ಬೆಂಗಳೂರು: ಕೃತಕ ಬುದ್ಧಿಮತ್ತೆ (ಎಐ) ಬಳಕೆ ಇಂದು ಅನೇಕ ಕ್ಷೇತ್ರಗಳಲ್ಲಿ ಹಬ್ಬಿಕೊಂಡಿದೆ. ಇನ್ನು ಆರೋಗ್ಯ ಕ್ಷೇತ್ರದಲ್ಲೂ ಕೃತಕ ಬುದ್ಧಿಮತ್ತೆಯ ಬಳಕೆಯಾಗುತ್ತಿದ್ದು, ಇದು ರೋಗಿಗಳಿಗೆ ವರದಾನವೆಂದರೂ ತಪ್ಪಿಲ್ಲ. ಉದಾಹರಣೆಗೆ ರೋಗಿಯಲ್ಲಿ ಹೆಚ್ಚಾದ ಮಧುಮೇಹ, ರಕ್ತದ ಒತ್ತಡ ಸಮಸ್ಯೆಯಿಂದ ಪಾರ್ಶ್ವವಾಯು ಕಂಡು ಬರುವ ಸಾಧ್ಯತೆ ಇರುತ್ತದೆ. ಅಂತಹ ಸಂದರ್ಭದಲ್ಲಿ ರೋಗಿಯ ಆರೋಗ್ಯ ಸ್ಥಿತಿಯನ್ನು ಪರೀಕ್ಷಿಸುವ ಮೂಲಕ ಸೂಕ್ತ ಚಿಕಿತ್ಸೆಗೆ ಸಲಹೆ ನೀಡುವ ಕೆಲಸವನ್ನು ಇಂದು ಎಐ ತಂತ್ರಜ್ಞಾನ ಮಾಡುತ್ತಿದೆ.
ಅನೇಕ ಸವಾಲುಗಳಿದ್ದರೂ ಸಹ ರೋಗಿಯ ಆರೋಗ್ಯದ ಸ್ಥಿತಿಗತಿಯನ್ನು ಪರೀಕ್ಷಿಸಿ ಎಚ್ಚರಿಸುವ ಕೆಲಸವನ್ನು ಇಂದು ಎಐ ಮಾಡುತ್ತಿದೆ. ಪಾರ್ಶ್ವವಾಯು ಸಮಸ್ಯೆಗೆ ತುತ್ತಾದ ರೋಗಿಗೆ ಪರೀಕ್ಷೆ ನಡೆಸುವ ಮತ್ತು ಚಿಕಿತ್ಸೆ ನೀಡುವಿನ ಸಮಯವನ್ನು ಕಡಿಮೆಗೊಳಿಸುವಲ್ಲಿ ಮತ್ತು ಬಹುಬೇಗ ಚಿಕಿತ್ಸೆಗೆ ಎಡೆಮಾಡಿಕೊಡುವಲ್ಲಿ ಎಐ ಉತ್ತಮ ಕಾರ್ಯನಿರ್ವಹಿಸುತ್ತಿದೆ. ಎಐ ತಂತ್ರಜ್ಞಾನ ವೈದ್ಯರ ಸ್ಥಾನವನ್ನು ತುಂಬುವುದಿಲ್ಲ ಬದಲಿಗೆ ಸಮಯ ವ್ಯರ್ಥ ಮಾಡುವುದಿಲ್ಲ. ಜೊತೆಗೆ, ಶೀಘ್ರವೇ ರೋಗಿಗೆ ಚಿಕಿತ್ಸೆ ನೀಡುವ ಕೆಲಸ ಮಾಡುತ್ತದೆ ಎಂದು ಬೆಂಗಳೂರಿನ ವಾಸವಿ ಆಸ್ಪತ್ರೆಯ ಹಿರಿಯ ಸಲಹೆಗಾರ ಹಾಗೂ ನ್ಯೂರೋಸರ್ಜನ್ ಡಾ. ಪ್ರಥಮ್ ಬೈಸಾನಿ ಹೇಳಿದ್ದಾರೆ.
ವ್ಯಕ್ತಿಯು ಪಾರ್ಶ್ವವಾಯುಗೆ ಒಳಗಾದಾಗ ಅದನ್ನು ಗೋಲ್ಡನ್ ಅವರ್ ಎಂದು ಕರೆಯಲಾಗುತ್ತದೆ. ಆ ಸಂದರ್ಭದಲ್ಲಿ ರೋಗಿಗೆ ಸೂಕ್ತ ಚಿಕಿತ್ಸೆ ನೀಡುವ ಅಗತ್ಯವಿರುತ್ತದೆ ಮತ್ತು ಈ ಪಾರ್ಶ್ವವಾಯುವಿಗೆ ಯಾರಾದರೂ ತುತ್ತಾದಾಗ ಏನು ಮಾಡಬೇಕು ಎಂಬುದರ ಕುರಿತಾಗಿ ಜನರಿಗೆ ಮಾಹಿತಿ ನೀಡುವ ಅಗತ್ಯವಿದೆ. ಹೀಗಾಗಿ ಗೋಲ್ಡನ್ ಅವರ್ ನಲ್ಲಿ ಪಾರ್ಶ್ವವಾಯುವಿಗೆ ತುತ್ತಾದ ರೋಗಿಗೆ ಬೀರುವ ಪರಿಣಾಮವನ್ನು ಕಡಿಮೆಗೊಳಿಸುವ ಅವಕಾಶವಿರುತ್ತದೆ. ಅಂತಹ ನಿರ್ಣಾಯಕ ಅವಧಿಯನ್ನು ಅರಿಯುವ ಮೂಲಕ ಮತ್ತು ಶೀಘ್ರದಲ್ಲೇ ಕ್ರಮವನ್ನು ತೆಗೆದುಕೊಳ್ಳುವ ಮೂಲಕ ಜೀವವನ್ನು ಉಳಿಸಬಹುದು. ಮನೆಯಲ್ಲಿ ವಯಸ್ಸಾದ ವ್ಯಕ್ತಿಗಳಿದ್ದಲ್ಲಿ ರೋಗಲಕ್ಷಣಗಳು ಕಂಡುಬಂದಾಗಿ ನಿರ್ಲಕ್ಷಿಸದೆ ತಕ್ಷಣವೇ ಅವರನ್ನು ಚಿಕಿತ್ಸೆಗೆ ಒಳಪಡಿಸುವುದು ಅತ್ಯಗತ್ಯ. ಆ ಗೋಲ್ಡನ್ ಅವರ್ ಒಂದು ನಿರ್ಣಾಯಕ ಕ್ಷಣವಾಗಿದ್ದು ಈ ಬಗ್ಗೆ ಜನರು ತಿಳಿದಿರಬೇಕು ಎಂಬುದು ತಜ್ಞರ ಅಭಿಪ್ರಾಯ.
ಇದನ್ನೂ ಓದಿ: ಚಳಿಗಾಲದಲ್ಲಿ ತಣ್ಣೀರಿನ ಸ್ನಾನ ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸಬಹುದು ಹುಷಾರ್!
ತಂತ್ರಜ್ಞಾನ ಅಭಿವೃದ್ಧಿಯ ಹಾದಿಯಲ್ಲಿ ಎಐ ಮಹತ್ವದ ಕಾರ್ಯ ನಿರ್ವಹಿಸುತ್ತಿದ್ದು, ಪಾರ್ಶ್ವವಾಯುವಿಗೆ ಒಳಗಾದ ವ್ಯಕ್ತಿಯ ಸ್ಕ್ಯಾನಿಂಗ್ ಮತ್ತು ಇಮೇಜ್ ರೀಡಿಂಗ್ ಅನ್ನು ಶೀಘ್ರವಾಗಿ ನಿರ್ವಹಿಸುತ್ತದೆ. ಈ ಮೂಲಕ ರೋಗಿಯ ಚಿಕಿತ್ಸಾ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ವೈದ್ಯರಿಗೆ ಅನುವು ಮಾಡಿಕೊಡುತ್ತದೆ. ಪಾರ್ಶ್ವವಾಯು ಚಿಕಿತ್ಸೆ ನೀಡುವಲ್ಲಿ ಎಐ 3 ಹಂತಗಳಲ್ಲಿ ಸಹಾಯ ಮಾಡುತ್ತದೆ. ಮೊದಲನೆಯದಾಗಿ ರೋಗಿಯ ಇಮೇಜಿಂಗ್ಗಳನ್ನು ಕಲೆಹಾಕಿ ಅದನ್ನು ವ್ಯಾಖ್ಯಾನಿಸುತ್ತದೆ. ಏನಾದರೂ ತುರ್ತು ಸಮಸ್ಯೆಗಳಿದ್ದಲ್ಲಿ ಗುರುತಿಸುತ್ತದೆ. ನಂತರ, ಚಿಕಿತ್ಸೆ ಅಗತ್ಯವಿದ್ದಲ್ಲಿ ಶೀಘ್ರವೇ ಕ್ರಮ ತೆಗೆದುಕೊಳ್ಳಲು ವೈದ್ಯರಿಗೆ ಸಹಾಯ ಮಾಡುತ್ತದೆ.
ಈ ಮೂಲಕ ರೋಗಿಯ ಗೋಲ್ಡನ್ ಅವರ್ ಅನ್ನು ಎಐ ಸುಗಮಗೊಳಿಸಿದೆ. ಎಐ ಮಾಹಿತಿ ಅನುಸಾರ ವೈದ್ಯರು ಶೀಘ್ರವೇ ಕ್ರಮ ತೆಗೆದುಕೊಂಡು ರೋಗಿಗೆ ಚಿಕಿತ್ಸೆ ನೀಡಲು ಮುಂದಾಗುತ್ತಾರೆ. ಚಿಕಿತ್ಸಾ ವಿಧಾನವನ್ನು ನೋಡಿದಾಗ ಈ ಪಾರ್ಶ್ವವಾಯುವನ್ನು ಎರಡು ವಿಧಗಳಾಗಿ ವಿಂಗಡಿಸಬಹುದು. ಅವುಗಳೆಂದರೆ ರಕ್ತಸ್ರಾವದಿಂದ ಉಂಟಾಗುವ ಹೆಮರಾಜಿಕ್ ಸ್ಟ್ರೋಕ್ ಮತ್ತು ರಕ್ತದ ಹರಿವಿನಲ್ಲಿ ಅಡಚಣೆ/ ಬ್ಲಾಕೇಜ್ ಆದಾಗ ಉಂಟಾಗುವ ಐಕೆಮಿಕ್ ಸ್ಟ್ರೋಕ್/ ರಕ್ತಕೊರತೆಯ ಪಾರ್ಶ್ವವಾಯು. ಈ ಎರಡೂ ಸಂದರ್ಭಗಳಲ್ಲೂ ಶೀಘ್ರದಲ್ಲಿ ಚಿಕಿತ್ಸೆ ಅಗತ್ಯವಿದೆ. ಅದರಲ್ಲೂ ರಕ್ತಕೊರತೆಯ ಪಾರ್ಶ್ವವಾಯುವಿಗೆ ಹೆಪ್ಪುಗಟ್ಟುವಿಕೆಯನ್ನು ತೆಗೆದುಹಾಕುವುದು ಅಥವಾ ಹೆಪ್ಪುಗಟ್ಟುವಿಕೆಯನ್ನು ಕರಗಿಸುವಂತಹ ಔಷಧಿಗಳನ್ನು ಬಳಕೆ ಮಾಡಲಾಗುತ್ತದೆ. ಈ ರೀತಿಯ ಸಮಸ್ಯೆಗೆ ಒಳಗಾದ ರೋಗಿಯ ಮೊದಲ ಕೆಲವು ಗಂಟೆಗಳನ್ನು ಗೊಲ್ಡನ್ ಅವರ್ ಎಂದೇ ಕರೆಯಲಾಗುತ್ತದೆ ಎಂಬುದು ತಜ್ಞರ ಮಾತು.
ಇದನ್ನೂ ಓದಿ: World Stroke Day 2024: ಮೆದುಳಿನ ಆರೋಗ್ಯ ಕಾಪಾಡಿಕೊಂಡು ಪಾರ್ಶ್ವವಾಯು ತಡೆಗಟ್ಟಲು ಈ ಸಲಹೆಗಳನ್ನು ಅನುಸರಿಸಿ
ಪಾರ್ಶ್ವವಾಯುವಿಗೆ ಸಂಬಂಧಿಸಿದಂತೆ ಬಹುದೊಡ್ಡ ಸವಾಲೆಂದರೆ ರೋಗಿಗಳು ಶೀಘ್ರವೇ ರೋಗಲಕ್ಷಣಗಳನ್ನು ಅರಿತು ವೈದ್ಯರನ್ನು ಸಂಪರ್ಕಿಸದಿರುವುದು. ನಿಗದಿತ ಸಮಯದಲ್ಲಿ ಅರಿತು ವೈದ್ಯರನ್ನು ಸಂಪರ್ಕಿಸಿದರೆ ವೈದ್ಯರನ್ನು ದೂರುವ ಅಗತ್ಯ ಬೀಳುವುದಿಲ್ಲ. ಆದ್ದರಿಂದ ಪಾರ್ಶ್ವವಾಯುವಿನ ರೋಗ ಲಕ್ಷಣಗಳನ್ನು ತಿಳಿದುಕೊಳ್ಳುವುದು ಮುಖ್ಯ. ಪಾರ್ಶ್ವವಾಯು ವಿನ ರೋಗಲಕ್ಷಣಗಳನ್ನು “ಫಾಸ್ಟ್” (ಮುಖದ ಇಳಿಬೀಳುವಿಕೆ, ಭುಜದ ದೌರ್ಬಲ್ಯ, ಮಾತಿನಲ್ಲಿ ತೊದಲುವುದನ್ನು ಕಂಡುಬಂದಲ್ಲಿ ಫೋನ್ ಮೂಲಕ ತುರ್ತು ಸೇವೆಗಳಿಗೆ ಸಂಪರ್ಕಿಸುವುದು) ಎಂಬುದಾಗಿ ಸಂಕ್ಷಿಪ್ತವಾಗಿ ಹೇಳಲಾಗುತ್ತದೆ.
ಎಐ ಸಹಾಯದಿಂದ ಪಾರ್ಶ್ವವಾಯುವಿಗೆ ಚಿಕಿತ್ಸೆ ನೀಡುವಿಕೆಯನ್ನು ನಗರಗಳಲ್ಲಿ ಅಭಿವೃದ್ಧಿ ಮತ್ತು ಆರೋಗ್ಯ ಕ್ಷೇತ್ರದಲ್ಲೂ ಪ್ರಮುಖ ಬೆಳವಣಿಗೆಯನ್ನು ಸೂಚಿಸಲು ನೆರವಾಗುತ್ತದೆ ಎಂದು ವಾಸವಿ ಆಸ್ಪತ್ರೆಯ ಹಿರಿಯ ಸಲಹೆಗಾರ ಹಾಗೂ ನ್ಯೂರೋಸರ್ಜನ್ ಡಾ. ಪ್ರಥಮ್ ಬೈಸಾನಿ ಹೇಳಿದ್ದಾರೆ. ಈ ರೀತಿಯ ಆಧುನಿಕ ತಂತ್ರಜ್ಞಾನಗಳ ಸಹಾಯದ ಜೊತೆಗೆ ತ್ವರಿತವಾಗಿ ಚಿಕಿತ್ಸೆಯನ್ನು ನೀಡುವ ಮೂಲಕ ಪಾರ್ಶ್ವವಾಯುವಿಗೆ ಎದುರಾಗುತ್ತಿರುವ ರೋಗಿಗಳ ಮೇಲಾಗುವ ಪರಿಣಾಮವನ್ನು ಕಡಿಮೆಗೊಳಿಸಬಹುದು. ಅವರ ಜೀವನದ ಗುಣಮಟ್ಟವನ್ನು ಸುಧಾರಿಸಬಹುದು.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ