ಶೇಂಗಾ ತಿಂದ ತಕ್ಷಣ ನೀರು ಕುಡಿಯಬಾರದು ಎಂಬ ಮಾತು ನಿಜವೇ? ತಿಳಿದುಕೊಳ್ಳಿ

ಶೇಂಗಾ ಪ್ರೋಟೀನ್, ಫೈಬರ್ ಮತ್ತು ಹಲವು ಖನಿಜಾಂಶಗಳನ್ನು ಹೊಂದಿರುವ ಪೌಷ್ಟಿಕ ಆಹಾರ. ಆದರೆ ಶೇಂಗಾಗಳನ್ನು ತಿಂದ ತಕ್ಷಣ ನೀರು ಕುಡಿಯುವುದರಿಂದ ಗಂಟಲು ನೋವು, ಕೆಮ್ಮು ಅಥವಾ ಜೀರ್ಣಕ್ರಿಯೆ ಹದಗೆಡುತ್ತದೆ ಎಂದು ಹೇಳಲಾಗುತ್ತದೆ. ಹಾಗಾದರೆ ಇದರ ಹಿಂದೆ ಇರುವ ಸತ್ಯವೇನು, ಈ ರೀತಿ ಹೇಳುವುದಕ್ಕೆ ಕಾರಣವೇನು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಶೇಂಗಾ ತಿಂದ ತಕ್ಷಣ ನೀರು ಕುಡಿಯಬಾರದು ಎಂಬ ಮಾತು ನಿಜವೇ? ತಿಳಿದುಕೊಳ್ಳಿ
Water After Eating Peanuts
Image Credit source: Getty Images

Updated on: Oct 08, 2026 | 7:23 PM

ಶೇಂಗಾ ಪೌಷ್ಟಿಕಾಂಶಗಳಿಂದ ಸಮೃದ್ಧವಾಗಿರುವ ಆಹಾರವಾಗಿದೆ. ಇದರಲ್ಲಿ ಪ್ರೋಟೀನ್, ಫೈಬರ್, ಪೊಟ್ಯಾಸಿಯಂ, ಮೆಗ್ನೀಷಿಯಂ ಸೇರಿದಂತೆ ಹಲವು ಪ್ರಮುಖ ಪೋಷಕಾಂಶಗಳಿವೆ. ನಿಯಮಿತವಾಗಿ ಮಿತ ಪ್ರಮಾಣದಲ್ಲಿ ಶೇಂಗಾವನ್ನು ಸೇವಿಸುವುದು ಆರೋಗ್ಯಕರ ಆಹಾರದ ಭಾಗವಾಗಬಹುದು. ಆದರೆ ಶೇಂಗಾ ತಿಂದ ತಕ್ಷಣ ನೀರು ಕುಡಿಯಬಾರದು ಎಂಬ ಮಾತನ್ನು ಕೇಳಿರಬಹುದು. ಹಾಗಾದರೆ ಇದರ ಹಿಂದೆ ಇರುವ ಸತ್ಯವೇನು, ಈ ರೀತಿ ಹೇಳುವುದಕ್ಕೆ ಕಾರಣವೇನು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಶೇಂಗಾದಲ್ಲಿ ಕೊಬ್ಬು ಮತ್ತು ಪ್ರೋಟೀನ್ ಪ್ರಮಾಣ ಹೆಚ್ಚಿರುವುದರಿಂದ ಜೀರ್ಣವಾಗಲು ಸ್ವಲ್ಪ ಹೆಚ್ಚು ಸಮಯ ಬೇಕಾಗಬಹುದು. ಶೇಂಗಾವನ್ನು ಹೆಚ್ಚು ಪ್ರಮಾಣದಲ್ಲಿ ಸೇವಿಸಿದರೆ ಕೆಲವರಿಗೆ ಹೊಟ್ಟೆ ಭಾರವಾಗುವುದು, ಉಬ್ಬರ, ಗ್ಯಾಸ್ ಅಥವಾ ಅಜೀರ್ಣದಂತಹ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.

ಶೇಂಗಾ ತಿಂದ ತಕ್ಷಣ ನೀರು ಕುಡಿದರೆ ಗಂಟಲು ನೋವು ಬರುತ್ತದೆಯೇ?

ಶೇಂಗಾ ತಿಂದ ತಕ್ಷಣ ನೀರು, ಅದರಲ್ಲೂ ತಣ್ಣೀರು ಕುಡಿದರೆ ಗಂಟಲು ನೋವು, ಕೆಮ್ಮು ಅಥವಾ ಶೀತ ಉಂಟಾಗುತ್ತದೆ ಎಂಬುದಕ್ಕೆ ಸ್ಪಷ್ಟವಾದ ವೈಜ್ಞಾನಿಕ ಪುರಾವೆ ಇಲ್ಲ. ಆದರೆ ಕೆಲವರಿಗೆ ತಣ್ಣನೆಯ ನೀರು ಅಥವಾ ಪಾನೀಯಗಳಿಂದ ಗಂಟಲಿನಲ್ಲಿ ತಾತ್ಕಾಲಿಕ ಅಸ್ವಸ್ಥತೆ ಉಂಟಾಗಬಹುದು.

ಇದನ್ನೂ ಓದಿ: ಈ 5 ಆರೋಗ್ಯ ಸಮಸ್ಯೆಗಳಿದ್ದಾಗ ಶೇಂಗಾ ತಿನ್ನುವ ಮುನ್ನ ಹೆಚ್ಚಿನ ಎಚ್ಚರ ವಹಿಸಿ

ಜೀರ್ಣಕ್ರಿಯೆ ಮೇಲೆ ಪರಿಣಾಮ ಬೀರುತ್ತದೆಯೇ?

ಶೇಂಗಾದಲ್ಲಿರುವ ಕೊಬ್ಬು ಮತ್ತು ಪ್ರೋಟೀನ್ ಜೀರ್ಣವಾಗಲು ಸಮಯ ಬೇಕಾಗುತ್ತದೆ. ಆದರೆ ಶೇಂಗಾ ತಿಂದ ತಕ್ಷಣ ನೀರು ಕುಡಿದರೆ ಜೀರ್ಣರಸಗಳು ದುರ್ಬಲವಾಗಿ ಜೀರ್ಣಕ್ರಿಯೆ ಸರಿಯಾಗಿ ಆಗುವುದಿಲ್ಲ. ಜೊತೆಗೆ ಅತಿಯಾಗಿ ಶೇಂಗಾ ಸೇವಿಸುವುದೇ ಕೆಲವರಲ್ಲಿ ಅಜೀರ್ಣ ಅಥವಾ ಹೊಟ್ಟೆ ಉಬ್ಬರಕ್ಕೆ ಕಾರಣವಾಗಬಹುದು.

ಎಷ್ಟು ಪ್ರಮಾಣದಲ್ಲಿ ನೀರು ಕುಡಿಯಬೇಕು?

ಶೇಂಗಾ ತಿಂದ ನಂತರ ನೀರು ಕುಡಿಯುವುದನ್ನು ಸಂಪೂರ್ಣವಾಗಿ ತಪ್ಪಿಸುವ ಅಗತ್ಯವಿಲ್ಲ. ಬಾಯಾರಿಕೆಯಾಗಿದ್ದರೆ ಸಾಮಾನ್ಯ ತಾಪಮಾನದ ನೀರನ್ನು ಅಗತ್ಯಕ್ಕೆ ತಕ್ಕಂತೆ ಕುಡಿಯಬಹುದು. ನೀರು ಕುಡಿಯಲು ಕಡ್ಡಾಯವಾಗಿ 10 ರಿಂದ15 ನಿಮಿಷ ಕಾಯಬೇಕು ಎಂಬ ನಿಯಮಕ್ಕೂ ದೃಢವಾದ ವೈದ್ಯಕೀಯ ಆಧಾರವಿಲ್ಲ. ಇನ್ನು ಶೇಂಗಾಗೆ ಅಲರ್ಜಿ ಇರುವವರು ಹೆಚ್ಚು ಎಚ್ಚರಿಕೆ ವಹಿಸಬೇಕು. ಶೇಂಗಾ ಸೇವಿಸಿದ ನಂತರ ತುಟಿ ಅಥವಾ ಗಂಟಲು ಊತ, ತೀವ್ರ ತುರಿಕೆ, ವಾಂತಿ ಅಥವಾ ಉಸಿರಾಟದ ತೊಂದರೆ ಕಾಣಿಸಿಕೊಂಡರೆ ತಕ್ಷಣ ವೈದ್ಯಕೀಯ ನೆರವು ಪಡೆಯಬೇಕು.

ಹೀಗಾಗಿ, ಶೇಂಗಾ ತಿಂದ ತಕ್ಷಣ ನೀರು ಕುಡಿದರೆ ಅಪಾಯವಾಗುತ್ತದೆ ಎಂಬ ಭಯ ಅಗತ್ಯವಿಲ್ಲ. ಶೇಂಗಾವನ್ನು ಮಿತವಾಗಿ ಸೇವಿಸಿ, ದೇಹಕ್ಕೆ ಅಗತ್ಯವಿರುವಷ್ಟು ನೀರು ಕುಡಿಯುವುದು ಉತ್ತಮ. ಯಾವುದೇ ನಿರ್ದಿಷ್ಟ ಆರೋಗ್ಯ ಸಮಸ್ಯೆ ಇದ್ದರೆ ವೈದ್ಯರ ಸಲಹೆ ಪಡೆಯುವುದು ಸೂಕ್ತ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರೀತಿ ಭಟ್​, ಗುಣವಂತೆ

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
Loading...
Unable to load recommendations.
Follow Us