ಪುದೀನಾ ಸೊಪ್ಪು (Mint Leaves) ಪುರಾತನ ಕಾಲದ ಮೂಲಿಕೆ. ಈ ಸುವಾಸನೆಯುಕ್ತ ಎಲೆಗಳು ಅಡುಗೆಗೂ, ಔಷಧಿಗೂ ಬಳಕೆಯಾಗುತ್ತವೆ. ಪುದೀನಾ ರೈಸ್ ಬಾತ್, ಚಟ್ನಿ, ರಾಯತದೊಂದಿಗೆ ಶರಬತ್ತನ್ನೂ ತಯಾರಿಸಬಹುದಾಗಿದೆ. ಕಡಿಮೆ ಕ್ಯಾಲೋರಿ, ಪ್ರೋಟಿನ್, ಕೊಬ್ಬಿನ ಅಂಶಗಳನ್ನು ಹೊಂದಿದ್ದು, ಅಪಾರ ಪ್ರಮಾಣದಲ್ಲಿ ವಿಟಮಿನ್ ಎ, ಸಿಯನ್ನು ಹೊಂದಿದೆ. ಹಾಗೇ ಚರ್ಮದ ಆರೋಗ್ಯ ಹಾಗೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಬಿ ಕಾಂಪ್ಲೆಕ್ಸ್ ಕೂಡ ಇದರಲ್ಲಿದೆ. ಅಷ್ಟೇ ಅಲ್ಲ, ಕಬ್ಬಿಣ, ಪೋಟ್ಯಾಷಿಯಂ ಮತ್ತು ಮ್ಯಾಂಗನೀಸ್ ಅಂಶಗಳೂ ಇದ್ದು, ಪುದೀನಾ ಸೇವನೆ ಮಾಡುವುದರಿಂದ ದೇಹದಲ್ಲಿ ಹಿಮೋಗ್ಲೋಬಿನ್ ಕಡಿಮೆಯಾಗುವುದನ್ನು ತಪ್ಪಿಸಬಹುದು. ಮಿದುಳಿನ ಕಾರ್ಯಾಚರಣೆಯನ್ನೂ ಚುರುಕುಗೊಳಿಸುತ್ತದೆ.
ಇದರಾಚೆಗೂ ಪುದಿನಾ ಸೊಪ್ಪಿನಿಂದ ಅನೇಕ ಉಪಯೋಗಗಳಿದ್ದು, ಅವು ಯಾವವು ಎಂಬ ಬಗ್ಗೆ ಇಲ್ಲಿದೆ ಮಾಹಿತಿ:
ಜೀರ್ಣಕ್ರಿಯೆಗೆ ಸಹಕಾರಿ
ಪುದೀನಾ (Mint) ಎಲೆಗಳಲ್ಲಿ ಉತ್ಕರ್ಷಣ ನಿರೋಧಕಗಳು (antioxidants), ನೈಸರ್ಗಿಕ ಮೆಂಥಾಲ್ ಮತ್ತು ಫೈಟೊನ್ಯೂಟ್ರಿಯೆಂಟ್ಗಳು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತವೆ. ಅಲ್ಲದೆ ಮಿಂಟ್ನಲ್ಲಿರುವ ತೈಲದ ಅಂಶ ನಂಜುನಿರೋಧಕ ಮತ್ತು ಬ್ಯಾಕ್ಟೀರಿಯಾ ವಿರುದ್ಧ ಹೋರಾಡುವ ಶಕ್ತಿಯನ್ನು ಹೊಂದಿರುತ್ತದೆ. ಇದು ಹೊಟ್ಟೆಯಲ್ಲಿ ಉಂಟಾಗುವ ಕಿರಿಕಿರಿ, ಆಮ್ಲೀಯತೆ, ಗ್ಯಾಸ್ನ್ನು ನಿಯಂತ್ರಿಸುತ್ತದೆ. ಈ ಮೂಲಕ ಜೀರ್ಣಕ್ರಿಯೆ ಸರಾಗವಾಗಿ ಆಗುವಂತೆ ಮಾಡುತ್ತದೆ.
ಅಸ್ತಮಾಕ್ಕೆ ಮದ್ದು
ನಿಯಮಿತವಾಗಿ ಪುದೀನಾ ಸೇವನೆ ಮಾಡುವುದರಿಂದ ಉಸಿರಾಟದ ತೊಂದರೆಯಿಂದ ಮುಕ್ತಿ ಪಡೆಯಬಹುದು. ಎದೆಯಲ್ಲಿ ಕಫ ಕಟ್ಟಿದಾಗ ಪುದೀನಾ ಸೇವನೆ ಮಾಡುವುದರಿಂದ ಉಸಿರಾಟ ಸರಾಗವಾಗುತ್ತದೆ. ಪುದೀನಾದಲ್ಲಿರುವ ಮೆಂಥಾನಲ್ ಶ್ವಾಸಕೋಶ, ಮೂಗಿನಲ್ಲಿ ಕಟ್ಟಿದ ಕಫವನ್ನು ಸಡಿಲಗೊಳಿಸುವ ಸಾಮರ್ಥ್ಯಹೊಂದಿದ್ದು, ಸುಲಭವಾಗಿ ಉಸಿರಾಡಬಹುದು. ಈ ಮೂಲಕ ಅಸ್ತಮಾಕ್ಕೂ ಒಳ್ಳೆಯ ಮದ್ದು ಇದು. ಅಷ್ಟೇ ಅಲ್ಲ ಸಾಮಾನ್ಯ ಶೀತಕ್ಕೂ ಔಷಧಿಯಾಗಿ ಬಳಸಬಹುದು. ಇದರೊಂದಿಗೆ ಪುದೀನಾದ ಮೆಂಥಾಲ್ ತಲೆನೋವು ನಿವಾರಕವಾಗಿಯೂ ಕೆಲಸ ಮಾಡುತ್ತದೆ. ಹಣೆಗೆ ಪುದೀನಾ ಜ್ಯೂಸ್ನ್ನು ಹಚ್ಚಿಕೊಳ್ಳುವುದರಿಂದ ತಲೆನೋವಿನಿಂದ ಶೀಘ್ರವೇ ಮುಕ್ತಿಪಡೆಯಬಹುದು.
ಒತ್ತಡ ಮತ್ತು ಖಿನ್ನತೆಗೂ ಔಷಧ
ಪುದೀನಾ ಕೇವಲ ದೈಹಿಕ ಅನಾರೋಗ್ಯಕ್ಕೆ ಮಾತ್ರ ಔಷಧಿಯಲ್ಲ. ಮಾನಸಿಕ ಖಿನ್ನತೆ, ಒತ್ತಡದಿಂದಲೂ ರಿಲೀಫ್ ಕೊಡುತ್ತದೆ. ಇದರ ಎಲೆಗಳಿಂದ ಹೊಮ್ಮುವ ಆಹ್ಲಾದಕರ ಸುವಾಸನೆ ನಮ್ಮಲ್ಲೊಂದು ಉಲ್ಲಾಸವನ್ನು ಮೂಡಿಸುತ್ತದೆ. ಪುದೀನಾದ ಅಪೊಪ್ಟೊಜೆನಿಕ್ ರಕ್ತದಲ್ಲಿರುವ ಕಾರ್ಟಿಸೋಲ್ ಮಟ್ಟವನ್ನು ನಿಯಂತ್ರಿಸುತ್ತದೆ. ಇದರಿಂದಾಗಿ ನಮ್ಮ ದೇಹ ಒತ್ತಡಕ್ಕೆ ಒಗ್ಗಿಕೊಂಡು, ಸಹಜವಾಗಿ ನಿಭಾಯಿಸುವ ಶಕ್ತಿಯನ್ನು ನೈಸರ್ಗಿಕವಾಗಿ ಪಡೆಯುತ್ತದೆ. ಪುದೀನಾ ಸಾರಭೂತ ತೈಲವನ್ನು ಉಸಿರಾಡುವುದರಿಂದ ರಕ್ತದಲ್ಲಿ ತಕ್ಷಣವೇ ಸೆರೋಟೋಟಿನ್ ಬಿಡುಗಡೆಯಾಗುತ್ತದೆ. ಈ ಸೆರೋಟೋಟಿನ್ ಅಂಶ ಒತ್ತಡ ಮತ್ತು ಖಿನ್ನತೆಯ ಲಕ್ಷಣವನ್ನು ನಿವಾರಿಸುತ್ತದೆ.
ಬಾಯಿಯ ಆರೋಗ್ಯ ಕಾಪಾಡುತ್ತದೆ
ಪುದೀನಾ ಎಲೆಗಳನ್ನು ಅಗಿಯುವುದರಿಂದ ಬಾಯಿ, ಹಲ್ಲುಗಳ ಆರೋಗ್ಯ ಉತ್ತಮವಾಗಿರುತ್ತದೆ. ಇದರಲ್ಲಿನ ತೈಲಾಂಶ ತಾಜಾ ಉಸಿರನ್ನು ನೀಡಿ, ಬಾಯಿಯ ದುರ್ವಾಸನೆ ಹೋಗಲಾಡಿಸುತ್ತದೆ. ಪುದೀನಾ ಸಾರವುಳ್ಳ ಮೌತ್ ವಾಶ್ ಬಳಸುವುದರಿಂದ ಬಾಯಿಯಲ್ಲಿನ ಬ್ಯಾಕ್ಟೀರಿಯಾಗಳು ಸಾಯುತ್ತವೆ. ಇದು ಒಸಡು, ಹಲ್ಲುಗಳು ಆರೋಗ್ಯಕರವಾಗಿರಲು ಸಹಾಯ ಮಾಡುತ್ತದೆ.
ತೂಕ ಇಳಿಸಿಕೊಳ್ಳಲು ಸಹಕಾರಿ
ಇಷ್ಟೆಲ್ಲ ಉಪಯೋಗಗಳನ್ನು ಹೊಂದಿರುವ ಪುದೀನಾ ದೇಹದ ಅತಿಯಾದ ತೂಕ ಇಳಿಸಿಕೊಳ್ಳಲೂ ಸಹಾಯ ಮಾಡುತ್ತದೆ. ಪುದೀನಾದ ಸಾರಭೂತ ತೈಲಗಳು ಜೀರ್ಣಕ್ರಿಯೆಯನ್ನು ಸರಾಗಗೊಳಿಸುವ ಜತೆಗೆ ಆಹಾರದಲ್ಲಿನ ಪೋಷಕಾಂಶಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತವೆ. ಸೇವಿಸಿದ ಆಹಾರದ ಪೋಷಕಾಂಶಗಳನ್ನು ಸಂಯೋಜಿಸಲು ಮತ್ತು ಹೀರಿಕೊಳ್ಳಲು ನಮ್ಮ ದೇಶ ಶಕ್ತವಾದಾಗ ಚಯಾಪಚಯ ಪ್ರಕ್ರಿಯೆಯೂ ಸರಾಗಗೊಳ್ಳುತ್ತದೆ. ಚಯಾಪಚಯ ಕ್ರಿಯೆ ಸರಿಯಾದರೆ ಅತಿಯಾದ ಬೊಜ್ಜು ಕರಗಿ, ದೇಹದ ತೂಕವೂ ಕಡಿಮೆಯಾಗುತ್ತದೆ. ಇನ್ನು ಪುದೀನಾ ನೆನಪಿನ ಶಕ್ತಿ ವರ್ಧಕವೂ ಹೌದು. ಪುದೀನಾವನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಮಿದುಳಿನ ಜಾಗೃತ ಶಕ್ತಿ ಹೆಚ್ಚುತ್ತದೆ. ನೆನಪಿನ ಶಕ್ತಿಯೂ ಸುಧಾರಣೆಯಾಗುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.
ಇದನ್ನೂ ಓದಿ: ಕಿಡ್ನಿ ಆರೋಗ್ಯ ಕಾಪಾಡಿಕೊಳ್ಳಲು ಹಾಗೂ ಮಧುಮೇಹದಿಂದ ದೂರ ಇರಲು ಈ ಆಹಾರ ಪದ್ಧತಿಯೇ ಸಾಕು
‘ಪತಂಜಲಿ’ ಹೇಳಿದ ಕೊರೊನಿಲ್ ಕಟ್ಟುಕಥೆಗೆ ಆರೋಗ್ಯ ಸಚಿವರ ಉತ್ತೇಜನ: ಐಎಂಎ ಖಂಡನೆ