭಾರೀ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us