ಮೈಂಡ್ ಮ್ಯಾಟರ್ಸ್ ಶೃಂಗಸಭೆ 2023: ಮಾನಸಿಕ ಆರೋಗ್ಯ ವಿಷಯದ ಕುರಿತು ತಜ್ಞರ ಮಾತುಗಳು

| Updated By: ಗಂಗಾಧರ​ ಬ. ಸಾಬೋಜಿ

Updated on: Dec 10, 2023 | 5:35 PM

ಮೈಂಡ್ ಮ್ಯಾಟರ್ಸ್ ಶೃಂಗಸಭೆ 2023: ಮಾನಸಿಕ ಸ್ವಾಸ್ಥ್ಯದ ಪ್ರಮುಖ ಚರ್ಚೆಗಳಿಗೆ ಹ್ಯಾಪಿಯೆಸ್ಟ್ ಹೆಲ್ತ್ ಚಾಲನೆ ನೀಡಲಾಗಿದ್ದು, ಇದೇ ವೇಳೆ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ತಜ್ಞರೊಂದಿಗೆ ಚರ್ಚಾಗೋಷ್ಠಿಗಳು ನಡೆದವು.

ಮೈಂಡ್ ಮ್ಯಾಟರ್ಸ್ ಶೃಂಗಸಭೆ 2023: ಮಾನಸಿಕ ಆರೋಗ್ಯ ವಿಷಯದ ಕುರಿತು ತಜ್ಞರ ಮಾತುಗಳು
ಮೈಂಡ್ ಮ್ಯಾಟರ್ಸ್ ಶೃಂಗಸಭೆ 2023 ರಲ್ಲಿ ಭಾಗವಹಿಸಿದ್ದ ಗಣ್ಯರು
Follow us on

ಬೆಂಗಳೂರು, (ಡಿಸೆಂಬರ್ 10): ಆರೋಗ್ಯ ಮತ್ತು ಕ್ಷೇಮ ಜ್ಞಾನದ ವೇದಿಕೆ ಹ್ಯಾಪಿಯೆಸ್ಟ್ ಹೆಲ್ತ್ ಬೆಂಗಳೂರಿನ ನಿಮ್ಹಾನ್ಸ್ ಕನ್ವೆನ್ಷನ್ ಸೆಂಟರ್‌ನಲ್ಲಿ ಇಂದು ಮೈಂಡ್ ಮ್ಯಾಟರ್ಸ್ ಶೃಂಗಸಭೆ:2023 (Mind Matters Summit 2023) ಅನ್ನು ಆಯೋಜಿಸಿತ್ತು. ದಿನಪೂರ್ತಿ ನಡೆದ ಈ ಕಾರ್ಯಕ್ರಮದಲ್ಲಿ ಮಾನಸಿಕ ಆರೋಗ್ಯ ತಜ್ಞರು ಮತ್ತು ವೃತ್ತಿಪರರು ಪಾಲ್ಗೊಂಡಿದ್ದರು. ಮಾನಸಿಕ ಆರೋಗ್ಯದ ವಿವಿಧ ಅಂಶಗಳ ಕುರಿತಾಗಿ ಅರ್ಥಪೂರ್ಣ ಚರ್ಚೆಗಳಿಗೆ ಇದು ವೇದಿಕೆಯಾಗಿತ್ತು.

‘ಬದಲಾವಣೆಗಾಗಿ ಮನಸ್ಸುಗಳನ್ನು ಕನೆಕ್ಟ್ ಮಾಡುವುದು’ ಎಂಬ ಥೀಮ್ ಕುರಿತಾಗಿ ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳಲು ಅನೇಕ ಕ್ಷೇತ್ರಗಳ ವಾಗ್ಮಿಗಳು ಈ ಕಾರ್ಯಕ್ರಮದಲ್ಲಿ ಸೇರಿದ್ದರು. ಕರ್ನಾಟಕದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್, ಹ್ಯಾಪಿಯೆಸ್ಟ್ ಹೆಲ್ತ್ ಅಧ್ಯಕ್ಷ ಅಶೋಕ್ ಸೂತಾಮತ್ತು ಹ್ಯಾಪಿಯೆಸ್ಟ್ ಹೆಲ್ತ್ ಚೇರ್‌ಮನ್ ಮತ್ತು CEO ಅನಿಂದ್ಯಾ ಚೌಧರಿ ಅವರು ಶೃಂಗಸಭೆಯನ್ನು ಉದ್ಘಾಟಿಸಿದರು. ಸಚಿವರು SKAN ರಿಸರ್ಚ್ ಟ್ರಸ್ಟ್ ವಾರ್ಷಿಕ ವರದಿಯನ್ನು ಮಂಡಿಸಿ, ಹ್ಯಾಪಿಯೆಸ್ಟ್ ಹೆಲ್ತ್ ನಿಯತಕಾಲಿಕೆಯ ಹೊಸ ಸಂಚಿಕೆಯನ್ನು ಅನಾವರಣಗೊಳಿಸಿದರು. (SKAN ಎಂಬುದು ಅಶೋಕ್ ಸೂತಾ ನೇತೃತ್ವದ ಲಾಭರಹಿತ ವೈದ್ಯಕೀಯ ಸಂಶೋಧನಾ ಟ್ರಸ್ಟ್ ಆಗಿದೆ)

ಇದನ್ನೂ ಓದಿ: ಅವಧಿಪೂರ್ವ ಜನಿಸಿದ ಶಿಶುಗಳ ಮರಣ, ಅಂಗವೈಕಲ್ಯ ತಡೆಗಟ್ಟುವುದು ಹೇಗೆ? ಇಲ್ಲಿದೆ ತಜ್ಞ ವೈದ್ಯರ ಸಲಹೆ

ಈ ದಿನದ ಚರ್ಚೆಗಳು ವಿಭಿನ್ನ ಪರಿಸರದಲ್ಲಿ ಮಾನಸಿಕ ಆರೋಗ್ಯಕ್ಕೆ ಆದ್ಯತೆ ನೀಡುವ ಸೂಕ್ಷ್ಮ ವ್ಯತ್ಯಾಸಗಳು ಮತ್ತು ವಿಶೇಷ ಒಳನೋಟಗಳ ಮೇಲೆ ಪ್ರಾಥಮಿಕವಾಗಿ ಕೇಂದ್ರೀಕೃತವಾಗಿದ್ದವು. ಖಿನ್ನತೆಗೆ ಪರಾನುಭೂತಿಯ ವಿಧಾನಗಳು, ವ್ಯಸನದ ವಿರುದ್ಧ ಹೋರಾಟ ಮತ್ತು ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಇತರೆ ವಿಷಯಗಳ ಜೊತೆಗೆ ನೃತ್ಯವನ್ನು ಚಿಕಿತ್ಸೆಯಾಗಿ ಬಳಸುವುದರ ಮೇಲೆ ಚರ್ಚೆಗಳು ಬೆಳಕು ಚೆಲ್ಲಿದವು.

ಕರ್ನಾಟಕದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರು ಹ್ಯಾಪಿಯೆಸ್ಟ್ ಹೆಲ್ತ್ ಸಂಸ್ಥೆಯ ಪ್ರಗತಿಯ ಕುರಿತು ಮಾತನಾಡಿ, ಯೋಗಕ್ಷೇಮದ ಕಡೆಗೆ ಪರಿವರ್ತನಾತ್ಮಕ ಉಪಕ್ರಮಗಳ ಅಗತ್ಯ ನಮಗಿದೆ. ಆರೋಗ್ಯಕ್ಕೆ ಸಮಗ್ರ ವಿಧಾನವನ್ನು ಪ್ರತಿಬಿಂಬಿಸುವ ಪ್ರಕರಣ ಅಧ್ಯಯನಗಳು, ಸಲಹೆಗಳು ಮತ್ತು ಮಾರ್ಗದರ್ಶನವನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಹ್ಯಾಪಿಯೆಸ್ಟ್ ಹೆಲ್ತ್ ಈ ಕಾರ್ಯವನ್ನು ಬದ್ಧತೆಯಿಂದ ಮಾಡುತ್ತಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಹೆರಿಗೆ ಬಳಿಕ ಮಹಿಳೆಯರಲ್ಲಿ ಹೆಚ್ಚುತ್ತಿದೆ ಶಾಶ್ವತ ಆರೋಗ್ಯ ಸಮಸ್ಯೆ

ಸಂಸ್ಥೆಯು ತನ್ನ ವೇದಿಕೆಯಲ್ಲಿ ಕನ್ನಡ ಭಾಷೆಯಲ್ಲಿ ವ್ಯವಹರಿಸಲು ಬಳಕೆದಾರರಿಗೆ ಅನುವು ಮಾಡಿಕೊಡುತ್ತಿರುವುದು ಗಮನಾರ್ಹ ಸಂಗತಿ. ಇದರಿಂದ ನಮ್ಮ ಸ್ಥಳೀಯ ಸಮುದಾಯಗಳೂ ಇದನ್ನು ಬಳಸುವುದು ಸುಲಭವಾಗುತ್ತದೆ ಮತ್ತು ಅಂತರವನ್ನು ಗಮನಾರ್ಹವಾಗಿ ನಿವಾರಿಸುತ್ತದೆ. ನಿಯತಕಾಲಿಕೆಯ ಹೊಸ ಸಂಚಿಕೆಯು ಆರೋಗ್ಯಕರ ಸಮಾಜದತ್ತ ನಮ್ಮ ಸಾಮೂಹಿಕ ಪ್ರಯಾಣದಲ್ಲಿ ಮತ್ತೊಂದು ಮೈಲಿಗಲ್ಲಾಗಿದೆ. ಭವಿಷ್ಯದ ಸಾಕಷ್ಟು ಸಹಯೋಗಗಳು ಮತ್ತು ನಿರಂತರ ಬೆಳವಣಿಗೆಯಲ್ಲಿ ಜೊತೆಯಾಗಲು ನಾನು ಆಶಿಸುತ್ತೇನೆ ಎಂದರು.

ಹ್ಯಾಪಿಯೆಸ್ಟ್ ಹೆಲ್ತ್ CEO ಮತ್ತು ಚೇರ್‌ಮನ್ ಅನಿಂದ್ಯಾ ಚೌಧರಿ ಮಾತನಾಡಿ, ಹ್ಯಾಪಿಯೆಸ್ಟ್ ಹೆಲ್ತ್ ಸಂಪೂರ್ಣ ಸ್ವಾಸ್ಥ್ಯಕ್ಕೆ ಸದಾ ಪ್ರಾಮುಖ್ಯ ನೀಡುತ್ತಿದೆ. ಮೈಂಡ್ ಮ್ಯಾಟರ್ಸ್ ಶೃಂಗಸಭೆಯಂತಹ ಕಾರ್ಯಕ್ರಮಗಳು ನಮ್ಮ ಸಮುದಾಯಗಳಿಗೆ ಈ ಕ್ಷೇತ್ರದ ಕೆಲವು ಉತ್ತಮ ಮನಸ್ಸುಗಳಿಂದ ಅತ್ಯಾಧುನಿಕ ಒಳನೋಟಗಳು ಮತ್ತು ಕಾರ್ಯಸಾಧ್ಯವಾದ ವಿಧಾನಗಳನ್ನು ನೀಡುವಲ್ಲಿ ಮಹತ್ವದ್ದಾಗಿವೆ.

ನಮ್ಮ ಜೊತೆಗೆ ಇಲ್ಲಿ ಸೇರಿಕೊಂಡ ಎಲ್ಲ ವಾಗ್ಮಿಗಳು ಮತ್ತು ವಿಷಯ ತಜ್ಞರಿಗೆ ನಾವು ಕೃತಜ್ಞರಾಗಿರುತ್ತೇವೆ. ಅವರ ಆಲೋಚನೆಗಳು ಸಂಕೀರ್ಣ ಮತ್ತು ಸವಾಲಿನ ಜಗತ್ತನ್ನು ಮುನ್ನಡೆಸಲು ಸ್ಫೂರ್ತಿ ಮತ್ತು ಸಂಪನ್ಮೂಲಗಳನ್ನು ಅನ್ವೇಷಿಸುವಲ್ಲಿ ಫಲಪ್ರದವಾದ ಚರ್ಚೆಗಳು ಮತ್ತು ಮುಕ್ತ ದೃಷ್ಟಿಕೋನಗಳಿಗೆ ಕಾರಣವಾಗುತ್ತವೆ ಎಂದು ನಾವು ಭಾವಿಸುತ್ತೇವೆ ಎಂದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.