
ಗರ್ಭಾವಸ್ಥೆಯಲ್ಲಿಯೂ ರಕ್ತದೊತ್ತಡವನ್ನು (Blood Pressure) ನಿಯಮಿತವಾಗಿ ಪರೀಕ್ಷಿಸುವುದು ಬಹಳ ಮುಖ್ಯ ಎಂಬುದು ನಿಮಗೆ ತಿಳಿದಿರಬಹುದು. ಆರೋಗ್ಯ ತಜ್ಞರು ಕೂಡ ಇದನ್ನೇ ಹೇಳುತ್ತಾರೆ. ಸಾಮಾನ್ಯವಾಗಿ ಗರ್ಭಧಾರಣೆಯ ಸಮಯದಲ್ಲಿ ಮಹಿಳೆಯ ದೇಹದಲ್ಲಿ ಅನೇಕ ಬದಲಾವಣೆಗಳು ಸಂಭವಿಸುವುದರಿಂದ ಬಿಪಿ ಏರಿಳಿತವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಜೊತೆಗೆ ಹಲವಾರು ಸಂದರ್ಭಗಳಲ್ಲಿ ಹೈ ಬಿಪಿಗೆ ಆರಂಭದಲ್ಲಿ ಸ್ಪಷ್ಟ ಲಕ್ಷಣಗಳು ಕಾಣಿಸದೇ ಇರಬಹುದು. ಆದ್ದರಿಂದ ಕೇವಲ ದೇಹದ ಲಕ್ಷಣಗಳನ್ನು ಆಧರಿಸಿ ಸಮಸ್ಯೆಯನ್ನು ಗುರುತಿಸುವುದು ಕಷ್ಟವಾಗುತ್ತದೆ. ಪ್ರತಿಯೊಂದು ಆಂಟಿನೇಟಲ್ ತಪಾಸಣೆಯಲ್ಲೂ ಬಿಪಿ ಪರೀಕ್ಷೆ ಮಾಡಿಸಿಕೊಳ್ಳುವುದರಿಂದ ತಾಯಿ ಮತ್ತು ಗರ್ಭದಲ್ಲಿರುವ ಮಗುವಿನ ಆರೋಗ್ಯದ ಮೇಲ್ವಿಚಾರಣೆ ಸುಲಭವಾಗುತ್ತದೆ. ಆದರೆ ಯಾಕೆ ಗರ್ಭಾವಸ್ಥೆಯಲ್ಲಿ ಹೈ ಬಿಪಿ ಅಪಾಯಕಾರಿಯಾಗಿರುತ್ತದೆ, ಯಾರು ಈ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಬೇಕು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಸಾಮಾನ್ಯವಾಗಿ ಗರ್ಭಧಾರಣೆಯ ಸಮಯದಲ್ಲಿ ಹೆಚ್ಚಿದ ರಕ್ತದೊತ್ತಡ ಜಸ್ಟೇಷನಲ್ ಹೈಪರ್‌ಟೆನ್ಷನ್ ಅಥವಾ ಪ್ರೀ- ಎಕ್ಲಾಂಪ್ಸಿಯಾ ಎಂಬ ಗಂಭೀರ ಸಮಸ್ಯೆಗಳ ಸೂಚನೆಯಾಗಿರಬಹುದು. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯದಿದ್ದರೆ ಇದು ಮೆದುಳು, ಮೂತ್ರಪಿಂಡ, ಯಕೃತ್ ಮತ್ತು ರಕ್ತ ಗಟ್ಟಿಯಾಗುವ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಇದರ ಪರಿಣಾಮ ಗರ್ಭದಲ್ಲಿರುವ ಮಗುವಿನ ಮೇಲೂ ಬೀಳಬಹುದು. ಮಗುವಿನ ಬೆಳವಣಿಗೆ ನಿಧಾನವಾಗುವುದು, ಜನನ ಸಮಯದಲ್ಲಿ ತೂಕ ಕಡಿಮೆ ಇರುವುದು ಅಥವಾ ಅವಧಿಗೆ ಮುನ್ನ ಹೆರಿಗೆ ಅಗತ್ಯವಾಗುವ ಪರಿಸ್ಥಿತಿ ಉಂಟಾಗಬಹುದು.
ಇದನ್ನೂ ಓದಿ: ಹೈ ಬಿಪಿ ಮತ್ತು ಡಯಾಬಿಟಿಸ್ ಕಿಡ್ನಿಗೆ ಹಾನಿ ಮಾಡುತ್ತಾ? ಈ ಬಗ್ಗೆ ವೈದ್ಯರು ಏನ್ ಹೇಳ್ತಾರೆ ನೋಡಿ
ಹಿಂದಿನಿಂದಲೇ ಹೈ ಬಿಪಿ, ಡಯಾಬಿಟೀಸ್, ಕಿಡ್ನಿ ಸಮಸ್ಯೆ, ಅತಿಯಾದ ತೂಕ ಅಥವಾ ಜೋಡಿ ಗರ್ಭಧಾರಣೆ ಇರುವ ಮಹಿಳೆಯರು ನಿಯಮಿತವಾಗಿ ಬಿಪಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಕುಟುಂಬದಲ್ಲಿ ಹೈ ಬಿಪಿ ಇತಿಹಾಸ ಇದ್ದರೂ ಅಪಾಯ ಹೆಚ್ಚಾಗಬಹುದು. ಇಂತಹ ಮಹಿಳೆಯರಿಗೆ ವೈದ್ಯರು ಹೆಚ್ಚುವರಿ ಬಿಪಿ ಪರೀಕ್ಷೆ, ರಕ್ತ ಮತ್ತು ಮೂತ್ರ ಪರೀಕ್ಷೆಗಳನ್ನು ಸಲಹೆ ನೀಡಬಹುದು. ಇದರಿಂದ ಸಮಸ್ಯೆಯನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಲು ಸಾಧ್ಯವಾಗುತ್ತದೆ.
ಸಾಮಾನ್ಯವಾಗಿ ನಿಯಮಿತ ಬಿಪಿ ತಪಾಸಣೆಯಿಂದ ಗಂಭೀರ ಸಮಸ್ಯೆಗಳನ್ನು ತುರ್ತು ಪರಿಸ್ಥಿತಿಗೆ ತಲುಪುವ ಮುನ್ನವೇ ಗುರುತಿಸಬಹುದು. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಆರಂಭಿಸಿದರೆ ತಾಯಿ ಮತ್ತು ಮಗುವಿನ ಸುರಕ್ಷತೆಯನ್ನು ಹೆಚ್ಚಿಸಬಹುದು. ಇದು ಸರಳ ಮತ್ತು ಕಡಿಮೆ ವೆಚ್ಚದ ಪರೀಕ್ಷೆಯಾಗಿದ್ದರೂ, ಹಲವಾರು ಬಾರಿ ಜೀವ ಉಳಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ