ದೇಹದಲ್ಲಿ ಹೊಸ ಜೀವಕೋಶಗಳು ಮತ್ತು ಹಾರ್ಮೋನುಗಳನ್ನು ಕ್ರಮವಾಗಿ ಇರಿಸುವಲ್ಲಿ ಕೊಲೆಸ್ಟ್ರಾಲ್ ಬಹಳ ಮುಖ್ಯ ಪಾತ್ರವನ್ನು ವಹಿಸುತ್ತದೆ. ಕೊಲೆಸ್ಟ್ರಾಲ್ ಮೃದುವಾದ ಮೇಣ ಅಥವಾ ಕೊಬ್ಬಿನಂತಹ ವಸ್ತುವಾಗಿದೆ. ಇದು ದೇಹದಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಾದಾಗ ಹಲವು ಸಮಸ್ಯೆಗಳು ಭಾಧಿಸಲು ಪ್ರಾರಂಭವಾಗುತ್ತದೆ. ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾದಾಗ ಹೃದಯಾಘಾತ, ಪಾರ್ಶ್ವವಾಯು, ಟೈಪ್ 2 ಮಧುಮೇಹ ಮತ್ತು ಇತರ ಕಾಯಿಲೆಗಳ ಅಪಾಯವು ಹೆಚ್ಚಾಗುತ್ತದೆ. ಕೊಲೆಸ್ಟ್ರಾಲ್ ಹೃದಯಾಘಾತವನ್ನು ಅಪಾಯವನ್ನು ಹೆಚ್ಚಿಸುತ್ತದೆ. ಅದಕ್ಕಾಗಿಯೇ ಕೆಟ್ಟ ಕೊಲೆಸ್ಟ್ರಾಲ್ ನಮ್ಮ ಜೀವಕ್ಕೆ ಅಪಾಯಕಾರಿ ಎಂದು ಪರಿಗಣಿಸಲಾಗಿದೆ. ಈ ಸಮಸ್ಯೆಯನ್ನು ನಿಭಾಯಿಸಲು ಹೆಚ್ಚಿ ಜನರು ಔಷಧಿಗಳು ಮತ್ತು ವೈದ್ಯಕೀಯ ಚಿಕಿತ್ಸೆಗಳನ್ನು ಪಡೆದುಕೊಳ್ಳುತ್ತಾರೆ. ಇದರ ಹೊರತಾಗಿ ಆರೋಗ್ಯಕರ ಜೀವನಶೈಲಿ, ಸರಿಯಾದ ಆಹಾರ ಕ್ರಮದ ಪಾಲನೆ ಮತ್ತು ಕೆಲವು ಗಿಡಮೂಲಿಕೆಗಳ ಸಹಾಯದಿಂದ ಈ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.
ಹೆಲ್ತ್ ಆಂಡ್ ಫುಡ್ ಸಪ್ಲಿಮೆಂಟ್ಸ್ ಇನ್ಫರ್ಮೇಷನ್ ಸರ್ವಿಸ್ ನ ಪೌಷ್ಟಿಕ ತಜ್ಞೆ ಡಾ. ಪಮೇಲಾ ಮೇಸನ್ ಎಕ್ಸ್ ಪ್ರೆಸ್.ಕೊ.ಯುಕೆ (Express.co.uk) ಗೆ ನೀಡಿದ ಸಂದರ್ಶನದಲ್ಲಿ, ನಾವು ಸೇವನೆ ಮಾಡುವ ಆಹಾರದಲ್ಲಿ ಕೆಲವೊಂದು ಗಿಡಮೂಲಿಕೆಗಳನ್ನು ಸೇರಿಸಿದರೆ ಅಧಿಕ ಕೊಲೆಸ್ಟ್ರಾಲ್ ಸಮಸ್ಯೆಯಿಂದ ಮುಕ್ತಿಪಡೆಯಬಹುದು ಎಂಬುದನ್ನು ತಿಳಿಸಿದ್ದಾರೆ.
ಸಂಶೋಧನೆಯ ಆಧಾರದ ಮೇಲೆ ಡಾ. ಮೇಸನ್ ಶುಂಠಿ, ಬ್ಲೂ ಬೆರ್ರಿ , ಕ್ರ್ಯಾನ್ಬೆರಿ, ಬೆಳ್ಳುಳ್ಳಿ ಮತ್ತು ಜಿನ್ಸೆಂಗ್ ಈ ಐದು ಗಿಡಮೂಲಿಕೆಗಳು ಕೊಲೆಸ್ಟ್ರಾಲ್ ನ್ನು ನಿಯಂತ್ರಿಸಲು ಸಹಕಾರಿ ಎಂಬುದನ್ನು ತಿಳಿಸಿದ್ದಾರೆ. ಶುಂಠಿ, ಬಿಲ್ಬೆರಿ, ಕ್ರ್ಯಾನ್ಬೆರಿ, ಈ ಮೂರು ಮೂಲಿಕೆಗಳು ಉತ್ಕರ್ಷಣ ನಿರೋಧಕ ಅಂಶಗಳಲ್ಲಿ ಸಮೃದ್ಧವಾಗಿದೆ. ವಿಶೇಷವಾಗಿ ಪಾಲಿಫಿನಾಲ್ ಗಳು. ಇದು ದೇಹಕ್ಕೆ ಹಲವು ಪ್ರಯೋಜನವನ್ನು ನೀಡುತ್ತದೆ. ಈ ಸಸ್ಯ ಸಂಯುಕ್ತಗಳು ಉರಿಯೂತವನ್ನು ಕಡಿಮೆ ಮಾಡಲು ಮತ್ತು ರಕ್ತನಾಳಗಳ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಪೌಷ್ಟಿಕ ತಜ್ಞೆ ಡಾ. ಪಮೇಲಾ ಮೇಸನ್ ಹೇಳುತ್ತಾರೆ.
ಬ್ಲೂಬೆರ್ರಿ ನಿರ್ಧಿಷ್ಟ ಆಂಥೋಸಯಾನಿನ್ ಪಾಲಿಫಿನಾಲ್ ಸಂಯುಕ್ತಗಳನ್ನು ಹೊಂದಿದ್ದು, ಅದು ಕೊಲೆಸ್ಟ್ರಾಲ್ ಮಟ್ಟವನ್ನು ಸಾಮಾನ್ಯಗೊಳಿಸಲು ಸಹಾಯ ಮಾಡುತ್ತದೆ. ಜೊತೆಗೆ ಶುಂಠಿಯು ರಕ್ತನಾಳಗಳಲ್ಲಿನ ಕ್ಯಾಲ್ಸಿಯಂ ಚಾನಲ್ ಗಳ ಮೇಲೆ ಪರಿಣಾಮ ಬೀರುವ ಮೂಲಕ ಅಧಿಕ ಕೊಲೆಸ್ಟ್ರಾಲ್ ನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ನಿದ್ರೆ ಮಾಡಲಾಗದೆ ಒದ್ದಾಡುತ್ತಿದ್ದೀರಾ? ನಿದ್ರಾಹೀನತೆಗೆ ಅಶ್ವಗಂಧ ರಾಮಬಾಣ
ಜರ್ನಲ್ ಆಫ್ ಎಥ್ನೋಫಾರ್ಮಾಕಾಲಜಿ ಎಂಬ ನಿಯತಕಾಲಿಕೆಯಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ ಜಿನ್ಸೆಂಗ್ ಗಿಡಮೂಲಿಕೆಯು ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. ಹಾಗೂ ನ್ಯೂಟ್ರಿಷನ್ ಜರ್ನಲ್ ಎಂಬ ನಿಯತಕಾಲಿಕೆಯಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಬೆಳ್ಳುಳ್ಳಿಯ ಪೂರಕಗಳು ಅಧಿಕ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಎಲ್ಲಾ ಸಂಶೋಧನೆಗಳ ಆಧಾರದ ಮೇಲೆ ಅಧಿಕ ಕೊಲೆಸ್ಟ್ರಾಲ್ ಸಮಸ್ಯೆಯಿಂದ ಉತ್ತಮ ಫಲಿತಾಂಶಗಳನ್ನು ಪಡೆಯಲು ಈ ಗಿಡಮೂಲಿಕಗಳನ್ನು ಸಮತೋಲಿತ ಆಹಾರದೊಂದಿಗೆ ಸಂಯೋಜಿಸಲು ಡಾ. ಮೇಸನ್ ಶಿಫಾರಸು ಮಾಡುತ್ತಾರೆ. ಅಲ್ಲದೆ ನೀವು ಶುಂಠಿ, ಬ್ಲೂಬೆರ್ರಿ, ಕ್ರ್ಯಾನ್ ಬೆರಿ, ಬೆಳ್ಳುಳ್ಳಿ ಮತ್ತು ಜಿನ್ಸೆಂಗ್ ಗಳನ್ನು ಪೂರಕ ರೂಪದಲ್ಲಿ ತೆಗೆದುಕೊಳ್ಳಬಹುದು ಎಂದು ಡಾ. ಮೇಸನ್ ಸಲಹೆ ನೀಡಿದ್ದಾರೆ.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: