ಮಗುವಿಗೆ ಜೇನುತುಪ್ಪ ಏಕೆ ಕೊಡಬಾರದು? ಬೊಟುಲಿಸಂ ರೋಗ ಎಷ್ಟು ಅಪಾಯಕಾರಿ ಗೊತ್ತಾ?

|

Updated on: Sep 30, 2023 | 6:45 PM

Botulism in Babies: 1 ವರ್ಷದೊಳಗಿನ ಮಕ್ಕಳಿಗೆ ಜೇನುತುಪ್ಪ ನೀಡುವುದರಿಂದ ಬೊಟುಲಿಸಂ ಎಂಬ ಬಹಳ ಅಪರೂಪದ, ಆದರೆ ತುಂಬಾ ಗಂಭೀರವಾದ ಕಾಯಿಲೆ ಬರುವ ಸಾಧ್ಯತೆ ಇರುತ್ತದೆ. ಹಾಗಾದರೆ, ಏನಿದು ಬೊಟುಲಿಸಂ ಕಾಯಿಲೆ? ಏನಿದರ ಲಕ್ಷಣ? ಇದನ್ನು ನಿಯಂತ್ರಿಸುವುದು ಹೇಗೆ? ಎಂಬ ವಿವರ ಇಲ್ಲಿದೆ.

ಮಗುವಿಗೆ ಜೇನುತುಪ್ಪ ಏಕೆ ಕೊಡಬಾರದು? ಬೊಟುಲಿಸಂ ರೋಗ ಎಷ್ಟು ಅಪಾಯಕಾರಿ ಗೊತ್ತಾ?
ಸಾಂದರ್ಭಿಕ ಚಿತ್ರ
Image Credit source: iStock
Follow us on

ಮಗುವಿಗೆ ಅನ್ನ ಪ್ರಾಶನದ ವೇಳೆ ಮಗನ ಬಾಯಿಗೆ ಜೇನುತುಪ್ಪ ಹಾಕಲು ಬಾಲಿವುಡ್ ನಟಿ ಸೋನಂ ಕಪೂರ್ ಒಪ್ಪಿರಲಿಲ್ಲ. ಈ ಘಟನೆ ಭಾರೀ ಚರ್ಚೆಗೆ ಕಾರಣವಾಗಿತ್ತು. ಹಲವರು ಸೋನಂ ಕಪೂರ್ ವರ್ತನೆಯನ್ನು ಟೀಕಿಸಿ, ಸಂಸ್ಕೃತಿಯೇ ಗೊತ್ತಿಲ್ಲ ಎಂದಿದ್ದರು. ಆದರೆ, ಮಕ್ಕಳ ತಜ್ಞರು ಸೋನಂ ಕಪೂರ್ ಮಾಡಿದ್ದು ಸರಿಯಾಗಿಯೇ ಇದೆ ಎಂದಿದ್ದಾರೆ. 1 ವರ್ಷದೊಳಗಿನ ಮಕ್ಕಳಿಗೆ ಜೇನುತುಪ್ಪ ನೀಡುವುದರಿಂದ ಬೊಟುಲಿಸಮ್ ಎಂಬ ಬಹಳ ಅಪರೂಪದ, ಆದರೆ ತುಂಬಾ ಗಂಭೀರವಾದ ಕಾಯಿಲೆ ಬರುವ ಸಾಧ್ಯತೆ ಇರುತ್ತದೆ. ಹೀಗಾಗಿ, ಮಗುವಿಗೆ ಜೇನುತುಪ್ಪ ನೀಡುವುದು ಒಳ್ಳೆಯದಲ್ಲ. ಹಾಗಾದರೆ, ಏನಿದು ಬೊಟುಲಿಸಂ ಕಾಯಿಲೆ? ಏನಿದರ ಲಕ್ಷಣ? ಇದನ್ನು ನಿಯಂತ್ರಿಸುವುದು ಹೇಗೆ? ಎಂಬ ವಿವರ ಇಲ್ಲಿದೆ.

ಬೊಟುಲಿಸಂ ಎಂಬ ರೋಗ ಆಹಾರ, ಕಲುಷಿತ ಮಣ್ಣಿನ ಸಂಪರ್ಕ ಅಥವಾ ತೆರೆದ ಗಾಯದ ಮೂಲಕ ಹರಡುತ್ತದೆ. ಆರಂಭಿಕವಾಗಿ ಚಿಕಿತ್ಸೆ ನೀಡದಿದ್ದರೆ ಬೊಟುಲಿಸಮ್ ಪಾರ್ಶ್ವವಾಯು, ಉಸಿರಾಟದ ತೊಂದರೆ ಮತ್ತು ಸಾವಿಗೂ ಕಾರಣವಾಗಬಹುದು. ಜೇನುತುಪ್ಪ ಮತ್ತು ಕಾರ್ನ್ ಸಿರಪ್​ನಲ್ಲಿ ಕ್ಲೋಸ್ಟ್ರಿಡಿಯಮ್ ಎಂಬ ವಿಷಕಾರಿ ಬ್ಯಾಕ್ಟೀರಿಯಾ ಇರುತ್ತದೆ. ಇದು ಬೊಟುಲಿಸಂಗೆ ಕಾರಣವಾಗಬಹುದು.

ಬೊಟುಲಿಸಂ​ನಲ್ಲಿ 3 ಮುಖ್ಯ ವಿಧಗಳಿವೆ:

– ಶಿಶು ಬೊಟುಲಿಸಮ್

– ಆಹಾರದಿಂದ ಹರಡುವ ಬೊಟುಲಿಸಮ್

– ಗಾಯದ ಬೊಟುಲಿಸಮ್

ಬೊಟುಲಿಸಮ್ ವಿಷವು ಕ್ಲೋಸ್ಟ್ರಿಡಿಯಮ್ ಬೊಟುಲಿನಮ್ ಎಂಬ ಬ್ಯಾಕ್ಟೀರಿಯಾದಿಂದ ಉತ್ಪತ್ತಿಯಾಗುವ ಟಾಕ್ಸಿನ್‌ನಿಂದ ಉಂಟಾಗುತ್ತದೆ. ಈ ಬ್ಯಾಕ್ಟೀರಿಯಾಗಳು ಆಮ್ಲಜನಕವಿಲ್ಲದ ಸಂದರ್ಭದಲ್ಲಿ ಮಾತ್ರ ಬೆಳೆಯುತ್ತವೆ. ಮನೆಯಲ್ಲಿ ಸಿದ್ಧಪಡಿಸಿದ ಆಹಾರಗಳಲ್ಲಿ ಕೆಲವು ಆಹಾರಗಳು ಈ ಬ್ಯಾಕ್ಟೀರಿಯಾಗಳ ಸಂತಾನೋತ್ಪತ್ತಿಯನ್ನು ಹೆಚ್ಚಿಸುತ್ತವೆ.

ಇದನ್ನೂ ಓದಿ: ಸಂಸ್ಕೃತಿಯೇ ಗೊತ್ತಿಲ್ಲ!; ಮಗುವಿಗೆ ಜೇನುತುಪ್ಪ ಕೊಡಲ್ಲ ಎಂದಿದ್ದಕ್ಕೆ ಟ್ರೋಲ್ ಆದ ಸೋನಂ ಕಪೂರ್

ಅಮೆರಿಕಾದಲ್ಲಿ ಪ್ರತಿ ವರ್ಷ ಸುಮಾರು 145 ಬೊಟುಲಿಸಮ್ ರೋಗದ ಪ್ರಕರಣಗಳು ಪತ್ತೆಯಾಗುತ್ತಿವೆ. ಬೊಟುಲಿಸಮ್ ವಿಷದಿಂದ ಬಳಲುತ್ತಿರುವವರಲ್ಲಿ ಸುಮಾರು ಶೇ. 3ರಿಂದ 5ರಷ್ಟು ಜನರು ಸಾಯುತ್ತಾರೆ.

ಬೊಟುಲಿಸಂ ರೋಗದ ಲಕ್ಷಣಗಳು ಯಾವುವು?:

ಈ ಬ್ಯಾಕ್ಟೀರಿಯಾದ ಸೋಂಕು ತಗುಲಿದ 6 ಗಂಟೆಗಳಿಂದ 10 ದಿನಗಳವರೆಗೆ ಬೊಟುಲಿಸಮ್‌ ರೋಗದ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಕಲುಷಿತ ಆಹಾರವನ್ನು ಸೇವಿಸಿದ 12ರಿಂದ 36 ಗಂಟೆಗಳ ನಡುವೆ ಶಿಶು ಬೊಟುಲಿಸಂ ಮತ್ತು ಆಹಾರದ ಬೊಟುಲಿಸಂನ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

ಶಿಶು ಬೊಟುಲಿಸಮ್​ನ ಲಕ್ಷಣಗಳೇನು?:

1 ವರ್ಷದೊಳಗಿನ ಮಕ್ಕಳಲ್ಲಿ ಈ ಬೊಟುಲಿಸಂ ಕಾಯಿಲೆ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು. ಆಗ ಮಕ್ಕಳಲ್ಲಿ ಜೀರ್ಣಾಂಗ ವ್ಯವಸ್ಥೆ ಸರಿಯಾಗಿ ಬೆಳೆದಿರುವುದಿಲ್ಲ. ಹೀಗಾಗಿ, ಈ ರೋಗ ಸುಲಭವಾಗಿ ಹರಡುತ್ತದೆ. ಮಲಬದ್ಧತೆ, ಆಹಾರ ಸೇವಿಸದಿರುವುದು, ಆಯಾಸ, ಸಿಡುಕುತನ, ಜೊಲ್ಲು ಸುರಿಸುವುದು, ಕಣ್ಣುರೆಪ್ಪೆಗಳು ಜೋತು ಬೀಳುವುದು, ಅಳಲು ಸಾಧ್ಯವಾಗದಿರುವುದು, ಸ್ನಾಯು ದೌರ್ಬಲ್ಯದಿಂದಾಗಿ ತಲೆ ನಿಯಂತ್ರಣ ಮಾಡಲು ಕಷ್ಟವಾಗುವುದು, ಪಾರ್ಶ್ವವಾಯು ಈ ಶಿಶು ಬೊಟುಲಿಸಂ ರೋಗದ ಲಕ್ಷಣಗಳಾಗಿವೆ.

ಆಹಾರದಿಂದ ಹರಡುವ ಅಥವಾ ಗಾಯದ ಬೊಟುಲಿಸಂ ಲಕ್ಷಣಗಳು:

ನುಂಗಲು ಅಥವಾ ಮಾತನಾಡಲು ತೊಂದರೆಯಾಗುವುದು, ಮುಖದ ಎರಡೂ ಬದಿಗಳಲ್ಲಿ ಊದಿಕೊಳ್ಳುವುದು, ಮಂದ ದೃಷ್ಟಿ, ಇಳಿಬೀಳುವ ಕಣ್ಣುರೆಪ್ಪೆಗಳು, ಉಸಿರಾಟದ ತೊಂದರೆ, ವಾಕರಿಕೆ, ವಾಂತಿ ಮತ್ತು ಕಿಬ್ಬೊಟ್ಟೆಯ ಸೆಳೆತ, ಪಾರ್ಶ್ವವಾಯು ಈ ರೋಗದ ವಿಧದ ಲಕ್ಷಣಗಳಾಗಿವೆ.

ಬೊಟುಲಿಸಂಗೆ ಕಾರಣಗಳೇನು?:

ಶೇ. 65ರಷ್ಟು ಬೊಟುಲಿಸಮ್ ಪ್ರಕರಣಗಳು ಶಿಶುಗಳು ಅಥವಾ 1 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಕಂಡುಬರುತ್ತವೆ ಎಂದು CDCT ಟ್ರಸ್ಟೆಡ್ ವರದಿ ಮಾಡಿದೆ. ಶಿಶುಗಳ ಬೊಟುಲಿಸಮ್ ಸಾಮಾನ್ಯವಾಗಿ ಕಲುಷಿತ ಮಣ್ಣಿಗೆ ಒಡ್ಡಿಕೊಳ್ಳುವುದರಿಂದ ಬರುತ್ತದೆ. ಅಥವಾ ಬೊಟುಲಿಸಮ್ ಬೀಜಕಗಳನ್ನು ಹೊಂದಿರುವ ಆಹಾರವನ್ನು ತಿನ್ನುವುದರಿಂದ ಬರುತ್ತದೆ. ಜೇನುತುಪ್ಪ ಮತ್ತು ಕಾರ್ನ್ ಸಿರಪ್ ಈ ಬೊಟುಲಿಸಂ ಬ್ಯಾಕ್ಟೀರಿಯಾವನ್ನು ಹರಡುವ 2 ಮುಖ್ಯ ಆಹಾರಗಳಾಗಿವೆ. ಹೀಗಾಗಿ, ಮಕ್ಕಳಿಗೆ ಜೇನುತುಪ್ಪ ಮತ್ತು ಕಾರ್ನ್ ಸಿರಪ್ ನೀಡಬಾರದು ಎಂದು ವೈದ್ಯರು ಹೇಳುತ್ತಾರೆ. ಈ ಬ್ಯಾಕ್ಟೀರಿಯಾಗಳು ಶಿಶುಗಳ ಕರುಳಿನೊಳಗೆ ಬೆಳೆಯಬಹುದು. ಬೊಟುಲಿಸಮ್ ಟಾಕ್ಸಿನ್ ಅನ್ನು ಬಿಡುಗಡೆ ಮಾಡುತ್ತವೆ. ವಯಸ್ಕರಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗಿರುವುದರಿಂದ ಅವರ ಕರುಳಿನಲ್ಲಿ ಈ ಬ್ಯಾಕ್ಟೀರಿಯಾಗಳು ಬೆಳೆಯುವ ಸಾಧ್ಯತೆ ಕಡಿಮೆ.

ಇದನ್ನೂ ಓದಿ: Breastfeeding: ಮಗುವಿಗೆ 6 ತಿಂಗಳ ನಂತರ ಎದೆಹಾಲು ಕುಡಿಸುವುದನ್ನು ನಿಲ್ಲಿಸಬೇಡಿ; ಇಲ್ಲಿದೆ ಕಾರಣ

ಸಿಡಿಸಿಟಿ ಮೂಲಗಳ ಪ್ರಕಾರ, ಸುಮಾರು ಶೇ. 15ರಷ್ಟು ಬೊಟುಲಿಸಮ್ ಪ್ರಕರಣಗಳು ಆಹಾರದಿಂದ ಹರಡುತ್ತವೆ. ಇವುಗಳು ಮನೆಯಲ್ಲಿ ತಯಾರಿಸಿದ ಪೂರ್ವಸಿದ್ಧ ಆಹಾರಗಳಾಗಿರಬಹುದು ಅಥವಾ ಸರಿಯಾದ ಸಂಸ್ಕರಣೆ ಮಾಡದ ಪ್ಯಾಕ್ ಮಾಡಲಾದ ಆಹಾರಗಳಾಗಿರಬಹುದು. ಬೀಟ್​ರೂಟ್, ಪಾಲಕ್, ಅಣಬೆಗಳು ಮತ್ತು ಹಸಿರು ಬೀನ್ಸ್​ಗಳಂತಹ ಕಡಿಮೆ ಆಮ್ಲ ಅಂಶದೊಂದಿಗೆ ಸಂರಕ್ಷಿಸಲ್ಪಟ್ಟ ತರಕಾರಿಗಳಿಂದ ಈ ರೋಗ ಬೇಗ ಹರಡುತ್ತದೆ.

ಈ ಬೊಟುಲಿಸಮ್ ಒಬ್ಬ ವ್ಯಕ್ತಿಯಿಂದ ಮತ್ತೊಬ್ಬ ವ್ಯಕ್ತಿಗೆ ಹರಡುವುದಿಲ್ಲ. ಬೊಟುಲಿಸಮ್ ರೋಗ ಉಂಟಾಗಲಯ ಆ ವ್ಯಕ್ತಿಯು ಬ್ಯಾಕ್ಟೀರಿಯಾವನ್ನು ಅಥವಾ ವಿಷವನ್ನು ಆಹಾರದ ಮೂಲಕ ಸೇವಿಸಬೇಕು. ಅಥವಾ ಬೊಟುಲಿಸಂಗೆ ಕಾರಣವಾಗುವ ವಿಷವು ವ್ಯಕ್ತಿಯ ಗಾಯವನ್ನು ಪ್ರವೇಶಿಸಬೇಕು.

ಬೊಟುಲಿಸಂ ರೋಗದ ನಿಯಂತ್ರಣ ಹೇಗೆ?:

– ಮನೆಯಲ್ಲಿ ಆಹಾರವನ್ನು ಕ್ಯಾನಿಂಗ್ ಮಾಡುವಾಗ ಸರಿಯಾದ ತಂತ್ರಗಳನ್ನು ಅನುಸರಿಸಿ. ಆಹಾರವನ್ನು ಸರಿಯಾಗಿ ಬಿಸಿ ಮಾಡಿದ ನಂತರ ಉಪಯೋಗಿಸಿ. ಸೀಫುಡ್ ಸೇವಿಸುವಾಗ ಎಚ್ಚರ ವಹಿಸಿ.

– ಒಮ್ಮೆ ಉಪಯೋಗಿಸಿದ ಕ್ಯಾನ್​ಗಳನ್ನು ಮತ್ತೆ ಬಳಸಬೇಡಿ.

– ಅವುಗಳನ್ನು ಬಿಸಾಡಿ. ಅಲ್ಯೂಮಿನಿಯಂ ಪಾತ್ರೆಯಲ್ಲಿ ಬೇಯಿಸಿದ ಆಲೂಗಡ್ಡೆಗಳಲ್ಲಿ ಬೊಟುಲಿಸಮ್ ಬ್ಯಾಕ್ಟೀರಿಯಾ ಬೆಳೆಯಬಹುದು. ಅವುಗಳನ್ನು ತಕ್ಷಣ ಬಿಸಿ ಮಾಡಿಡಿ ಅಥವಾ ಫ್ರಿಜ್ ನಲ್ಲಿಡಿ.

– ಆಹಾರವನ್ನು 10 ನಿಮಿಷಗಳ ಕಾಲ ಕುದಿಸುವುದರಿಂದ ಬೊಟುಲಿಸಮ್ ಟಾಕ್ಸಿನ್ ನಾಶವಾಗುತ್ತದೆ.

– ನೀವು ಶಿಶುಗಳಿಗೆ ಜೇನುತುಪ್ಪ ಅಥವಾ ಕಾರ್ನ್ ಸಿರಪ್ ಅನ್ನು ಎಂದಿಗೂ ನೀಡಬಾರದು. ಏಕೆಂದರೆ ಈ ಆಹಾರಗಳು ಬೊಟುಲಿಸಂಗೆ ಕಾರಣವಾಗುವ ಕ್ಲೋಸ್ಟ್ರಿಡಿಯಮ್ ಬೊಟುಲಿನಮ್ ಬೀಜಕಗಳನ್ನು ಹೊಂದಿರುತ್ತವೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:44 pm, Sat, 30 September 23