ಬೆಂಗಳೂರು : ಮಕ್ಕಳಲ್ಲಿ ದೃಷ್ಟಿ ದೋಷದ ಸಮಸ್ಯೆ, ಬಿಳಿ ಕೂದಲು, ಪ್ರತೀ ದಿನ ಸುಸ್ತು ಇಂತಹ ಸಮಸ್ಯೆಗಳು ಕಂಡು ಬಂದರೆ ಎಂದಿಗೂ ನಿರ್ಲಕ್ಷ್ಯಿಸದಿರಿ. ಕೋವಿಡ್ ನಂತರದ ದಿನಗಳಿಂದ ಮಕ್ಕಳಲ್ಲಿ ಹೆಚ್ಚಾಗಿ ಅಡೆನಾಯ್ಡ್ ವೈರಸ್ ಹಾಗೂ ಬಿ -12 ಸಮಸ್ಯೆ ಕಂಡು ಬರುತ್ತಿದೆ ಎಂದು ತಿಳಿದುಬಂದಿದೆ. ಈ ಸಮಸ್ಯೆಯ ಕುರಿತು ಪ್ರತಿಕ್ರಿಯಿಸಿದ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯ ಮಕ್ಕಳ ತಜ್ಞೆ ಡಾ.ಧನಲಕ್ಷ್ಮಿ ಕೋವಿಡ್ ನಂತರದಲ್ಲಿ ಮಕ್ಕಳ ಆರೋಗ್ಯ ಮೇಲೆ ಸಾಕಷ್ಟು ಪರಿಣಾಮ ಬೀರಿದೆ. ವಿಟಮಿನ್ ಕೊರತೆಯಿಂದ ಆರೋಗ್ಯ ಸಮಸ್ಯೆಗಳು ಮಕ್ಕಳನ್ನು ಕಾಡುತ್ತಿದೆ ಎಂದು ಹೇಳಿದ್ದಾರೆ.
ಪೌಷ್ಠಿಕಾಂಶ ಬರಿತ ಆಹಾರ ಸೇವನೆ ಇಲ್ಲದೇ B 12 ವಿಟಮಿನ್ ಕೊರತೆ ಕೂಡ ಕಂಡು ಬರುತ್ತಿದೆ. ಬಾಯಿ ಹುಣ್ಣು, ದೃಷ್ಟಿ ಸಮಸ್ಯೆ, ಸುಸ್ತು, ಜ್ವರ, ಕಿರಿಕಿರಿ, ಖಿನ್ನತೆ ವಿಟಮಿನ್ ಕೊರತೆಯ ಮುಖ್ಯ ಲಕ್ಷಣಗಳಾಗಿದೆ. ಹಂದಿಮಾಂಸ, ಕೋಳಿ, ಚಿಪ್ಪುಮೀನು, ಏಡಿ, ಹಾಲು, ಚೀಸ್ ಮತ್ತು ಮೊಸರು, ಮೊಟ್ಟೆ, ಡೈರಿ ಉತ್ಪನ್ನಗಳಲ್ಲಿ ಬಿ-12 ಪೋಷಕಾಂಶ ಸಮೃದ್ಧವಾಗಿದೆ. ಆಹಾರ ಸೇವಿಸಲು ಹಿಂಜರಿಯುವ ಮಕ್ಕಳ ಆರೋಗ್ಯ ಮೇಲೆ ಗಂಭೀರ ಸಮಸ್ಯೆ ಎದುರಾಗಬಹುದು ಎಂದು ಆತಂಕ ಹೊರಹಾಕಿದ್ದಾರೆ.
ಇದನ್ನು ಓದಿ: ಪಶ್ಚಿಮ ಬಂಗಾಳದಲ್ಲಿ ಉಸಿರಾಟಕ್ಕೆ ಸಂಬಂಧಿಸಿದ ಸೋಂಕಿನಿಂದ ಕಳೆದ 24 ಗಂಟೆಗಳಲ್ಲಿ 7 ಮಕ್ಕಳು ಸಾವು
ಮಕ್ಕಳಿಗೆ ಬಿ -12 ಕೊರತೆಯ ಜೊತೆಗೆ ಅಡೆನಾಯ್ಡ್ ವೈರಸ್ ಅಪಾಯ ಶುರುವಾಗಿದ್ದು, ಕಳೆದ ಒಂದು ವಾರದಿಂದ ಮಕ್ಕಳು ಅಡೆನಾಯ್ಡ್ ವೈರಸ್ ಕಾಟಕ್ಕೆ ಆಸ್ಪತ್ರೆಗೆ ದಾಖಲಾಗುವ ಪ್ರಕರಣಗಳನ್ನು ಕಾಣಬಹುದು. ಆಸ್ಪತ್ರೆಯಲ್ಲಿ ತೀವ್ರ ಜ್ವರ ಗಂಟಲು ನೋವಿನಿಂದ ದಾಖಲಾತಿ ಹೆಚ್ಚಾಗುತ್ತಿದ್ದು, ಪೋಷಕರು ಕಂಗಾಲಾಗಿದ್ದಾರೆ. ಬದಲಾದ ಹವಮಾನ ಹಾಗೂ ತೀವ್ರ ಬಿಸಿಲು ಮಕ್ಕಳ ಆರೋಗ್ಯದ ಮೇಲೆ ಸಮಸ್ಯೆ ಬೀರುವ ಸಾಧ್ಯತೆ ಹೆಚ್ಚಿದ್ದು, ವೈದ್ಯರು ಸೂಕ್ತ ಎಚ್ಚರಿಕೆ ವಹಿಸುವಂತೆ ಸಲಹೆ ನೀಡಿದ್ದಾರೆ
ಸಾಮಾನ್ಯವಾಗಿ 1 ವರ್ಷದೊಳಗಿನ ಮಗು ಅಥವಾ 13 , 14 ವಯಸ್ಸಿನ ಮಕ್ಕಳಲ್ಲಿ B 12 ವಿಟಮಿನ್ ಕೊರತೆ ಹೆಚ್ಚಾಗಿ ಕಂಡು ಬರುತ್ತಿದೆ. ಪ್ರಾರಂಭದ ಹಂತದಲ್ಲೇ ಪರೀಕ್ಷೆ ಮಾಡಿಸಿ ಇದನ್ನು ಪತ್ತೆ ಹಚ್ಚಿದರೆ ಚಿಕಿತ್ಸೆ ಅತ್ಯಂತ ಸುಲಭ. ಇನ್ನೂ ಅಡೆನಾಯ್ಡ್ ವೈರಸ್ ಕೂಡಾ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿದ್ದು ತೀವ್ರ ಜ್ವರ ಗಂಟಲು ನೋವು ಮಕ್ಕಳಲ್ಲಿ ಕಂಡು ಬಂದ್ರೆ ಹತ್ತಿರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ.
ವಿನಯಕುಮಾರ್ ಕಾಶಪ್ಪನವರ್, ಟಿವಿ9, ಬೆಂಗಳೂರು
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 7:02 pm, Fri, 3 March 23