ಚೀನಾದಲ್ಲಿ ಕೊರೊನಾದಂತೇ ಹೊಸ ವೈರಸ್​​ ಪತ್ತೆ; ಎಚ್ಎಂಪಿವಿ ರೋಗಲಕ್ಷಣಗಳೇನು? ಹೇಗೆ ಹರಡುತ್ತೆ ತಿಳಿದುಕೊಳ್ಳಿ

ಐದು ವರ್ಷಗಳ ನಂತರ ಮತ್ತೊಂದು ವೈರಸ್ ಚೀನಾದಲ್ಲಿ ಕಂಡು ಬಂದಿದೆ. ಹ್ಯೂಮನ್ ಮೆಟಾಪ್ನ್ಯುಮೋವೈರಸ್ (ಎಚ್ಎಂಪಿವಿ) (HMPV) ದೇಶದಲ್ಲಿ ಹರಡುತ್ತಿದ್ದು, ಆತಂಕ ಸೃಷ್ಟಿಸಿದೆ. ಇಷ್ಟೆಲ್ಲಾ ಭಯ ಹುಟ್ಟಿಸುತ್ತಿರುವ ಎಚ್ ಎಂಪಿವಿ ವೈರಸ್ ಎಂದರೇನು? ಇದು ಶೀಘ್ರದಲ್ಲೇ ಭಾರತದ ಮೇಲೆ ಪರಿಣಾಮ ಬೀರುತ್ತದೆಯೇ? ಭಾರತದಲ್ಲೂ ಏಕಾಏಕಿಯಾಗಿ ಹರಡುತ್ತದೆಯೇ, ಇಲ್ಲವೇ? ಹೀಗೆ ನೂರಾರು ಪ್ರಶ್ನೆಗಳಿಗೆ ಟೈಮ್ಸ್ ನೌ ಉತ್ತರ ನೀಡಿದೆ. ತಜ್ಞರೊಂದಿಗೆ ಈ ವಿಷಯಗಳನ್ನು ಹಂಚಿಕೊಳ್ಳುವ ಮೂಲಕ ಕೆಲವು ಮಾಹಿತಿಗಳನ್ನು ಸಂಗ್ರಹಿಸಿದೆ.

ಚೀನಾದಲ್ಲಿ ಕೊರೊನಾದಂತೇ ಹೊಸ ವೈರಸ್​​ ಪತ್ತೆ; ಎಚ್ಎಂಪಿವಿ ರೋಗಲಕ್ಷಣಗಳೇನು? ಹೇಗೆ ಹರಡುತ್ತೆ ತಿಳಿದುಕೊಳ್ಳಿ
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on:Jan 03, 2025 | 5:37 PM

ಕೋವಿಡ್ -19 ಸಾಂಕ್ರಾಮಿಕ ರೋಗದ ಭೀತಿ ಇನ್ನೇನು ಕಡಿಮೆಯಾಗುತ್ತಿದೆ ಎನಿಸುವಷ್ಟರಲ್ಲಿ, ಐದು ವರ್ಷಗಳ ನಂತರ ಮತ್ತೊಂದು ವೈರಸ್ ಚೀನಾದಲ್ಲಿ ಕಂಡು ಬಂದಿದೆ. ಹ್ಯೂಮನ್ ಮೆಟಾಪ್ನ್ಯುಮೋವೈರಸ್ (ಎಚ್ಎಂಪಿವಿ) (HMPV) ದೇಶದಲ್ಲಿ ಹರಡುತ್ತಿದ್ದು, ಆತಂಕ ಸೃಷ್ಟಿಸಿದೆ. ಅದರ ಜೊತೆ ಜೊತೆಗೆ ಇನ್ಫ್ಲುಯೆನ್ಸ ಎ ಮತ್ತು ಮೈಕೋಪ್ಲಾಸ್ಮಾ ನ್ಯುಮೋನಿಯಾ ಸೇರಿದಂತೆ ಅನೇಕ ವೈರಸ್ಗಳು ಹೆಚ್ಚುತ್ತಿರುವುದರಿಂದ ಆಸ್ಪತ್ರೆಗಳು ತುಂಬುತ್ತಿರುವುದು ಅಲ್ಲಿನ ಜನರ ಭಯಕ್ಕೆ ಕಾರಣವಾಗಿದೆ. ಏಕಾಏಕಿ ಚೀನಾ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ ಎಂದು ಮೂಲಗಳಿಂದ ತಿಳಿದು ಬರುತ್ತಿದ್ದು ಆದರೆ ಅಧಿಕಾರಿಗಳು ಇದನ್ನು ದೃಢಪಡಿಸಿಲ್ಲ. ಇಷ್ಟೆಲ್ಲಾ ಭಯ ಹುಟ್ಟಿಸುತ್ತಿರುವ ಎಚ್ ಎಂಪಿವಿ ವೈರಸ್ ಎಂದರೇನು? ಇದು ಶೀಘ್ರದಲ್ಲೇ ಭಾರತದ ಮೇಲೆ ಪರಿಣಾಮ ಬೀರುತ್ತದೆಯೇ? ಭಾರತದಲ್ಲೂ ಏಕಾಏಕಿಯಾಗಿ ಹರಡುತ್ತದೆಯೇ, ಇಲ್ಲವೇ? ಹೀಗೆ ನೂರಾರು ಪ್ರಶ್ನೆಗಳಿಗೆ ಟೈಮ್ಸ್ ನೌ ಉತ್ತರ ನೀಡಿದೆ. ತಜ್ಞರೊಂದಿಗೆ ಈ ವಿಷಯಗಳನ್ನು ಹಂಚಿಕೊಳ್ಳುವ ಮೂಲಕ ಕೆಲವು ಮಾಹಿತಿಗಳನ್ನು ಸಂಗ್ರಹಿಸಿದೆ.

ಎಚ್ ಎಂಪಿವಿ ವೈರಸ್ ಬಗ್ಗೆ ನಿಮಗೆಷ್ಟು ಗೊತ್ತು?

ಚೀನಾದ ರೋಗ ನಿಯಂತ್ರಣ ಪ್ರಾಧಿಕಾರವು ಡಿಸೆಂಬರ್ 27 ರಂದು, ಅಪರಿಚಿತ ಮೂಲದ ನ್ಯುಮೋನಿಯಾ ಪ್ರಕರಣಗಳ ಮೇಲೆ ನಾವು ಹೆಚ್ಚು ಗಮನಹರಿಸುತ್ತಿದ್ದೇವೆ ಎಂಬ ಮಾತನ್ನು ಹಂಚಿಕೊಂಡಿತ್ತು. ಸಾಮಾನ್ಯವಾಗಿ ಚಳಿಗಾಲದಲ್ಲಿ ಉಸಿರಾಟಕ್ಕೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಾಗುವ ನಿರೀಕ್ಷೆಯಿರುವದರಿಂದ ಡಿಸೆಂಬರ್ 16 ಮತ್ತು 22 ರ ನಡುವೆ ಉಸಿರಾಟದ ಸೋಂಕುಗಳ ಹೆಚ್ಚಳವನ್ನು ತೋರಿಸುವ ಡೇಟಾವನ್ನು ಕೂಡ ಹಂಚಿಕೊಂಡಿತ್ತು. ಚಳಿಗಾಲ ಮತ್ತು ವಸಂತಕಾಲದಲ್ಲಿ ಚೀನಾದಲ್ಲಿ ವಿವಿಧ ರೀತಿಯ ಉಸಿರಾಟದ ಸೋಂಕುಗಳು ಕಂಡು ಬರುವ ಸಾಧ್ಯತೆಯಿದೆ ಎಂದು ಅಲ್ಲಿನ ಸರ್ಕಾರಿ ಅಧಿಕಾರಿ ಕಾನ್ ಬಿಯಾವೊ ಒಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು. ಜೊತೆಗೆ, ಈ ವರ್ಷ ಒಟ್ಟು ಪ್ರಕರಣಗಳ ಸಂಖ್ಯೆ ಕಳೆದ ವರ್ಷಕ್ಕಿಂತ ಕಡಿಮೆಯಾಗುವ ನಿರೀಕ್ಷೆಯಿದೆ ಎಂದು ಅವರು ಉಲ್ಲೇಖಿಸಿದ್ದರು.

ಉತ್ತರ ಚೀನಾದಲ್ಲಿ ಹರಡಿರುವ ಎಚ್ಎಂಪಿವಿ ವೈರಸ್

ಚೀನಾದ ಆರೋಗ್ಯ ಅಧಿಕಾರಿಗಳು ದೇಶದ ಉತ್ತರ ಭಾಗಗಳಲ್ಲಿ ವೈರಸ್ ಹರಡುತ್ತಿದೆ ಎಂಬುದನ್ನು ದೃಢಪಡಿಸಿದ್ದಾರೆ. ಎಚ್ಎಂಪಿವಿ ಎಂದು ಕರೆಯಲ್ಪಡುವ ಈ ವೈರಸ್ ಎಲ್ಲಾ ವಯಸ್ಸಿವರಲ್ಲಿಯೂ ಕಂಡುಬರಬಹುದು. ಆದರೆ ಮಕ್ಕಳಲ್ಲಿ ಹೆಚ್ಚು ಸಾಮಾನ್ಯವಾಗಿರುತ್ತದೆ. ಹಾಗಾಗಿ ಸಾರ್ವಜನಿಕರು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಾಗಿದೆ. ಅದರಲ್ಲಿಯೂ ಅಲ್ಲಿನ ಪರಿಸ್ಥಿತಿ ಗಂಭೀರವಾಗಿದ್ದು, ಸಾಮಾಜಿಕ ಮಾಧ್ಯಮ ವರದಿಗಳು ಕೂಡ ಇದನ್ನು ಸಾಬೀತುಪಡಿಸಿದೆ.

ಎಚ್ಎಂಪಿವಿ ರೋಗಲಕ್ಷಣಗಳು;

ಮಾಧ್ಯಮ ವರದಿಗಳ ಪ್ರಕಾರ, ಎಚ್ಎಂಪಿವಿ ರೋಗಲಕ್ಷಣಗಳು ಫ್ಲೂಗೆ ಹೋಲುತ್ತವೆ. ಹಾಗಾಗಿ ಕೆಮ್ಮು, ಜ್ವರ, ಉಸಿರಾಟದ ತೊಂದರೆಯಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ. ತೀವ್ರವಾದ ಸಂದರ್ಭಗಳಲ್ಲಿ, ಇದು ಬ್ರಾಂಕೈಟಿಸ್ ಅಥವಾ ನ್ಯುಮೋನಿಯಾಕ್ಕೆ ಕಾರಣವಾಗಬಹುದು. ವೈರಸ್ ಹೆಚ್ಚಾಗಲು 3 ರಿಂದ 6 ದಿನಗಳನ್ನು ತೆಗೆದುಕೊಳ್ಳುತ್ತದೆ, ರೋಗಲಕ್ಷಣಗಳು ತೀವ್ರತೆಯ ಆಧಾರದ ಮೇಲೆ ವಿಭಿನ್ನ ಅವಧಿಯ ವರೆಗೆ ಇರುತ್ತದೆ.

ಇದನ್ನೂ ಓದಿ:  ಚೀನಾದಲ್ಲಿ ಕೊರೊನಾದಂತೇ ಹೊಸ ವೈರಸ್​​ ಪತ್ತೆ; ಮತ್ತೊಮ್ಮೆ ಹೆಲ್ತ್ ಎಮರ್ಜೆನ್ಸಿಯ ಆತಂಕ

ಎಚ್ ಎಂಪಿವಿ ಹೇಗೆ ಹರಡುತ್ತದೆ?

ಎಚ್ಎಂಪಿವಿ ಇತರ ಉಸಿರಾಟದ ವೈರಸ್ಗಳಂತೆ ಹರಡುತ್ತದೆ:

– ಕೆಮ್ಮು ಮತ್ತು ಸೀನುವಿಕೆ

– ಕೈ ಕುಲುಕುವುದು ಅಥವಾ ವ್ಯಕ್ತಿಯ ನಿಕಟ ಸಂಪರ್ಕ

– ಕಲುಷಿತ ಮೇಲ್ಮೈಗಳನ್ನು ಸ್ಪರ್ಶಿಸುವುದು ಅಥವಾ ಮುಖವನ್ನು ಸ್ಪರ್ಶಿಸುವುದು (ಬಾಯಿ, ಮೂಗು ಅಥವಾ ಕಣ್ಣುಗಳು).

ಭಾರತ ಚಿಂತಿಸಬೇಕೇ?

ಪ್ರಸ್ತುತ, ಎಚ್ಎಂಪಿವಿ ಪ್ರಕರಣಗಳು ಚೀನಾದಲ್ಲಿ ಮಾತ್ರ ವರದಿಯಾಗಿವೆ. ಭಾರತ ಅಥವಾ ಇತರ ದೇಶಗಳಲ್ಲಿ ಯಾವುದೇ ಪ್ರಕರಣಗಳು ಪತ್ತೆಯಾಗಿಲ್ಲ. ಗುರುಗ್ರಾಮದ ಸಿಕೆ ಬಿರ್ಲಾ ಆಸ್ಪತ್ರೆಯ ಕ್ರಿಟಿಕಲ್ ಕೇರ್ ಮತ್ತು ಶ್ವಾಸಕೋಶ ಶಾಸ್ತ್ರದ ಮುಖ್ಯಸ್ಥ ಡಾ. ಕುಲದೀಪ್ ಕುಮಾರ್ ಗ್ರೋವರ್ ಹೇಳುವ ಪ್ರಕಾರ, ಚೀನಾದಲ್ಲಿ ಎಚ್ಎಂಪಿವಿ ಪ್ರಕರಣಗಳು ವರದಿಯಾಗಿದ್ದರೂ, ಭಾರತದಲ್ಲಿ ಇಲ್ಲಿಯ ವರೆಗೆ ಯಾವುದೇ ಪ್ರಕರಣಗಳು ಕಂಡು ಬಂದಿಲ್ಲ. ಆದರೆ ನಮ್ಮಲ್ಲಿ ಜನ ದಟ್ಟಣೆ ಇರುವುದರಿಂದ ಜನರು ನಿರ್ಲಕ್ಷ್ಯ ಮಾಡದೆಯೇ, ಪದೇ ಪದೇ ಕೈ ತೊಳೆಯುವುದು, ಜನ ಹೆಚ್ಚಾಗಿರುವ ಪ್ರದೇಶಗಳಲ್ಲಿ ಮಾಸ್ಕ್ಗಳ ಬಳಕೆ ಮತ್ತು ಯಾರ ಜೊತೆಗೆ ಆಗಲಿ ನಿಕಟ ಸಂಪರ್ಕವನ್ನು ತಪ್ಪಿಸುವುದು ಮುಂತಾದ ಕೆಲವು ಮುನ್ನೆಚ್ಚರಿಕೆ, ನೈರ್ಮಲ್ಯ ಅಭ್ಯಾಸಗಳು ಇಂತಹ ಅಪಾಯವನ್ನು ಕಡಿಮೆ ಮಾಡಬಹುದು ಎಂದು ಅವರು ಹೇಳಿದ್ದಾರೆ.

ಎಚ್ ಎಂಪಿವಿ ರೋಗಲಕ್ಷಣಗಳು ಕಂಡು ಬಂದರೆ ಏನು ಮಾಡಬೇಕು?

ಎಚ್ ಎಂಪಿವಿ ಅಥವಾ ನೆಗಡಿಯ ರೋಗಲಕ್ಷಣಗಳನ್ನು ಕಂಡು ಬರುವುದಕ್ಕಿಂತ ಮುಂಚೆಯೇ ಈ ಸರಳ ನೈರ್ಮಲ್ಯ ಅಭ್ಯಾಸಗಳನ್ನು ರೂಢಿಸಿಕೊಳ್ಳಿ. ಇದು ಯಾವುದೇ ರೀತಿಯ ವೈರಸ್ ಹರಡುವುದನ್ನು ತಡೆಯಲು ಸಹಾಯ ಮಾಡುತ್ತದೆ.

– ಬಾಯಿ ಮತ್ತು ಮೂಗನ್ನು ಮುಚ್ಚಿಕೊಳ್ಳಿ: ಸೀನುವಾಗ ಅಥವಾ ಕೆಮ್ಮುವಾಗ ಟಿಶ್ಯೂ ಬಳಸಿ.

– ನಿಮ್ಮ ಕೈಗಳನ್ನು ಆಗಾಗ ತೊಳೆಯಿರಿ: ವೈರೆಸ್ ಹರಡುವ ಅಪಾಯವನ್ನು ಕಡಿಮೆ ಮಾಡಲು ನಿಮ್ಮ ಕೈಗಳನ್ನು ಸಾಬೂನು ಮತ್ತು ನೀರಿನಿಂದ ಕನಿಷ್ಠ 20 ಸೆಕೆಂಡುಗಳ ಕಾಲ ಸ್ವಚ್ಛಗೊಳಿಸಿ.

– ವೈಯಕ್ತಿಕ ವಸ್ತುಗಳನ್ನು ಹಂಚಿಕೊಳ್ಳುವುದನ್ನು ತಪ್ಪಿಸಿ: ಸೋಂಕು ಹರಡುವುದನ್ನು ತಡೆಯಲು ಪಾತ್ರೆ, ಕಪ್ ಅಥವಾ ಇತರ ವಸ್ತುಗಳನ್ನು ಹಂಚಿಕೊಳ್ಳುವುದನ್ನು ತಪ್ಪಿಸಿ.

– ಅನಾರೋಗ್ಯದಿಂದ ಬಳಲುತ್ತಿದ್ದರೆ ಮನೆಯಲ್ಲಿಯೇ ಇರಿ: ವೈರಸ್ ಇತರರಿಗೆ ಹರಡುವುದನ್ನು ತಪ್ಪಿಸಲು ಮನೆಯಲ್ಲಿಯೇ ವಿಶ್ರಾಂತಿ ಪಡೆಯಿರಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 4:03 pm, Fri, 3 January 25