ಐಸ್‌ಕ್ರೀಂ ಮತ್ತು ಫ್ರೋಜನ್ ಡೆಸರ್ಟ್ ನಡುವಿನ ವ್ಯತ್ಯಾಸವೇನು? ಖರೀದಿಸುವ ಮುನ್ನ ಈ ವಿಷಯ ತಿಳಿಯಿರಿ!
ಐಸ್‌ಕ್ರೀಂ ಮತ್ತು ಫ್ರೋಜನ್ ಡೆಸರ್ಟ್ ನೋಡಲು ಒಂದೇ ರೀತಿ ಕಂಡರೂ ಅವುಗಳ ತಯಾರಿಕೆಯಲ್ಲಿ ವ್ಯತ್ಯಾಸವಿದೆ. ಐಸ್‌ಕ್ರೀಂ ತಯಾರಿಸಲು ಹಾಲಿನ ಕೊಬ್ಬು ಮತ್ತು ಕ್ರೀಮ್ ಬಳಸಿದರೆ, ಫ್ರೋಜನ್ ಡೆಸರ್ಟ್‌ನಲ್ಲಿ ಸಸ್ಯಜನ್ಯ ಎಣ್ಣೆ ಬಳಸಬಹುದು. ಹಾಗಾದರೆ ಇವೆರಡರಲ್ಲಿ ಯಾವುದು ಉತ್ತಮ? ಖರೀದಿಸುವ ಮುನ್ನ ಪ್ಯಾಕೆಟ್ ಮೇಲಿನ ಪದಾರ್ಥಗಳು, ಸಕ್ಕರೆ, ಕೊಬ್ಬು ಮತ್ತು ಪೌಷ್ಟಿಕಾಂಶಗಳ ವಿವರವನ್ನು ಪರಿಶೀಲಿಸುವುದು ಏಕೆ ಮುಖ್ಯ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಬೇಸಿಗೆಯಾಗಿರಲಿ ಅಥವಾ ಚಳಿಗಾಲವಾಗಿರಲಿ, ಐಸ್‌ಕ್ರೀಂ ಎಂದರೆ ಬಹುತೇಕ ಎಲ್ಲರಿಗೂ ಇಷ್ಟ. ಮಾರುಕಟ್ಟೆಯಲ್ಲಿ ವಿವಿಧ ರುಚಿ ಮತ್ತು ಆಕಾರಗಳಲ್ಲಿ ಐಸ್‌ಕ್ರೀಂಗಳು ಲಭ್ಯವಿವೆ. ಆದರೆ ಅಂಗಡಿಗಳಲ್ಲಿ ಐಸ್‌ಕ್ರೀಂ ಹೆಸರಿನಲ್ಲಿ ಮಾರಾಟವಾಗುವ ಎಲ್ಲ ಉತ್ಪನ್ನಗಳೂ ನಿಜವಾದ ಐಸ್‌ಕ್ರೀಂ ಆಗಿರುವುದಿಲ್ಲ. ಹೌದು, ಕೆಲವು ಉತ್ಪನ್ನಗಳು ಫ್ರೋಜನ್ ಡೆಸರ್ಟ್ ಆಗಿರುತ್ತವೆ. ನೋಡಲು, ತಿನ್ನಲು ಬಹುತೇಕ ಒಂದೇ ರೀತಿ ಕಂಡರೂ ಇವೆರಡರ ತಯಾರಿಕೆಯಲ್ಲಿ ಪ್ರಮುಖ ವ್ಯತ್ಯಾಸವಿದೆ. ಹಾಗಾದರೆ ಐಸ್‌ಕ್ರೀಂ ಮತ್ತು ಫ್ರೋಜನ್ ಡೆಸರ್ಟ್ ನಡುವಿನ ವ್ಯತ್ಯಾಸವೇನು ಮತ್ತು ಖರೀದಿಸುವಾಗ ಯಾವುದನ್ನು ಗಮನಿಸಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಐಸ್‌ಕ್ರೀಂ ತಯಾರಿಸುವುದು ಹೇಗೆ?
ಸಾಮಾನ್ಯವಾಗಿ ಐಸ್‌ಕ್ರೀಂ ತಯಾರಿಸಲು ಹಾಲು, ಕ್ರೀಮ್ ಮತ್ತು ಹಾಲಿನಿಂದ ದೊರೆಯುವ ಕೊಬ್ಬನ್ನು ಬಳಸಲಾಗುತ್ತದೆ. ಇವುಗಳಿಗೆ ಸಕ್ಕರೆ, ಚಾಕೊಲೇಟ್, ಹಣ್ಣುಗಳು, ಒಣಹಣ್ಣುಗಳು ಹಾಗೂ ವಿವಿಧ ಸ್ವಾದಗಳನ್ನು ಸೇರಿಸಲಾಗುತ್ತದೆ. ಹಾಲು ಮತ್ತು ಕ್ರೀಮ್‌ನಲ್ಲಿರುವ ಕೊಬ್ಬಿನಿಂದ ಐಸ್‌ಕ್ರೀಂಗೆ ಮೃದುವಾದ ಮತ್ತು ಕೆನೆಭರಿತ ವಿನ್ಯಾಸ ದೊರೆಯುತ್ತದೆ. ಇದರ ರುಚಿ, ಗುಣಮಟ್ಟ ಮತ್ತು ಪೌಷ್ಟಿಕಾಂಶಗಳು ತಯಾರಿಕೆಯಲ್ಲಿ ಬಳಸುವ ಪದಾರ್ಥಗಳ ಪ್ರಮಾಣ ಹಾಗೂ ಗುಣಮಟ್ಟವನ್ನು ಅವಲಂಬಿಸಿರುತ್ತವೆ.
ಫ್ರೋಜನ್ ಡೆಸರ್ಟ್ ಎಂದರೇನು?
ಇದು ಕೂಡ ಐಸ್‌ಕ್ರೀಂನಂತೆಯೇ ತಂಪಾದ ಸಿಹಿ ತಿನಿಸಾಗಿದೆ. ಆದರೆ ಇದರಲ್ಲಿ ಹಾಲಿನ ಕೊಬ್ಬಿನ ಬದಲಿಗೆ ಸಸ್ಯಜನ್ಯ ಎಣ್ಣೆ ಅಥವಾ ಪಾಮ್ ಎಣ್ಣೆಯಂತಹ ಕೊಬ್ಬಿನ ಮೂಲಗಳನ್ನು ಬಳಸಬಹುದು. ಇದರ ಜೊತೆಗೆ ಹಾಲಿನ ಪುಡಿ, ಸಕ್ಕರೆ ಮತ್ತು ವಿವಿಧ ಸ್ವಾದಗಳನ್ನು ಸೇರಿಸಲಾಗುತ್ತದೆ. ಹೀಗಾಗಿ ಇದರ ತಯಾರಿಕಾ ವಿಧಾನ ಮತ್ತು ಪದಾರ್ಥಗಳು ಸಾಮಾನ್ಯ ಐಸ್‌ಕ್ರೀಂನಿಂದ ಭಿನ್ನವಾಗಿರುತ್ತವೆ. ಕೆಲವು ಉತ್ಪನ್ನಗಳಲ್ಲಿ ಟ್ರಾನ್ಸ್ ಫ್ಯಾಟ್ ಇರಬಹುದಾದ್ದರಿಂದ ಪದಾರ್ಥಗಳ ವಿವರ ಪರಿಶೀಲಿಸುವುದು ಬಹಳ ಮುಖ್ಯ.
ಇದನ್ನೂ ಓದಿ: ಟೀ ಮತ್ತು ಬಿಸ್ಕತ್ತುಗಳನ್ನೇ ಬೆಳಗಿನ ಉಪಾಹಾರವಾಗಿ ಸೇವಿಸುತ್ತಿದ್ದೀರಾ? ಈ ಸಮಸ್ಯೆಗಳ ಬಗ್ಗೆ ಎಚ್ಚರವಿರಲಿ!
ಪ್ಯಾಕೆಟ್ ಮೇಲಿನ ಮಾಹಿತಿ ಗಮನಿಸಿ
ಐಸ್‌ಕ್ರೀಂ ಮತ್ತು ಫ್ರೋಜನ್ ಡೆಸರ್ಟ್ ನಡುವಿನ ವ್ಯತ್ಯಾಸ ತಿಳಿದುಕೊಳ್ಳಲು ಪ್ಯಾಕೆಟ್ ಮೇಲಿನ ಹೆಸರು ಮತ್ತು ಪದಾರ್ಥಗಳ ಪಟ್ಟಿಯನ್ನು ಓದುವುದು ಅತ್ಯಂತ ಮುಖ್ಯ. ಉತ್ಪನ್ನದಲ್ಲಿ ಸಸ್ಯಜನ್ಯ ಎಣ್ಣೆ ಅಥವಾ ಸಸ್ಯಜನ್ಯ ಕೊಬ್ಬನ್ನು ಬಳಸಿರುವುದನ್ನು ಗಮನಿಸಿ. ಜೊತೆಗೆ ಪೌಷ್ಟಿಕಾಂಶಗಳ ವಿವರದಲ್ಲಿ ಸಕ್ಕರೆ, ಒಟ್ಟು ಕೊಬ್ಬು ಮತ್ತು ಟ್ರಾನ್ಸ್ ಫ್ಯಾಟ್ ಪ್ರಮಾಣವನ್ನೂ ಪರಿಶೀಲಿಸಿ. ಕೇವಲ ಆಕರ್ಷಕ ಪ್ಯಾಕೆಟ್ ಅಥವಾ ಜಾಹೀರಾತು ನೋಡಿ ಉತ್ಪನ್ನವನ್ನು ಆಯ್ಕೆ ಮಾಡಬೇಡಿ.
ಯಾವುದು ಆರೋಗ್ಯಕ್ಕೆ ಉತ್ತಮ?
ಐಸ್‌ಕ್ರೀಂ ಹಾಲಿನಿಂದ ತಯಾರಾಗುತ್ತದೆ ಎಂಬ ಕಾರಣಕ್ಕೆ ಅದನ್ನು ಸಂಪೂರ್ಣ ಆರೋಗ್ಯಕರ ಆಹಾರವೆಂದು ಪರಿಗಣಿಸುವುದು ಸರಿಯಲ್ಲ. ಅದರಲ್ಲಿ ಕೂಡ ಸಕ್ಕರೆ ಮತ್ತು ಸ್ಯಾಚುರೇಟೆಡ್ ಕೊಬ್ಬಿನ ಪ್ರಮಾಣ ಹೆಚ್ಚಿರಬಹುದು. ಅದೇ ರೀತಿ ಎಲ್ಲ ಫ್ರೋಜನ್ ಡೆಸರ್ಟ್‌ಗಳು ಅನಾರೋಗ್ಯಕರ ಎಂದು ಹೇಳಲು ಸಾಧ್ಯವಿಲ್ಲ. ಅವುಗಳಲ್ಲಿ ಬಳಸಿರುವ ಪದಾರ್ಥಗಳು ಮತ್ತು ಪೌಷ್ಟಿಕಾಂಶಗಳ ಪ್ರಮಾಣವನ್ನು ಅವಲಂಬಿಸಿ ಆರೋಗ್ಯದ ಮೇಲೆ ಪರಿಣಾಮ ಬದಲಾಗುತ್ತದೆ. ವಿಶೇಷವಾಗಿ ಟ್ರಾನ್ಸ್ ಫ್ಯಾಟ್ ಸೇವನೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡುವುದು ಹೃದಯದ ಆರೋಗ್ಯಕ್ಕೆ ಉತ್ತಮ. ಅಧಿಕ ಸಕ್ಕರೆ ಸೇವನೆಯೂ ತೂಕ ಹೆಚ್ಚಳ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸಬಹುದು.
ಖರೀದಿಸುವಾಗ ಏನು ಮಾಡಬೇಕು?
ಐಸ್‌ಕ್ರೀಂ ಖರೀದಿಸುವಾಗ ಅದರ ಪದಾರ್ಥಗಳ ಪಟ್ಟಿ, ಸಕ್ಕರೆ ಮತ್ತು ಕೊಬ್ಬಿನ ಪ್ರಮಾಣವನ್ನು ಪರಿಶೀಲಿಸಿ. ಸಾಧ್ಯವಾದರೆ ಮನೆಯಲ್ಲಿ ಹಾಲು, ತಾಜಾ ಹಣ್ಣುಗಳು ಮತ್ತು ಕಡಿಮೆ ಸಕ್ಕರೆ ಬಳಸಿ ತಂಪಾದ ಸಿಹಿತಿನಿಸುಗಳನ್ನು ತಯಾರಿಸಬಹುದು. ಒಟ್ಟಿನಲ್ಲಿ, ಐಸ್‌ಕ್ರೀಂ ಮತ್ತು ಫ್ರೋಜನ್ ಡೆಸರ್ಟ್ ಎರಡೂ ರುಚಿಕರವಾದ ಸಿಹಿತಿನಿಸುಗಳಾಗಿವೆ. ಆದರೆ ಇವೆರಡರ ನಡುವಿನ ವ್ಯತ್ಯಾಸ ತಿಳಿದುಕೊಂಡು, ಪ್ಯಾಕೆಟ್ ಮೇಲಿನ ಮಾಹಿತಿಯನ್ನು ಓದಿ, ಮಿತವಾಗಿ ಸೇವಿಸುವುದು ಉತ್ತಮ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




