
ಚಳಿಗಾಲ (winter) ಆರಂಭವಾಗುತ್ತಿದ್ದಂತೆಯೇ ಸಾಮಾನ್ಯವಾಗಿ ಕೆಮ್ಮು, ನೆಗಡಿ ಮತ್ತು ಜ್ವರದಂತಹ ಸಮಸ್ಯೆಗಳು ಕಂಡುಬರುತ್ತದೆ. ಮಾತ್ರವಲ್ಲ ಶೀತ ಋತುವು ನಮ್ಮ ರೋಗನಿರೋಧಕ ಶಕ್ತಿಯನ್ನು ಕೂಡ ದುರ್ಬಲಗೊಳಿಸುತ್ತದೆ. ಹಾಗಾಗಿ ಇದನ್ನು ಹೆಚ್ಚಿಸುವುದು ಕೇವಲ ತ್ವರಿತ ಪರಿಹಾರಗಳಿಂದ ಸಾಧ್ಯವಾಗುವುದಿಲ್ಲ. ಇದಕ್ಕೆ ಕೆಲವು ಸ್ಥಿರವಾದ ಅಭ್ಯಾಸಗಳು ಬೇಕಾಗುತ್ತವೆ. ಈ ಚಳಿಗಾಲದಲ್ಲಿ ನಿಮ್ಮ ದೇಹವನ್ನು ರೋಗಗಳಿಂದ ರಕ್ಷಿಸಿಕೊಳ್ಳಲು ಮತ್ತು ರೋಗನಿರೋಧಕ ಶಕ್ತಿಯನ್ನು (immunity) ಹೆಚ್ಚಿಸಿಕೊಳ್ಳಲು ಸಹಾಯ ಮಾಡುವ ಕೆಲವು ಪ್ರಮುಖ, ಸರಳ ಸಲಹೆಗಳು ಇಲ್ಲಿವೆ. ಇವುಗಳನ್ನು ತಪ್ಪದೆ ಪಾಲಿಸುವ ಮೂಲಕ ಅನಾರೋಗ್ಯದಿಂದ ದೂರವಿರಬಹುದು. ಹಾಗಾದರೆ ಏನು ಮಾಡಬೇಕು, ಯಾವ ರೀತಿಯ ಬದಲಾವಣೆಗಳು ನಮ್ಮ ಆರೋಗ್ಯ ಕಾಪಾಡುತ್ತದೆ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಸಾಮಾನ್ಯವಾಗಿ ಆಹಾರ ಪದ್ಧತಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು. ಕಿತ್ತಳೆ, ನೆಲ್ಲಿಕಾಯಿ ಮತ್ತು ದಾಳಿಂಬೆಯಂತಹ ವಿಟಮಿನ್ ಸಿ ಸಮೃದ್ಧವಾಗಿರುವ ಕಾಲೋಚಿತ ಹಣ್ಣುಗಳನ್ನು ಸೇವಿಸಬೇಕು. ಏಕೆಂದರೆ ಇವುಗಳಲ್ಲಿರುವ ಉತ್ಕರ್ಷಣ ನಿರೋಧಕಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಅದೇ ರೀತಿ, ನೀವು ನಿಯಮಿತವಾಗಿ ಸತುವು ಅಧಿಕವಾಗಿರುವ ದ್ವಿದಳ ಧಾನ್ಯಗಳು ಮತ್ತು ಬೀಜಗಳನ್ನು ಸೇವಿಸಬೇಕು, ಇದು ರೋಗನಿರೋಧಕ ಶಕ್ತಿಯನ್ನು ಸಕ್ರಿಯಗೊಳಿಸಲು ಸಹಾಯ ಮಾಡುತ್ತದೆ.
ಚಳಿಗಾಲದಲ್ಲಿ ದೇಹವನ್ನು ಹೈಡ್ರೇಟ್ ಆಗಿಡುವುದು ಬಹಳ ಮುಖ್ಯ. ಚಹಾ ಮತ್ತು ಕಾಫಿಯಂತಹ ಪಾನೀಯಗಳು ದೇಹವನ್ನು ನಿರ್ಜಲೀಕರಣಗೊಳಿಸುತ್ತವೆ. ಇದರ ಬದಲಾಗಿ, ನೀವು ನಿಂಬೆ ಮತ್ತು ಜೇನುತುಪ್ಪದೊಂದಿಗೆ ಬೆಚ್ಚಗಿನ ನೀರು ಅಥವಾ ಗಿಡಮೂಲಿಕೆ ಪಾನೀಯಗಳನ್ನು ಕುಡಿಯಬಹುದು. ಇದು ಆರೋಗ್ಯಕ್ಕೆ ಬಹಳ ಒಳ್ಳೆಯದು. ಅದಲ್ಲದೆ ದೇಹವು ಸಾಕಷ್ಟು ಹೈಡ್ರೇಟ್ ಆಗಿದ್ದಾಗ ಮಾತ್ರ ಲೋಳೆಯ ಪೊರೆಗಳು ತೇವಾಂಶದಿಂದ ಕೂಡಿರುತ್ತವೆ. ಇದರಿಂದ ವೈರಸ್‌ಗಳು ದೇಹವನ್ನು ಪ್ರವೇಶಿಸಲು ಕಷ್ಟವಾಗುತ್ತದೆ.
ಇದನ್ನೂ ಓದಿ: ಚಳಿಗಾಲದ ಆರೋಗ್ಯ ಸೂತ್ರಗಳು; ದೇಹ, ಮನಸ್ಸಿಗೆ ಅಗತ್ಯ ಆರೈಕೆಯ ಮಾರ್ಗದರ್ಶಿ
ವೇಗದ ನಡಿಗೆ ಅಥವಾ ಯೋಗದಂತಹ ದೈನಂದಿನ ವ್ಯಾಯಾಮವು ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ, ಇದು ರೋಗನಿರೋಧಕ ಕೋಶಗಳ ಕಾರ್ಯನಿರ್ವಹಣೆಗೆ ಸಹಾಯ ಮಾಡುತ್ತದೆ. ಅದೇ ರೀತಿ, ಪ್ರತಿದಿನ 7 ರಿಂದ 8 ಗಂಟೆಗಳ ಕಾಲ ಒಳ್ಳೆಯ ನಿದ್ರೆ ಮಾಡುವುದು ಸಹ ಬಹಳ ಮುಖ್ಯ. ಏಕೆಂದರೆ ದೇಹವು ಸಾಕಷ್ಟು ವಿಶ್ರಾಂತಿ ಪಡೆದಾಗ ಮಾತ್ರ ರೋಗನಿರೋಧಕ ವ್ಯವಸ್ಥೆಯು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತದೆ.
ಆರೋಗ್ಯ ಕಾಪಾಡಿಕೊಳ್ಳಲು ಲಸಿಕೆ ಹಾಕಿಸಿಕೊಳ್ಳುವುದು ಬಹಳ ಮುಖ್ಯ. ದೇಹವನ್ನು ರಕ್ಷಿಸಿಕೊಳ್ಳಲು ಇದೊಂದು ಪ್ರಮುಖ ಹೆಜ್ಜೆಯಾಗಿದೆ. ಜ್ವರ ಮತ್ತು ನ್ಯುಮೋನಿಯಾ ವಿರುದ್ಧ ಲಸಿಕೆಗಳನ್ನು ಪಡೆಯುವುದು ಬಹಳ ಮುಖ್ಯ. ಹೆಚ್ಚುವರಿಯಾಗಿ, ಜನದಟ್ಟಣೆ ಇರುವ ಸ್ಥಳಗಳಿಗೆ, ವಾಯುಮಾಲಿನ್ಯ ಇರುವ ಪ್ರದೇಶಗಳಿಗೆ ಹೋಗುವುದನ್ನು ಆದಷ್ಟು ತಪ್ಪಿಸಬೇಕು. ಮಾತ್ರವಲ್ಲ, ಆಗಾಗ ಸೋಪಿನಿಂದ ಕೈ ತೊಳೆಯುವ ಮೂಲಕ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು ಸಹ ನಿರ್ಣಾಯಕವಾಗಿದೆ. ಮಧುಮೇಹ, ಅಧಿಕ ರಕ್ತದೊತ್ತಡ ಅಥವಾ ಉಸಿರಾಟದ ಕಾಯಿಲೆ ಮುಂತಾದ ದೀರ್ಘಕಾಲದ ಪರಿಸ್ಥಿತಿಗಳಿಂದ ಬಳಲುತ್ತಿರುವವರು ನಿಯಮಿತವಾಗಿ ಆರೋಗ್ಯ ತಪಾಸಣೆಗೆ ಒಳಗಾಗಬೇಕು. ಚಳಿಗಾಲದಲ್ಲಿ, ಸರಿಯಾಗಿ ಆಹಾರ ಸೇವನೆಯ ಜೊತೆಗೆ ಸಾಕಷ್ಟು ವಿಶ್ರಾಂತಿ ಪಡೆಯಲು ಮರೆಯಬೇಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ