World Stroke Day 2024: ಮೆದುಳಿನ ಆರೋಗ್ಯ ಕಾಪಾಡಿಕೊಂಡು ಪಾರ್ಶ್ವವಾಯು ತಡೆಗಟ್ಟಲು ಈ ಸಲಹೆಗಳನ್ನು ಅನುಸರಿಸಿ

ವಿಶ್ವ ಪಾರ್ಶ್ವವಾಯು ದಿನ 2024: ಪಾರ್ಶ್ವವಾಯು ಕಂಡುಬರಲು ಕಾರಣಗಳು ಮತ್ತು ತಡೆಗಟ್ಟುವಿಕೆ ಬಗ್ಗೆ ಜಾಗೃತಿ ಮೂಡಿಸಲು ಪ್ರತಿವರ್ಷ ಅಕ್ಟೋಬರ್ 29 ರಂದು ವಿಶ್ವ ಪಾರ್ಶ್ವವಾಯು ದಿನವನ್ನು ಆಚರಿಸಲಾಗುತ್ತದೆ. ವಿಶ್ವದಾದ್ಯಂತ ಪಾರ್ಶ್ವವಾಯುವಿನ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಅದನ್ನು ತಡೆಗಟ್ಟುವ ಕ್ರಮಗಳ ಬಗ್ಗೆ ಜನರಿಗೆ ತಿಳಿಸಲು ವಿಶ್ವ ಪಾರ್ಶ್ವವಾಯು ಸಂಸ್ಥೆ ಈ ದಿನವನ್ನು ಆಚರಣೆಗೆ ತಂದಿತು. ಈ ದಿನವು ಪಾರ್ಶ್ವವಾಯು ಸಂದರ್ಭದಲ್ಲಿ ವೇಗವಾಗಿ ಕಾರ್ಯನಿರ್ವಹಿಸುವ ಮಹತ್ವವನ್ನು ನೆನಪಿಸುತ್ತದೆ ಮತ್ತು ಅಂತವರಿಗೆ ತಕ್ಷಣದ ಸಹಾಯ ಮಾಡುವುದರ ಬಗ್ಗೆ ಒತ್ತಿ ಹೇಳುತ್ತದೆ. ಹಾಗಾದರೆ ಈ ದಿನದ ಉದ್ದೇಶವೇನು? ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡಲು ಯಾವ ರೀತಿಯ ಸಲಹೆಗಳನ್ನು ಅನುಸರಿಸಬೇಕು? ಇಲ್ಲಿದೆ ಮಾಹಿತಿ.

World Stroke Day 2024: ಮೆದುಳಿನ ಆರೋಗ್ಯ ಕಾಪಾಡಿಕೊಂಡು ಪಾರ್ಶ್ವವಾಯು ತಡೆಗಟ್ಟಲು ಈ ಸಲಹೆಗಳನ್ನು ಅನುಸರಿಸಿ
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Oct 29, 2024 | 9:45 AM

ಇತ್ತೀಚಿನ ವರ್ಷಗಳಲ್ಲಿ ಪಾರ್ಶ್ವವಾಯು ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಹಾಗಾಗಿ ಈ ಬಗ್ಗೆ ಸರಿಯಾಗಿ ತಿಳಿದು ಅದನ್ನು ತಡೆಯುವುದು ಬಹಳ ಮುಖ್ಯವಾಗುತ್ತದೆ. ಹಾಗಾಗಿಯೇ ಇವುಗಳು ಕಂಡುಬರಲು ಕಾರಣಗಳು ಮತ್ತು ತಡೆಗಟ್ಟುವಿಕೆ ಬಗ್ಗೆ ಜಾಗೃತಿ ಮೂಡಿಸಲು ಪ್ರತಿವರ್ಷ ಅಕ್ಟೋಬರ್ 29 ರಂದು ವಿಶ್ವ ಪಾರ್ಶ್ವವಾಯು ದಿನವನ್ನು ಆಚರಿಸಲಾಗುತ್ತದೆ. ವಿಶ್ವದಾದ್ಯಂತ ಪಾರ್ಶ್ವವಾಯುವಿನ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಅದನ್ನು ತಡೆಗಟ್ಟುವ ಕ್ರಮಗಳ ಬಗ್ಗೆ ಜನರಿಗೆ ತಿಳಿಸಲು ವಿಶ್ವ ಪಾರ್ಶ್ವವಾಯು ಸಂಸ್ಥೆ ಈ ದಿನವನ್ನು ಆಚರಣೆಗೆ ತಂದಿತು. ಈ ದಿನವು ಪಾರ್ಶ್ವವಾಯು ಸಂದರ್ಭದಲ್ಲಿ ವೇಗವಾಗಿ ಕಾರ್ಯನಿರ್ವಹಿಸುವ ಮಹತ್ವವನ್ನು ನೆನಪಿಸುತ್ತದೆ ಮತ್ತು ಅಂತವರಿಗೆ ತಕ್ಷಣದ ಸಹಾಯ ಮಾಡುವುದರ ಬಗ್ಗೆ ಒತ್ತಿ ಹೇಳುತ್ತದೆ. ಹಾಗಾದರೆ ಈ ದಿನದ ಉದ್ದೇಶವೇನು? ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡಲು ಯಾವ ರೀತಿಯ ಸಲಹೆಗಳನ್ನು ಅನುಸರಿಸಬೇಕು? ಇಲ್ಲಿದೆ ಮಾಹಿತಿ.

ಈ ದಿನದ ಉದ್ದೇಶವೇನು?

ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಳ್ಳುವುದಲ್ಲದೆ ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡುವ ಮೂಲಕ, ವಿಶ್ವ ಪಾರ್ಶ್ವವಾಯು ದಿನವು ಜಾಗತಿಕವಾಗಿ ಪಾರ್ಶ್ವವಾಯು ಹೊರೆಯನ್ನು ಕಡಿಮೆ ಮಾಡುವ ಮತ್ತು ಇದರಿಂದ ಪಾರಾಗಿ ಬದುಕುಳಿದವರ ಜೀವನದ ಗುಣಮಟ್ಟವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಹಾಗಾಗಿ ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡಿ ಅದನ್ನು ಸರಿಯಾದ ರೀತಿಯಲ್ಲಿ ತಡೆಗಟ್ಟುವುದು ಹೇಗೆ ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿದೆ.

ಮೆದುಳಿನ ಆರೋಗ್ಯ ಕಾಪಾಡಿಕೊಂಡು ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡಲು 9 ಸಲಹೆಗಳು;

1. ಆರೋಗ್ಯಕರ ಆಹಾರವನ್ನು ಸೇವನೆ ಮಾಡಿ

ಉತ್ಕರ್ಷಣ ನಿರೋಧಕಗಳು, ಆರೋಗ್ಯಕರ ಕೊಬ್ಬುಗಳು ಮತ್ತು ಫೈಬರ್ ಸಮೃದ್ಧವಾಗಿರುವ ಆಹಾರಗಳಾದ ಸೊಪ್ಪುಗಳು, ಬೆರ್ರಿಗಳು, ಬೀಜಗಳು ಮತ್ತು ಮೀನುಗಳನ್ನು ಸೇವಿಸುವುದು ಹೃದಯರಕ್ತನಾಳದ ಆರೋಗ್ಯವನ್ನು ಕಾಪಾಡುತ್ತದೆ ಮತ್ತು ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡುತ್ತದೆ. ಈ ಆಹಾರಗಳು ಮೆದುಳಿಗೆ ರಕ್ತದ ಹರಿವನ್ನು ಸುಧಾರಿಸಿ, ಮೆದುಳಿನ ಕೋಶಗಳನ್ನು ಪೋಷಿಸುತ್ತವೆ ಮತ್ತು ಕೊಲೆಸ್ಟ್ರಾಲ್ ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

2. ವ್ಯಾಯಾಮ ಮಾಡುವುದನ್ನು ಬಿಡಬೇಡಿ

ವಾಕಿಂಗ್, ಸೈಕ್ಲಿಂಗ್ ಅಥವಾ ಈಜು ಮುಂತಾದ ನಿಯಮಿತ ವ್ಯಾಯಾಮವು ಹೃದಯವನ್ನು ಬಲಪಡಿಸುತ್ತದೆ ಮತ್ತು ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ, ಇದು ಪಾರ್ಶ್ವವಾಯುವಿನ ಅಪಾಯವನ್ನು ಕಡಿಮೆ ಮಾಡುತ್ತದೆ. ವ್ಯಾಯಾಮವು ಮೆದುಳಿನ ಪ್ಲಾಸ್ಟಿಸಿಟಿಯನ್ನು ಉತ್ತೇಜಿಸುತ್ತದೆ, ಮನಸ್ಥಿತಿಯನ್ನು ಸುಧಾರಿಸುತ್ತದೆ ಮತ್ತು ಅರಿವಿನ ಕುಸಿತವಾಗದಂತೆ ತಡೆಯಲು ಸಹಾಯ ಮಾಡುತ್ತದೆ.

3. ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಿ

ಬೊಜ್ಜು ಪಾರ್ಶ್ವವಾಯುವಿಗೆ ಅಪಾಯಕಾರಿ ಅಂಶವಾಗಿದೆ, ಆದ್ದರಿಂದ ಸಮತೋಲಿತ ಆಹಾರ ಮತ್ತು ನಿಯಮಿತ ದೈಹಿಕ ಚಟುವಟಿಕೆಯ ಮೂಲಕ ತೂಕವನ್ನು ಕಾಪಾಡಿಕೊಳ್ಳುವುದರಿಂದ ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡಬಹುದು. ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳುವ ಮೂಲಕ, ರಕ್ತದೊತ್ತಡ, ರಕ್ತದಲ್ಲಿನ ಸಕ್ಕರೆ ಮತ್ತು ಕೊಲೆಸ್ಟ್ರಾಲ್ ಅನ್ನು ಸಹ ಕಡಿಮೆ ಮಾಡಬಹುದು. ಇವೆಲ್ಲವೂ ಪಾರ್ಶ್ವವಾಯು ತಡೆಗಟ್ಟುವಿಕೆಯ ಅಂಶಗಳಾಗಿವೆ.

ಇದನ್ನೂ ಓದಿ: ಆರೋಗ್ಯದಲ್ಲಿ ಸುಧಾರಣೆ ಕಾಣಬೇಕೆಂದರೆ ಈ ರೀತಿ ಮಾಡಿ

4. ಮಾನಸಿಕ ವ್ಯಾಯಾಮದಲ್ಲಿ ತೊಡಗಿಸಿಕೊಳ್ಳಿ

ಓದುವುದು, ಒಗಟುಗಳನ್ನು ಬಿಡಿಸುವುದು, ಹೊಸ ಭಾಷೆಯನ್ನು ಕಲಿಯುವುದು ಅಥವಾ ಸಂಗೀತ ವಾದ್ಯವನ್ನು ನುಡಿಸುವುದು ಮುಂತಾದ ಚಟುವಟಿಕೆಗಳೊಂದಿಗೆ ನಿಯಮಿತವಾಗಿ ನಿಮ್ಮ ಮೆದುಳಿಗೆ ಸವಾಲು ಹಾಕಿ. ಈ ಚಟುವಟಿಕೆಗಳು ನರ ಸಂಪರ್ಕಗಳನ್ನು ಉತ್ತೇಜಿಸುತ್ತವೆ, ಇದು ಮೆದುಳನ್ನು ಸಕ್ರಿಯವಾಗಿಡಲು ಸಹಾಯ ಮಾಡುತ್ತದೆ.

5. ಧೂಮಪಾನವನ್ನು ತ್ಯಜಿಸಿ

ಧೂಮಪಾನವು ರಕ್ತನಾಳಗಳನ್ನು ಹಾನಿಗೊಳಿಸುತ್ತದೆ, ರಕ್ತವನ್ನು ದಪ್ಪಗೊಳಿಸುತ್ತದೆ ಇವೆಲ್ಲವೂ ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸುತ್ತವೆ. ಹಾಗಾಗಿ ಇದನ್ನು ತ್ಯಜಿಸುವುದರಿಂದ ಈ ಅಪಾಯವನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು.

6. ರಕ್ತದೊತ್ತಡವನ್ನು ಮೇಲ್ವಿಚಾರಣೆ ಮಾಡಿ

ಅಧಿಕ ರಕ್ತದೊತ್ತಡ ಪಾರ್ಶ್ವವಾಯುವಿಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ನಿಮ್ಮ ರಕ್ತದೊತ್ತಡವನ್ನು ನಿಯಮಿತವಾಗಿ ಪರೀಕ್ಷಿಸಿ, ಅದನ್ನು ಆರೋಗ್ಯಕರ ವ್ಯಾಪ್ತಿಯಲ್ಲಿರುವಂತೆ ನೋಡಿಕೊಳ್ಳಿ.

7. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಿ

ಮಧುಮೇಹವು ರಕ್ತನಾಳಗಳನ್ನು ಹಾನಿಗೊಳಿಸುತ್ತದೆ ಮತ್ತು ರಕ್ತ ಹೆಪ್ಪುಗಟ್ಟುವಿಕೆಯ ಅಪಾಯವನ್ನು ಹೆಚ್ಚಿಸುತ್ತದೆ, ಇದು ಪಾರ್ಶ್ವವಾಯುವಿಗೆ ಕಾರಣವಾಗುತ್ತದೆ. ಆಹಾರ, ವ್ಯಾಯಾಮ ಮತ್ತು ಔಷಧಿಗಳ ಮೂಲಕ (ಅಗತ್ಯವಿದ್ದರೆ) ಆರೋಗ್ಯಕರ ರಕ್ತದ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳುವುದು ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು.

8. ಒತ್ತಡದ ಮಟ್ಟವನ್ನು ಕಡಿಮೆ ಮಾಡಿ

ದೀರ್ಘಕಾಲದ ಒತ್ತಡ ಮತ್ತು ಹೆಚ್ಚಿನ ಮಟ್ಟದ ಆತಂಕವು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ ಮತ್ತು ಉರಿಯೂತವನ್ನು ಉತ್ತೇಜಿಸುತ್ತದೆ, ಇದು ಪಾರ್ಶ್ವವಾಯು ಅಪಾಯದ ಅಂಶಗಳಾಗಿವೆ. ಒತ್ತಡವನ್ನು ನಿಯಂತ್ರಣದಲ್ಲಿಡಲು ಧ್ಯಾನ, ಉಸಿರಾಟದ ವ್ಯಾಯಾಮಗಳಲ್ಲಿ ತೊಡಗಿಸಿಕೊಳ್ಳಿ.

9. ಒಳ್ಳೆಯ ನಿದ್ರೆ ಮಾಡಿ

ನಿದ್ರೆ ಸರಿಯಾಗಿ ಆಗದಿದ್ದರೆ ಸ್ಲೀಪ್ ಅಪ್ನಿಯಾ ರಕ್ತದೊತ್ತಡ ಮತ್ತು ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸುತ್ತದೆ. ಪ್ರತಿ ರಾತ್ರಿ 7- 9 ಗಂಟೆಗಳ ಗುಣಮಟ್ಟದ ನಿದ್ರೆ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ, ಏಕೆಂದರೆ ಇದು ನಿಮ್ಮ ಮೆದುಳು ಮತ್ತು ದೇಹವನ್ನು ರೀಚಾರ್ಜ್ ಮಾಡಲು ಅನುವು ಮಾಡಿಕೊಡುತ್ತದೆ.

ಮೆದುಳಿನ ಆರೋಗ್ಯಕ್ಕಾಗಿ ಮತ್ತು ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡಲು ಈ ಸಲಹೆಗಳನ್ನು ಅನುಸರಿಸಿ, ಆರೋಗ್ಯವಾಗಿರಿ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ