
ನಟಿ ಆಲಿಯಾ ಭಟ್ (Alia Bhatt) ಅವರ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಅವರು ಅಷ್ಟು ಫಿಟ್ ಆಗಿರಲು ಅವರ ಆಹಾರ ಪದ್ಧತಿಯೇ ಕಾರಣ ಎಂಬುದು ಎಲ್ಲರಿಗೂ ತಿಳಿದಿರುತ್ತದೆ. ಆದರೆ ಅವರು ಯಾವ ರೀತಿ ಆಹಾರಗಳ ಸೇವನೆ ಮಾಡಬೇಕು ಎಂದು ಮಾರ್ಗದರ್ಶನ ನೀಡುವವರು ಪ್ರಸಿದ್ಧ ಪೌಷ್ಟಿಕತಜ್ಞ ಡಾ. ಸಿದ್ಧಾಂತ್ ಭಾರ್ಗವ (Dr.Siddhant Bhargava). ಇವರು ಇತ್ತೀಚೆಗೆ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗುವುದಕ್ಕೆ ಕಾರಣವೇನು ಅದನ್ನು ನಮ್ಮ ಆಹಾರದ ಮೂಲಕ ಯಾವ ರೀತಿ ಕಂಟ್ರೋಲ್ ಮಾಡಬಹುದು ಎಂಬುದರ ಬಗ್ಗೆ ವೀಡಿಯೊ ಪೋಸ್ಟ್ ಮಾಡುವ ಮೂಲಕ ಬೆಳಕು ಚೆಲ್ಲುವ ಪ್ರಯತ್ನ ಮಾಡಿದ್ದಾರೆ. ಮಾತ್ರವಲ್ಲ ಈ ರೀತಿ ಬರುವ ಅಪಾಯಗಳನ್ನು ತಡೆಯಲು, ಮಧುಮೇಹವನ್ನು (diabetes) ನಿಯಂತ್ರಣದಲ್ಲಿಡಲು ನಾಲ್ಕು ಅಗತ್ಯ ಆಹಾರ ಮತ್ತು ಜೀವನಶೈಲಿ ಸಲಹೆಗಳನ್ನು ಹಂಚಿಕೊಂಡಿದ್ದು ಅವರು ತಿಳಿಸಿರುವ ಮಾಹಿತಿಯನ್ನು ನೀವು ಅನುಸರಿಸುವ ಮೂಲಕ ಸಕ್ಕರೆ ಕಾಯಿಲೆ ಎಂಬ ಮಹಾಮಾರಿಯನ್ನು ನಿಯಂತ್ರಿಸಬಹುದಾಗಿದೆ.
ಡಾ. ಸಿದ್ಧಾಂತ್ ಭಾರ್ಗವ ತಿಳಿಸಿರುವ ಮಾಹಿತಿ ಪ್ರಕಾರ, ರಕ್ತದಲ್ಲಿ ಗ್ಲೂಕೋಸ್ ಮಟ್ಟ ಹೆಚ್ಚಾಗುವುದು ಹೃದಯಕ್ಕೆ ಮಾತ್ರ ಹಾನಿ ಮಾಡುವುದಿಲ್ಲ. ಅಂತಿಮವಾಗಿ ಅದು ಬಹು ಅಂಗಾಂಗ ತೊಂದರೆಗಳಿಗೆ ಕಾರಣವಾಗಬಹುದು ಹಾಗಾಗಿ ಆಹಾರ ಸೇವನೆ ಬಗ್ಗೆ ಜಾಗೃತೆ ವಹಿಸಿಬೇಕಾಗುತ್ತದೆ. ಹಾಗಾಗಿ ಸಂಸ್ಕರಿಸಿದ ಧಾನ್ಯಗಳಿಗಿಂತ ರಾಗಿಗಳನ್ನು ಆರಿಸಿ. ರಾಗಿಗಳು ಮಧುಮೇಹ ಸ್ನೇಹಿ ಧಾನ್ಯಗಳಾಗಿವೆ. ಬಿಳಿ ಅಕ್ಕಿ ಅಥವಾ ಗೋಧಿಯಂತಹ ಸಾಮಾನ್ಯ ಧಾನ್ಯಗಳಿಗೆ ಹೋಲಿಸಿದರೆ ರಾಗಿ ಗಮನಾರ್ಹವಾಗಿ ಕಡಿಮೆ ಗ್ಲೈಸೆಮಿಕ್ ಸೂಚ್ಯಂಕ (GI) ಹೊಂದಿರುತ್ತವೆ ಎಂದಿದ್ದಾರೆ. ಕಡಿಮೆ ಜಿಐ ಎಂದರೆ ಈ ಧಾನ್ಯಗಳು ನಿಧಾನವಾಗಿ ಜೀರ್ಣವಾಗುತ್ತವೆ, ಇದರ ಪರಿಣಾಮವಾಗಿ ಹಠಾತ್ ಸ್ಪೈಕ್‌ಗಳ ಬದಲಿಗೆ ರಕ್ತದಲ್ಲಿನ ಸಕ್ಕರೆಯಲ್ಲಿ ಕ್ರಮೇಣ ಏರಿಕೆಯಾಗುತ್ತದೆ. ಅಕ್ಕಿ ಅಥವಾ ಗೋಧಿಗೆ ಬದಲಾಗಿ ರಾಗಿ ಮತ್ತು ಜೋಳದಂತಹ ಧಾನ್ಯಗಳನ್ನು ನಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬಹುದು ಎಂದು ಡಾ. ಭಾರ್ಗವ ಸಲಹೆ ನೀಡಿದ್ದಾರೆ.
ಸಿಹಿ ಸೇವನೆ ಮಾಡುವುದು ಕೆಲವೊಮ್ಮೆ ಅನಿವಾರ್ಯವಾಗುತ್ತದೆ, ಅಂತಹ ಸಮಯದಲ್ಲಿ ಡಾ. ಭಾರ್ಗವ ಹೇಳಿರುವ ಸಲಹೆಯನ್ನು ಪಾಲನೆ ಮಾಡಿ. ಅವರ ಪ್ರಕಾರ, ಸಿಹಿ ತಿನ್ನಬೇಕಾದಾಗ ಊಟ ಪೂರ್ತಿ ಮುಗಿದ ನಂತರವೇ ತಿನ್ನಿ. ಸ್ವಾಭಾವಿಕವಾಗಿ ಹೊಟ್ಟೆ ತುಂಬಿರುವಾಗ ಸಕ್ಕರೆ ತಿನಿಸುಗಳನ್ನು ಅತಿಯಾಗಿ ತಿನ್ನುವ ಉತ್ಸಾಹ ಇರುವುದಿಲ್ಲ, ಇದು ಒಟ್ಟಾರೆ ಸಿಹಿ ತಿನಿಸುಗಳನ್ನು ಸೇವನೆ ಮಾಡುವುದನ್ನು ಕಡಿಮೆ ಮಾಡುತ್ತದೆ. ಈ ರೀತಿ ಮಾಡುವುದರಿಂದ ದೇಹದಲ್ಲಿ ಗ್ಲೈಸೆಮಿಕ್ ನಿಯಂತ್ರಣ ಮಾಡಲು ಸಹಾಯವಾಗುತ್ತದೆ.
ಡಾ. ಭಾರ್ಗವ ಅವರ ಪ್ರಕಾರ, ಮಧುಮೇಹಿಗಳು ಮಾಡುವ ದೊಡ್ಡ ತಪ್ಪುಗಳ ಬಗ್ಗೆ ತಿಳಿಸಿದ್ದು, ಅನ್ನ ಅಥವಾ ಚಪಾತಿ ಮುಂತಾದ ಕಾರ್ಬೋಹೈಡ್ರೇಟ್‌ಗಳಿರುವ ಆಹಾರ ಸೇವನೆ ಮಾಡುತ್ತಾರೆ. ಆದರೆ ಇವುಗಳ ಜೊತೆ ಪ್ರೋಟೀನ್ ಭರಿತ ಆಹಾರಗಳ ಸೇವನೆ ಮಾಡಬೇಕು. ಯಾವಾಗಲೂ ಸಮತೋಲಿತ ಆಹಾರವನ್ನು ಸೇವನೆ ಮಾಡಬೇಕು. ಪ್ರೋಟೀನ್ ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರಗೊಳಿಸುತ್ತದೆ. ಹಾಗಾಗಿ ಆಹಾರದಲ್ಲಿ ಕಾರ್ಬೋಹೈಡ್ರೇಟ್‌ಗಳ ಜೊತೆಗೆ ಮೊಸರು, ಬೇಯಿಸಿದ ಮೊಟ್ಟೆ, ಕೋಳಿ, ಪನೀರ್ ಅಥವಾ ಇತರ ತೆಳ್ಳಗಿನ ಮಾಂಸದಂತಹ ಆಹಾರಗಳನ್ನು ಸೇರಿಸುವುದರಿಂದ ಆಹಾರ ಸಮತೋಲಿತವಾಗಿರುತ್ತದೆ ಜೊತೆಗೆ ಗ್ಲೂಕೋಸ್ ಮಟ್ಟವು ಸ್ಥಿರವಾಗಿರುತ್ತದೆ.
ಡಾ. ಭಾರ್ಗವ ಅವರು ಊಟವಾದ ನಂತರ ಹಸಿವಾದರೆ, ಚಿಪ್ಸ್ ಅಥವಾ ಸಿಹಿತಿಂಡಿ ತಿನ್ನುವ ಬದಲು ಬಾದಾಮಿ, ವಾಲ್ನಟ್ಸ್ ಅಥವಾ ಹುರಿದ ಕಡಲೆಕಾಯಿಗಳಂತಹ ಒಣ ಬೀಜಗಳನ್ನು ಸೇವನೆ ಮಾಡಿ ಎಂದಿದ್ದಾರೆ. ಇವುಗಳಲ್ಲಿ ಆರೋಗ್ಯಕರ ಕೊಬ್ಬುಗಳು, ಪ್ರೋಟೀನ್ಗಳು, ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ, ಇವೆಲ್ಲವೂ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ಹಾಗಾಗಿ ಇದು ಮಧುಮೇಹ ಹೊಂದಿರುವವರಿಗೆ ವಿಶೇಷವಾಗಿ ಪ್ರಯೋಜನಕಾರಿಯಾಗಿದೆ. ಮಾತ್ರವಲ್ಲ ಇವುಗಳಲ್ಲಿ ಕಾರ್ಬೋಹೈಡ್ರೇಟ್ ಕಡಿಮೆ ಇರುವುದರಿಂದ, ರಕ್ತದಲ್ಲಿನ ಸಕ್ಕರೆ ಮಟ್ಟ ಹಠಾತ್ ಏರಿಕೆ ಆಗುವುದನ್ನು ತಪ್ಪಿಸಲು ಒಳ್ಳೆಯ ಆಯ್ಕೆಯಾಗಿದೆ. ಇದಲ್ಲದೆ, ನಿಯಮಿತವಾಗಿ ಇವುಗಳನ್ನು ಸೇವನೆ ಮಾಡುವುದರಿಂದ ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಳವಾಗಿ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ.
ಇದನ್ನೂ ಓದಿ: ಸಕ್ಕರೆ ಕಾಯಿಲೆ ಇದ್ಯಾ? ನೀವು ಈ ತರಕಾರಿಗಳಿಂದ ದೂರವಿದ್ದಷ್ಟೂ ಒಳ್ಳೆಯದು!
ಡಾ. ಭಾರ್ಗವ ಅವರು ತಿಳಿಸಿರುವಂತೆ, ಊಟವಾದ ನಂತರ ನಡೆಯುವುದನ್ನು ಅಭ್ಯಾಸ ಮಾಡಿಕೊಳ್ಳಿ. ಪ್ರತಿನಿತ್ಯ ಊಟದ ನಂತರ ಕನಿಷ್ಠ 15 ನಿಮಿಷಗಳ ಕಾಲ ನಡೆಯಲು ಅವರು ಶಿಫಾರಸು ಮಾಡುತ್ತಾರೆ. ಈ ಸರಳ ಅಭ್ಯಾಸವು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ದೇಹವು ಗ್ಲೂಕೋಸ್ ಅನ್ನು ಹೆಚ್ಚು ಪರಿಣಾಮಕಾರಿಯಾಗಿ ಪ್ರಕ್ರಿಯೆಗೊಳಿಸಲು ಸಹಾಯ ಮಾಡುತ್ತದೆ, ಇದರಿಂದಾಗಿ ರಕ್ತದಲ್ಲಿನ ಸಕ್ಕರೆಯಲ್ಲಿನ ಏರಿಕೆಯನ್ನು ತಡೆಯಬಹುದು. ದೈನಂದಿನ ದಿನಚರಿಯಲ್ಲಿನ ಈ ಸಣ್ಣ ಬದಲಾವಣೆಯು ಸಹ ಕಾಲಾನಂತರದಲ್ಲಿ ಗಮನಾರ್ಹ ಪರಿಣಾಮ ಬೀರುತ್ತದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ